Wednesday, March 17, 2021

ರಕ್ತದಾನ ಮಹಾ ಕಾರ್ಯ, ಯಾವುದೇ ದುಷ್ಪರಿಣಾಮವಿಲ್ಲ : ಬಿ.ಕೆ ಮೋಹನ್

ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ರಕ್ತದಾನ ಶಿಬಿರ ಹಾಗು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಮಾ. ೧೭: ರಕ್ತದಾನ ಮಹಾ ಕಾರ್ಯವಾಗಿದ್ದು, ರಕ್ತದಾನ ಮಾಡುವುದರಿಂದ ಯಾರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
  ಅವರು ಬುಧವಾರ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
   ತಾವು ಸಹ ಯಾವುದೇ ಪ್ರಚಾರವಿಲ್ಲದೆ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದು, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಜೊತೆಗೆ ಮತ್ತೊಬ್ಬರ ಜೀವ ಉಳಿಸಬಹುದಾಗಿದೆ. ಇಂತಹ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಆರೋಗ್ಯ ಕೇಂದ್ರದ ವೈದ್ಯೆ ಡಾ. ಕವಿತಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಅನಿಲ್‌ಕುಮಾರ್, ಮೂಳೆರೋಗ ತಜ್ಞ  ಡಾ. ಸುರೇಶ್, ಸರ್ಜನ್ ಡಾ. ರಾಜು, ದಂತ ತಜ್ಞ ಡಾ. ಸುರೇಶ್, ಚರ್ಮರೋಗ ತಜ್ಞ ಡಾ. ಭರತ್‌ಕುಮಾರ್, ಸ್ತ್ರೀರೋಗ ತಜ್ಞೆ ಡಾ. ಸ್ಮೃತಿ, ಮಕ್ಕಳ ತಜ್ಞ ಡಾ. ಅಜಯ್, ರಕ್ತನಿಧಿ ಕೇಂದ್ರದ ಡಾ. ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಆರೋಗ್ಯ ಕೇಂದ್ರದ ದೇವರಾಜ್, ಕಿರಣ್, ಸಚಿನ್, ಕೋಮಲಕುಮಾರಿ, ಸೆಲ್ವಿ, ಮಂಗಳ, ಶಿಲ್ಪ, ಉಷಾ ಮತ್ತು ಚೇತನ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನಗರಸಭೆಗೆ ಪುನಃ ವಾರ್ಡ್‌ಗಳ ಮೀಸಲಾತಿ ನಿಗದಿ : ಶೀಘ್ರದಲ್ಲಿಯೇ ಚುನಾವಣೆ ಸಾಧ್ಯತೆ?

    ಭದ್ರಾವತಿ, ಮಾ. ೧೭: ಮೀಸಲಾತಿ ನಿಗದಿ ಸಂಬಂಧ ಸಲ್ಲಿಸಲಾಗಿದ್ದ ಆಕ್ಷೇಪಣೆಗಳ ಹಿನ್ನಲೆಯಲ್ಲಿ ಕಳೆದ ಸುಮಾರು ೩ ವರ್ಷಗಳಿಂದ ಚುನಾವಣೆ ನಡೆಯದ ನಗರಸಭೆಗೆ ಇದೀಗ ಚುನಾವಣೆ ನಡೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ. ಸರ್ಕಾರ ಮಂಗಳವಾರ ಹೊಸದಾಗಿ ವಾರ್ಡ್‌ಗಳ ಮೀಸಲಾತಿ ಪ್ರಕಟಿಸಿದೆ.
   ಮೀಸಲಾತಿ ನಿಗದಿ ಸಂಬಂಧ ಹಲವು ಬಾರಿ ಆಕ್ಷೇಪಣೆಗಳು ಸಲ್ಲಿಕೆಯಾಗಿ ನ್ಯಾಯಾಲಯದಲ್ಲಿ ವಿಚಾರಣೆಗಳು ಬಾಕಿ ಉಳಿದಿದ್ದವು. ಈ ನಡುವೆ ಪ್ರಕರಣಗಳನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದ ನಂತರ ಸರ್ಕಾರ ಪುನಃ ಜ.೨೧ರಂದು ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದ್ದು, ಈ ಸಂಬಂಧ ಸಹ ಹಲವು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ನಗರಸಭೆಗೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿದ್ದವು. ಈ ಹಿನ್ನಲೆಯಲ್ಲಿ ಆಕ್ಷೇಪಣೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಇದೀಗ ಹೊಸದಾಗಿ ಮೀಸಲಾತಿ ಹೊರಡಿಸಲಾಗಿದೆ.
ಒಟ್ಟು ೩೫ ವಾರ್ಡ್‌ಗಳ ಮೀಸಲಾತಿ ವಿವರ:
   ವಾರ್ಡ್ ನಂ.೧(ಹೆಬ್ಬಂಡಿ, ಜೇಡಿಕಟ್ಟೆ)-ಹಿಂದುಳಿದ ವರ್ಗ ಮಹಿಳೆ, ವಾರ್ಡ್ ನಂ.೨(ಲೋಯರ್ ಹುತ್ತಾ)-ಸಾಮಾನ್ಯ ಮಹಿಳೆ, ವಾರ್ಡ್ ನಂ.೩(ಬಿ.ಎಚ್ ರಸ್ತೆ, ಎಡ ಮತ್ತು ಬಲಭಾಗ ಚಾಮೇಗೌಡ ಏರಿಯಾ)-ಸಾಮಾನ್ಯ, ವಾರ್ಡ್ ನಂ.೪(ಕನಕಮಂಟಪ ಪ್ರದೇಶ)-ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ ನಂ.೫(ಕೋಟೆ ಏರಿಯಾ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೬(ಸಿದ್ದರೂಢನಗರ)-ಹಿಂದುಳಿದ ವರ್ಗ-ಎ, ವಾರ್ಡ್ ನಂ.೭(ದುರ್ಗಿಗುಡಿ ಹಾಗು ಖಲಂದರ್ ನಗರ)-ಹಿಂದುಳಿದ ವರ್ಗ ಬಿ, ವಾರ್ಡ್ ನಂ.೮(ಅನ್ವರ್ ಕಾಲೋನಿ ಮತ್ತು ಸೀಗೆಬಾಗಿ)-ಸಾಮಾನ್ಯ, ವಾರ್ಡ್ ನಂ.೯(ಭದ್ರಾಕಾಲೋನಿ)-ಪರಿಶಿಷ್ಟ ಜಾತಿ, ವಾರ್ಡ್ ನಂ.೧೦(ಹನುಮಂತನಗರ ಮತ್ತು ಅಶ್ವತ್‌ನಗರ)-ಹಿಂದುಳಿದ ವರ್ಗ-ಎ (ಮಹಿಳೆ).
   ವಾರ್ಡ್ ನಂ.೧೧(ಸುಭಾಷ್ ನಗರ)-ಸಾಮಾನ್ಯ, ವಾರ್ಡ್ ನಂ.೧೨(ಅಣ್ಣಾ ನಗರ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.೧೩(ಭೂತನಗುಡಿ)-ಸಾಮಾನ್ಯ ಮಹಿಳೆ), ವಾರ್ಡ್ ನಂ.೧೪(ಹೊಸಬೋವಿಕಾಲೋನಿ)-ಪರಿಶಿಷ್ಟ ಜಾತಿ, ವಾರ್ಡ್ ನಂ.೧೫(ಹೊಸಮನೆ ಹಾಗು ಅಶ್ವಥ್ ನಗರ ಬಲಭಾಗ)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.೧೬(ಗಾಂಧಿನಗರ)-ಸಾಮಾನ್ಯ, ವಾರ್ಡ್ ನಂ.೧೭(ನೆಹರು ನಗರ)-ಸಾಮಾನ್ಯ, ವಾರ್ಡ್ ನಂ.೧೮(ಎಂ.ಎಂ ಕಾಂಪೌಂಡ್)-ಹಿಂದುಳಿದ ವರ್ಗ(ಎ), ವಾರ್ಡ್-೧೯(ಎಂಪಿಎಂ ಆಸ್ಪತ್ರೆ)-ಪರಿಶಿಷ್ಟ ಪಂಗಡ, ವಾರ್ಡ್ ನಂ.೨೦(ಸುರಗಿತೋಪು)-ಸಾಮಾನ್ಯ ಮಹಿಳೆ.
   ವಾರ್ಡ್ ನಂ.೨೧(ಎಂಪಿಎಂ ೬ ಮತ್ತು ೮ನೇ ವಾರ್ಡ್)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.೨೨(ಉಜ್ಜನಿಪುರ)-ಸಾಮಾನ್ಯ, ವಾರ್ಡ್ ನಂ.೨೩(ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೨೪(ಬೊಮ್ಮನಕಟ್ಟೆ)-ಸಾಮಾನ್ಯ, ವಾರ್ಡ್ ನಂ.೨೫(ಹುಡ್ಕೋ-ಹೊಸಬುಳ್ಳಾಪುರ)-ಪರಿಶಿಷ್ಟ ಜಾತಿ, ವಾರ್ಡ್ ನಂ.೨೬(ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೨೭(ಆಂಜನೇಯ ಅಗ್ರಹಾರ-ಕೂಲಿಬ್ಲಾಕ್)-ಪರಿಶಿಷ್ಟ ಜಾತಿ(ಮಹಿಳೆ), ವಾರ್ಡ್ ನಂ.೨೮(ಗಣೇಶ್‌ಕಾಲೋನಿ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.೨೯(ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್-ಎನ್‌ಟಿಬಿ ಲೇಔಟ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೦(ಹೊಸಸಿದ್ದಾಪುರ)-ಸಾಮಾನ್ಯ.
  ವಾರ್ಡ್ ನಂ.೩೧(ಜಿಂಕ್‌ಲೈನ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೨(ಜನ್ನಾಪುರ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೩(ಹುತ್ತಾ ಕಾಲೋನಿ)-ಸಾಮಾನ್ಯ, ವಾರ್ಡ್ ನಂ.೩೪(ಅಪ್ಪರ್ ಹುತ್ತಾ)-ಸಾಮಾನ್ಯ(ಮಹಿಳೆ) ಮತ್ತು ವಾರ್ಡ್ ನಂ.೩೫(ಭಂಡಾರಹಳ್ಳಿ)-ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿದೆ.

ಬೆಲೆ ನಿಯಂತ್ರಣ, ಕೃಷಿ ಕಾಯ್ದೆ ರದ್ದು, ಕನಿಷ್ಠ ಬೆಂಬಲ ಬೆಲೆಗೆ ಎಎಪಿ ಆಗ್ರಹ : ತಹಸೀಲ್ದಾರ್‌ಗೆ ಮನವಿ

ಹೆಚ್ಚುತ್ತಿರುವ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ನಿಯಂತ್ರಣ ಹಾಗು ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ನೀಡುವ ಸಂಬಂಧ ಬುಧವಾರ ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಮಾ. ೧೭: ಹೆಚ್ಚುತ್ತಿರುವ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ನಿಯಂತ್ರಣ ಹಾಗು ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ನೀಡುವ ಸಂಬಂಧ ಬುಧವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ೩ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ, ಬಂಡವಾಳಶಾಹಿಗಳ ಕೈಗೊಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ ಸಾರ್ವಜನಿಕ ಉದ್ಯಮಗಳನ್ನು ಸಹ ಖಾಸಗೀಕರಣಗೊಳಿಸಲಾಗುತ್ತಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಹ ಸಿಗುತ್ತಿಲ್ಲ ಎಂದು ಆರೋಪಿಸಲಾಯಿತು.
    ತಕ್ಷಣ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಕೊಳ್ಳಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಕೈಬಿಡಬೇಕು ಹಾಗು ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕೆಂದು ಆಗ್ರಹಿಸಲಾಯಿತು.
    ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಡಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷೆ ಸುನಿತಾಸಿಂಗ್, ತಾಲೂಕು ಉಪಾಧ್ಯಕ್ಷರಾದ ಮುಳ್ಕೆರೆ ಲೋಕೇಶ್, ಎನ್.ಪಿ ಜೋಸೆಫ್, ಪ್ರಧಾನ ಕಾರ್ಯದರ್ಶಿ ವಿನೋದ್, ಸಹ ಕಾರ್ಯದರ್ಶಿ ಪ್ರದೀಪ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತ ದಿನೇಶ್, ಉಪಾಧ್ಯಕ್ಷೆ ನಿಸೀಬಾ ಬೇಗಂ ಹಾಗು ಕಾರ್ಯದರ್ಶಿ ಮೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೨೦ರಂದು ಜಮಾಬಂಧಿ ಕಾರ್ಯಕ್ರಮ

    ಭದ್ರಾವತಿ, ಮಾ. ೧೭: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾ. ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಜಮಾಬಂಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
   ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮಹೇಶ್ವರಪ್ಪ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸದಸ್ಯರು ತಪ್ಪದೇ ಪಾಲ್ಗೊಳ್ಳುವಂತೆ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಕೋರಿದ್ದಾರೆ.

ಮಾ.೧೯ರಂದು ನಗರಸಭೆ ಮುಂಭಾಗ ಅಸಹಕಾರ ಚಳುವಳಿ

ಭದ್ರಾವತಿ, ಮಾ. ೧೭: ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಮಾ.೧೯ರಂದು ಬೆಳಿಗ್ಗೆ ೧೦ ಗಂಟೆಗೆ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗಿದೆ.
   ಪ್ರಸ್ತುತ ನಗರದಲ್ಲಿ ವಿಐಎಸ್‌ಎಲ್  ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಅಲ್ಲದೆ ಕೋವಿಡ್-೧೯ರ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ೨೬೦೦ ರು. ಠೇವಣಿ ವಿಧಿಸಿ, ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿರುವುದು ಸರಿಯಲ್ಲ. ಕುಡಿಯುವ ನೀರಿಗೆ ಹಣ ಕೇಳುವುದು ಸರಿಯಲ್ಲ. ಉಚಿತವಾಗಿ ಕುಡಿಯುವ ನೀರು ಒದಗಿಸಬೇಕು. ಈ ಹಿನ್ನಲೆಯಲ್ಲಿಈಗಾಗಲೇ ಹಣ ಪಾವತಿಸಿರುವವರಿಗೆ ಹಣ ಹಿಂದಿರುಗಿಸುವುದು. ಆದೇಶವನ್ನು ತಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಕೊಚಚೆ ಪ್ರದೇಶದ ನಿವಾಶಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

Tuesday, March 16, 2021

ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಿ.ವೈ ವಿಜಯೇಂದ್ರ

ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದನೆ

ಕಬಡ್ಡಿ ಪಂದ್ಯಾವಳಿ ವೇಳೆ ಹಲ್ಲೆಗೊಳ್ಳಲಾಗಿದ್ದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನು ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದಿಸಿದರು.
   ಭದ್ರಾವತಿ, ಮಾ. ೧೬: ನಗರದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ಹಲ್ಲೆಗೊಳ್ಳಲಾಗಿದ್ದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಸೋಮವಾರ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನು ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದಿಸಿದರು.
ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸುತ್ತಿರುವ ವಿಜಯೇಂದ್ರರನ್ನು ಉದ್ಯಮಿ, ನಗರದ ನಿವಾಸಿ ಎಚ್.ಸಿ ರಮೇಶ್ ಅಭಿನಂದಿಸುವ ಜೊತೆಗೆ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಎಂ ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಜಿ. ಆನಂದಕುಮಾರ್, ಕೆ. ಮಂಜುನಾಥ್, ಚನ್ನೇಶ್, ರಾಮನಾಥ್ ಬರ್ಗೆ, ಧನುಷ್ ಬೋಸ್ಲೆ, ನಾರಾಯಣಪ್ಪ ದೊಡ್ಮನೆ, ಎಂ.ಎಸ್ ಸುರೇಶಪ್ಪ, ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸಿತರಿದ್ದರು.


ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕ : ಡಾ. ಅನುರಾಧ ಪಟೇಲ್

ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೬: ಮಹಿಳೆಯರು ತಮ್ಮಲ್ಲಿ ಅಡಗಿರುವ ಅದ್ಭುತವಾದ ಶಕ್ತಿಗಳಿಂದ ಜಾಗೃತಗೊಂಡು ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ ಎಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
   ಅವರು ಮಂಗಳವಾರ ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಮಹಿಳೆ ಶಕ್ತಿ ಸ್ವರೂಣಿಯಾಗಿದ್ದು, ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಕ್ರಿಯಾಶೀಲತೆ, ಸಮಾಜದೊಂದಿಗೆ ಸಾಮಾಜಿಕ ಬದ್ದತೆ, ಜವಾಬ್ದಾರಿ ಹಾಗು ಕುಟುಂಬ ನಿರ್ವಹಣೆಯಲ್ಲಿ ಅದ್ಬುತವಾದ ಶಕ್ತಿ ಕಾಯ್ದುಕೊಂಡಿದ್ದಾಳೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಲ್ಲಿದ್ದರೂ ಸಹ ಇವುಗಳಿಂದ ಜಾಗೃತಗೊಳ್ಳಬೇಕು. ಮಹಿಳೆಯರ ಪ್ರತಿಯೊಂದು ಶ್ರಮದ ಹಿಂದೆ ಪುರುಷರು ಸಹ ಕಾರಣಕರ್ತರು ಎಂಬುದನ್ನು ಮರೆಯಬಾರದು ಎಂದರು.
   ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿದರು. ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
     ನಗರಸಭಾ ಸದಸ್ಯ ಎಂ.ಎ ಅಜಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಉತ್ತರ ಕನ್ನಡ ಅಂಕೋಲ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಹಾಗು ತುಳಸಿ ಗೌಡ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
   ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನೆರವೇರಿತು. ವೇದಿಕೆ ಕಾರ್ಯಕ್ರಮದ ನಂತರ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲಾ ತಂಡದಿಂದ ಡಾ. ಶಿವಕುಮಾರ್ ಬೇಗಾರ್ ನಿರ್ದೇಶನದ ಮೋಹಿನಿ ಭಸ್ಮಾಸುರ ಪ್ರಸಂಗ ಯಕ್ಷಗಾನ ಪ್ರದರ್ಶನ ನಡೆಯಿತು.