Wednesday, May 19, 2021

ಹಿಂದಿ ಶಿಕ್ಷಕಿ ರೇಖಾ ನಾಗರಾಜ್ ನಿಧನ

ಹಿಂದಿ ಶಿಕ್ಷಕಿ ರೇಖಾ ನಾಗರಾಜ್
    ಭದ್ರಾವತಿ, ಡಿ. ೧೯: ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಿಂದಿ ಶಿಕ್ಷಕಿ ರೇಖಾ ನಾಗರಾಜ್(೪೨) ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
   ಪತಿ ಅರಳಿಹಳ್ಳಿ ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ನಾಗರಾಜ್, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಇವರು ದಲಿತ ಸಂಘರ್ಷ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಶಿಕ್ಷಕ ವೃಂದದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಉಕ್ಕಿನ ನಗರದ ರಸ್ತೆಗಳಲ್ಲಿ ಬೆಳಿಗ್ಗೆ ೮ ಗಂಟೆ ನಂತರ ಯಾವುದೇ ವಾಹನಗಳು ಕಾಣಿಸಬಾರದು

ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನೀವೇ ಹೊಣೆಗಾರರು  : ಸಚಿವ ಕೆ.ಎಸ್ ಈಶ್ವರಪ್ಪ


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
      ಭದ್ರಾವತಿ, ಮೇ. ೧೯: ಯಾವುದೇ ಕಾರಣಕ್ಕೂ ಒಂದೆಡೆ ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.
     ಅವರು ಬುಧವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ಜರುಗಿದ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಭದ್ರಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಹೆಚ್ಚಳವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು.
    ಭದ್ರಾವತಿಯಲ್ಲಿ ಪೊಲೀಸ್ ಇಲಾಖೆ ಇದೆಯೋ, ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕ್ರೈಗೊಳ್ಳುತ್ತಿಲ್ಲ. ಬಹುತೇಕ ರಸ್ತೆಗಳಲ್ಲಿ ಜನಸಂದಣಿ ಕಂಡು ಬರುತ್ತಿದೆ. ಎಷ್ಟು ವಾಹನಗಳನ್ನು ವಶಕ್ಕೆ ಪಡೆದಿದ್ದೀರಾ ಎಂಬುದೇ ಗೊತ್ತಿಲ್ಲ. ಸರ್ಕಾರ ಮದುವೆಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ, ಸಮುದಾಯ ಭವನಗಳಲ್ಲಿ, ಮನೆಗಳಲ್ಲಿ ಮದುವೆಗಳು ನಡೆಯುತ್ತಿವೆ. ಜೊತೆಗೆ ಇನ್ನಿತರ ಶುಭ ಸಮಾರಂಭಗಳು ಜರುಗುತ್ತಿದ್ದು, ಒಂದೆಡೆ ಜನ ಸೇರುತ್ತಿದ್ದಾರೆ.  ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಲಾಕ್‌ಡೌನ್ ಎಂಬುದರ ಅರ್ಥವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಚಿವರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ಇದುವರೆಗೂ ಮಾಸ್ಕ್ ಇಲ್ಲದ ೩೬೯೨ ಮಂದಿಗೆ ದಂಡ ವಿಧಿಸಲಾಗಿದೆ. ಉಳಿದಂತೆ ೭೪೫ ದ್ವಿಚಕ್ರ ವಾಹನ, ೧೧೧ ನಾಲ್ಕು ಚಕ್ರದ ವಾಹನ, ೯೨ ಆಟೋ ರಿಕ್ಷಾ ಸೇರಿದಂತೆ ಒಟ್ಟು ೯೪೮ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
    ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಬೆಳಗಿನ ಸಮಯದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ನಮ್ಮ ನಿವಾಸದ ಸಮೀಪದಲ್ಲಿರುವ ಮಾರುಕಟ್ಟೆಯಲ್ಲಿಯೇ ನೂರಾರು ಜನರು ಸೇರುತ್ತಿದ್ದಾರೆ. ಎಲ್ಲಿಯವರೆಗೂ ಜನ ಸೇರುವುದಿಲ್ಲ ಅಲ್ಲಿಯ ವರೆಗೂ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ನಗರಸಭೆ ಸದಸ್ಯರೊಂದಿಗೆ ಈಗಾಗಲೇ ಈ ವಿಚಾರ ಚರ್ಚಿಸಲಾಗಿದೆ. ಬಹುತೇಕ ಸದಸ್ಯರು ೪ ದಿನ ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆಂದರು.
    ಸಚಿವರು ಮಾತನಾಡಿ, ಯಾವುದೇ ಕಾರಣಕ್ಕೂ ಜನ ಸೇರಬಾರದು. ಪೊಲೀಸ್ ಇಲಾಖೆ ಮುಲ್ಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆ ೫ ರಿಂದ ೮ ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಬೇಕು. ಆ ನಂತರ ರಸ್ತೆಯಲ್ಲಿ ಯಾವುದೇ ವಾಹನ ಕಾಣಿಸಬಾರದು. ವಾಹನಗಳು ಕಂಡು ಬಂದಲ್ಲಿ ವಶಕ್ಕೆ ಪಡೆಯುವುದು. ಮೇ.೨೪ರ ವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಆ ನಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಚರ್ಚೆ ನಡೆಸೋಣ ಎಂದರು.
   ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೈಗೊಂಡಿರುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಇಲ್ಲಿಯೂ ಕೈಗೊಳ್ಳಬೇಕೆಂಬ ಉದ್ದೇಶವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
   ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ  ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹಾಗು ನೂತನ ನಗರಸಭಾ ಸದಸ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಜನ್ನಾಪುರ ಕೆ.ಸಿ ಬ್ಲಾಕ್ ವೃತ್ತದ ಕಾಮಗಾರಿ ಕೈಗೊಳ್ಳಲು ಸ್ಥಳೀಯರಿಂದ ಆಗ್ರಹ

ಭದ್ರಾವತಿ ಜನ್ನಾಪುರ ಕಿತ್ತೂರುರಾಣಿ ಚೆನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ಮುಖ್ಯ ರಸ್ತೆಯಲ್ಲಿ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದೆ ಇರುವುದು.
    ಭದ್ರಾವತಿ, ಮೇ. ೧೯: ಜನ್ನಾಪುರ ಕಿತ್ತೂರುರಾಣಿ ಚೆನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ಮುಖ್ಯ ರಸ್ತೆಯಲ್ಲಿ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುವಂತೆ ಸ್ಥಳೀಯರು ದೂರಿದ್ದಾರೆ.
     ಸುಮಾರು ೨ ತಿಂಗಳ ಹಿಂದೆಯೇ ಬಡಾವಣೆಯಲ್ಲಿರುವ ಮುಖ್ಯ ರಸ್ತೆಯ ಕಾಂಕ್ರಿಟ್ ಕಾಮಗಾರಿ ಮುಕ್ತಾಯಗೊಂಡಿದ್ದು, ಆದರೆ ರಸ್ತೆ ಕೊನೆಯ ಭಾಗದ ವೃತ್ತದಲ್ಲಿ ಕಾಮಗಾರಿ ಕೈಗೊಂಡಿಲ್ಲ. ಈ ಕುರಿತು ಹಲವು ಬಾರಿ ನಗರಸಭೆ ಪೌರಾಯುಕ್ತರಿಗೆ ಹಾಗು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಕೆ.ಸಿ ಬ್ಲಾಕ್, ಹಾಲಪ್ಪ ಶೆಡ್, ವಿದ್ಯಾಮಂದಿರ ಹಾಗು ಜನ್ನಾಪುರ ಕೆರೆ ಮಾರ್ಗವಾಗಿ ಸಂಪರ್ಕಿಸುವ ರಸ್ತೆಗೆ ಈ ವೃತ್ತ ಹೊಂದಿಕೊಂಡಿದೆ. ಪ್ರತಿದಿನ ನೂರಾರು ವಾಹನ ಸವಾರರು ಸಂಚರಿಸುತ್ತಾರೆ. ಇದರಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

Tuesday, May 18, 2021

ಎಚ್.ಸಿ ಸಿದ್ರಾಮಪ್ಪ ನಿಧನ


ಎಚ್.ಸಿ ಸಿದ್ರಾಮಪ್ಪ
   ಭದ್ರಾವತಿ, ಮೇ. ೧೮: ನಗರದ ನ್ಯೂಟೌನ್ ಬಿಪಿಎಲ್ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್ ಅವರ ಚಿಕ್ಕಪ್ಪ ಎಚ್.ಸಿ ಸಿದ್ರಾಮಪ್ಪ(೬೯) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ ಆರ್. ನಾಗರತ್ನಮ್ಮ, ಒಂದು ಗಂಡು, ಒಂದು ಹೆಣ್ಣು ಮಕ್ಕಳು, ಸಹೋದರ ಎಚ್.ಸಿ ಬೇಲೂರಪ್ಪ ಅವರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಬಿಪಿಎಲ್ ಸಂಘ ಹಾಗು ಜಯಕರ್ನಾಟಕ ಸಂಘಟನೆ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಉಕ್ಕಿನ ನಗರದಲ್ಲಿ ೧೬೧ ಸೋಂಕು ಪತ್ತೆ : ೬ ಮಂದಿ ಬಲಿ

ಭದ್ರಾವತಿ, ಮೇ. ೧೮: ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಪುನಃ ೧೦೦ರ ಗಡಿ ದಾಟಿದೆ. ಮಂಗಳವಾರ ೧೬೧ ಸೋಂಕು ಪತ್ತೆಯಾಗಿದೆ.
ಒಟ್ಟು ೩೮೪ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೬೧ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ೫೦ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ೬ ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು ೭೭ ಮಂದಿ ಸಾವನ್ನಪ್ಪಿದ್ದಾರೆ. ೨೦೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸೆಮಿ ಲಾಕ್‌ಡೌನ್ ನಡುವೆಯೂ ಸೋಂಕಿನ ಪ್ರಮಾಣ ಇಳಿಕೆಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ


ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ, ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾದರು.
   ಭದ್ರಾವತಿ, ಮೇ. ೧೮: ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ ಆಯ್ಕೆಯಾದರು.
  ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ೧೧ ಸದಸ್ಯ ಸ್ಥಾನಗಳನ್ನು ಹೊಂದಿರುವ ವೀರಾಪುರ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಆಸಿಯಾ ಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದರು.

ಪತ್ರಕರ್ತರಿಗೆ ಕೋವಿಡ್ ಲಸಿಕೆ


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡಲಾಯಿತು.
    ಭದ್ರಾವತಿ, ಮೇ. ೧೮: ರಾಜ್ಯ ಸರ್ಕಾರ ಪತ್ರಕರ್ತರನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಿದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ಮಂಗಳವಾರ ನೀಡಲಾಯಿತು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಣೇಶ್‌ರಾವ್ ಸಿಂಧ್ಯಾ ಅವರಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗು ಆರೋಗ್ಯ ಇಲಾಖೆ ಲಸಿಕಾ ತಂಡದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.