Monday, March 22, 2021

ಗೋಣಿಬೀಡು ಚಾನಲ್‌ನಲ್ಲಿ ಮೃತದೇಹ ಪತ್ತೆ

ಗೌಸ್‌ಪೀರ್
ಭದ್ರಾವತಿ, ಮಾ. ೨೨: ತಾಲೂಕಿನ ಗೋಣಿಬೀಡು ಗ್ರಾಮದ ಚಾನಲ್‌ನಲ್ಲಿ ಸೋಮವಾರ ಮಧ್ಯಾಹ್ನ ಮೃತ ದೇಹವೊಂದು ಪತ್ತೆಯಾಗಿದೆ.
   ಮೃತಪಟ್ಟ ವ್ಯಕ್ತಿಯನ್ನು ಹೊಸಮನೆ ಹನುಮಂತನಗರ ನಿವಾಸಿ ಗೌಸ್‌ಪೀರ್ ಎಂದು ಗುರುತಿಸಲಾಗಿದೆ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಶವಪರೀಕ್ಷೆ ನಡೆಸಲಾಗಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಜಮೀನು ವಿಚಾರ : ಮಹಿಳೆಯೊಬ್ಬರ ಕೊಲೆಗೆ ಯತ್ನ

ಭದ್ರಾವತಿ, ಫೆ. ೨೨: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಕೊಲೆ ಯತ್ನ ನಡೆದಿರುವ ಘಟನೆ ತಾಲೂಕಿನ ಶಂಕರಘಟ್ಟದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
    ಶಂಕರಘಟ್ಟ ನಿವಾಸಿ ಮಮತಾ ಎಂಬುವರು ಹಲ್ಲೆಗೊಳಗಾಗಿದ್ದು, ಮಧ್ಯಾಹ್ನ ೧.೪೫ರ ಸುಮಾರಿನಲ್ಲಿ ಸುಮಾರು ೫ ಜನರು ಏಕಾಏಕಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಮತಾ ಕುಟುಂಬದವರು ೨೦೦೮ರಲ್ಲಿ ಜಮೀನು ಖರೀದಿಸಿದ್ದು, ಆದರೆ ಇದುವರೆಗೂ ಜಮೀನು ನೋಂದಾಣಿ ಮಾಡಿಕೊಡದೆ ಇರುವುದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರ ತನಿಖೆ ನಂತರ ನಿಖರವಾದ ಮಾಹಿತಿ ಲಭ್ಯವಾಗಲಿದೆ.


Sunday, March 21, 2021

ಮಾ.೨೮ರಂದು ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನ

ಸರ್ವಾಧ್ಯಕ್ಷೆ ಡಾ. ವೀಣಾ ಎಸ್. ಭಟ್‌ಗೆ ಆಹ್ವಾನ
ಭದ್ರಾವತಿ, ಮಾ. ೨೧: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನ ಮಾ.೨೮ರಂದು ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಸಮ್ಮೇಳನಾಧ್ಯಕ್ಷರಾಗಿ ಸ್ತ್ರೀ ರೋಗ ತಜ್ಞೆ, ವೈದ್ಯ ಸಾಹಿತಿ ಡಾ. ವೀಣಾ ಎಸ್ ಭಟ್‌ರನ್ನು ಆಯ್ಕೆ ಮಾಡಲಾಗಿದೆ.
ತಾಲೂಕಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ಶರಣ ಸಾಹಿತ್ಯ ಸಮ್ಮೇಳನ ಗಮನ ಸೆಳೆಯುತ್ತಿದೆ.
ಈ ಬಾರಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶೇಷತೆ ಎಂಬಂತೆ ಸಮ್ಮೇಳನಾಧ್ಯಕ್ಷರಾಗಿ ಡಾ. ವೀಣಾ ಎಸ್ ಭಟ್‌ರನ್ನು ಆಯ್ಕೆ ಮಾಡಿರುವುದು ಮತ್ತಷ್ಟು ವಿಶೇಷತೆಯಿಂದ ಕೂಡಿದೆ. ವೀಣಾ ಎಸ್ ಭಟ್‌ರವರು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಯೋಗ ಹಾಗು ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇವರು ವೈದ್ಯಕೀಯ ಸಾಹಿತ್ಯದ ಹಲವು ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದಾರೆ. ಮಾಸ ಪತ್ರಿಕೆ, ವಾರ ಪತ್ರಿಕೆ ಹಾಗು ದಿನಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ.
ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ :
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ನೇತೃತ್ವದಲ್ಲಿ ಭಾನುವಾರ ಸಮ್ಮೇಳನಾಧ್ಯಕ್ಷೆ ವೀಣಾ ಎಸ್ ಭಟ್‌ರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ನೇತ್ರ ತಜ್ಞ ಡಾ. ಕುಮಾರಸ್ವಾಮಿ, ಕತ್ತಲಗೆರೆ ತಿಮ್ಮಪ್ಪ, ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿತ್ರ: ಡಿ೨೧-ಬಿಡಿವಿಟಿ೨
ಭದ್ರಾವತಿ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ. ವೀಣಾ ಎಸ್. ಭಟ್‌ರನ್ನು ಭಾನುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಗ್ರಾಮೀಣ ಆಟದೊಂದಿಗೆ ಸಂಭ್ರಮ

ನೆಹರು ಯುವ ಕೇಂದ್ರ, ಸಮೃದ್ಧಿ ಯುವತಿ ಮಂಡಳಿ, ಅರಿವು ಮಹಿಳಾ ಸಂಘ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮೀಣ ಆಟ ಜರುಗಿತು.

ಭದ್ರಾವತಿ, ಮಾ. ೨೧: ನೆಹರು ಯುವ ಕೇಂದ್ರ, ಸಮೃದ್ಧಿ ಯುವತಿ ಮಂಡಳಿ, ಅರಿವು ಮಹಿಳಾ ಸಂಘ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.
    ಮಹಿಳೆಯರಿಗಾಗಿ ಗ್ರಾಮೀಣ ಆಟಗಳ ಸ್ಪರ್ಧೆ ಜರುಗಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಮೃದ್ಧಿ ಯುವತಿ ಮಂಡಳಿ ಅಧ್ಯಕ್ಷೆ ಶಿಲ್ಪ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
    ಎಂಪಿಎಂಇಎಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸಿಎಸ್ ಜಮುನ ಕಾರ್ಯಕ್ರಮ ಉದ್ಘಾಟಿಸಿದರು. ಆಶಾ ಮೇಲ್ವಿಚಾರಕಿ ಬಿ.ಎಂ ವಸಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಶೇಷವಾಗಿ ಪೌರಕಾರ್ಮಿಕರಾದ ನಂಜಮ್ಮ ಹಾಗು ಸೋಬಾನಪದ ಆಕಾಶವಾಣಿ ಕಲಾವಿದೆ ಗಿರಿಜಮ್ಮ ತಿಮ್ಮಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಮಟೆ ಜಗದೀಶ್, ಜಿ. ದಿವಾಕರ್, ಜಿ. ರವಿಕುಮಾರ್, ಸೋಮಶೇಖರ್, ಸಹನಾ, ವೀರೇಶ್, ಶಾರದಮ್ಮ, ಟಿ. ರಘುನಾಯ್ಕ್, ಕೆ. ಮಂಜು ಮತ್ತು ಲತಾ ಪ್ರಸಾದ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.


ಮೇ.೩೦ರಂದು ಉಚಿತ ಸಾಮೂಹಿಕ ವಿವಾಹ : ಸದುಪಯೋಗಪಡಿಸಿಕೊಳ್ಳಲು ಕರೆ

ಭದ್ರಾವತಿ, ಮಾ. ೨೧: ವಿಶ್ವ ಹಿಂದು ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗು ಶಾಶ್ವತಿ ಮಹಿಳಾ ಸಮಾಜದ ಸಹಯೋಗದೊಂದಿಗೆ ಮೇ.೩೦ರಂದು ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
   ವಿಶ್ವ ಹಿಂದು ಪರಿಷತ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಕಳೆದ ೩೭ ವರ್ಷಗಳಿಂದ ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಇದುವರೆಗೂ ಒಟ್ಟು ೭೭೧ ಜೊತೆ ವಿವಾಹ ನೆರವೇರಿಸಲಾಗಿದೆ. ಈ ಬಾರಿ ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅರ್ಹ ವಧು-ವರರು ಈ ಉಚಿತ ಸಾಮೂಹಿಕ ವಿವಾಹದ ಸದುಪಯೋಗಪಡೆದುಕೊಳ್ಳಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ ಹಾ. ರಾಮಪ್ಪ, ಮೊ: ೯೮೮೦೭೭೯೨೯೩ ಅಥವಾ ಡಿ.ಆರ್ ಶಿವಕುಮಾರ್, ಮೊ: ೯೯೬೪೨೩೭೦೭೮ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Saturday, March 20, 2021

ಕೋಡಿಹಳ್ಳಿಯಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ

ಭದ್ರಾವತಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
    ಭದ್ರಾವತಿ, ಮಾ. ೨೦: ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದ ತಂಡ ಶನಿವಾರ ತಾಲೂಕಿನ ಕೂಡ್ಲಿಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ನಡೆಸಿತು.
     ಗ್ರಾಮದ ಸರ್ವೆ ನಂ.೨೮ರಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ, ಕೊಟ್ಟದಾಳು ಸರ್ವೆ ನಂ. ೧ ಮತ್ತು ೨ರಲ್ಲಿ ಬಗರ್‌ಹುಕುಂ ಸಾಗುವಳಿ ವಿಚಾರಕ್ಕೆ ಸಂಬಂಧಿಸಿದಂತೆ, ಕೂಡ್ಲಿಗೆರೆ ಗ್ರಾಮದ ಸ್ಮಶಾನ ಹಾಗು ಗುಂಡುತೋಪು ಜಾಗ ಹಾಗು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಜೂರಾತಿಯಾಗಿರುವ ಜಾಗ ಪರಿಶೀಲನೆ, ಕೋಡಿಹಳ್ಳಿ ಗ್ರಾಮದ ಬಳಸೋಕೆರೆ ಹೂಳು ತೆಗೆಯುವ ಸಂಬಂಧ ಪಿಡಿಓ ಜೊತೆ ಚರ್ಚೆ, ಗ್ರಾಮದ ಪರಿಶಿಷ್ಟ ಜಾತಿ/ಪಂಗಡ ಕಾಲೋನಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳ  ಕುರಿತು ಪಿಡಿಓ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲಕ್ ಬಿ ವೀರಪ್ಪ, ಸದಸ್ಯರಾದ ಜಿ.ಆರ್ ನಾಗರಾಜ್, ಕೂಡ್ಲಿಗೆರೆ ರುದ್ರೇಶ್, ಉಪತಹಸೀಲ್ದಾರ್‌ಗಳಾದ ನಾರಾಯಣಗೌಡ, ಮಂಜಾನಾಯ್ಕ, ಆರ್.ಆರ್ ಶಿರಸ್ತೆದಾರ್ ಮಲ್ಲಿಕಾರ್ಜುನಯ್ಯ, ರಾಜ್ಯಸ್ವ ನಿರೀಕ್ಷಕ ಪ್ರಶಾಂತ್, ಜಗದೀಶ್ ಹಾಗು ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.  

ಕೋವಿಡ್ ಲಸಿಕೆ ಪಡೆದ ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
   ಭದ್ರಾವತಿ, ಮಾ. ೨೦: ಕೊರೋನಾ ೨ನೇ ಹಂತದ ಅಲೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಈ ನಡುವೆ ಕೊರೋನಾ ಲಸಿಕೆ ಪಡೆಯುವವರ ಸಂಖ್ಯೆ ಸಹ ಅಧಿಕವಾಗುತ್ತಿದೆ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಲಸಿಕೆ ಪಡೆದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಡಾ. ದಿವ್ಯ ಕೋವಿಡ್-೧೯ ವ್ಯಾಕ್ಸಿನ್ ನೀಡಿದರು. ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ, ಎಸ್ ವಾಗೀಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈಗಾಗಲೇ ಆಸ್ಪತ್ರೆಯಲ್ಲಿ ಪೌರಕಾರ್ಮಿಕರು, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗು ಇನ್ನಿತರ ಇಲಾಖೆಗಳ ಆಯ್ದ ಸಿಬ್ಬಂದಿಗಳಿಗೆ   ೧ ಮತ್ತು ೨ನೇ ಹಂತದ ಲಸಿಕೆಯನ್ನು ನೀಡಲಾಗಿದೆ. ಉಳಿದಂತೆ ಕಳೆದ ಸುಮಾರು ೧೦ ದಿನಗಳಿಂದ ೪೫ ವರ್ಷ ಮೇಲ್ಪಟ್ಟ ೬೦ ವರ್ಷದೊಳಗಿನ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗು ೬೦ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ.