![](https://blogger.googleusercontent.com/img/b/R29vZ2xl/AVvXsEjKqz5F3_5RYzrV2gtqverzOWNt7923id_OSIexcWWrzE9hhtpShpE1m3QxUvmd5zJA6XBqEeifFCpuzIyjmI-IlfEI84yEYIvGc7If0C1VEGdRtqYAqOsHSaiw3jrRgUeOJMkPuNfWCOCx/w640-h298-rw/D4-BDVT-794178.jpg)
ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ್ಯ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ತಾಲೂಕು ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮಾ. ೪: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ ಧನಂಜಯ್ಯ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗು ತಾಲೂಕು ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯಿತಿ ಸರ್ವೆ ನಂ. ೬೮ರ ಸಿರಿಯೂರು ಗಡಿಗೆ ಹೊಂದಿಕೊಂಡಿರುವಂತಹ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು, ಈ ದೇವಸ್ಥಾನಕ್ಕೆ ಹಬ್ಬಹರಿದಿನಗಳಂದು, ಸಂಕಷ್ಟಹರ ಚತುರ್ಥಿ, ಪ್ರತಿ ಶನಿವಾರ ಹಾಗು ಅಮವಾಸ್ಯೆಗಳಂದು ಹೋಮ-ಹವನ, ವಿಶೇಷ ಪೂಜೆ, ಅನ್ನದಾನ ಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ದೇವಸ್ಥಾನಕ್ಕೆ ಸೂಕ್ತ ರಸ್ತೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ವಿದ್ಯುತ್ ದೀಪವಾಗಲಿ ಯಾವುದೇ ಸೌಕರ್ಯಗಳು ಇರುವುದಿಲ್ಲ. ಸುಮಾರು ೧ ಕಿ.ಮೀ ದೂರ ಮಹಿಳೆಯರು, ಮಕ್ಕಳು, ವಯೋವೃದ್ಧರು ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದಾರೆ.
ದೇವಸ್ಥಾನಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪುರತತ್ವ ಇಲಾಖೆಯವರು ದೇವಸ್ಥಾನದ ಮೂಲ ವಿಗ್ರಹ ಯಾವ ರಾಜರ ಕಾಲದ್ದು, ಶೈಲಿ ಯಾವುದು, ಶಿಲ್ಪಿ ಯಾರು ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಗ್ರಾಮಸ್ಥರಾದ ರಂಗಸ್ವಾಮಿ, ಚೇತನ್‌ಕುಮಾರ್, ಕುಮಾರಸ್ವಾಮಿ, ಚಂದ್ರನಾಯ್ಕ, ರಂಜಿತ್, ಎಂ. ಮಂಜುನಾಥ್, ಕೃಷ್ಣಮೂರ್ತಿ ಮತ್ತು ಶಿವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.