Sunday, March 14, 2021

ಯಶಸ್ವಿಯಾಗಿ ಜರುಗಿದ ರಕ್ತದಾನ, ಗುಂಪು ತಪಾಸಣೆ ಶಿಬಿರ


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ  ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
     ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ ಮತ್ತು ಖಜಾಂಚಿ ಎನ್. ಶಿವಕುಮಾರ್, ಪ್ರಮುಖರಾದ ಕೆ.ಸಿ ವೀರಭದ್ರಪ್ಪ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಹಾ. ರಾಮಪ್ಪ ಹಾಗು ಕಾಲೇಜಿನ ಪ್ರಾಧ್ಯಾಪಕರು ಹಾಗು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಷಣ್ ಅಭಿಯಾನ : ಗರ್ಭಿಣಿ ಮಹಿಳೆಯರಿಗೆ ಸೀಮಂತ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಮಡಿಲು ತುಂಬುವ ಮೂಲಕ ಗರ್ಭಿಣಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾಗದ ನಗರದ ಅಂಗನವಾಡಿ ಕಾರ್ಯಕರ್ತೆಯರಾದ ಎಸ್. ರಶ್ಮಿ, ಬಿ.ಆರ್ ಮೀನಾಕ್ಷಿ, ಎಚ್.ಆರ್ ಜಯಂತಿ, ಲಲಿತ ಹಾಗೂ ಅಂಗನವಾಡಿ ಕೇಂದ್ರದ ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕಿಯರಾದ ಮಾರ್ಗರೇಟ್, ರಮ್ಯಾ ರವರು ಹಾಗೂ ಹಿರಿಯ ಆರೋಗ್ಯ ಸಹಾಯಕ ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, March 13, 2021

ಬಿ.ಇಡಿ ಸೀಟುಗಳ ಮಾರಾಟ ದಂಧೆ : ಕಠಿಣ ಕಾನೂನು ಕ್ರಮಕ್ಕೆ ಎಬಿವಿಪಿ ಆಗ್ರಹ

ಬಿ.ಇಡಿ ಸೀಟುಗಳ ಮಾರಾಟದಲ್ಲಿ ತೊಡಗಿರುವ ಕಾಲೇಜುಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೧೩: ಬಿ.ಇಡಿ ಸೀಟುಗಳ ಮಾರಾಟದಲ್ಲಿ ತೊಡಗಿರುವ ಕಾಲೇಜುಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
   ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬಿ.ಇಡಿ ಸೀಟುಗಳ ಮಾರಾಟ ದಂಧೆ ನಡೆಯುತ್ತಿರುವುದು ಬೇಸರ ತಂದಿದೆ. ಬಿ.ಇಡಿ ಕೋರ್ಸ್‌ಗಳಿಗೆ ಹೆಚ್ಚಿನ ಮಾನ್ಯತೆ ಇರುವ ಕಾರಣ ಕೆಲವು ಬಿ.ಇಡಿ ಶಿಕ್ಷಣ ಸಂಸ್ಥೆಗಳು ಬಿ.ಇಡಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುವ ಮೂಲಕ ಅಕ್ರಮವಾಗಿ ಹಣ ಸಂಪಾದಿಸುತ್ತಿವೆ. ತರಗತಿಗಳಿಗೆ ಹಾಜರಾಗದೆ ಬಿ.ಇಡಿ ಕೋರ್ಸ್ ಮಾಡಲು ಬಯಸುವವರಿಗೆ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
   ಬಿ.ಇಡಿ ಪದವಿ ಪಡೆದುಕೊಳ್ಳಲು ಅಕ್ರಮ ಮಾರ್ಗ ಕಂಡುಕೊಂಡವರಿಗೆ ಕಾಲಕಾಲಕ್ಕೆ ಸಲ್ಲಿಸಬೇಕಾದ ಅಸೈನ್‌ಮೆಂಟ್‌ಗಳನ್ನು ಕೂಡ ಕಾಲೇಜಿನವರೇ ಒದಗಿಸುತ್ತಿದ್ದಾರೆ. ಇದನ್ನು ನೋಡಿಕೊಂಡು ಅಸೈನ್‌ಮೆಂಟ್‌ಗಳನ್ನು ಬರೆದುಕೊಡಲಾಗುತ್ತಿದೆ. ಇದಕ್ಕೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಲಾಗಿದೆ. ಒಂದು ದಿನವೂ ತರಗತಿಗೆ ಹಾಜರಾಗಿ ಪಾಠ ಕೇಳದೆ ಕೇವಲ ಪರೀಕ್ಷೆಯನ್ನು ಮಾತ್ರ ಬರೆದು ಬಿಇಡಿ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳುವವರು ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವೇ? ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
    ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಕ್ರಮಗಳ ವಿರುದ್ಧ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.  

ಡಾ. ನರಸಿಂಹಭಟ್ ನಿಧನ

ಡಾ. ನರಸಿಂಹಭಟ್
ಭದ್ರಾವತಿ, ಮಾ. ೧೩: ತಾಲೂಕಿನ ಬಾರಂದೂರು ಗ್ರಾಮದ ನಿವಾಸಿ, ವೈದ್ಯ ಡಾ. ನರಸಿಂಹಭಟ್ ನಿಧನ ಹೊಂದಿದರು.
    ಓರ್ವ ಪುತ್ರ, ಇಬ್ಬರು ಪುತ್ರಿ, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಬಿಟ್ಟಗಲಿದ್ದಾರೆ. ಡಾ. ನರಸಿಂಹಭಟ್ ಬಾರಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರಪರಿಚಿತರಾಗಿದ್ದು, ವೈದ್ಯ ವೃತ್ತಿಯಲ್ಲಿ ವಿಶಿಷ್ಟತೆ ಕಾಯ್ದುಕೊಳ್ಳುವ ಜೊತೆಗೆ ಬಡವರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಬಾರಂದೂರು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.


ಸಿದ್ದಾರ್ಥ ಅಂಧರ ಕೇಂದ್ರದ ೨೩ನೇ ವರ್ಷಾಚರಣೆ

ಕ್ರಿಕೆಟ್ ಪಂದ್ಯಾವಳಿ, ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರ್ ತರಬೇತಿ ಉದ್ಘಾಟನೆ


ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ಗುರುವಾರ ೨೩ನೇ ವರ್ಷಾಚರಣೆ ಅಂಗವಾಗಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೩: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ಗುರುವಾರ ೨೩ನೇ ವರ್ಷಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
   ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಅಂಧರ ತ್ರಿಕೋನ ಕ್ರಿಕೆಟ್ ಪಂದ್ಯಾವಳಿ ಜರುಗಿತು. ಇದಕ್ಕೂ ಮೊದಲು ಅಂಧರ ಕೇಂದ್ರದಲ್ಲಿ ಜಾಸ್ ಕಂಪ್ಯೂಟರ್ ತರಬೇತಿ ಉದ್ಘಾಟನೆಯನ್ನು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ವಿಭಾಗದ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಮನೋಹರ್ ಶೌಚಾಲಯಗಳನ್ನು ಹಾಗು ಎನ್‌ಟಿಸಿ ರೈಲ್ ಮಿಲ್ ಮಾಲೀಕ ಡಾ. ಎಚ್. ನಾಗೇಶ್ ಅಂಧರ ಕೇಂದ್ರಕ್ಕೆ ಕುಡಿಯುವ ನೀರು ಸರಬರಾಜು ಉದ್ಘಾಟಿಸಿದರು.
     ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ. ಗುರುಮೂರ್ತಿ, ಪ್ರಮುಖರಾದ ಆರ್. ತಮ್ಮಯ್ಯ, ಮುತ್ತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜಾಸ್ ಕಂಪ್ಯೂಟರ್ ತರಬೇತಿ ಉದ್ಘಾಟನೆಯನ್ನು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ವಿಭಾಗದ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ನೆರವೇರಿಸಿದರು.

ಶಿವಮೊಗ್ಗದಲ್ಲಿ ನಡೆದ ಜನಾಕ್ರೋಶ ಪ್ರತಿಭಟನೆಗೆ ನಿರೀಕ್ಷೆಗೂ ಮೀರಿದ ಕಾರ್ಯಕರ್ತರು, ಅಭಿಮಾನಿಗಳು

ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಾಕ್ರೋಶ ಪ್ರತಿಭಟನೆ ಕಾರ್ಯಕ್ರಮಕ್ಕೆ ಭದ್ರಾವತಿಯಿಂದ ಸಾವಿರಾರು ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕತರು, ಅಭಿಮಾನಿಗಳು ಸುಮಾರು ೧೦೦ಕ್ಕೂ ಹೆಚ್ಚು ಬಸ್ಸು, ಮಾಕ್ಸಿ ಕ್ಯಾಬ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತೆರಳಿದರು.
    ಭದ್ರಾವತಿ, ಮಾ. ೧೩: ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳನ್ನು ಖಂಡಿಸಿ ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಾಕ್ರೋಶ ಪ್ರತಿಭಟನೆ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕತರು, ಅಭಿಮಾನಿಗಳು ಸುಮಾರು ೧೦೦ಕ್ಕೂ ಹೆಚ್ಚು ಬಸ್ಸು, ಮಾಕ್ಸಿ ಕ್ಯಾಬ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ತೆರಳಿದರು.
    ಕಾಂಗ್ರೆಸ್ ಪಕ್ಷದ ನಗರ ಭಾಗದ ಬಹುತೇಕ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ತೆರಳಿದರು. ಅದರಲ್ಲೂ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿತು.  ತಾಲೂಕಿನ ದೂರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಬಿಳಿಕಿ ಕ್ರಾಸ್ ಬಳಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ಬಿಳಿಕಿ ಕ್ರಾಸ್ ಬಳಿ ಬಿ.ಎಚ್ ರಸ್ತೆಯಲ್ಲಿ ಸುಮಾರು ೨ ತಾಸು ವಾಹನ ದಟ್ಟಣೆ ಕಂಡು ಬಂದಿತು. ಸಂಚಾರ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುವಂತಾಯಿತು.
    ಕಾಂಗ್ರೆಸ್ ಬಾವುಟ ಹಿಡಿತು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಶಿವಮೊಗ್ಗ ನಗರ ತಲುಪಿದರು. ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಪಾಲ್ಗೊಂಡಿರುವುದು ಗಮನ ಸೆಳೆಯಿತು. ಕಳೆದ ೪-೫ ದಿನಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು, ಪಕ್ಷದ ರಾಜ್ಯ ಹಾಗು ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಹೆಚ್ಚಿನ ಶ್ರಮ ವಹಿಸಿದ್ದರು.


ಶಿವಮೊಗ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಾಕ್ರೋಶ ಪ್ರತಿಭಟನೆ ಕಾರ್ಯಕ್ರಮಕ್ಕೆ ಭದ್ರಾವತಿಯಿಂದ ಸಾವಿರಾರು ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕತರು, ಅಭಿಮಾನಿಗಳಿಗೆ ಬಿಳಿಕಿ ಕ್ರಾಸ್ ಬಳಿ ಊಟದ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿತ್ತು.


ಮಾ.೧೬ರಂದು ವಿಧಾನಸೌಧ ಚಲೋ : ಸುಮಾರು ೫೦೦ ವಿಐಎಸ್‌ಎಲ್ ಕಾರ್ಮಿಕರು ಬಾಗಿ

ಕೇಂದ್ರ ಸರ್ಕಾರದ ಉದ್ಯಮ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ : ಜೆ. ಜಗದೀಶ್

ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮಾತನಾಡಿದರು.
    ಭದ್ರಾವತಿ, ಮಾ. ೧೩: ದೇಶದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ವಿರೋಧಿಸಿ ಮಾ.೧೬ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ನಗರದ ವಿಐಎಸ್‌ಎಲ್ ಕಾರ್ಖಾನೆಯ ಸುಮಾರು ೫೦೦ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದರು.
      ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರಸ್ತುತ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮುನ್ನಡೆಸುವುದು ಸರ್ಕಾರದ ಕೆಲಸವಲ್ಲ ಎಂಬ ಬಹಿರಂಗ ಹೇಳಿಕೆ ನೀಡುವ ಜೊತೆಗೆ ಜನರ ತೆರಿಗೆ ಹಣದಿಂದ ಸ್ಥಾಪನೆಗೊಂಡಿರುವ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಇಂದು ಸರ್ಕಾರಿ ಉದ್ಯಮಗಳ ನೌಕರರು ಸಹ ರೈತರಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
   ೧೯೯೧ರ ನವ ಉದಾರವಾದಿ ನೀತಿಗಳ ಪರಿಣಾಮವಾಗಿ ಸಾರ್ವಜನಿಕ ವಲಯಗಳಲ್ಲಿನ ಬಂಡವಾಳವನ್ನು ಹಂತ ಹಂತವಾಗಿ ಹಿಂಪಡೆಯುತ್ತಾ ಬಂದಿರುವ ಸರ್ಕಾರಗಳು ಇಂದು ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗವನ್ನು ರಚಿಸಿವೆ. ಇದರ ಮುಖ್ಯ ಉದ್ದೇಶವೇ ಬಂಡವಾಳ ಹಿಂತೆಗೆತ, ಅಂದರೆ ಒಂದು ಸಾರ್ವಜನಿಕ ಸಂಸ್ಥೆಯ ಬಹುಪಾಲು ಷೇರುಗಳನ್ನು ಒಬ್ಬ ಖಾಸಗೀ ಬಂಡವಾಳಶಾಹಿ ಹೊಂದಲು ಅವಕಾಶ ಮಾಡಿಕೊಡುವುದು. ಇದರಿಂದಾಗಿ ವಿಮೆ, ಬ್ಯಾಂಕು, ಬಿಎಸ್‌ಎನ್‌ಎಲ್, ಬಂದರೂ, ತೈಲ ಸಂಸ್ಕರಣಾ, ಉಕ್ಕು ಉತ್ಪಾದನಾ ಘಟಕಗಳು, ವಿದ್ಯುತ್ ಮುಂತಾದವು ಆಸ್ತಿ ಸಮೇತ ಖಾಸಗೀ ಮತ್ತು ವಿದೇಶಿ ಬಂಡವಾಳಗಾರರ ಪಾಲಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಕೇಂದ್ರ ಸರ್ಕಾರದ ಉದ್ಯಮ ವಿರೋಧಿ ಧೋರಣೆಗಳ ವಿರುದ್ಧ ಎಲ್ಲಾ ಉದ್ಯಮಗಳು ಒಗ್ಗಟ್ಟಾಗಿ ಹೋರಾಟ ನಡೆಸುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಖಾಸಗೀಕರಣ ವಿರೋಧಿ ವೇದಿಕೆ ರಚಿಸಲಾಗಿದ್ದು, ಇದರ ಮೂಲಕ ಹೋರಾಟ ನಡೆಸಲಾಗುತ್ತಿದೆ. ವಿಐಎಸ್‌ಎಲ್ ಕಾರ್ಮಿಕ ಸಂಘ ಸಹ ಇದರ ಒಂದು ಸಂಯೋಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾ.೧೬ರಂದು ಮಧ್ಯಾಹ್ನ ೧ ಗಂಟೆಗೆ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಪ್ರೀಡಂ ಪಾರ್ಕ್ ಬಳಿ ಇರುವ ಕಾಳಿದಾಸ ರಸ್ತೆಯಲ್ಲಿ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ. ನಗರದಿಂದ ಸುಮಾರು ೫೦೦ ಕಾರ್ಮಿಕರು ರೈಲಿನ ಮೂಲಕ ಬೆಂಗಳೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಐಎಸ್‌ಎಲ್ ಖಾಸಗೀಕರಣಗೊಳ್ಳುವುದು ಅಸಾಧ್ಯ:
    ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ. ಆದರೆ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಖಾಸಗೀಯವರು ಮುನ್ನಡೆಸಿಕೊಂಡು ಹೋಗಲು ಮುಂದೆ ಬರುತ್ತಿಲ್ಲ. ಒಂದು ವೇಳೆ ಖಾಸಗೀಯವರು ವಹಿಸಿಕೊಂಡರೂ ಸಹ ನಿರೀಕ್ಷೆಯಂತೆ ಬಂಡವಾಳ ಹೂಡುವುದಿಲ್ಲ. ಕಾರ್ಖಾನೆ ಒಂದು ವೇಳೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಲ್ಲಿ ಕಾರ್ಮಿಕರು ಬೀದಿಪಾಲಾಗುವ ಮೂಲಕ ನಗರದ ಆರ್ಥಿಕತೆ ಕುಸಿಯಲಿದೆ. ಈ ಹಿನ್ನಲೆಯಲ್ಲಿ ಸರ್ಕಾರವೇ ಕನಿಷ್ಠ ಬಂಡವಾಳ ತೊಡಗಿಸಿ ಮುನ್ನಡೆಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು.
   ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್, ಕಾರ್ಯದರ್ಶಿ ಅಮೃತ್‌ಕುಮಾರ್, ಖಜಾಂಚಿ ಮೋಹನ್, ಪ್ರದೀಪ್‌ಕುಮಾರ್, ಕುಮಾರ್, ಮನು, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.