Monday, May 3, 2021

ನಗರಸಭೆ ಚುನಾವಣೆ ನಿರೀಕ್ಷೆ ಹುಸಿ, ೧೦ ಸ್ಥಾನ ಪೈಕಿ ಕೇವಲ ೪ ಸ್ಥಾನ : ಸಂಸದ ಬಿ.ವೈ ರಾಘವೇಂದ್ರ

ಬಿ.ವೈ. ರಾಘವೇಂದ್ರ
    ಭದ್ರಾವತಿ, ಮೇ. ೩: ನಗರಸಭೆ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಬಿಜೆಪಿ ಪಕ್ಷ ಕೇವಲ ೪ ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾವುದು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
   ಅವರು ಸೋಮವಾರ ನಗರಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ್ದು, ಈ ಬಾರಿ ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿದ್ದೇವೆ. ೧೦ ಸ್ಥಾನಗಳು ಬರುವ ನಿರೀಕ್ಷೆ ಇತ್ತು. ಆದರೆ ಬೂತ್‌ಮಟ್ಟದ ಕಾರ್ಯಕರ್ತರ ಕೊರತೆಯಿಂದಾಗಿ ಕೇವಲ ೪ ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದರು.
      ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ :
    ನಗರದಲ್ಲಿ ಸುಮಾರು ೨೩ ಕೊಳಚೆ ಪ್ರದೇಶಗಳಿದ್ದು, ಸುಮಾರು ೬೩೮೮ ಮನೆಗಳಿಗೆ ಮುಂದಿನ ಒಂದು ತಿಂಗಳ ಒಳಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು.
    ಹಕ್ಕುಪತ್ರ ನೀಡುವ ಸಂಬಂಧ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯದ ಹಂತದಲ್ಲಿದ್ದು, ಕೊಳಚೆ ಪ್ರದೇಶದ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದರು.
       ಎಂಪಿಎಂ ಟೆಂಡರ್ ಪಡೆಯಲು ಯಾರು ಮುಂದೆ ಬಂದಿಲ್ಲ:
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಆರಂಭಿಸುವ ಸಂಬಂಧ ೬ ತಿಂಗಳಲ್ಲಿ ೩ ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಇದುವರೆಗೂ ಯಾರು ಸಹ ಟೆಂಡರ್ ಪಡೆಯಲು ಮುಂದೆ ಬಂದಿಲ್ಲ. ಆದಷ್ಟು ಶೀಘ್ರವಾಗಿ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
    ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮುಖಂಡರಾದ ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಎಂ. ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ಸೋಂಕು ಅಪ್ಪ-ಮಗ ಸಾವು

ರಾಜಶೇಖರ್
    ಭದ್ರಾವತಿ, ಮೇ. ೩: ಕೊರೋನಾ ಸೋಂಕಿನ ಪರಿಣಾಮ ಚಿಕಿತ್ಸೆಗೆ ದಾಖಲಾಗಿದ್ದ ಅಪ್ಪ-ಮಗ ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದೆ.
     ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಮೆಲ್ ನಿವೃತ್ತ ಅಧಿಕಾರಿ ರಾಜಶೇಖರ್(೬೫) ಭಾನುವಾರ ನಿಧನ ಹೊಂದಿದ್ದು, ಇವರ ಪುತ್ರ ಎಂ.ಆರ್ ದಯಾನಂದ(೪೧) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.


ಎಂ.ಆರ್ ದಯಾನಂದ
      ದಯಾನಂದ ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಷಣ್ಮುಖರಾಧ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ಎಚ್ಚರ ವಹಿಸಿ : ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಸೋಮವಾರ ಕೋವಿಡ್-೧೯ ಮುಂಜಾಗ್ರತೆ ವಹಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು.
    ಭದ್ರಾವತಿ, ಮೇ. ೩: ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡದಂತೆ ಹೆಚ್ಚಿನ ಜಾಗೃತಿ ವಹಿಸುವಂತೆ  ಸಂಸದ ಬಿ.ವೈ ರಾಘವೇಂದ್ರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
    ಅವರು ಸೋಮವಾರ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಕೋವಿಡ್-೧೯ ಮುಂಜಾಗ್ರತೆ ವಹಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಸಂಗ್ರಹಕ್ಕೆ ಟ್ಯಾಂಕ್ ನಿರ್ಮಿಸಿರುವುದರಿಂದ ಸೂಕ್ತ ಸಮಯದಲ್ಲಿ ಆಕ್ಸಿಜನ್ ಒದಗಿಸಲು ಸಾಧ್ಯವಾಗಿದೆ. ವಿಐಎಸ್‌ಎಲ್ ಕಾರ್ಖಾನೆ ಒಳಭಾಗದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದ್ದು, ಈ ಆಕ್ಸಿಜನ್ ಸಮರ್ಪಕವಾಗಿ ಬಳಸುವ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು.
       ಕೊರೋನಾ ಸೋಂಕಿತರಿಗೆ ಆಹಾರ ಒದಗಿಸಲು ಸರ್ಕಾರ ತಲಾ ರು. ೨೫೦ ವೆಚ್ಚ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕಿತರಿಗೆ ಗುಣಮಟ್ಟದ ಆಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೋಂಕಿತರು ಹೊರಗಡೆ ತಿರುಗಾಡದಂತೆ ನಿಗಾವಹಿಸಬೇಕು. ಅಗತ್ಯ ಕಂಡು ಬಂದಲ್ಲಿ ಸೋಂಕಿತರಿಗೆ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
      ತಾಲೂಕಿನಲ್ಲಿ ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ವ್ಯಾಪಿಸದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಹಿನ್ನಲೆಯಲ್ಲಿ ಎಲ್ಲಾ ಅಧಿಕಾರಿಗಳು ಒಟ್ಟುಗೂಡಿ ಒಂದು ತಂಡವಾಗಿ ಕಾರ್ಯ ನಿರ್ವಹಿಸುವ ಮೂಲಕ ಕೊರೋಣ ನಿಯಂತ್ರಣಕ್ಕೆ ಶ್ರಮಿಸಬೇಕೆಂದರು ಕರೆ ನೀಡಿದರು.
     ಪೊಲೀಸ್ ಇಲಾಖೆಯವರು ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದೂರು ದಾಖಲಿಸಿಕೊಳ್ಳಬೇಕು.  ಸರ್ಕಾರಿ ಇಲಾಖೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸರ್ಕಾರಿ ಕಛೇರಿಗೆ ಬರುವವರ ಮೇಲೆ ನಿಗಾವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ. ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡದಿರುವಂತೆ ಸಲಹೆ ನೀಡಿದರು.
    ಇದಕ್ಕೂ ಮೊದಲು ಸಭೆಯಲ್ಲಿ ಮಾಹಿತಿ ನೀಡಿದ  ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ೧೯  ಹಾಸಿಗೆಗಳನ್ನು ಸಿದ್ದಪಡಿಸಲಾಗಿದೆ. ಕಳೆದ ೨ ದಿನಗಳ ಹಿಂದೆ  ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇನ್ನೂ ೨೦ ಹಾಸಿಗೆಗಳನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿತರಿಗೆ ಬೆಳಿಗ್ಗೆ ಉಪಹಾರ ಹೋಟೆಲ್‌ನಿಂದ ತಂದು ಪೂರೈಸಲಾಗುತ್ತಿದ್ದು, ಮಧ್ಯಾಹ್ನ ಆಸ್ಪತ್ರೆಯಲ್ಲಿಯೇ ಊಟ ನೀಡಲಾಗುತ್ತಿದೆ ಎಂದರು.
     ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಮಟ್ಟದ ಅಧಿಕಾರಿಗಳಾದ ಟಿ.ಎನ್ ಸೋಮಶೇಖರಯ್ಯ, ಕೆ.ಜೆ ತಮ್ಮಣ್ಣಗೌಡ, ಶಶಿಧರ್, ಕಾಂತರಾಜ್, ಎನ್ ಕೃಷ್ಣಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, May 2, 2021

೨ನೇ ವೀಕೆಂಡ್ ಲಾಕ್‌ಡೌನ್ ಯಶಸ್ವಿ : ಸಂಚಾರಕ್ಕೆ ಮತ್ತಷ್ಟು ಕಡಿವಾಣ

ಭದ್ರಾವತಿ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜನ್ನಾಪುರ-ಹೊಸಸಿದ್ದಾಪುರ ರಸ್ತೆಯನ್ನು ಭಾನುವಾರ ಪೊಲೀಸರು ಬಂದ್ ಮಾಡುವ ಮೂಲಕ ಸಂಚಾರಕ್ಕೆ ಕಡಿವಾಣ ಹಾಕಿದರು.
     ಭದ್ರಾವತಿ, ಮೇ. ೨: ಕೊರೋನಾ ಸೋಂಕು ೨ನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಒಂದೆಡೆಯಾದೆಡೆಯಾದರೆ, ಮತ್ತೊಂದೆಡೆ ಶನಿವಾರ ಮತ್ತು ಭಾನುವಾರ ಜಾರಿಗೊಳಿಸಿರುವ ವೀಕೆಂಡ್ ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ.
     ಬೆಳಿಗ್ಗೆ ೬ ರಿಂದ ೧೦ ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ನಂತರ ಪೊಲೀಸರು ಪ್ರಮುಖ ವೃತ್ತಗಳನ್ನು ಬ್ಯಾರಿಗೇಡ್‌ಗಳಿಂದ ಬಂದ್ ಮಾಡುವ ಮೂಲಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದರು. ಕೆಲವೆಡೆ ತುರ್ತು ಅಗತ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.  ಈ ನಡುವೆ ಕೆಲವೆಡೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಿದವು.
    ಉಳಿದಂತೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಪ್ರಮುಖ ವಾಣಿಜ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನರು ವೀಕೆಂಡ್ ಲಾಕ್‌ಡೌನ್‌ಗೆ ಪೂರಕವಾಗಿ ಸ್ಪಂದಿಸಿರುವುದು ಕಂಡು ಬಂದಿತು.

ಗಮನ ಸೆಳೆದ ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್

೩೩ನೇ ವಾರ್ಡ್‌ನಲ್ಲಿ ಎಂ.ಎ ಪದವಿಧರನನ್ನು ಆಯ್ಕೆ ಮಾಡಿದ ಮತದಾರರು

ಆರ್. ಮೋಹನ್‌ಕುಮಾರ್
    ಭದ್ರಾವತಿ, ಮೇ. ೨: ನಗರಸಭೆ ಹುತ್ತಾ ಕಾಲೋನಿ ವ್ಯಾಪ್ತಿಯ ವಾರ್ಡ್ ನಂ.೩೩ರಲ್ಲಿ ಪ್ರಬಲ ಅಭ್ಯರ್ಥಿಗಳ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಆರ್. ಮೋಹನ್‌ಕುಮಾರ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
     ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಚ್. ರಂಗಪ್ಪನವರ ಪುತ್ರರಾಗಿರುವ ಎಂ.ಎ ಸ್ನಾತಕೋತ್ತರ ಪದವಿಧರ ಆರ್. ಮೋಹನ್‌ಕುಮಾರ್ ತಾವು ಹುಟ್ಟಿ ಬೆಳೆದ ಸ್ಥಳದ ಪರಿಸರದಲ್ಲಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.  ಇದೆ ವಾರ್ಡ್‌ನಲ್ಲಿ ಜನರ ಸೇವೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
     ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅಲ್ಲದೆ ಈ ವಾರ್ಡಿನ ಹಿಂದಿನ ಅವಧಿಯ ಸದಸ್ಯೆ ಎಂ.ಎಸ್ ಸುಧಾಮಣಿ ಪುನರಾಯ್ಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಸಹ ನಡೆದಿರುವುದು ತಿಳಿದು ಬಂದಿತ್ತು. ಈ ನಡುವೆಯೂ ಸದ್ದಿಲ್ಲದೆ, ಪ್ರಚಾರದ ಭರಾಟೆ ಇಲ್ಲದೆ ಮೋಹನ್‌ಕುಮಾರ್ ಆಯ್ಕೆಯಾಗಿದ್ದಾರೆ.
     ಪತ್ರಿಕೆಯೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಂಡಿರುವ ಮೋಹನ್‌ಕುಮಾರ್, ವಾರ್ಡಿನ ಜನರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಈ ಹಿಂದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸ್ಥಳೀಯರೊಂದಿಗೆ ಭಾಗಿಯಾಗಿದ್ದೇನೆ. ಈ ಹಿನ್ನಲೆಯಲ್ಲಿ ನನ್ನನ್ನು ಮೊದಲ ಬಾರಿಗೆ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಮಿಕರ ವಸತಿ ಗೃಹಗಳನ್ನು ಒಳಗೊಂಡಿರುವ ವಾರ್ಡ್‌ನಲ್ಲಿ ಪ್ರಮುಖವಾಗಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಉಳಿದಂತೆ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರುತ್ತಿವೆ. ನಗರಸಭೆಯಿಂದ ಲಭ್ಯವಾಗುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವಸುಧ ಮುಕುಂದ್ ನಿಧನ

ವಸುಧ ಮುಕುಂದ್
   ಭದ್ರಾವತಿ, ಮೇ. ೨: ಮಾಜಿ ಶಾಸಕ ಮಾಧವಚಾರ್‌ರವರ ಸೊಸೆ, ಹಳೇನಗರ ಮಹಿಳಾ ಸೇವಾ ಸಮಾಜದ ಹಿರಿಯ ಸದಸ್ಯೆ ವಸುಧ ಮುಕುಂದ್(೬೩) ಶನಿವಾರ ಸಂಜೆ ನಿಧನ ಹೊಂದಿದರು.
   ಇಬ್ಬರು ಗಂಡು ಮಕ್ಕಳು, ತಾಯಿ, ಸಹೋದರ, ಸಹೋದರಿಯರನ್ನು ಹೊಂದಿದ್ದರು. ೩-೪ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಹಳೇನಗರ ಮಹಿಳಾ ಸೇವಾ ಸಮಾಜ, ಬ್ರಾಹ್ಮಣ ಮಹಾಸಭಾ(ವಿಪ್ರ) ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೊರೋನಾ ಸೋಂಕಿಗೆ ಕರವೇ ಅಧ್ಯಕ್ಷ ಬಿ.ವಿ ಗಿರೀಶ್ ಬಲಿ

ಬಿ.ವಿ ಗಿರೀಶ್
ಭದ್ರಾವತಿ, ಮೇ. ೨: ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ, ಹೋರಾಟಗಾರ ಬಿ.ವಿ ಗಿರೀಶ್(೩೬) ಭಾನುವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿಯನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಅನೇಕ ಕನ್ನಡಪರ ಹಾಗು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
    ಇವರ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಹಕ್ಕುಗಳ ಹೋರಾಟ ಸಮಿತಿ ಸೇರಿದಂತೆ ನಗರದ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.