ಎನ್. ಕೃಷ್ಣಪ್ಪ
ಭದ್ರಾವತಿ, ಮೇ. ೩೦: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಎನ್. ಕೃಷ್ಣಪ್ಪ ಸೋಮವಾರ ನಿವೃತ್ತಿ ಹೊಂದಲಿದ್ದಾರೆ.
ಮೂಲತಃ ಕಂದಾಯ ಇಲಾಖೆಯಲ್ಲಿ ವೃತ್ತಿ ಆರಂಭಿಸಿದ ಎನ್.ಕೃಷ್ಣಪ್ಪ ಅವರು ಅನಿರೀಕ್ಷಿತವಾಗಿ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಳ್ಳುವ ಮೂಲಕ ಈ ಇಲಾಖೆಯಲ್ಲಿಯೇ ಉಳಿದುಕೊಂಡು ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೨ ತಿಂಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ದೂದ್‌ಪೀರ್ ಮುಂಬಡ್ತಿ ಹೊಂದಿ ಉಡುಪಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರ ಸ್ಥಾನಕ್ಕೆ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದರು.
ಸತತ ೪ ಬಾರಿ ಅಧ್ಯಕ್ಷರಾಗಿ ಆಯ್ಕೆ:
ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎನ್. ಕೃಷ್ಣಪ್ಪ ನಂತರ ೨ನೇ ಅವಧಿಯಿಂದ ಸತತವಾಗಿ ೪ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಕರ್ನಾಟಕ ಸರ್ಕಾರದ ಜಂಟಿ ಸಮಾಲೋಚನಾ ಸಮಿತಿ ಸದಸ್ಯರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವಿಇಎಸ್ ವಿದ್ಯಾಸಂಸ್ಥೆ ಕೃತಜ್ಞತೆ :
ನಗರದ ಹೊಸಸೇತುವೆ ರಸ್ತೆಯ ಸಿದ್ಧಾರೂಢನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬೆಳವಣಿಗೆಗೆ ಎನ್. ಕೃಷ್ಣಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ನೌಕರರ ಸಂಘಕ್ಕೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ವಿದ್ಯಾಸಂಸ್ಥೆಯಲ್ಲಿ ಖಜಾಂಚಿಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಪದನಿಮಿತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ವಿದ್ಯಾಸಂಸ್ಥೆಯು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಎನ್. ಕೃಷ್ಣಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.