ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅಭ್ಯರ್ಥಿಗಳು ಸ್ಪರ್ಧೆ : ರೂಮಿಬಾಟಿ
![](https://blogger.googleusercontent.com/img/b/R29vZ2xl/AVvXsEjKC-UB5T219Naf76i3t5pLFgp1xF4feEvpmzB-EYVrgbkwqCQkCPQdmrk_p1C4zoxgsj3yKweXUur7Zexct-eEpPlsktv3jfdr4_9krh4YtCcuiEujFgD0sus0FVlYr6qRMCOhbkt-NB4X/w640-h304-rw/D22-BDVT3-747158.jpg)
ಮುಂಬರುವ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವ ಸಿದ್ದತಾ ಸಭೆಯಲ್ಲಿ ಸುವರ್ಣ ಕರ್ನಾಟಕ ನಿರ್ಮಾಣಕ್ಕಾಗಿ ಮಿಸ್ಡ್ ಕಾಲ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ, ಮಾ. ೨೨: ಆಮ್ ಆದ್ಮಿ ಪಾರ್ಟಿ ಕೇವಲ ದೆಹಲಿಗೆ ಮಾತ್ರ ಸೀಮಿತವಾಗದೆ ದೇಶದ ಎಲ್ಲೆಡೆ ವಿಸ್ತರಿಸಿಕೊಳ್ಳುವ ಉದ್ದೇಶದೊಂದಿಗೆ ಮುನ್ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಕೂಡ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ಹರಿಸಿದೆ ಎಂದು ಪಕ್ಷದ ಕರ್ನಾಟಕ ಉಸ್ತುವಾರಿ, ದೆಹಲಿಯ ರೂಮಿಬಾಟಿ ತಿಳಿಸಿದರು.
ಮುಂಬರುವ ನಗರಸಭೆ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವ ಸಿದ್ದತಾ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ದೇಶದ ಎಲ್ಲೆಡೆ ಪಕ್ಷಕ್ಕೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಬೇರುಮಟ್ಟದಿಂದ ಪಕ್ಷವನ್ನು ಸಂಘಟಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸ್ಪರ್ಧಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ಪಕ್ಷ ತನ್ನ ಅಸ್ತಿತ್ವ ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ ದರ್ಶನ್ ಜೈನ್ ಮಾತನಾಡಿ, ಒಂದು ರಾಜಕೀಯ ಪಕ್ಷ ದೇಶದ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬಹುದು, ಜನರ ಸಂಕಷ್ಟಗಳಿಗೆ ಯಾವ ರೀತಿ ಸ್ಪಂದಿಸಬಹುದು. ಪಾರದರ್ಶಕ ಆಡಳಿತ ಯಾವ ರೀತಿ ನೀಡಬಹುದು ಎಂಬುದನ್ನು ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಕಳೆದ ೧೦ ವರ್ಷಗಳ ಅವಧಿಯಲ್ಲಿ ತೋರಿಸಿಕೊಟ್ಟಿದೆ. ಕೇವಲ ಚುನಾವಣೆಗೆ ಸ್ಪರ್ಧಿಸುವುದು ಮುಖ್ಯವಲ್ಲ. ಗೆಲುವು ಸಾಧಿಸುವುದು, ಪ್ರಬಲ ಪೈಪೋಟಿ ನೀಡುವುದು ನಮ್ಮ ಗುರಿಯಾಗಿದೆ. ರಾಜ್ಯದಲ್ಲಿ ಸುವರ್ಣ ಕರ್ನಾಟಕ ನಿರ್ಮಾಣ ಮಾಡುವುದು ಪಕ್ಷದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಸ್ವಇಚ್ಛಿಯಿಂದ ಪಕ್ಷವನ್ನು ಬೆಂಬಲಿಸುವವರು ೭೬೬೯೪೦೦೪೧೦ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬಹುದು ಎಂದರು.
ಭದ್ರಾವತಿಯಲ್ಲಿ ಕಳೆದ ೨ ವರ್ಷಗಳಿಂದ ಪಕ್ಷವನ್ನು ಎಲ್ಲಾ ವಾರ್ಡ್‌ಗಳ ವ್ಯಾಪ್ತಿಯಲ್ಲೂ ಬೇರುಮಟ್ಟದಿಂದ ಸಂಘಟಿಸಲಾಗುತ್ತಿದೆ. ವಿವಿಧ ಸಂಘಟನೆಗಳ ಜೊತೆ ಸೇರಿ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಸ್ಥಳೀಯ ಮುಖಂಡರ ಶ್ರಮ ಹೆಚ್ಚಿನದ್ದಾಗಿದೆ. ಮುಂಬರುವ ಭದ್ರಾವತಿ ನಗರಸಭೆ ಚುನಾವಣೆಗೆ ಎಲ್ಲಾ ವಾರ್ಡ್‌ಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪಕ್ಷದ ಮಾನದಂಡಗಳಂತೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಪರಮೇಶ್ವರಚಾರ್, ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾಬಾನು, ಕರವೇ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಮುಖಂಡ ವಿ. ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಕ್ಷದ ಸ್ಥಳೀಯ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.