Friday, June 4, 2021

ಲಸಿಕಾ ಕೇಂದ್ರದ ಬಳಿ ಮಧ್ಯವರ್ತಿಗಳ ಹಾವಳಿ : ಹೆಚ್ಚಿನ ಬೆಲೆಗೆ ಲಸಿಕೆ ಮಾರಾಟ ಆರೋಪ

ಭದ್ರಾವತಿ ಕಾಗದನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಜನಸಂದಣಿ ಉಂಟಾಗಿರುವುದು.
   ಭದ್ರಾವತಿ, ಜೂ. ೪: ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅರ್ಹ ಫಲಾನುಭವಿಗಳಿಗೆ ಲಭಿಸಬೇಕಾದ ಲಸಿಕೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
    ವಾರ್ಡ್ ೧೯, ೨೦, ೨೧ ಮತ್ತು ೨೨ರ ವ್ಯಾಪ್ತಿಯ ಸುರಗಿತೋಪು, ಕಾಗದನಗರ, ಜೆಪಿಎಸ್ ಕಾಲೋನಿ, ಆನೇಕೊಪ್ಪ ಮತ್ತು ಉಜ್ಜನಿಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಇತ್ತೀಚೆಗೆ ಸರ್ಕಾರಿ ಪಶ್ಚಿಮ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಆದರೆ ಈ ಲಸಿಕಾ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ಲಭ್ಯವಾಗುತ್ತಿಲ್ಲ. ಲಸಿಕಾ ಕೇಂದ್ರದ ಬಳಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬರುವವರನ್ನು ಹೊರಭಾಗದಲ್ಲಿಯೇ ತಡೆದು ಲಸಿಕೆಗೆ ಸಂಬಂಧಿಸಿದಂತೆ ಟೋಕನ್ ನೀಡಿ ವಾಪಾಸು ಕಳುಹಿಸಲಾಗುತ್ತಿದೆ. ನಿಗದಿಯಾದ ದಿನದಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಂತರೂ ಸಹ ಲಸಿಕೆ ಮುಗಿದು ಹೋಗಿದೆ ಎಂದು ವಾಪಾಸು ಕಳುಹಿಸಲಾಗುತ್ತಿದೆ. ಮಂಜೂರಾದ ಲಸಿಕೆಗಳಲ್ಲಿ ಅರ್ಧದಷ್ಟು ಲಸಿಕೆಗಳನ್ನು ಮಧ್ಯವರ್ತಿಗಳು ತಮಗೆ ಬೇಕಾದವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಯುವ ಮುಖಂಡ ಅಶೋಕ್‌ಕುಮಾರ್, ಲಸಿಕಾ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ಲಭ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ. ಲಸಿಕೆ ಸಿಗದೆ ವಯೋವೃದ್ಧರು, ಬಡವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕಾದ ಕೆಲಸಗಳನ್ನು ಪಕ್ಷವೊಂದರ ಕಾರ್ಯಕರ್ತರು ಮಧ್ಯವರ್ತಿಗಳಾಗಿ ಮಾಡುತ್ತಿದ್ದಾರೆ. ಹೆಚ್ಚು ಹಣ ನೀಡುವವರಿಗೆ ಹಾಗು ಈ ವ್ಯಾಪ್ತಿಯ ಹೊರತಾದ ಹೊರಗಿನಿಂದ ಬಂದವರಿಗೆ ಮತ್ತು ಪ್ರಭಾವಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಜನರಿಂದ ದೂರುಗಳು ಬಂದಿವೆ.
    ಈ ಲಸಿಕಾ ಕೇಂದ್ರದಲ್ಲಿ ಜನ ಸಂದಣಿ ಅಧಿಕವಾಗುತ್ತಿದೆ. ನೂಕು, ತಳ್ಳಾಟ ಹೆಚ್ಚಾಗುತ್ತಿದೆ. ಇದರಿಂದಾಗಿ ಕೊರೋನಾ ಸೋಂಕು ಈ ವ್ಯಾಪ್ತಿಯಲಿ ಇನ್ನೂ ಹೆಚ್ಚಾಗಿ ಹರಡುವ ಭೀತಿ ಎದುರಾಗಿದೆ. ಈ ಭಾಗದ ಎಲ್ಲಾ ನಿವಾಸಿಗಳಿಗೂ ಅನುಕೂಲವಾಗಬೇಕಾದರೆ ಈ ಕೇಂದ್ರವನ್ನು ಎಂಪಿಎಂ ಆಸ್ಪತ್ರೆಗೆ ಸ್ಥಳಾಂತರಿಸುವುದು ಸೂಕ್ತ. ಎಂಪಿಎಂ ಆಸ್ಪತ್ರೆ ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇರುವ ಕಾರಣ ಯಾವುದೇ ಅಕ್ರಮಗಳು, ಗಲಾಟೆಗಳು ನಡೆಯುವ ಸಾಧ್ಯತೆ ಕಡಿಮೆ. ಅಲ್ಲದೆ ಜನಸಂದಣಿ ಉಂಟಾದ್ದಲ್ಲಿ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ನಿಯಂತ್ರಣಕ್ಕೆ ತರಲು ಸಾಧ್ಯ. ಈ ಎಲ್ಲಾ ವಿಚಾರಗಳನ್ನು ತಾಲೂಕು ಆಡಳಿತ ಹಾಗು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
    ಜಿಲ್ಲಾಡಳಿತ ತಕ್ಷಣ ಈ ಸಂಬಂಧ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಎಲ್ಲಾ ಅರ್ಹ ಫಲಾನುಭವಿಗಳಿಗೂ ಲಸಿಕೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಈ ಭಾಗದ ನಿವಾಸಿಗಳ ಒತ್ತಾಯವಾಗಿದೆ.

4 comments:

  1. ದಾಖಲೆಗಳನ್ನು ಕೊಟ್ಟಿ ಮಾತನಾಡ ಬೇಕಾಗಿ ಭಕ್ತರಲ್ಲಿ
    ವಿನಂತಿ

    ReplyDelete
    Replies
    1. ದಾಖಲೆ ಕೊಡಬೇಕಾಗಿರುವುದು ಜೆಡಿಎಸ್ ನ ಮಾಜಿ , ಭಾವಿ ಮತ್ತು ಹಾಲಿ ನಗರಸಭೆಯ ಸದಸ್ಯರು

      Delete
  2. ಉಜ್ಜನೀಪುರದ ನಗರಸಭೆ ಸದಸ್ಯರು ಹಾಗು ಕಾರ್ಯಕರ್ತರು ಹೆಚ್ಚು ಮುತುವರ್ಜಿ ವಹಿಸಿ ಜನರಿಗೆ ಸ್ಪಂದಿಸಿರುವುದು ಕೆಲವರಿಗೆ ಸಹಿಸಿಕೊಳ್ಳದೆ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ.

    ReplyDelete
  3. ಆರೋಪ ಮಾಡಿರುವ ಯುವ ಮುಖಂಡ ತನ್ನ ಜೂಜು ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ನಷ್ಟ ಕಂಡಿರುವ ಕಾರಣ ಇಂತ ಸುಳ್ಳು ವಿಷಗಳನ್ನು ಹಬ್ಬಿ ಇಂತ ಸಂಕಷ್ಟದ ಸ್ಥಿತಿಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಪೇಪರ್ ಟೌನ್ 8ನೇ ವಾರ್ಡಿನ ನಗರಸಭೆ ಸದಸ್ಯರನ್ನು ಬಿಟ್ಟು ಬೇರೆ ಎಲ್ಲಾ ಜನಪ್ರತಿನಿಗಳು ಜನರ ಕಷ್ಟಕ್ಕೆ ಸ್ಪಂದಿಸಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ.

    ReplyDelete