Friday, June 4, 2021

ಸಂಚಾರಿ ಪೊಲೀಸ್ ಠಾಣಾಧಿಕಾರಿ ರಮೇಶ್ ನಿಧನ

ಸಂಚಾರಿ ಪೊಲೀಸ್ ಠಾಣಾಧಿಕಾರಿ ಕೆ.ಬಿ ರಮೇಶ್
ಭದ್ರಾವತಿ, ಜೂ. ೪: ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ-೨ ಕೆ.ಬಿ ರಮೇಶ್(೫೯) ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.
   ಪತ್ನಿ, ಓರ್ವ ಪುತ್ರ ಹೊಂದಿದ್ದರು.  ರಮೇಶ್ ಮೇ.೧೪ರಂದು ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಮೇಶ್ ಕರ್ತವ್ಯದಿಂದ ನಿವೃತ್ತಿ ಹೊಂದಲು ೧ ತಿಂಗಳು ಬಾಕಿ ಇತ್ತು. ಇವರ ನಿಧನಕ್ಕೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಅಕ್ರಮ ಗಾಂಜಾ ಸಾಗಾಟ : ಭದ್ರಾವತಿ ಅನ್ವರ್ ಕಾಲೋನಿಯ ೩ ಯುವಕರು ಸೆರೆ

ಬಳ್ಳಾರಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ : ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶ


ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಭದ್ರಾವತಿ ಅನ್ವರ್‌ಕಾಲೋನಿಯ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವುದು.
    ಭದ್ರಾವತಿ, ಜೂ. ೪: ಇತ್ತೀಚೆಗೆ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರನೌಕರ ಸುನಿಲ್ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
    ನಗರಸಭೆ ವಾರ್ಡ್ ನಂ.೭ರ ಅನ್ವರ್ ಕಾಲೋನಿ ನಿವಾಸಿಗಳಾದ ಅಶ್ಫಕ್ ಖಾನ್(೨೩), ತೌಸೀಪ್ ಖಾನ್(೨೧) ಮತ್ತು ಸೈಯದ್ ಅಕ್ಸರ್(೨೨) ೩ ಯುವಕರನ್ನು ಬಂಧಿಸಿ ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
    ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಾಗು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದ ಅನ್ವರ್ ಕಾಲೋನಿ ಭಾಗದ ಯುವಕರಿಬ್ಬರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಉಂಟಾದ ಜಗಳ ಕೊನೆಗೆ ಸುನಿಲ್ ಹತ್ಯೆಗೆ ಕಾರಣವಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡು ೫ ಯುವಕರನ್ನು ಬಂಧಿಸಿದ್ದರು. ಈ ನಡುವೆ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಸೇರಿದಂತೆ ಇನ್ನಿತರರು ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣವಾಗಿದೆ. ಅನ್ವರ್ ಕಾಲೋನಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಈ ಭಾಗದ ಸ್ಥಳೀಯ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದ್ದರು.
    ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಅನ್ವರ್‌ಕಾಲೋನಿಯ ೩ ಯುವಕರು ಸಿಕ್ಕಿಬಿದ್ದಿರುವುದು ಆರೋಪಗಳಿಗೆ ಪುಷ್ಟಿ ನೀಡಿದೆ. ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.

ರಾಜ್ಯದಲ್ಲೇ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿ : ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕಿಸಿ

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ


ರಾಜ್ಯದಲ್ಲೇ ಕೋವಿಡ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವ ಜೊತೆಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಹಾಕುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೪: ರಾಜ್ಯದಲ್ಲೇ ಕೋವಿಡ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವ ಜೊತೆಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೂ ಉಚಿತವಾಗಿ ಲಸಿಕೆ ಹಾಕುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
     ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಸಿಕೆ ಕೊರತೆ ಕಂಡು ಬರುತ್ತಿದ್ದು, ಇದರಿಂದಾಗಿ ಕೊರೋನಾ ಸೋಂಕಿಗೆ ಒಳಗಾದವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಸಮರ್ಪಕವಾಗಿ ಆಮ್ಲಜನಕ ಪೂರೈಕೆಯಾಗದಿರುವುದು, ವೆಂಟಿಲೇಟರ್ ವ್ಯವಸ್ಥೆ ಇಲ್ಲದಿರುವುದು ಸಹ ಸಾವಿಗೆ ಕಾರಣವಾಗುತ್ತಿದೆ. ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.
    ರಾಜ್ಯದಲ್ಲಿಯೇ ಲಸಿಕೆ ಉತ್ಪಾದನೆಗೆ ಅನುಮತಿ ನೀಡುವುದರಿಂದ ಹೆಚ್ಚಿನ ಲಸಿಕೆ ಉತ್ಪಾದಿಸಲು ಸಾಧ್ಯವಾಗುತ್ತದೆ. ಜೊತೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ಪೂರೈಸ ಬಹುದಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಜೊತೆಗೆ ಕೋವಿಡ್-೧೯ ನಿಯಂತ್ರಣಕ್ಕೆ ಮುಂದಾಗುವಂತೆ ಮನವಿ ಮಾಡಲಾಗಿದೆ.
    ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಎಂ. ಶಿವಕುಮಾರ್, ಪ್ರಕಾಶ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Thursday, June 3, 2021

೧೦ ಸಾವಿರ ಬಡವರಿಗೆ ದಿನಸಿ ಸಾಮಗ್ರಿ ವಿತರಿಸುವ ಬೃಹತ್ ಸೇವಾ ಕಾರ್ಯ

ಕೊರೋನಾ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದ ಮಾರುತಿ ಮೆಡಿಕಲ್ ಆನಂದ್


ಭದ್ರಾವತಿ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ. ಈ ಸೇವಾ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಜೂ. ೩: ನಗರದ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‌ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು ೧೦ ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ.
ಈ ಸೇವಾ ಕಾರ್ಯಕ್ಕೆ ಸಿದ್ದರೂಢ ನಗರದ ೧ನೇ ತಿರುವಿನಲ್ಲಿರುವ ಅವರ ನಿವಾಸದ ಬಳಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
    ಈ ಕುರಿತು ಮಾತನಾಡಿದ ಆನಂದ್, ತೀರ ಸಂಕಷ್ಟದಲ್ಲಿರುವವರ ನೆರವಿಗೆ ಮುಂದಾಗಬೇಕೆಂಬ ಮನೋಭಾವನೆಯೊಂದಿಗೆ ಈ ಕಾರ್ಯ ಕೈಗೊಳ್ಳುತ್ತಿದ್ದೇನೆ. ನಗರಸಭೆ ೩೫ ವಾರ್ಡ್‌ಗಳಲ್ಲಿ ತಲಾ ಒಂದೊಂದು ವಾರ್ಡ್‌ನಲ್ಲಿ ೨೦೦ ಜನರನ್ನು ಹಾಗು ೩ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪಂಚಾಯಿತಿಯಲ್ಲೂ ೧೦೦೦ ಜನರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
   ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎನ್. ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಪತ್ರಿಕಾ ವಿತರಿಕರಿಗೆ ಸಾಂಕೇತಿಕವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಶವಗಳ ನಡುವೆ ಅರ್ಧ ಶತಕ ಪೂರೈಸಿದ ಸಾರ್ಥಕ ಸೇವೆ

ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗುರುವಾರ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
                                              
* ಅನಂತಕುಮಾರ್
     ಭದ್ರಾವತಿ, ಜೂ. ೩: ಪ್ರಸ್ತುತ ಸಮಾಜದಲ್ಲಿ ಕೊರೋನಾ ಎಂಬ ಭಯದ ವಾತಾವರಣದಲ್ಲಿ ಹೆತ್ತವರ ಮೃತ ದೇಹಗಳನ್ನು ನೋಡಲು ಸ್ವಂತ ಮಕ್ಕಳೇ ಬಾರದಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ  ನೆರವೇರಿಸುತ್ತಿರುವ ನಗರದ ಬಜರಂಗದಳ ಕಾರ್ಯಕರ್ತರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
   ಕೊರೋನಾ ಸೋಂಕು ೨ನೇ ಅಲೆ ಕಾಣಿಸಿಕೊಂಡು ದಿನ ದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಒಂದೆಡೆ ಭಯದ ವಾತಾವರಣ, ಮತ್ತೊಂದೆಡೆ ಮೃತ ದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಸವಾಲು. ಇಂತಹ ಸಂದರ್ಭದಲ್ಲಿ ನಗರದ ನಿವಾಸಿಗಳಾದ ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್, ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಕೃಷ್ಣ, ರಮೇಶ್, ಶಿವಶಂಕರ್, ದೇವರಾಜ, ಭರತ್ ಸೇರಿದಂತೆ ಇನ್ನಿತರರು ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಉಚಿತವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಸೇವೆಯ ೫೧ನೇ ಕಾರ್ಯವನ್ನು ಗುರುವಾರ ಯಶಸ್ವಿಯಾಗಿ ನೆರವೇರಿಸಿದ್ದಾರೆ.



ಮಾನವ ಜನ್ಮ ಅತಿ ಅಮೂಲ್ಯವಾದ ಜನ್ಮವಾಗಿದೆ. ಇದರಲ್ಲಿ ಜನ್ಮ ತಾಳಬೇಕಾದರೆ ಕೋಟಿ ಪುಣ್ಯ ಮಾಡಿರಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂತಹ ಮಾನವ ಜನ್ಮ ಸಾರ್ಥಕವಾಗುವುದು ಈ ರೀತಿಯ ಕಾರ್ಯಗಳಿಂದ ಮಾತ್ರ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.
                                                           -ಸಂಪತ್‌ರಾಜ್ ಬಾಂಟಿಯಾ, ಜೈನ್ ಸಮಾಜ, ಭದ್ರಾವತಿ.



    ಈ ಯುವಕರು ತಮ್ಮ ಸೇವಾ ಕಾರ್ಯಕ್ಕೆ  ಬಾಡಿಗೆ ವಾಹನ ಪಡೆದು ಶವಗಾರಗಳಿಂದ ಸ್ಮಶಾನದವರೆಗೂ ಸೋಂಕಿತ ಮೃತದೇಹಗಳನ್ನು ಸಾಗಿಸುವ ಕಾರ್ಯದ ಜೊತೆಗೆ ಜಾತಿ ಭೇದಭಾವವಿಲ್ಲದೆ ಎಲ್ಲಾ ಮೃತದೇಹಗಳನ್ನು ಸಂಸ್ಥಾರ ಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸುವ ಕಾರ್ಯವನ್ನು ಬಹಳ ಅಚ್ಚಕಟ್ಟಾಗಿ ಮಾಡುತ್ತಿದ್ದಾರೆ. ಜೊತೆಗೆ ಕಡು ಬಡಕುಟುಂಬಗಳ ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆ ಸಹ ದಾನಿಗಳಿಂದ ಸಂಗ್ರಹಿಸಿ ಉಚಿತವಾಗಿ ನೀಡುತ್ತಿದ್ದಾರೆ.
         ಕುಟುಂಬಗಳಿಂದ ಅಂತರ :
     ಈ ಯುವಕರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ತಮ್ಮ ಮನೆಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡಿದ್ದಾರೆ. ದಾನಿಯೊಬ್ಬರು ಇವರಿಗೆ ಖಾಸಗಿ ಹೋಟೆಲ್‌ವೊಂದರಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಭಾವಸಾರ ಕ್ಷತ್ರಿಯ ಸಮಾಜ ದಿನದ ಊಟದ ವ್ಯವಸ್ಥೆ ಕಲ್ಪಿಸಿದೆ. ಇದರ ಜೊತೆಗೆ ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಮುನ್ನಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಕೊರೋನಾ ಲಸಿಕೆಯನ್ನು ಕೊಡಿಸಿದ್ದಾರೆ.




ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಬಾರಂದೂರು ವಂದೇ ಮಾತರಂ ಟ್ರಸ್ಟ್  ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
         
      ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಂಸೆ :
     ಬೆಲೆ ಕಟ್ಟಲು ಸಾಧ್ಯವಾಗದ ಯುವಕರ ಸೇವಾ ಕಾರ್ಯಕ್ಕೆ ನಗರದ ಭಾವಸಾರ ಕ್ಷತ್ರಿಯ ಸಮಾಜ, ಜೈನ್ ಸಮಾಜ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ಬಾರಂದೂರು ವಂದೇ ಮಾತರಂ ಟ್ರಸ್ಟ್ ಹಾಗು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿ ಯುವಕರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳ ಜೊತೆಗೆ ಕೈಲಾದಷ್ಟು ಆರ್ಥಿಕ ನೆರವು ನೀಡುವ ಮೂಲಕ ಸನ್ಮಾನಿಸಿವೆ.
          ಯುವಕರ ಕಾರ್ಯ ಇತರರಿಗೆ ಸ್ಪೂರ್ತಿ:
  ಯುವಕರು ಕೈಗೊಳ್ಳುತ್ತಿರುವ ಈ ಕಾರ್ಯ ಇತರರಿಗೆ ಸ್ಪೂರ್ತಿದಾಯಕವಾಗಬೇಕು.  ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ನೆಲೆಗಟ್ಟಿನಲ್ಲಿ ನೆರವಿಗೆ ಮುಂದಾಗುವಂತಹ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು. ಈ ಯುವಕರ ಕಾರ್ಯಕ್ಕೆ ಮತ್ತಷ್ಟು ಜನ ಕೈಜೋಡಿಸುವಂತಾಗಬೇಕು. ಕೊರೋನಾ ಎಂಬ ಭಯ ದೂರವಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ನಿಜಕ್ಕೂ ಈ ಯುವಕರ ಕಾರ್ಯ ಶ್ಲಾಘನೀಯ ಎಂದರೆ ತಪ್ಪಾಗಲಾರದು.


ಕೊರೋನಾ ಪರಿಣಾಮ ಸಂಬಂಧಗಳೇ ಮುರಿದುಹೋಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶ್ವವೇ ಮೆಚ್ಚುವಂತಹ ಕೆಲಸವಾಗಿದೆ. ಈ ಯುವಕರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
                    - ಸುಂದರ್ ಬಾಬು, ಜಿಲ್ಲಾ ಕಾರ್ಯಾಧ್ಯಕ್ಷರು, 
ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್


ಕೊರೋನಾ ಎಂಬ ಹೆಸರಿನಿಂದ ಉಂಟಾಗಿರುವ ಭಯ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿದೆ : ಗುರುರಾಜ್


ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕುಂಚ ಕಲಾವಿದರ ಸಂಘದ ಕಛೇರಿಯಲ್ಲಿ ದಿನಸಿ ಸಾಮ್ರಗಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೩: ಕೊರೋನಾ ಸೋಂಕು ಎದುರಿಸುವ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆದರೆ ಕೊರೋನಾ ಎಂಬ ಹೆಸರಿನಿಂದ ಉಂಟಾಗಿರುವ ಭಯ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿದೆ ಎಂದು ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ಅಧ್ಯಕ್ಷ ಗುರುರಾಜ್ ಹೇಳಿದರು.
     ಅವರು ಗುರುವಾರ ನಗರದ ತರೀಕೆರೆ ರಸ್ತೆಯಲ್ಲಿರುವ ತಾಲೂಕು ಕುಂಚ ಕಲಾವಿದರ ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮ್ರಗಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನುಷ್ಯರಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ. ಆದರೂ ಸಹ ಸೋಂಕು ಕುರಿತು ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಕಲಾವಿದರು ಸೋಂಕಿನ ಕುರಿತು ಎಚ್ಚರ ವಹಿಸಬೇಕು. ವಿನಾಕಾರಣ ಯಾರು ಸಹ ಭಯಪಡುವ ಅಗತ್ಯವಿಲ್ಲ. ಪ್ರಸ್ತುತ ಎದುರಾಗಿರುವ ಸಂಕಷ್ಟದ ಸಮಯದಲ್ಲಿ  ಸಾಧ್ಯವಾದಷ್ಟು ಮಟ್ಟಿಗೆ ಕಲಾವಿದರ ನೆರವಿಗೆ ಮುಂದಾಗುವುದಾಗಿ ಭರವಸೆ ನೀಡಿದರು.
   ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಪದಾಧಿಕಾರಿ ಸುಬ್ರಮಣಿ, ಕುಂಚ ಕಾವಿದರ ಸಂಘದ ಅಧ್ಯಕ್ಷ ಮಹಮದ್ ಸಮೀವುಲ್ಲಾ, ಖಾಜಾಂಚಿ ಹಫೀಜ್ ಉರ್ ರಹಮಾನ್, ಸಹಕಾರ್ಯದರ್ಶಿ ಬಿ. ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಜ್ಯ ಸಂಘದ ವತಿಯಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.

ಜೂ.೭ರ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿ


ಭದ್ರಾವತಿ, ಜೂ. ೩: ತಾಲೂಕಿನಲ್ಲಿ ಕೊರೋನಾ ಸೋಂಕು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ಜೂ.೭ರ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
     ರಾಜ್ಯ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದಲೂ ಸೋಂಕಿನ ಪ್ರಮಾಣ ೧೦೦ ರಿಂದ ೨೫೦ ಗಡಿಯಾಚೆಯಲ್ಲಿದ್ದು, ಇದುವರೆಗೂ ತಾಲೂಕಿನಲ್ಲಿ ಸೋಂಕಿಗೆ ೧೩೪ ಮಂದಿ ಬಲಿಯಾಗಿದ್ದಾರೆ. ವಾರದಲ್ಲಿ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜೂ.೭ರ ವರೆಗೂ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
   ಹಾಲು ಹಾಗು ಔಷಧಿ ಅಂಗಡಿಗಳು ಹೊರತುಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಬರದೆ ಸಂಪೂರ್ಣ ಲಾಕ್‌ಡೌನ್ ಯಶಸ್ವಿಗೊಳಿಸುವ ಜೊತೆಗೆ ಕೊರೋನಾ ನಿರ್ಮೂಲನೆಗೆ ಸಹಕರಿಸುವಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.