ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
ಭದ್ರಾವತಿ, ಏ. ೧೯: ನಗರಸಭೆ ಬಗ್ಗೆ ಅರಿವು ಹೊಂದಿರುವ, ನಗರಸಭೆ ಆಸ್ತಿ ರಕ್ಷಣೆ, ಮೂಲ ಸೌಲಭ್ಯಗಳನ್ನು ಕಲ್ಪಿಸುವ, ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾಳಜಿ ಹೊಂದಿರುವ ಸಮರ್ಥರನ್ನು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡುವಂತೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಜಾಗೃತಿ ಕಾರ್ಯಕ್ರಮಕ್ಕೆ ಸೋಮವಾರ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಆಟೋ ಮೂಲಕ ಏ.೨೬ರವರೆಗೆ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆವರೆಗೆ ಕರಪತ್ರ ವಿತರಿಸುವ ಜೊತೆಗೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸಮಿತಿ ಕೈಗೊಂಡಿದೆ.
ಕರಪತ್ರ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ವಿತರಿಸಿದ ಪೌರಾಯುಕ್ತರು, ಮತದಾರರು ಜಾಗೃತಿಗೊಳ್ಳುವಂತೆ ಕೈಗೊಂಡಿರುವ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಕೋರಿದರು.
ನಗರಸಭೆ ವ್ಯವಸ್ಥಾಪಕಿ ಸುನಿತಾಕುಮಾರಿ, ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಚಂದ್ರಶೇಖರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.