Friday, March 26, 2021

ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ, ಯುವ ಸಮುದಾಯ ಆಕರ್ಷಿಸಲು ಪ್ರಯತ್ನ : ಕೊಟ್ರಪ್ಪ ಜಿ. ಹಿರೇಮಾಗಡಿ

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಮಂಥನ ಸಮಾಲೋಚನಾ ಸಭೆಯಲ್ಲಿ ಹಿರಿಯ ರಂಗ ಕಲಾವಿದ ವೈ.ಕೆ ಹನುಮಂತಯ್ಯ ಮಾತನಾಡಿದರು.  
    ಭದ್ರಾವತಿ, ಮಾ. ೨೬: ಕಲಾವಿದರು, ಶಿವಮೊಗ್ಗ ಸಂಘಟನೆ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ ತರುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಸಂಘಟನೆ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ತಿಳಿಸಿದರು.
    ಅವರು ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗ ಮಂಥನ ಸಮಾಲೋಚನಾ ಸಭೆಯ ನೇತೃತ್ವವಹಿಸಿ ಮಾತನಾಡಿದರು.  
ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಯುವ ಸಮುದಾಯವನ್ನು ರಂಗ ಚಟುವಟಿಕೆಗಳ ಕಡೆ ಆಕರ್ಷಿತರನ್ನಾಸುವ ಮೂಲಕ ರಂಗ ಚಟುವಟಿಕೆಗಳಿಗೆ ಪುನಃ ಜೀವಂತಿಕೆ ತಂದುಕೊಡಬೇಕಾಗಿದೆ. ಯುವ ಸಮುದಾಯ ಹೆಚ್ಚಾಗಿ ಚಲನಚಿತ್ರ, ಟಿ.ವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಜೋತುಬಿದ್ದಿದ್ದು, ಭ್ರಮಾ ಲೋಕದಲ್ಲಿ ಮುಳುಗಿದೆ. ಈ ಸಮುದಾಯಕ್ಕೆ ನಟನೆಯ ಮೂಲ ಬೇರು ರಂಗಭೂಮಿ ಎಂಬುದನ್ನು ಮನದಟ್ಟು ಮಾಡಬೇಕಾಗಿದೆ ಎಂದರು.
     ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿ, ರಂಗ ಚಟುವಟಿಕೆಗಳ ಮೇಲೆ ರಾಜಕೀಯದ   ಕರಿ ನೆರಳು ಬೀಳದಂತೆ ಎಚ್ಚರವಹಿಸಬೇಕು. ರಂಗ ಕಲಾವಿದರ ಪ್ರತಿಭೆ ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. ಹೆಚ್ಚು ಹೆಚ್ಚು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಷ್ಟು ರಂಗ ಚಟುವಟಿಕೆಗಳಿಗೆ ಮಹತ್ವ ಹೆಚ್ಚಾಗಲಿದೆ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಹುಡುಕಿ ಬೆಳಕಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.  
ವೈ.ಕೆ ಹನುಮಂತಯ್ಯ, ಜಂಬುಸ್ವಾಮಿ, ಕೆ.ಎಸ್.ರವಿಕುಮಾರ್, ರಾಜ್‌ಕುಮಾರ್, ಕಾ.ರಾ.ನಾಗರಾಜ್, ನಾಗಪ್ಪ, ಚಂದ್ರಕಾಂತ್ ಸೇರಿದಂತೆ ವಿವಿಧ ಕಲಾ ತಂಡಗಳ ಹಿರಿಯ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.
    ಸುಚಿತ್ರ, ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು. ಅಪರಂಜಿ ಶಿವರಾಜ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ತಮಟೆ ಜಗದೀಶ್ ವಂದಿಸಿದರು.


No comments:

Post a Comment