ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರೇ ಇಲ್ಲ : ಲೋಕಾಯುಕ್ತ ಡಿವೈಎಸ್ಪಿ ಅಸಮಾಧಾನ
![](https://blogger.googleusercontent.com/img/b/R29vZ2xl/AVvXsEg2TKnWnf28JbARaQ9z52ioZJFle-pTPXkQwfK0bZ17fZl8MKJrCSm3adxl2U6Dp8JDr9JFXxF2szVMSSDD6Xrp11Bm5yy21Zhd4cnseoaeMJZ_s7ivyz8nPACFtKeaeY0jSG-qirz5xzd-/w640-h304-rw/D26-BDVT1-794713.jpg)
ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಪುರುಷೋತ್ತಮ್ ಸಾರ್ವಜನಿಕರ ಕುಂದುಕೊರತೆ ಸಭೆ ನೇತೃತ್ವವಹಿಸಿ ಮಾತನಾಡಿದರು.
ಭದ್ರಾವತಿ, ಮಾ. ೨೬: ಸರ್ಕಾರಿ ನೌಕರರು ತಮ್ಮ ಹುದ್ದೆಗೆ ಚ್ಯುತಿಬರದಂತೆ ಆತ್ಮಗೌರವದಿಂದ ಕರ್ತವ್ಯ ನಿರ್ವಹಿಸಬೇಕೆಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಪುರುಷೋತ್ತಮ್ ಕರೆ ನೀಡಿದರು.
ಅವರು ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯ ನೇತೃತ್ವ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.
ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಬಹುಮುಖ್ಯವಾಗಿ ಸರ್ಕಾರಿ ಹುದ್ದೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಕಂಡು ಬರುತ್ತಿದ್ದು, ಇವುಗಳಿಗೆ ಸ್ವಯಂ ಪ್ರೇರಣೆಯಿಂದ ಕಡಿವಾಣ ಹಾಕಿಕೊಳ್ಳಬೇಕು. ಸರ್ಕಾರ ಅಧಿಕಾರಿಗಳು, ನೌಕರರ ಮೇಲೆ ಹೊಂದಿರುವ ವಿಶ್ವಾಸ ಹಾಗು ಹುದ್ದೆಯ ಘನತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸರ್ಕಾರಿ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ಬೇಸರ ಬರದಂತೆ ನಡೆದುಕೊಳ್ಳಬೇಕು. ಅದರಲ್ಲೂ ಶೋಷಿತರು, ಅಸಹಾಯಕರು, ಬಡವರ್ಗದವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಕರೆ ನೀಡಿದರು.
ಇದಕ್ಕೂ ಮೊದಲು ಮಾತನಾಡಿದ ಪುರುಷೋತ್ತಮ್, ಇಲಾಖೆ ವತಿಯಿಂದ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸುವುದಾಗಿ ಪ್ರಚಾರ ನೀಡಲಾಗುತ್ತಿದೆ. ಆದರೂ ಸಹ ಸಾರ್ವಜನಿಕರು ಭಾಗವಹಿಸದಿರುವುದು ವಿಷಾದನೀಯ ಸಂಗತಿಯಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಹುಡುಕಿಕೊಳ್ಳಬೇಕಾಗಿದೆ. ಸಾರ್ವಜನಿಕರಿಲ್ಲದೆ ಸಭೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಬೇಕೆಂದರು.
ಸಭೆ ಮುಕ್ತಾಯಗೊಂಡ ನಂತರ ೨-೩ ದೂರು :
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಪುರುಷೋತ್ತಮ್‌ರವರು ಸಾರ್ವಜನಿಕರ ಕುಂದುಕೊರತೆ ಸಭೆ ಮುಕ್ತಾಯಗೊಳಿಸಿ ಹೊರಡುವ ವೇಳೆ ಭೂಮಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಾರೀಕಟ್ಟೆ ನಿವಾಸಿಯೊಬ್ಬರು ಹಾಗು ಜೆಡಿಯು ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನ್ಯಾಯಬೆಲೆ ಅಂಗಡಿಗಳಲ್ಲಿ ಕಾನೂನು ಉಲ್ಲಂಘನೆ, ಮೈಕ್ರೋ ಫೈನಾನ್ಸ್‌ಗಳಿಂದ ಕಿರುಕುಳ ಹಾಗು ಬಿಡಾಡಿ ಕುದುರೆಗಳ ಹಾವಳಿಗೆ ಸಂಬಂಧಿಸಿದಂತೆ ದೂರು ನೀಡಿದರು. ಸುಮಾರು ೨-೩ ದೂರುಗಳು ಮಾತ್ರ ಸಲ್ಲಿಕೆಯಾದವು.
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರಾಧಾಕೃಷ್ಣ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು. ಕಂದಾಯ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಪುರುಷೋತ್ತಮ್ ಸಾರ್ವಜನಿಕರ ಕುಂದುಕೊರತೆ ಸಭೆ ಮುಕ್ತಾಯಗೊಳಿಸಿ ಹೊರಡುವ ವೇಳೆ ೨-೩ ದೂರುಗಳು ಸಲ್ಲಿಕೆಯಾದವು.