ಕೇಂದ್ರ ಸರ್ಕಾರದ ಉದ್ಯಮ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ : ಜೆ. ಜಗದೀಶ್
ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮಾತನಾಡಿದರು.
ಭದ್ರಾವತಿ, ಮಾ. ೧೩: ದೇಶದ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ವಿರೋಧಿಸಿ ಮಾ.೧೬ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ನಗರದ ವಿಐಎಸ್‌ಎಲ್ ಕಾರ್ಖಾನೆಯ ಸುಮಾರು ೫೦೦ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪ್ರಸ್ತುತ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮುನ್ನಡೆಸುವುದು ಸರ್ಕಾರದ ಕೆಲಸವಲ್ಲ ಎಂಬ ಬಹಿರಂಗ ಹೇಳಿಕೆ ನೀಡುವ ಜೊತೆಗೆ ಜನರ ತೆರಿಗೆ ಹಣದಿಂದ ಸ್ಥಾಪನೆಗೊಂಡಿರುವ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ಇದರ ವಿರುದ್ಧ ಇಂದು ಸರ್ಕಾರಿ ಉದ್ಯಮಗಳ ನೌಕರರು ಸಹ ರೈತರಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
೧೯೯೧ರ ನವ ಉದಾರವಾದಿ ನೀತಿಗಳ ಪರಿಣಾಮವಾಗಿ ಸಾರ್ವಜನಿಕ ವಲಯಗಳಲ್ಲಿನ ಬಂಡವಾಳವನ್ನು ಹಂತ ಹಂತವಾಗಿ ಹಿಂಪಡೆಯುತ್ತಾ ಬಂದಿರುವ ಸರ್ಕಾರಗಳು ಇಂದು ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗವನ್ನು ರಚಿಸಿವೆ. ಇದರ ಮುಖ್ಯ ಉದ್ದೇಶವೇ ಬಂಡವಾಳ ಹಿಂತೆಗೆತ, ಅಂದರೆ ಒಂದು ಸಾರ್ವಜನಿಕ ಸಂಸ್ಥೆಯ ಬಹುಪಾಲು ಷೇರುಗಳನ್ನು ಒಬ್ಬ ಖಾಸಗೀ ಬಂಡವಾಳಶಾಹಿ ಹೊಂದಲು ಅವಕಾಶ ಮಾಡಿಕೊಡುವುದು. ಇದರಿಂದಾಗಿ ವಿಮೆ, ಬ್ಯಾಂಕು, ಬಿಎಸ್‌ಎನ್‌ಎಲ್, ಬಂದರೂ, ತೈಲ ಸಂಸ್ಕರಣಾ, ಉಕ್ಕು ಉತ್ಪಾದನಾ ಘಟಕಗಳು, ವಿದ್ಯುತ್ ಮುಂತಾದವು ಆಸ್ತಿ ಸಮೇತ ಖಾಸಗೀ ಮತ್ತು ವಿದೇಶಿ ಬಂಡವಾಳಗಾರರ ಪಾಲಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಉದ್ಯಮ ವಿರೋಧಿ ಧೋರಣೆಗಳ ವಿರುದ್ಧ ಎಲ್ಲಾ ಉದ್ಯಮಗಳು ಒಗ್ಗಟ್ಟಾಗಿ ಹೋರಾಟ ನಡೆಸುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಖಾಸಗೀಕರಣ ವಿರೋಧಿ ವೇದಿಕೆ ರಚಿಸಲಾಗಿದ್ದು, ಇದರ ಮೂಲಕ ಹೋರಾಟ ನಡೆಸಲಾಗುತ್ತಿದೆ. ವಿಐಎಸ್‌ಎಲ್ ಕಾರ್ಮಿಕ ಸಂಘ ಸಹ ಇದರ ಒಂದು ಸಂಯೋಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾ.೧೬ರಂದು ಮಧ್ಯಾಹ್ನ ೧ ಗಂಟೆಗೆ ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಪ್ರೀಡಂ ಪಾರ್ಕ್ ಬಳಿ ಇರುವ ಕಾಳಿದಾಸ ರಸ್ತೆಯಲ್ಲಿ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ. ನಗರದಿಂದ ಸುಮಾರು ೫೦೦ ಕಾರ್ಮಿಕರು ರೈಲಿನ ಮೂಲಕ ಬೆಂಗಳೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಐಎಸ್‌ಎಲ್ ಖಾಸಗೀಕರಣಗೊಳ್ಳುವುದು ಅಸಾಧ್ಯ:
ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿದೆ. ಆದರೆ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಖಾಸಗೀಯವರು ಮುನ್ನಡೆಸಿಕೊಂಡು ಹೋಗಲು ಮುಂದೆ ಬರುತ್ತಿಲ್ಲ. ಒಂದು ವೇಳೆ ಖಾಸಗೀಯವರು ವಹಿಸಿಕೊಂಡರೂ ಸಹ ನಿರೀಕ್ಷೆಯಂತೆ ಬಂಡವಾಳ ಹೂಡುವುದಿಲ್ಲ. ಕಾರ್ಖಾನೆ ಒಂದು ವೇಳೆ ಸಂಪೂರ್ಣವಾಗಿ ಮುಚ್ಚಲ್ಪಟ್ಟಲ್ಲಿ ಕಾರ್ಮಿಕರು ಬೀದಿಪಾಲಾಗುವ ಮೂಲಕ ನಗರದ ಆರ್ಥಿಕತೆ ಕುಸಿಯಲಿದೆ. ಈ ಹಿನ್ನಲೆಯಲ್ಲಿ ಸರ್ಕಾರವೇ ಕನಿಷ್ಠ ಬಂಡವಾಳ ತೊಡಗಿಸಿ ಮುನ್ನಡೆಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್, ಕಾರ್ಯದರ್ಶಿ ಅಮೃತ್‌ಕುಮಾರ್, ಖಜಾಂಚಿ ಮೋಹನ್, ಪ್ರದೀಪ್‌ಕುಮಾರ್, ಕುಮಾರ್, ಮನು, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment