Tuesday, March 16, 2021

ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕ : ಡಾ. ಅನುರಾಧ ಪಟೇಲ್

ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೬: ಮಹಿಳೆಯರು ತಮ್ಮಲ್ಲಿ ಅಡಗಿರುವ ಅದ್ಭುತವಾದ ಶಕ್ತಿಗಳಿಂದ ಜಾಗೃತಗೊಂಡು ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ ಎಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
   ಅವರು ಮಂಗಳವಾರ ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಮಹಿಳೆ ಶಕ್ತಿ ಸ್ವರೂಣಿಯಾಗಿದ್ದು, ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಕ್ರಿಯಾಶೀಲತೆ, ಸಮಾಜದೊಂದಿಗೆ ಸಾಮಾಜಿಕ ಬದ್ದತೆ, ಜವಾಬ್ದಾರಿ ಹಾಗು ಕುಟುಂಬ ನಿರ್ವಹಣೆಯಲ್ಲಿ ಅದ್ಬುತವಾದ ಶಕ್ತಿ ಕಾಯ್ದುಕೊಂಡಿದ್ದಾಳೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಲ್ಲಿದ್ದರೂ ಸಹ ಇವುಗಳಿಂದ ಜಾಗೃತಗೊಳ್ಳಬೇಕು. ಮಹಿಳೆಯರ ಪ್ರತಿಯೊಂದು ಶ್ರಮದ ಹಿಂದೆ ಪುರುಷರು ಸಹ ಕಾರಣಕರ್ತರು ಎಂಬುದನ್ನು ಮರೆಯಬಾರದು ಎಂದರು.
   ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿದರು. ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
     ನಗರಸಭಾ ಸದಸ್ಯ ಎಂ.ಎ ಅಜಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಉತ್ತರ ಕನ್ನಡ ಅಂಕೋಲ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಹಾಗು ತುಳಸಿ ಗೌಡ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
   ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನೆರವೇರಿತು. ವೇದಿಕೆ ಕಾರ್ಯಕ್ರಮದ ನಂತರ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲಾ ತಂಡದಿಂದ ಡಾ. ಶಿವಕುಮಾರ್ ಬೇಗಾರ್ ನಿರ್ದೇಶನದ ಮೋಹಿನಿ ಭಸ್ಮಾಸುರ ಪ್ರಸಂಗ ಯಕ್ಷಗಾನ ಪ್ರದರ್ಶನ ನಡೆಯಿತು.

No comments:

Post a Comment