ಮಂಗಳವಾರ, ಜೂನ್ 22, 2021

ಜೂ.೨೩ರಂದು ಉಚಿತ ಟ್ಯಾಬ್ ವಿತರಣೆ

ಭದ್ರಾವತಿ, ಜೂ. ೨೨: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮ ಜೂ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ, ಡಾ. ರವೀಂದ್ರ, ಪ್ರೊ. ವರದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿನ : ಸಸಿ ನೆಡುವ ಕಾರ್ಯಕ್ರಮ

ಭದ್ರಾವತಿ, ಜೂ. ೨೨: ಜನ ಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ತಾಲೂಕು ಮಂಡಲ ವತಿಯಿಂದ ಜೂ.೨೩ರಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಬಿಳಿಕಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಠದ ಶ್ರೀ ರಾಚೋಟೇಶ್ವರಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಂಡಲದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವಿ ಸಂತೋಷ್ ಕೋರಿದ್ದಾರೆ.

ಬಿ.ಎಸ್ ಶಾಂತಣ್ಣ ನಿಧನ

ಬಿ.ಎಸ್ ಶಾಂತಣ್ಣ
   ಭದ್ರಾವತಿ, ಜೂ. ೨೨:  ನಗರದ ಹೊಸಮನೆ ಓಎಸ್‌ಎಂ ನಿವಾಸಿ, ವೀರಶೈವ ಸಮಾಜದ ಮುಖಂಡ ಬಿ.ಎಸ್ ಶಾಂತಣ್ಣ(೬೭) ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವಪುತ್ರ ಹೊಂದಿದ್ದರು. ಮೃತರ  ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ  ನೆರವೇರಿಸಲಾಯಿತು. ಶಾಸಕ ಬಿ.ಕೆ. ಸಂಗಮೇಶ್ವರ್, ತಾಲೂಕು ವೀರಶೈವ ಸಮಾಜ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಸೋಮವಾರ, ಜೂನ್ 21, 2021

ಲಾಕ್‌ಡೌನ್ ಸಡಿಲ : ಜನ ಸಂದಣಿ


ಸೆಮಿ ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ.
   ಭದ್ರಾವತಿ, ಜೂ. ೨೧: ಸೆಮಿ ಲಾಕ್‌ಡೌನ್ ಸಡಿಲಗೊಳಿಸದ ಹಿನ್ನಲೆಯಲ್ಲಿ ಸೋಮವಾರ ನಗರದಲ್ಲಿ ಮಧ್ಯಾಹ್ನದವರೆಗೂ ಜನಸಂದಣಿ ಕಂಡು ಬಂದಿತು.
   ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಎಂದಿನಂತೆ ಸಂಚರಿಸಿದವು. ಲಾರಿ, ಆಟೋ, ಕಾರು ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿತ್ತು. ಬಹುತೇಕ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಅದರಲ್ಲೂ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂದಣಿ ಅಧಿಕವಾಗಿತ್ತು. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು.
   ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸಲಾಗಿತ್ತು. ದೂರದ ಊರುಗಳು ಹಾಗು ಶಿವಮೊಗ್ಗ-ಭದ್ರಾವತಿ ನಡುವೆ ಬಸ್‌ಗಳು ಸಂಚರಿಸಿದವು.

ಛಲವಾದಿಗಳ ಸಮಾಜದಿಂದ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ


ಭದ್ರಾವತಿ ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೨೧: ತಾಲೂಕು ಛಲವಾದಿಗಳ (ಪ.ಜಾ) ಸಮಾಜದ ವತಿಯಿಂದ ಸೋಮವಾರ ಇತ್ತೀಚೆಗೆ ನಿಧನ ಹೊಂದಿದ ದಲಿತ ಕವಿ, ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯನವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಸಮಾಜದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
   ಸಮಾಜದ ಗೌರವಾಧ್ಯಕ್ಷ ಎಂ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ಅಧ್ಯಕ್ಷ, ನಗರಸಭಾ ಸದಸ್ಯ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
    ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ, ಮುಖಂಡರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ ಹಾಗು ಎಂ.ಎನ್ ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಕಾರ್ಯದರ್ಶಿ ಲೋಕೇಶ್ ಮಾಳೆನಹಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ ನಿರೂಪಿಸಿದರು. ಜಿ. ನಾಗೇಶ್ ವಂದಿಸಿದರು.

ಭದ್ರಾವತಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭದ್ರಾವತಿಯಲ್ಲಿ ವಿಶ್ವ ಹಿಂದೂ ಪರಿಷತ್, ಪತಂಜಲಿ ಯೋಗ ಸಮಿತಿ ಹಾಗು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಸಹಯೋಗದೊಂದಿಗೆ  ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಸೋಮವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
   ಭದ್ರಾವತಿ, ಜೂ. ೨೧ : ವಿಶ್ವ ಹಿಂದೂ ಪರಿಷತ್, ಪತಂಜಲಿ ಯೋಗ ಸಮಿತಿ ಹಾಗು ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ಸಹಯೋಗದೊಂದಿಗೆ  ಸಿದ್ದಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಸೋಮವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜರುಗಿತು.
    ತಾಲೂಕು ಪ್ರಭಾರಿ ಕೆ.ಎಸ್ ಚನ್ನಪ್ಪ, ಪತಂಜಲಿ ಯೋಗ ಸಮಿತಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಅನ್ನಪೂರ್ಣ ಸತೀಶ್, ಕೋಕಿಲಾ ಉಮಾಪತಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ, ಜಿಲ್ಲಾ ಉಪಾಧ್ಯಕ್ಷ ಡಿ.ಆರ್ ಶಿವಕುಮಾರ್, ನಗರ ಕಾರ್ಯದರ್ಶಿ ವೈ.ಎಸ್ ರಾಮಮೂರ್ತಿ, ಸಹ ಕಾರ್ಯದರ್ಶಿ ಪಿ.ಮಂಜುನಾಥರಾವ್ ಪವರ್, ನಗರ ಉಪಾಧ್ಯಕ್ಷ ಎ.ಜಿ ನಾಗರಾಜ್, ಕೋಶಾಧ್ಯಕ್ಷ ಎನ್.ಎಸ್ ಮಹೇಶ್ವರಪ್ಪ, ಬಿಜೆಪಿ ಕಾರ್ಯದರ್ಶಿ ಕೆ.ಆರ್ ಸತೀಶ್, ಒಬಿಸಿ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮುರಳಿ, ಮಾರುತಿರಾವ್, ಸುಬ್ರಮಣಿ, ಹರಿಪ್ರಸಾದ್‌ಶರ್ಮ, ರಾಹುಲ್, ಸಿಂಚನ, ರೋಜಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಭಾನುವಾರ, ಜೂನ್ 20, 2021

ಬಂಗಾರದ ಸರ ಅಪಹರಣ ಪ್ರಕರಣ : ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದೇ ಗಂಟೆಯಲ್ಲಿ ೩ ಯುವಕರ ಸೆರೆ

ಭದ್ರಾವತಿ ಪೇಪರ್‌ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದ ೩ ಯುವಕರನ್ನು ಬಂಧಿಸಿವುದು.
   ಭದ್ರಾವತಿ, ಜೂ. ೨೦:  ಕಾಗದನಗರ ಅಂಚೆ ಕಛೇರಿ ರಸ್ತೆಯಲ್ಲಿ ಎಂಪಿಎಂ ಜೆಂಟ್ಸ್ ಕ್ಲಬ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ೩ ಯುವಕರನ್ನು ಪಿ.ಐ ಪೇಪರ್ ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ೧ ಗಂಟೆ ಅವಧಿಯಲ್ಲಿ ಬಂಧಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಸುಮಾರು ೧೧.೪೫ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ೩ ಯುವಕರು ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸ್ಥಳೀಯರು ವಾಹನ ಹಿಂಬಾಲಿಸಿ ಕೊಂಡು ಹೋಗಿ ತಕ್ಷಣ ತುರ್ತು ಸಂಖ್ಯೆ ೧೧೨ಕ್ಕೆ ಕರೆ ಮಾಡಿ ದ್ವಿಚಕ್ರ ವಾಹನ ಸಂಖ್ಯೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಿದ್ದು, ಮಧ್ಯಾಹ್ನ ೧೨.೪೫ರ ಸಮಯದಲ್ಲಿ ಕಾರೇಹಳ್ಳಿ ಚೆಕ್ ಪೋಸ್‌ನಲ್ಲಿ ಯುವಕರು ಸಿಕ್ಕಿ ಬಿದಿದ್ದಾರೆ.
   ಎರೇಹಳ್ಳಿ ಗ್ರಾಮದ ನಿವಾಸಿ ಪವನ್(೧೯), ಉಂಬ್ಳೆಬೈಲ್ ರಸ್ತೆ ಸಂಜಯ್ ಕಾಲೋನಿ ನಿವಾಸಿ ವಿ. ವಿಷ್ಣು ಅಲಿಯಾಸ್ ಪೊಲ್ಲಾರ್ಡ್(೧೯) ಮತ್ತು ಹೆಬ್ಬಂಡಿ ಗ್ರಾಮದ ನಿವಾಸಿ ಎಂ ಮಹೇಶ್(೧೯) ಬಂಧಿತ ಯುವಕರಾಗಿದ್ದು, ಒಂದು ಬಂಗಾರದ ಸರ ಮತ್ತು ೨ ಬಂಗಾರದ ಲಕ್ಷ್ಮೀ ಕಾಸ್ ಸೇರಿದಂತೆ ಒಟ್ಟು ೧೦೩ ಗ್ರಾಂ ತೂಕದ ಒಟ್ಟು ೪,೬೩,೫೦೦ ರು. ಮೌಲ್ಯದ ಬಂಗಾರದ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಬಂಧಿತ ೩ ಯುವಕರು ೨೦೧೯ರಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣ ಹಾಗು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
    ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಅಧೀಕ್ಷಕ ಹಾಗು ಸಹಾಯಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಈ.ಓ. ಮಂಜುನಾಥ್, ಪೇಪರ್‌ಟೌನ್ ಠಾಣಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ಸಹಾಯಕ ಠಾಣಾಧಿಕಾರಿ ರತ್ನಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚನ್ನಕೇಶವ, ಅರುಣ, ಗಂಗಾಧರ, ಹನಮಂತ ಆವಟ್ಟಿ, ಚಿನ್ನನಾಯ್ಕ, ಧರ್ಮನಾಯ್ಕ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.