Thursday, June 17, 2021

ಎಂಪಿಎಂ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ೬ ವರ್ಷ ಕಳೆದರೂ ಬಗೆಹರಿಯದ ಸಮಸ್ಯೆ

ಕೋವಿಡ್-೧೯ ಸಂದಿಗ್ದ ಪರಿಸ್ಥಿತಿಯಲ್ಲೂ ೭-೮ ತಿಂಗಳಿಂದ ವೇತನವಿಲ್ಲ

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ.


* ಅನಂತಕುಮಾರ್
    ಭದ್ರಾವತಿ, ಜೂ. ೧೭:  ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಸುಮಾರು ೬ ವರ್ಷಗಳು ಕಳೆದಿದ್ದು, ಆದರೆ ಇದುವರೆಗೂ ಕಾರ್ಮಿಕರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಕಳೆದ ೭-೮ ತಿಂಗಳಿನಿಂದ ವೇತನವಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
     ೨೦೧೫ರಲ್ಲಿ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡ ನಂತರ ಕಾರ್ಮಿಕರಿಗೆ ಎದುರಾದ ಸಂಕಷ್ಟಕ್ಕೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ. ಒಂದೆಡೆ ಕಾರ್ಖಾನೆ ಪುನಃ ಆರಂಭಗೊಳ್ಳದೆ ಇತಿಹಾಸದ ಗತ ವೈಭವ ಕಣ್ಮರೆಯಾಗಿರುವಾಗ, ಮತ್ತೊಂದೆಡೆ ಸುಮಾರು ೩೦-೪೦ ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿದಿರುವ ಕಾರ್ಮಿಕರಿಗೆ ಕೊನೆ ಘಳಿಗೆಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.


ಪ್ರಸ್ತುತ ಕಾರ್ಮಿಕರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ೭-೮ ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ನಮ್ಮ ಅಳಲು ಯಾರು ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ.
                                                              -ದಿನೇಶ್, ಕಾರ್ಯದರ್ಶಿ, ಎಂ.ಪಿ.ಎಂ ಕಾರ್ಮಿಕರ ಸಂಘ.

     ಒಂದು ಕಾಲದಲ್ಲಿ ಕಾರ್ಖಾನೆಯಲ್ಲಿ ೩ ರಿಂದ ೪ ಸಾವಿರ ಕಾಯಂ ಕಾರ್ಮಿಕರು, ಸುಮಾರು ೫ ಸಾವಿರ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ವ್ಯಾಪಾರಸ್ಥರು, ಕೃಷಿಕರು ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಕುಟುಂಬಗಳು ಕಾರ್ಖಾನೆಯನ್ನು ನಂಬಿ ಬದುಕು ಸಾಗಿಸುತ್ತಿದ್ದವು. ದೇಶ, ವಿದೇಶಗಳಲ್ಲಿ ತನ್ನದೇ ಆದ ಬ್ರಾಂಡ್‌ನೊಂದಿಗೆ ಮಾರುಕಟ್ಟೆ ಹೊಂದುವ ಮೂಲಕ ಭವ್ಯ ಪರಂಪರೆಯನ್ನು ಕಟ್ಟಿಕೊಂಡಿದ್ದ ಕಾರ್ಖಾನೆಯನ್ನು ರಾಜ್ಯ ಸರ್ಕಾರ  ಖಾಸಗಿಕರಣಗೊಳಿಸುವ ನಿಟ್ಟಿನಲ್ಲಿ ೨೦೧೭ರಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ೭೭೩ ಕಾಯಂ ಹಾಗು ೧೦೨೯ ಗುತ್ತಿಗೆ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದು ಕೊಂಡಿದ್ದರು. ಉಳಿದಂತೆ ೨೨೦ ಕಾಯಂ ನೌಕರರು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಸರ್ಕಾರ ಒಟ್ಟು ೩೪೫ ಕೋ.ರು. ವಿಶೇಷ ಪ್ಯಾಕೇಜ್ ರೂಪಿಸಿ ಎರಡು ಹಂತದಲ್ಲಿ ಹಣ ಸಹ ಬಿಡುಗಡೆಗೊಳಿಸಿತ್ತು. ಆದರೆ ಬಹುತೇಕ ಕಾರ್ಮಿಕರಿಗೆ ಇನ್ನೂ ಪೂರ್ತಿ ಹಣ ಕೈಸೇರಿಲ್ಲ. ಬಾಕಿ ಹಣ ನೀಡುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
      ೭-೮ ತಿಂಗಳಿಂದ ವೇತನವಿಲ್ಲ :
ಪ್ರಸ್ತುತ ಉಳಿದುಕೊಂಡಿರುವ ೨೧೬ ಕಾಯಂ ಕಾರ್ಮಿಕರ ಪೈಕಿ ೧೧೪ ಕಾರ್ಮಿಕರನ್ನು ಸರ್ಕಾರದ ವಿವಿಧ ಇಲಾಖೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಉಳಿದಿರುವ ಸುಮಾರು ೯೦ ಕಾಯಂ ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೫೦ ಕಾರ್ಮಿಕರು ಹಾಗು ಭದ್ರತಾ ಮತ್ತು ಬೇಹುಗಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೮೦ ಮಂದಿ ಹಾಗು ಅರಣ್ಯ ಕ್ಷೇತ್ರಪಾಲಕರು ಸುಮಾರು ೭-೮ ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
       ಸರ್ಕಾರದಿಂದ ಯಾವುದೇ ನೆರವಿಲ್ಲ:
    ಕೋವಿಡ್-೧೯ರ ಪರಿಣಾಮ ಕಳೆದ ಸುಮಾರು ೨ ವರ್ಷದಿಂದ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಆದರೂ ಸಹ ಸರ್ಕಾರ ಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮತ್ತೊಂದೆಡೆ ಸರ್ಕಾರ ಕಾರ್ಮಿಕರಿಗೆ ಕೋವಿಡ್-೧೯ ವಿಶೇಷ ನೆರವು ಸಹ ನೀಡಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಬಹುತೇಕ ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಲಾದರೂ ಸರ್ಕಾರ ನೆರವಿಗೆ ಧಾವಿಸಬೇಕೆಂಬ ಅಳಲು ಕಾರ್ಮಿಕರಿಂದ ಕೇಳಿ ಬರುತ್ತಿದೆ.  
      ಖಾಸಗಿಕರಣಗೊಳಿಸುವ ಪ್ರಕ್ರಿಯೆ ಸಹ ವಿಫಲ:
   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಭರವಸೆ ನೀಡುತ್ತಾ ಬಂದಿದೆಯಾದರೂ ಸಹ ಇದುವರೆಗೂ ಪುನಃ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವ ಸರ್ಕಾರದ ಪ್ರಸ್ತಾಪಕ್ಕೆ ಆರಂಭದಲ್ಲಿ ಪೂರಕ ಪ್ರತಿಕ್ರಿಯೆಗಳು ಕಂಡು ಬಂದರೂ ಸಹ ನಂತರದ ದಿನಗಳಲ್ಲಿ ಯಾವುದೇ ಖಾಸಗಿ ಕಂಪನಿಗಳು ಈ ಬಗ್ಗೆ ಆಸಕ್ತಿ ವಹಿಸದಿರುವುದು ಪುನಃ ಕಾರ್ಖಾನೆ ಆರಂಭಗೊಳ್ಳುವ ನಿರೀಕ್ಷೆಯನ್ನು ಹುಸಿಗೊಳಿಸಿದೆ.

Wednesday, June 16, 2021

ಶಿಕ್ಷಕರಿಗೆ, ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಜೂ. ೧೬: ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಕೋವಿಡ್-೧೯ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
   ಶಿವ ಸಾಯಿ ಕೃಪ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರಿಗೆ ಹಾಗು ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಅಭಿಲಾಷ್, ಶಿವಲಿಂಗೇಗೌಡ, ಸೌಮ್ಯ ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಗಾಂಜಾ ಹಾವಳಿ ; ಸಂಸದ ಎ. ನಾರಾಯಣಸ್ವಾಮಿ ಕಳವಳ

ಸಂಸದ ಎ. ನಾರಾಯಣಸ್ವಾಮಿ
   ಭದ್ರಾವತಿ, ಜೂ. ೧೬: ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಇದರಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಗಾಂಜಾ ಅಮಲಿನಲ್ಲಿ ಯುವಕರು ನಡೆಸಿರುವ ಹಲ್ಲೆ ಪರಿಣಾಮ ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಬಲಿಯಾಗಿದ್ದಾನೆ ಎಂಬ ವಿಚಾರ ತಿಳಿದು ಆತಂಕ ಉಂಟಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿರುವುದು ವಿಷಾದನೀಯ ಸಂಗತಿಯಾಗಿದೆ.  ಗಾಂಜಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಕಠಿಣ ಕ್ರಮ ಅನುಸರಿಸಬೇಕು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
    ಹತ್ಯೆಯಾದ ಗುತ್ತಿಗೆ ಪೌರ ನೌಕರ ಸುನಿಲ್ ಕುಟುಂಬಕ್ಕೆ ಕೊರೊನಾ ವಾರಿಯರ್ಸ್‌ಗಳಿಗೆ ನೀಡುವಂತೆ ಸರ್ಕಾರ ೩೦ ಲಕ್ಷ ರು. ಪರಿಹಾರ ನೀಡಬೇಕು.ನಗರಸಭೆ ವತಿಯಿಂದ ಮೃತನ ಕುಟುಂಬಕ್ಕೆ ನಿವೇಶನ ಹಾಗೂ ಉದ್ಯೋಗ, ಜಿಲ್ಲಾಡಳಿತದಿಂದ ೨ ಎಕರೆ ಜಮೀನು ನೀಡುವಂತೆ ಸಂಸದರು ಒತ್ತಾಯಿಸಿದರು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹತ್ಯೆಯಾದ ಪೌರ ನೌಕರ ಸುನಿಲ್ ಮನೆಗೆ ಸಂಸದ ನಾರಾಯಣಸ್ವಾಮಿ ಭೇಟಿ : ಕುಟುಂಬಸ್ಥರಿಗೆ ಸಾಂತ್ವಾನ

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಭದ್ರಾವತಿ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಮನೆಗೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    ಭದ್ರಾವತಿ, ಜೂ. ೧೬: ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾದ ಜೈ ಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ನೌಕರ ಸುನಿಲ್ ಮನೆಗೆ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
   ಸುನಿಲ್ ಹತ್ಯೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಸಂಸದರು. ಸುನಿಲ್ ಕುಟುಂಬಸ್ಥರ ನೆರವಿಗೆ ಮುಂದಾಗುವುದಾಗಿ ಭರವಸೆ ನೀಡುವ ಜೊತೆಗೆ ವೈಯಕ್ತಿಕವಾಗಿ ೩೦ ಸಾವಿರ ರು. ನಗದು ನೀಡಿ ಸಾಂತ್ವಾನ ಹೇಳಿದರು.
   ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಮಾಡಿದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಹನುಮಂತನಾಯ್ಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಬ್ರಾಹ್ಮಣ ಜನಾಂಗದ ನಿಂದನೆ : ನಟ ಚೇತನ್ ವಿರುದ್ಧ ಕ್ರಮಕ್ಕೆ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಜನಾಂಗ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಿತ್ರ ನಟ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜೂ. ೧೬: ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ ಜನಾಂಗ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಚಿತ್ರ ನಟ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
   ಚಿತ್ರನಟ ಚೇತನ್ ಯುಟೂಬ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣ್ಯದ ಬಗ್ಗೆ, ಬ್ರಾಹ್ಮಣ ಜನಾಂಗ ಹಾಗು ಪುರೋಹಿತರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಬ್ರಾಹ್ಮಣ ಜನಾಂಗ ಸರ್ವನಾಶ ಮಾಡಬೇಕೆಂದು ಹೇಳಿದ್ದು, ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಬ್ರಾಹ್ಮಣರನ್ನು ಈ ರೀತಿ ತುಚ್ಛವಾಗಿ ಅವಹೇಳನ ಮಾಡಿರುವುದು ಖಂಡನೀಯ.
    ಬ್ರಾಹ್ಮಣ ಜನಾಂಗದ ಕುರಿತು ಅವಹೇಳನ ಮಾಡುವವರಿಗೆ ಬಹಿರಂಗ ಬೆಂಬಲ ನೀಡುವುದು ಸಹ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ತಕ್ಷಣ ನಟ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಕೈಗೊಳ್ಳುವ ಕ್ರಮ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಜನಾಂಗವನ್ನು ನಿಂದಿಸುವವರಿಗೆ ಒಂದು ಎಚ್ಚರಿಕೆಯ ಪಾಠವಾಗಬೇಕೆಂದು ಆಗ್ರಹಿಸಲಾಯಿತು.
   ಬ್ರಾಹ್ಮಣ ಸಭಾ ತಾಲೂಕು ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಉಪಾಧ್ಯಕ್ಷರಾದ ಜಿ. ರಮಾಕಾಂತ್, ಡಿ. ಸತ್ಯನಾರಾಯಣರಾವ್, ಪ್ರಧಾನ ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tuesday, June 15, 2021

ಉಕ್ಕಿನ ನಗರದಲ್ಲಿ ಇಳಿಕೆಯಾದ ಕೊರೋನಾ : ಕೇವಲ ೩೪ ಸೋಂಕು ಪತ್ತೆ

ಭದ್ರಾವತಿ, ಜೂ. ೧೫: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ತೀರ ಇಳಿಮುಖವಾಗಿದ್ದು, ಮಂಗಳವಾರ ಕೇವಲ ೩೪ ಪ್ರಕರಣಗಳು ಪತ್ತೆಯಾಗಿವೆ.
   ಒಟ್ಟು ೫೬೩ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೩೪ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೫೨ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೬೪೫೦ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೫೪೩೭ ಮಂದಿ ಗುಣಮುಖರಾಗಿದ್ದಾರೆ.
   ಒಟ್ಟು ೧೦೧೩ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ಒಟ್ಟು ೧೭೭ ಮಂದಿ ಮೃತಪಟ್ಟಿದ್ದಾರೆ. ೧೬೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಟ್ಟು ೨೩ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ೧೨೦ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೭ ಜೋನ್‌ಗಳು ಸಕ್ರಿಯವಾಗಿದ್ದು, ೧೭ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಕಲಾವಿದರ ನೆರವಿಗೆ ಮುಂದಾಗಿ : ಪೌರಾಯುಕ್ತರಿಗೆ ಮನವಿ

ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರ ನೆರವಿಗೆ ಮುಂದಾಗುವಂತೆ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಭದ್ರಾವತಿ ತಾಲೂಕು ಶಾಖೆ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜೂ. ೧೫: ಕೊರೋನಾ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರ ನೆರವಿಗೆ ಮುಂದಾಗುವಂತೆ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ತಾಲೂಕು ಶಾಖೆ ವತಿಯಿಂದ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಸಂಘದಲ್ಲಿ ಸುಮಾರು ೧೬೦ಕ್ಕೂ ಹೆಚ್ಚು ಕಲಾವಿದರು ಸದಸ್ಯರಾಗಿದ್ದು, ಬಹುತೇಕ ಕಲಾವಿದರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ವಿವಿಧ ವಾದ್ಯ ನುಡಿಸುವ ಕಲಾವಿದರು, ಜಾನಪದ, ಭಾವಗೀತೆ, ಭಕ್ತಿಗೀತೆ ಗಾಯಕ-ಗಾಯಕಿಯರು, ನೃತ್ಯಗಾರರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.
   ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಸುಮಾರು ಒಂದೂವರೆ ವರ್ಷದಿಂದ ಕಲಾವಿದರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಟುಂಬ ನಿರ್ವಹಣೆ ಸಹ ಕಷ್ಟಕರವಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಲಾವಿದರ ನೆರವಿಗೆ ಮುಂದಾಗಬೇಕೆಂದು ಮನವಿ ಮಾಡಲಾಗಿದೆ.
   ಸಂಘದ ಅಧ್ಯಕ್ಷ ಆರ್. ಹರೀಶ್, ಸಂಘಟನಾ ಕಾರ್ಯದರ್ಶಿ ಬಿ. ಚಿದಾನಂದ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.