Saturday, May 29, 2021

ಎಂಪಿಎಂ ಕಾಯಂ ಉದ್ಯೋಗಿಗಳಿಗೆ, ಭದ್ರತಾ ಸಿಬ್ಬಂದಿಗಳಿಗೆ ವೇತನ ನೀಡಿ

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿಗಳಿಗೆ ನೂತನ ನಗರಸಭಾ ಸದಸ್ಯ ಬಸವರಾಜ ಬಿ. ಆನೆಕೊಪ್ಪ ಮನವಿ



ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳಿಗೆ ಹಾಗು ಭದ್ರತಾ ವಿಭಾಗದ ಸಿಬ್ಬಂದಿಗಳಿಗೆ ತಕ್ಷಣ ವೇತನ ಬಿಡುಗಡೆಗೊಳಿಸುವಂತೆ ನಗರಸಭೆ ೧೯ನೇ ವಾರ್ಡ್‌ನ ನೂತನ ಸದಸ್ಯ ಬಸವರಾಜ ಬಿ. ಆನೆಕೊಪ್ಪ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಒತ್ತಾಯಿಸಿದರು.
   ಭದ್ರಾವತಿ, ಮೇ. ೨೯: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳಿಗೆ ಹಾಗು ಭದ್ರತಾ ವಿಭಾಗದ ಸಿಬ್ಬಂದಿಗಳಿಗೆ ತಕ್ಷಣ ವೇತನ ಬಿಡುಗಡೆಗೊಳಿಸುವಂತೆ ನಗರಸಭೆ ೧೯ನೇ ವಾರ್ಡ್‌ನ ನೂತನ ಸದಸ್ಯ ಬಸವರಾಜ ಬಿ. ಆನೆಕೊಪ್ಪ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ಒತ್ತಾಯಿಸಿದರು.
    ಶನಿವಾರ ನಗರದ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿದ ಬಸವರಾಜ್, ಕಳೆದ ಹಲವು ತಿಂಗಳಿಂದ ಕಾಯಂ ಉದ್ಯೋಗಿಗಳು, ಭದ್ರತಾ ವಿಭಾಗದ ಸಿಬ್ಬಂದಿಗಳು ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಯಲ್ಲಿ  ತಕ್ಷಣ ವೇತನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದವು.
   ಪ್ರಸ್ತುತ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆ ಹಾಕಲಾಗುತ್ತಿದ್ದು, ಈ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನಸಂದಣಿ ಉಂಟಾಗುತ್ತಿದ್ದು, ಇದನ್ನು ತಪ್ಪಿಸಲು ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿ ಲಸಿಕಾ ಕೇಂದ್ರ ತೆರೆಯಬೇಕು. ಇದರಿಂದ ಕಾಗದನಗರ, ಆನೆಕೊಪ್ಪ, ಜೆಪಿಎಸ್ ಕಾಲೋನಿ, ಸುರಗಿತೋಪು ಸೇರಿದಂತೆ ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರು.  
       ಕೋವಿಡ್ ನಿಷೇಧಿತ ವಲಯ, ಆರೈಕೆ ಹಾಗು ತಪಾಸಣಾ ಕೇಂದ್ರಗಳಿಗೆ ಭೇಟಿ:
   ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶನಿವಾರ ನಗರದ ವಿವಿಧೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೋವಿಡ್ ನಿಷೇಧಿತ ವಲಯಗಳಿಗೆ ಹಾಗು ಆರೈಕೆ ಕೇಂದ್ರಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
   ಕೊರೋನಾ ಸೋಂಕು ಹರಡದಂತೆ ಹೆಚ್ಚಿನ ಮುಂಜಾಗ್ರತೆ ವಹಿಸುವ ಜೊತೆಗೆ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ಕೊರೋನಾ ಕುರಿತು ವ್ಯಾಪಕ ಪ್ರಚಾರ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
   ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ನಗರಸಭೆ ಪೌರಾಯುಕ್ತ ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್, ಸ್ಥಳೀಯ ಮುಖಂಡ ವೆಂಕಟೇಶ್ ಉಜ್ಜನಿಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment