Tuesday, February 23, 2021

ಗ್ರಾಮ ಪಂಚಾಯಿತಿ ನೂತನ ಮಹಿಳಾ ಸದಸ್ಯರಿಗೆ ಕಾರ್ಯಾಗಾರ

ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
    ಭದ್ರಾವತಿ, ಫೆ. ೨೩: ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
  ಸಾಮಾಜಿಕ ನ್ಯಾಯ, ಲಿಂಗ ಅಸಮಾನತೆ, ರಾಜಕೀಯ ಮತ್ತು ನಾಗರೀಕತೆ, ಸಂವಿಧಾನ ತಿದ್ದುಪಡಿಗಳು, ಸಮಾನತೆ, ನಾಯಕತ್ವ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
  ಕಾರ್ಯಾಗಾರದಲ್ಲಿ ತಾವರಘಟ್ಟ, ಸಿಂಗನಮನೆ, ಕಂಬದಾಳು ಹೊಸೂರು, ಕಾರೇಹಳ್ಳಿ, ಬಾರಂದೂರು ಮತ್ತು ಹಿರಿಯೂರು ಸೇರಿದಂತೆ ಒಟ್ಟು ೬ ಗ್ರಾಮ ಪಂಚಾಯಿತಿಗಳ ಸುಮಾರು ೪೨ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್, ಎಂ.ಎಚ್ ಲಕ್ಷ್ಮಣ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾಹಿತಿ ನೀಡಿದರು.

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಎಬಿವಿಪಿ ಆಗ್ರಹ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೩: ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮೆಲರಿಗೂ ಇದೆ. ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡಲು ಈ ಹಿಂದೆ ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯದೆಲ್ಲೆಡೆ ಹೋರಾಟ ನಡೆಸಲಾಗಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ಜಾರಿಗೆ ತರಲಾಯಿತು. ಆದರೆ ಇದೀಗ ರಾಜ್ಯದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯನ್ನು ಸಾಕ್ಷಿ ಸಮೇತವಾಗಿ ಐಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಸೀಟುಗಳ ಮಾರಾಟದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜೊತೆಗೆ ಆದಾಯ ತೆರಿಗೆ ಇಲಾಖೆಯ ಕಾಯ್ದೆಯೂ ಕೂಡ ಇಲ್ಲಿ ಉಲ್ಲಂಘನೆ ಆಗಿದೆ. ಈ ಹಿನ್ನಲೆಯಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
  ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಕಾಶ್, ಅವಿನಾಶ್, ಮನು, ದರ್ಶನ್, ಪುನೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, February 22, 2021

ಎರಡು ದೇವಾಲಯಗಳಲ್ಲಿ ಚಿನ್ನಾಭರಣ, ಕಾಣಿಕೆ ಹುಂಡಿ ಹಣ ಕಳವು

    ಭದ್ರಾವತಿ, ಫೆ. ೨೨: ನಗರ ಹಾಗು ಗ್ರಾಮಾಂತರ ಪೊಲೀಸ್ ವೃತ್ತ ವ್ಯಾಪ್ತಿಯ ಎರಡು ಕಡೆ ದೇವಾಲಯಗಳಲ್ಲಿ ಹುಂಡಿ ಕಾಣಿಕೆ ಹಣ ಹಾಗು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆಗಳು ನಡೆದಿವೆ.
    ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆ ಸಮೀಪದ ಹೊಸ ಸಿದ್ಧಾಪುರ ಮಾರ್ಗದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೀಗ ಮುರಿದು ದೇವರ ಚಿನ್ನಾಭರಣ ಕಳವು ಮಾಡಲಾಗಿದೆ.
    ಇದೆ ರೀತಿ ಕಾಗದನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯ ಶ್ರೀ ಕಾಳಿಂಗೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ದೇವರ ಚಿನ್ನಾಭರಣ ಹಾಗು ಕಾಣಿಕೆ ಹುಂಡಿ ಹಣ ಕಳವು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಶೇ.೫ರಷ್ಟು ವಿನಾಯಿತಿ ಅವಧಿ ೧ ತಿಂಗಳು ವಿಸ್ತರಣೆ

   ಭದ್ರಾವತಿ, ಫೆ. ೨೨: ಸರ್ಕಾರದ ಆದೇಶದಂತೆ ನಗರಸಭೆ ಆಡಳಿತ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.೫ರಷ್ಟು ವಿನಾಯಿತಿ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸಿದೆ.
  ಫೆ.೧೯ರಿಂದ ಆದೇಶ ಜಾರಿಯಲ್ಲಿದ್ದು, ಈಗಾಗಲೇ ಆಸ್ತಿ ತೆರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದಲ್ಲಿ ವಿನಾಯಿತಿಯನ್ನು ಮುಂಬರುವ ವರ್ಷದ ತೆರಿಗೆ ಪಾವತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಪೌರಾಯುಕ್ತ ಮನೋಹರ್ ಕೋರಿದ್ದಾರೆ.

ಫೆ.೨೩ರಂದು ಖಾಸಗಿ ಶಾಲೆಗಳು ಬಂದ್ : ರಾಜ್ಯ ಒಕ್ಕೂಟದ ಹೋರಾಟಕ್ಕೆ ಬೆಂಬಲ

   ಭದ್ರಾವತಿ, ಫೆ. ೨೨: ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲಿಸುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಫೆ.೨೩ರಂದು ನಡೆಸುತ್ತಿರುವ ಹೋರಾಟಕ್ಕೆ ತಾಲೂಕು ಶಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
   ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಾಲಾ ಶುಲ್ಕ ವಸೂಲಾತಿ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದರಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ವೋಚ್ಛ ನ್ಯಾಯಾಲಯದ ಮೊರೆಹೋದ ಹಿನ್ನಲೆಯಲ್ಲಿ ನ್ಯಾಯಾಲಯ ಶೇ.೧೦೦ರಷ್ಟು ಶುಲ್ಕ ಪಾವತಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶ ಎತ್ತಿ ಹಿಡಿಯುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಲಾಗುತ್ತಿದೆ.
   ಹೋರಾಟದ ಅಂಗವಾಗಿ ಬೆಂಗಳೂರಿನ ಮುಖ್ಯ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕಾಲುನಡಿಗೆ ನಡೆಯಲಿದ್ದು, ನಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಹೋರಾಟದಲ್ಲಿ ರಾಜ್ಯದ ವಿವಿಧೆಡೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ.  ರಾಜ್ಯ ಒಕ್ಕೂಟದ ಕರೆ ಮೇರೆಗೆ ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಹೋರಾಟ ಬೆಂಬಲಿಸುತ್ತಿವೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿವೆ ಎಂದು ತಾಲೂಕು ಶಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.    

ಬೆಲೆ ಏರಿಕೆ ಖಂಡಿಸಿ ಫೆ.೨೨ರಂದು ಎಸ್‌ಡಿಪಿಐ ಪ್ರತಿಭಟನೆ

   
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ದಿನದಿಂದ ದಿನಕ್ಕೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಶ್ರೀಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ಮುಖಂಡರು ಆರೋಪಿಸಿದರು.  
  ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಪ್ರಸ್ತುತ ದೇಶದಲ್ಲಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಸುಮಾರು ೧೫ ವರ್ಷಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ, ಆಟೋ ಗ್ಯಾಸ್ ಸೇರಿದಂತೆ ಪೆಟ್ರೋಲಿಯಿಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಹಿಂದೆ ಕಾರ್ಪೊರೇಟ್ ತೈಲ ಕಂಪನಿಗಳ ದೊಡ್ಡ ಮಟ್ಟದ ಹುನ್ನಾರವಿದೆ. ಕೆಲವು ಶ್ರೀಮಂತ ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ದೂರಿದರು.
    ದೇಶದ ಬಹುಭಾಗ ಪೆಟ್ರೋಲಿಯಂ ಉತ್ಪನ್ನಗಳು ಮುಸ್ಲಿಂ ರಾಷ್ಟ್ರಗಳಿಂದ ಆಮದಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಕೇಂದ್ರ ಸರ್ಕಾರ ಇದರ ನೇರ ಲಾಭ ತೈಲ ಬಳಕೆದಾರರಿಗೆ ವರ್ಗಾಹಿಸುವ ಬದಲು ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೇಂದ್ರ ಹಾಗು ರಾಜ್ಯ ಎರಡು ಸರ್ಕಾರಗಳು ಗಣನೀಯ ಪ್ರಮಾಣದಲ್ಲಿ ತೈಲೋತ್ಪನ್ನಗಳಿಗೆ ತೆರಿಗೆ ಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯ ಸರ್ಕಾರ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿಗೆ ಮುಂದಿದೆ. ಈ ಹಿನ್ನೆಯಲ್ಲಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ರಾಜ್ಯದಲ್ಲಾದರೂ ತೈಲೋತ್ಪನಗಳ ಮೇಲಿನ ತೆರಿಗೆ ಸ್ವಲ್ಪ ಕಡಿಮೆ ಮಾಡಬೇಕೆಂದರು ಆಗ್ರಹಿಸಿದರು.
  ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಾಹಿರ್, ಕಾರ್ಯದರ್ಶಿ ಎಂ.ಡಿ ಗೌಸ್, ಪಿಎಫ್‌ಐ ತಾಲೂಕು ಅಧ್ಯಕ್ಷ ಮಹಮದ್ ಸಾಧಿಕ್‌ವುಲ್ಲಾ, ಕಾರ್ಯದರ್ಶಿ ಅರ್ಷದ್ ಖುರೇಶಿ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, February 21, 2021

ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ, ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ


ಭದ್ರಾವತಿ ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ  ಏರ್ಪಡಿಸಲಾಗಿದ್ದ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
    ಭದ್ರಾವತಿ, ಫೆ. ೨೧: ತಾಲೂಕಿನ ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಶಿವಮೊಗ್ಗ ಹಾಲು ಒಕ್ಕೂಟ ಹಾಗು ಪಶು ವೈದ್ಯಕೀಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಬರಡು ರಾಸುಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಿಶ್ರ ತಳಿ ಹಸು, ಕರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ. ಆನಂದ್, ನಿರ್ದೇಶಕ ದಿನೇಶ್, ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಕೆ.ಎಸ್ ಬಸವರಾಜ, ಶಿವಮೊಗ್ಗ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಮುಖ್ಯಸ್ಥ ಡಾ. ಎನ್.ಬಿ ಶ್ರೀಧರ್, ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಗೋಣಿಬೀಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಆಯ್ದ ಸದಸ್ಯರಿಗೆ ಹಾಲು ಶೇಖರಣೆಗೆ ಅಗತ್ಯವಿರುವ ಹಾಲಿನ ಕ್ಯಾನ್‌ಗಳನ್ನು ವಿತರಿಸಲಾಯಿತು.