ಬಳ್ಳಾರಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ : ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶ
ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಭದ್ರಾವತಿ ಅನ್ವರ್‌ಕಾಲೋನಿಯ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವುದು.
ಭದ್ರಾವತಿ, ಜೂ. ೪: ಇತ್ತೀಚೆಗೆ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರನೌಕರ ಸುನಿಲ್ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಳ್ಳಾರಿ ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರಸಭೆ ವಾರ್ಡ್ ನಂ.೭ರ ಅನ್ವರ್ ಕಾಲೋನಿ ನಿವಾಸಿಗಳಾದ ಅಶ್ಫಕ್ ಖಾನ್(೨೩), ತೌಸೀಪ್ ಖಾನ್(೨೧) ಮತ್ತು ಸೈಯದ್ ಅಕ್ಸರ್(೨೨) ೩ ಯುವಕರನ್ನು ಬಂಧಿಸಿ ೨.೮೦ ಲಕ್ಷ ರು. ಮೌಲ್ಯದ ೨೮ ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ಹಾಗು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದ ಅನ್ವರ್ ಕಾಲೋನಿ ಭಾಗದ ಯುವಕರಿಬ್ಬರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಉಂಟಾದ ಜಗಳ ಕೊನೆಗೆ ಸುನಿಲ್ ಹತ್ಯೆಗೆ ಕಾರಣವಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡು ೫ ಯುವಕರನ್ನು ಬಂಧಿಸಿದ್ದರು. ಈ ನಡುವೆ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಸೇರಿದಂತೆ ಇನ್ನಿತರರು ಹತ್ಯೆಗೆ ಅಕ್ರಮ ಗಾಂಜಾ ಸೇವನೆಯೇ ಕಾರಣವಾಗಿದೆ. ಅನ್ವರ್ ಕಾಲೋನಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಈ ಭಾಗದ ಸ್ಥಳೀಯ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಅನ್ವರ್‌ಕಾಲೋನಿಯ ೩ ಯುವಕರು ಸಿಕ್ಕಿಬಿದ್ದಿರುವುದು ಆರೋಪಗಳಿಗೆ ಪುಷ್ಟಿ ನೀಡಿದೆ. ಈಗಲಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.
No comments:
Post a Comment