Thursday, June 10, 2021

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳಲ್ಲಿ ೧೨ ಲಸಿಕಾ ಕೇಂದ್ರಗಳಿಗೆ ಚಾಲನೆ


ಭದ್ರಾವತಿ ನಗರಸಭೆ ವಾರ್ಡ್ ನಂ. ೨೬ರ ವ್ಯಾಪ್ತಿಯಲ್ಲಿ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಕೆ ಪರಮೇಶ್, ಸದಸ್ಯರಾದ ಕೆ. ಸುದೀಪ್‌ಕುಮಾರ್, ಸರ್ವಮಂಗಳ ಭೈರಪ್ಪ, ಮಾಜಿ ಸದಸ್ಯ ಮುಕುಂದಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಜೂ. ೧೦: ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರಗಳಿಗೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ  ನೀಡಿದರು.
    ಇತ್ತೀಚೆಗೆ ನಗರಸಭೆ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಗರಸಭೆ ವ್ಯಾಪ್ತಿಯಲ್ಲಿ ೧, ೨ ರಿಂದ ೩ ಹಾಗು ೩ ರಿಂದ ೪ ವಾರ್ಡ್‌ಗಳು ಒಳಗೊಂಡಂತೆ ಒಟ್ಟು ೧೨ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.  
         ನಗರಸಭೆ ೩೫ ವಾರ್ಡ್‌ಗಳಲ್ಲಿ ತೆರೆಯಲಾಗಿರುವ ಲಸಿಕಾ  ಕೇಂದ್ರಗಳು:
     ವಾರ್ಡ್ ನಂ.೧, ೨ ಮತ್ತು ೩೫ರ ವ್ಯಾಪ್ತಿಯ ಹೆಬ್ಬಂಡಿ, ಕಡದಕಟ್ಟೆ, ಶಿವರಾಮನಗರ, ವಿಶ್ವೇಶ್ವರಾಯ ನಗರ, ಭಂಡಾರಹಳ್ಳಿ, ಜೇಡಿಕಟ್ಟೆ, ಲಕ್ಷ್ಮೀಪುರ, ಕವಲಗುಂದಿ ಹಾಗು ಲೋಯರ್ ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬಿ.ಎಚ್ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕಡದಕಟ್ಟೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಶ್‌ನಾಯ್ಕ, ನ್ಯೂಟೌನ್ ಎಸ್‌ಎವಿ ಶಾಲೆ ಸಹ ಶಿಕ್ಷಕ ಖಂಡೋಜಿರಾವ್, ಪದ್ಮೇನಹಳ್ಳಿ ಎಚ್‌ಪಿಎಸ್ ಶಾಲೆ ಸಹ ಶಿಕ್ಷಕ ಎಚ್. ತಿಮ್ಮಪ್ಪ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



       ವಾರ್ಡ್ ನಂ.೨೮, ೨೯ ಮತ್ತು ೩೦ರ ವ್ಯಾಪ್ತಿಯ ಹೊಸ ಹಾಗು ಹಳೇ ಸಿದ್ದಾಪುರ, ಸಿದ್ದಾಪುರ ತಾಂಡ, ಹೊಸೂರು, ಸಂಕ್ಲಿಪುರ ಮತ್ತು ಜನ್ನಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಜನ್ನಾಪುರ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ರಬ್ಬರ್‌ಕಾಡು ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಶಿವಕುಮಾರ ಸ್ವಾಮಿ, ದೇವರ ನರಸೀಪುರ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ದೇವೇಂದ್ರ ನಾಯ್ಕ, ಹಾಗಲಮನೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾರಾಯಣ ನಾಯ್ಕ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ.೨೦, ೨೬ ಮತ್ತು ೨೭ರ ವ್ಯಾಪ್ತಿಯ ಸುರಗೀತೋಪು, ಬಾಲಭಾರತಿ, ಬೆಣ್ಣೆ ಕೃಷ್ಣ ಸರ್ಕಲ್, ಆಂಜನೇಯ ಅಗ್ರಹಾರ, ಕೂಲಿ ಬ್ಲಾಕ್ ಶೆಡ್ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಚಿಕ್ಕಗೊಪ್ಪೇನಹಳ್ಳಿ ಜಿಎಚ್‌ಪಿಎಸ್ ಸರ್ಕಾರಿ ಸಹ ಶಿಕ್ಷಕ ನಾಗರಾಜ ನಾಯ್ಕ, ವಿಶ್ವಭಾರತಿ ವಿದ್ಯಾಸಂಸ್ಥೆಯ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಟಿ. ಸುರೇಶ್, ಸಿದ್ದಾಪುರ ತಾಂಡ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಪುರುಷೋತ್ತಮ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ. ೪, ೫ ಮತ್ತು ೬ ವ್ಯಾಪ್ತಿಯ ಕನಕಮಂಟಪ ಪ್ರದೇಶ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಖಂಡೇರಾವ್ ಕೊಪ್ಪಲ್, ಸಿದ್ದಾರೂಢ ನಗರ, ಹಳದಮ್ಮ ಬೀದಿ, ಸಣ್ಣ ಮತ್ತು ದೊಡ್ಡ ಕುರುಬರ ಬೀದಿ, ಸೀಗೆಹಟ್ಟಿ, ರಥಬೀದಿ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಕನಕ ವಿದ್ಯಾಸಂಸ್ಥೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎಚ್. ಶ್ರೀನಿವಾಸ್, ಇಮ್ರಾನ್ ಆಲಿ ಮತ್ತು ಗಾಂಧಿನಗರ ವಿಜಯ ಶಾಲೆಯ ಸಹ ಶಿಕ್ಷಕ ಎಚ್. ಹನುಮಂತಪ್ಪ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



       ವಾರ್ಡ್ ನಂ.೧೦, ೧೧ ಮತ್ತು ೧೨ರ ವ್ಯಾಪ್ತಿಯ ಕಬಳಿಕಟ್ಟೆ, ಹನುಮಂತ ನಗರ, ಅಶ್ವಥ್ ನಗರ, ಸುಭಾಷ್ ನಗರ ಮತ್ತು ಅಣ್ಣಾ ನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಸುಭಾಷ್ ನಗರದ ಅಕ್ಕಮಹಾದೇವಿ ವಿದ್ಯಾ ಸಂಸ್ಥೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಜ್ಞಾನೋದಯ ಶಾಲೆಯ ಸಹ ಶಿಕ್ಷಕರಾದ ಎಸ್.ಆರ್ ಸ್ವಾಮಿ, ಇ. ದಿನೇಶ್ ಮತ್ತು ಕುಮಾರಿ ನಾರಾಯಣ ಪುರ ಜಿಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕ ಗದಿಗ ಸ್ವಾಮಿ ಹಾಗು ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
      ವಾರ್ಡ್ ನಂ.೭, ೮ ಮತ್ತು ೯ರ ವ್ಯಾಪ್ತಿಯ ದುರ್ಗಿನಗರ, ಕಲಂದರ್ ನಗರ, ಜೈ ಭೀಮಾ ನಗರ, ಅನ್ವರ್ ಕಾಲೋನಿ, ಸೀಗೆಬಾಗಿ, ಭದ್ರಾ ಕಾಲೋನಿ ಮತ್ತು ಕಣಕಟ್ಟೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗುವಂತೆ ಸೀಗೆಬಾಗಿ ರಾಜೀವ್‌ಗಾಂಧಿ  ಬಿ.ಎಡ್ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಗುಡ್ಡದನೇರಲಕೆರೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಎಸ್. ಶಂಕರಪ್ಪ, ಕಡದಕಟ್ಟೆ ನವಚೇತನ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ನಾಗೇಂದ್ರಪ್ಪ, ಕೆಜಿಆರ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
      ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ವ್ಯಾಪ್ತಿಯ ಜಿಂಕ್‌ಲೈನ್, ಜನ್ನಾಪುರ, ಹುತ್ತಾಕಾಲೋನಿ ಮತ್ತು ಅಪ್ಪರ್‌ಹುತ್ತಾ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸೂರು ಸಿದ್ದಾಪುರ ಜಿವಿಎಚ್‌ಪಿಎಸ್  ಶಾಲೆಯ ಸಹ ಶಿಕ್ಷಕರಾದ ಕೆ. ನಾಗರಾಜ, ಇಮ್ರಾನ್ ಆಲಿ, ಭಂಡಾರಹಳ್ಳಿ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ರವಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ವಾರ್ಡ್ ನಂ. ೧೯, ೨೧ ಮತ್ತು ೨೨ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆ ಏರಿಯಾ, ಎಂಪಿಎಂ ೬ ಮತ್ತು ೮ನೇ ವಾರ್ಡ್, ಉಜ್ಜನಿಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಗದ ನಗರದ ಪಶ್ಚಿಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಅರಳಿಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಬಸವರಾಜಪ್ಪ, ಸುಣ್ಣದಹಳ್ಳಿ ಸರ್ಕಾರಿ ಶಾಲೆಯ ಸಹ ಶಿಕ್ಷಕ ಕಮಲರಾಜ್, ಹಳ್ಳಿಕೆರೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಕೆ. ನಾಗರಾಜ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ  ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
    ವಾರ್ಡ್ ನಂ.೨೩, ೨೪ ಮತ್ತು ೨೫ರ ವ್ಯಾಪ್ತಿಯ ತಿಮ್ಲಾಪುರ, ದೊಡ್ಡಗೊಪ್ಪೇನಹಳ್ಳಿ, ಬೊಮ್ಮನಕಟ್ಟೆ, ಹುಡ್ಕೋ ಕಾಲೋನಿ, ಮೂಲೆಕಟ್ಟೆ ಮತ್ತು ಹೊಸಬುಳ್ಳಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಬೊಮ್ಮನಕಟ್ಟೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ಜಿ.ಸಿ ವಿಶ್ವನಾಥ್, ವಿಶ್ವ ಭಾರತಿ ಶಾಲೆಯ ಸಹ ಶಿಕ್ಷಕ ಬಿ.ಕೆ ರವೀಶ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ವಾರ್ಡ್ ನಂ.೧೩, ೧೭ ಮತ್ತು ೧೮ರ ವ್ಯಾಪ್ತಿಯ ಭೂತನಗುಡಿ, ನೆಹರು ನಗರ, ಎಂ.ಎಂ ಕಾಂಪೌಂಡ್, ಯಕಿನ್ ಷಾ ಕಾಲೋನಿ, ಸುಣ್ಣದಹಳ್ಳಿ, ಸಾದತ್ ಕಾಲೋನಿ, ಬಸಾಪುರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ನಗರದ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಸಾದತ್ ಕಾಲೋನಿ ಜಿಯುಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ದಾದಾಪೀರ್, ಪಿ. ಶಿವಪ್ಪ, ಮೊಸರಹಳ್ಳಿ ಜಿಎಲ್‌ಪಿಎಸ್ ಶಾಲೆಯ ಸಹ ಶಿಕ್ಷಕ ಆರ್. ರಂಗನಾಥ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.



      ವಾರ್ಡ್ ನಂ.೧೪, ೧೫ ಮತ್ತು ೧೬ರ ವ್ಯಾಪ್ತಿಯ ಭೋವಿ ಕಾಲೋನಿ, ಹೊಸಮನೆ, ಅಶ್ವಥ್ ನಗರ ಬಲಭಾಗ, ಗಾಂಧಿನಗರ ಪ್ರದೇಶಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಭೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹೊಸಮನೆ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಗಿರಿಧರ, ಮಂಜುನಾಥ್, ಎನ್‌ಎಂಸಿ ಜಿಟಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಲಾರೆನ್ಸ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ಉಳಿದಂತೆ ವಾರ್ಡ್ ನಂ.೩ರ ವ್ಯಾಪ್ತಿಯ ಬಿ.ಎಚ್ ರಸ್ತೆ ಎಡ ಮತ್ತು ಬಲ ಭಾಗ, ಚಾಮೇಗೌಡ ಏರಿಯಾ ನಿವಾಸಿಗಳಿಗೆ ಅನುಕೂಲವಾಗುವಂತೆ ಹಾಲಪ್ಪ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹಾಲಪ್ಪ ವೃತ್ತ ಜಿಎಚ್‌ಪಿಎಸ್ ಶಾಲೆ ಸಹ ಶಿಕ್ಷಕರಾದ ಎಸ್. ಶಿವಕುಮಾರ್, ಕೆಂಚಪ್ಪ, ಬಸವೇಶ್ವರ ವಿದ್ಯಾಸಂಸ್ಥೆ ಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ಶಶಿಕುಮಾರ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಅವರನ್ನು ಸಿಬ್ಬಂದಿಗಳಾಗಿ ನಿಯೋಜಿಸಲಾಗಿದೆ.
     ಲಸಿಕಾ ಕೇಂದ್ರಗಳು ಬೆಳಿಗ್ಗೆ ೮ ಗಂಟೆಯಿಂದ ಆರಂಭಗೊಳ್ಳಲಿವೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ವಿರುವುದಿಲ್ಲ. ಲಭ್ಯತೆ ಆಧಾರ ಮೇಲೆ ಟೋಕನ್ ನೀಡುವುದು. ನಿಗದಿತ ದಿನಾಂಕದಂದು ಮೊದಲು ಬಂದವರಿಗೆ ಲಸಿಕೆ ಹಾಕುವುದು. ಬೇರೆ ವಾರ್ಡ್‌ಗಳ ನಿವಾಸಿಗಳಿಗೆ ಅವಕಾಶ ವಿರುವುದಿಲ್ಲ.

ಸಂಕಷ್ಟಕ್ಕೆ ಒಳಗಾದ ಬಡವರ ನೆರವಿಗೆ ಧಾವಿಸಿದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್

ಕಳೆದ ಬಾರಿ ಸಿದ್ದಪಡಿಸಿದ ಆಹಾರ, ಈ ಬಾರಿ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಭದ್ರಾನದಿ ದಡದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ತೀರ ಸಂಕಷ್ಟಕ್ಕೆ ಒಳಗಾದ ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜೂ. ೧೦: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಭದ್ರಾನದಿ ದಡದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ. ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದೆ. ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ದೇವಸ್ಥಾನ ಸೇವಾ ಟ್ರಸ್ಟ್ ಮುಂದಾಗುತ್ತಿದೆ.
     ಕೊರೋನಾ ಸೋಂಕಿನ ೨ನೇ ಅಲೆ ಹಿನ್ನಲೆಯಲ್ಲಿ ಜಾರಿಗೊಳಿಸಲಾದ ಸೆಮಿ ಲಾಕ್‌ಡೌನ್ ಪರಿಣಾಮ ಕಡು ಬಡವರು ತೀರ ಸಂಕಷ್ಟಕ್ಕೆ ಒಳಗಾಗಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ಟ್ರಸ್ಟ್ ಮಾನವೀಯತೆ ಮೆರೆಯುವ ಮೂಲಕ  ಸಂಕಷ್ಟಕ್ಕೆ ಒಳಗಾದವರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದೆ. ಕಳೆದ ಬಾರಿ ಸಹ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸಿದ್ದಪಡಿಸಿದ ಆಹಾರ ವಿತರಿಸುವ ಮೂಲಕ ಹಸಿದವರ ನೆರವಿಗೆ ಮುಂದಾಗಿತ್ತು.
    ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಮುನಿರಾಜು ಹಾಗು ಪ್ರಧಾನ ಅರ್ಚಕ ಸಂಜಯ್‌ಕುಮಾರ್ ನೇತೃತ್ವದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಮುಖಂಡ ಬಿ.ಎಸ್ ಗಣೇಶ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಹಾಗು ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು ಉಪಸ್ಥಿತರಿದ್ದರು.

ಶಿವಮೊಗ್ಗ ಮೆಗ್ಗಾನ್‌ಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಿ

ಕೋವಿಡ್-೧೯ರ ಪರಿಣಾಮ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ : ಪ್ರಧಾನಿಗೆ ಮನವಿ


ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಗುರುವಾರ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
     ಭದ್ರಾವತಿ, ಜೂ.೧೦: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಚಿಕಿತ್ಸೆಗಾಗಿ ವೆಂಟಿಲೇಟರ್ ಒಳಗೊಂಡ ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಆಗ್ರಹಿಸಿದ್ದಾರೆ.
   ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಗುರುವಾರ ಪ್ರಧಾನ ಮಂತ್ರಿಗಳಿಗೆ ತಹಸಿಲ್ದಾರ್ ಜಿ. ಸಂತೋಷ್ ಕುಮಾರ್ ಮೂಲಕ ಮನವಿ ಸಲ್ಲಿಸಲಾಗಿದೆ.
    ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್ ಹಾಸಿಗೆ ವ್ಯವಸ್ಥೆ ಇಲ್ಲದ ಕಾರಣ ಅಪಘಾತದಲ್ಲಿ ಗಾಯಗೊಂಡವರನ್ನು ದಾಖಲಾತಿ ಮಾಡಿಕೊಳ್ಳದೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್‌ಗೆ ನಿರ್ದೇಶನ ನೀಡಬೇಕು.
     ಕೋವಿಡ್-೧೯ರ ಹಿನ್ನಲೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಹಾರ ನೀಡಬೇಕು. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ತಕ್ಷಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

Wednesday, June 9, 2021

ಅಕ್ರಮ ಮನೆ ನಿರ್ಮಾಣ : ಸಕ್ರಮಕ್ಕೆ ಅರ್ಜಿ ಸಲ್ಲಿಸಿ

      ಭದ್ರಾವತಿ, ಜೂ. ೯: ತಾಲೂಕಿನ ನಗರ ಪ್ರದೇಶದಲ್ಲಿ ೯೪ ಸಿಸಿ ಹಾಗು ಗ್ರಾಮೀಣ ಪ್ರದೇಶದಲ್ಲಿ ೯೪ ಸಿ ಯೋಜನೆಯಡಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವವರು ಸಕ್ರಮ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಕ್ಷೇತ್ರದ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.
    ತಾಲೂಕು ಆಡಳಿತ ತಕ್ಷಣ ಸರ್ಕಾರ ಕೈಗೊಂಡಿರುವ ಈ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ನಡೆಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಗರೀಕರು ೯೪ ಸಿಸಿ ಹಾಗು ೯೪ ಸಿ ಯೋಜನೆಯಡಿ ಸಕ್ರಮ ಮಾಡಿಕೊಳ್ಳಲು ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು ತಕ್ಷಣ ಅರ್ಜಿ ಸಲ್ಲಿಸಬೇಕೆಂದು ಕೋರಿದ್ದಾರೆ.  

೨ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು


ಭದ್ರಾವತಿ ತಾಲೂಕಿನ ೨ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಆರ್ಥಿಕ ನೆರವು ನೀಡಲಾಯಿತು.  
    ಭದ್ರಾವತಿ, ಜೂ. ೯: ತಾಲೂಕಿನ ೨ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬುಧವಾರ ಆರ್ಥಿಕ ನೆರವು ನೀಡಲಾಯಿತು.
    ನಗರಸಭೆ ವ್ಯಾಪ್ತಿಯ ಮೂಲೆಕಟ್ಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ೧ ಲಕ್ಷ ರು. ಹಾಗು ಬಾಳೆಮಾರನಹಳ್ಳಿ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ೨ ಲಕ್ಷ ರು. ಆರ್ಥಿಕ ನೆರವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ವಿತರಿಸಿದರು.
    ತಾಲೂಕು ಯೋಜನಾಧಿಕಾರಿ ಪ್ರಕಾಶ್, ಮೇಲ್ವಿಚಾರಕ ರುದ್ರೇಶ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಕರ್ತರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೧೧೩ ಸೋಂಕು, ೬ ಮಂದಿ ಬಲಿ

    ಭದ್ರಾವತಿ, ಜೂ. ೯: ತಾಲೂಕಿನಲ್ಲಿ ಮಂಗಳವಾರ ಕೇವಲ ೪೫ ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಬುಧವಾರ ಸೋಂಕು ಪುನಃ ನೂರರ ಗಡಿ ದಾಟಿದ್ದು, ಒಟ್ಟು ೧೧೩ ಸೋಂಕು ದೃಢಪಟ್ಟಿದೆ. ಈ ನಡುವೆ ಸೋಂಕಿಗೆ ಒಂದೇ ದಿನ ೬ ಮಂದಿ ಬಲಿಯಾಗಿದ್ದಾರೆ.
   ಒಟ್ಟು ೧೦೫೪ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ೧೧೩ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೮೨ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ತಾಲೂಕಿನಲ್ಲಿ ಇದುವರೆಗೂ ಒಟ್ಟು ೬೧೩೪ ಸೋಂಕು ಪ್ರಕರಣಗಳು ದಾಖಲಾಗಿದ್ದು, ೫೧೨೯ ಮಂದಿ ಗುಣಮುಖರಾಗಿದ್ದಾರೆ. ೧೦೦೫ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ.
     ಒಂದೇ ದಿನ ೬ ಮಂದಿ ಬಲಿಯಾಗಿದ್ದು, ಇದುವರೆಗೂ ಒಟ್ಟು ೧೬೬ ಮಂದಿ ಮೃತಪಟ್ಟಿದ್ದಾರೆ. ಒಟ್ಟು ೨೬೩ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು ೪೨ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯಾಗಿದ್ದು, ಇದುವರೆಗೂ ೮೪ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಒಟ್ಟು ೨೬ ಜೋನ್‌ಗಳು ಸಕ್ರಿಯಾಗಿದ್ದು, ೧೭ ತೆರವುಗೊಳಿಸಲಾಗಿದೆ.

ಆಶಾ ಕಾರ್ಯಕರ್ತೆಯರು, ಆಂಬ್ಯುಲೆನ್ಸ್ ಚಾಲಕರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೬ರ ವ್ಯಾಪ್ತಿಯ ನ್ಯೂ ಕಾಲೋನಿ ಭಾಗದ ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರಿಗೆ ಬುಧವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 

   ಭದ್ರಾವತಿ, ಜೂ. ೯: ನಗರಸಭೆ ನಗರಸಭೆ ವಾರ್ಡ್ ನಂ.೨೬ರ ವ್ಯಾಪ್ತಿಯ ನ್ಯೂ ಕಾಲೋನಿ ಭಾಗದ ಆಶಾ ಕಾರ್ಯಕರ್ತೆಯರು ಹಾಗೂ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರಿಗೆ ಬುಧವಾರ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
    ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಜಿ ರಾಮಚಂದ್ರ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ೨೫ ಮಂದಿಗೆ ದಿನಸಿ ಸಾಮಗ್ರಿ ಹಾಗು ತರಕಾರಿ ವಿತರಿಸುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
    ನಗರಸಭಾ ಸದಸ್ಯರಾದ ಸರ್ವಮಂಗಳ, ಎಸ್.ಎಸ್ ಭೈರಪ್ಪ, ಕಾಂತರಾಜ್, ಮಾಜಿ ಸದಸ್ಯರಾದ ಮುಕುಂದಪ್ಪ, ಯುವ ಮುಖಂಡ ಬಿ.ಎಸ್ ಬಸವೇಶ್, ಫ್ರಾನ್ಸಿಸ್, ಕಾಂಗ್ರೆಸ್ ಮುಖಂಡರಾದ ವಿಲ್ಸನ್ ಬಾಬು, ವಿಜಯಗಾಂಧಿ, ಎಲ್ಲೋಜಿರಾವ್, ಹರೀಶ್, ವಿನೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.