![](https://blogger.googleusercontent.com/img/b/R29vZ2xl/AVvXsEjAJp1Y9yQ8-olA_yPYYSdLVLsRkIIrr84l1OXjZl-e1XBybgfh8wUiRqgZfFpNHsrCWs0TZGgFCH42m00FLaqhPS2mXr2e1dddf6PjbZi1RNK_KoBZn-WeQhyYT0JSj_TCZ50iVH0Lcv7F/w640-h368-rw/D24-BDVT-789222.jpg)
ಭದ್ರಾವತಿಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.
ಭದ್ರಾವತಿ, ಮಾ. ೨೪: ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಚಾಲನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್ ಮಾತನಾಡಿ, 'ಕ್ಷಯ ರೋಗ ನಿರ್ಮೂಲನೆಗೆ ಕಾಲಘಟಿಸುತ್ತಿದೆ' ಘೋಷ ವಾಕ್ಯದೊಂದಿಗೆ ಈ ಬಾರಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ ೬,೦೦೦ ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು, ಸುಮಾರು ೬೦೦ ಜನ (೫ ನಿಮಿಷಕ್ಕೆ ಇಬ್ಬರು) ಸಾವನ್ನಪ್ಪುತ್ತಿದ್ದಾರೆ. ಸತತ ೨ ವಾರಗಳ ಕೆಮ್ಮು ಮತ್ತು ಕಫ, ಸಂಜೆ ಜ್ವರ, ಎದೆ ನೋವು, ರಾತ್ರಿ ವೇಳೆ ಬೆವರುವುದು, ತೂಕ ಕಡಿಮೆ ಆಗುವುದು ಹಾಗೂ ಕೆಲವೊಮ್ಮೆ ರಕ್ತದಲ್ಲಿ ಕಫ ಬೀಳುವುದು. ಕ್ಷಯರೋಗದ ಮುಖ್ಯ ಲಕ್ಷಣಗಳಾಗಿವೆ ಎಂದರು.
ಕ್ಷಯರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ಹೊರಬರುವ ತುಂತುರು ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ರೋಗಾಣುಗಳು ಹರಡುತ್ತವೆ. ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ವರ್ಷ ಕ್ಷಯರೋಗ ನಿರ್ಮೂಲನೆಗೆ ಶಿವಮೊಗ್ಗ ಜಿಲ್ಲೆ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕಗಳನ್ನು, ಶಾಲಾ-ಕಾಲೇಜುಗಳಲ್ಲಿ ಐ.ಇ.ಸಿ ಕಾರ್ಯಕ್ರಮ, ನಗರದ ಪ್ರಮುಖ ಕಟ್ಟಡಗಳ ಮೇಲೆ ಕೆಂಪು ದೀಪಗಳನ್ನು ಬೆಳಗಿಸುವುದು ಹಾಗು ತಾಲೂಕಿನ ಎಲ್ಲಾ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯಾ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಐ.ಇ.ಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆಶಾ ಮೇಲ್ವಿಚಾರಕಿ ವಸಂತ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ನಿರ್ಮಲ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜ್ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕು ಕಛೇರಿ ಮುಂಭಾಗ ಆರಂಭಗೊಂಡ ಜಾಥಾ ಬಸವೇಶ್ವರ ವೃತ್ತ, ಸಿ.ಎನ್ ರಸ್ತೆ ರಸ್ತೆ ಮೂಲಕ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಿತು.