೩೩ನೇ ವಾರ್ಡ್‌ನಲ್ಲಿ ಎಂ.ಎ ಪದವಿಧರನನ್ನು ಆಯ್ಕೆ ಮಾಡಿದ ಮತದಾರರು
ಆರ್. ಮೋಹನ್‌ಕುಮಾರ್
ಭದ್ರಾವತಿ, ಮೇ. ೨: ನಗರಸಭೆ ಹುತ್ತಾ ಕಾಲೋನಿ ವ್ಯಾಪ್ತಿಯ ವಾರ್ಡ್ ನಂ.೩೩ರಲ್ಲಿ ಪ್ರಬಲ ಅಭ್ಯರ್ಥಿಗಳ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಆರ್. ಮೋಹನ್‌ಕುಮಾರ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಚ್. ರಂಗಪ್ಪನವರ ಪುತ್ರರಾಗಿರುವ ಎಂ.ಎ ಸ್ನಾತಕೋತ್ತರ ಪದವಿಧರ ಆರ್. ಮೋಹನ್‌ಕುಮಾರ್ ತಾವು ಹುಟ್ಟಿ ಬೆಳೆದ ಸ್ಥಳದ ಪರಿಸರದಲ್ಲಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೆ ವಾರ್ಡ್‌ನಲ್ಲಿ ಜನರ ಸೇವೆ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅಲ್ಲದೆ ಈ ವಾರ್ಡಿನ ಹಿಂದಿನ ಅವಧಿಯ ಸದಸ್ಯೆ ಎಂ.ಎಸ್ ಸುಧಾಮಣಿ ಪುನರಾಯ್ಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಸಹ ನಡೆದಿರುವುದು ತಿಳಿದು ಬಂದಿತ್ತು. ಈ ನಡುವೆಯೂ ಸದ್ದಿಲ್ಲದೆ, ಪ್ರಚಾರದ ಭರಾಟೆ ಇಲ್ಲದೆ ಮೋಹನ್‌ಕುಮಾರ್ ಆಯ್ಕೆಯಾಗಿದ್ದಾರೆ.
ಪತ್ರಿಕೆಯೊಂದಿಗೆ ಗೆಲುವಿನ ಸಂಭ್ರಮ ಹಂಚಿಕೊಂಡಿರುವ ಮೋಹನ್‌ಕುಮಾರ್, ವಾರ್ಡಿನ ಜನರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಈ ಹಿಂದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸ್ಥಳೀಯರೊಂದಿಗೆ ಭಾಗಿಯಾಗಿದ್ದೇನೆ. ಈ ಹಿನ್ನಲೆಯಲ್ಲಿ ನನ್ನನ್ನು ಮೊದಲ ಬಾರಿಗೆ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಮಿಕರ ವಸತಿ ಗೃಹಗಳನ್ನು ಒಳಗೊಂಡಿರುವ ವಾರ್ಡ್‌ನಲ್ಲಿ ಪ್ರಮುಖವಾಗಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಉಳಿದಂತೆ ಸಣ್ಣಪುಟ್ಟ ಸಮಸ್ಯೆಗಳು ಕಂಡು ಬರುತ್ತಿವೆ. ನಗರಸಭೆಯಿಂದ ಲಭ್ಯವಾಗುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
No comments:
Post a Comment