ಭದ್ರಾವತಿ ಅರಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಭದ್ರಾವತಿ, ಜೂ. ೨೯: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಜು.೧ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಆದರೆ ಶಾಲಾ ಆರಂಭದ ಬಗ್ಗೆ ಬಹುತೇಕ ಪೋಷಕರಿಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾದರೂ ಸಹ ಮಕ್ಕಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಮಕ್ಕಳು ಕಳೆದ ಸುಮಾರು ೨ ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಗಳ ಮಕ್ಕಳ ಸ್ಥಿತಿ ಅಯೋಮಯವಾಗಿದೆ. ಈ ನಡುವೆ ಸರ್ಕಾರ ಇದೀಗ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸದೆ ಏಕಾಏಕಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಕೈಗೊಂಡಿದೆಯಾದರೂ ಇದರ ಬಗ್ಗೆ ಪೋಷಕರಿಗೆ ಖಾತರಿಯಾಗುತ್ತಿಲ್ಲ.
ತಾಲೂಕಿನಲ್ಲಿ ಸರ್ಕಾರಿ ಹಾಗು ಅನುದಾನಿತ ಒಟ್ಟು ೪೩೪ ಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲೂ ಜು.೧ರಿಂದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಮಕ್ಕಳು ಶಾಲೆಗಳಿಗೆ ಹಾಜರಾಗದಿದ್ದರೂ ಮೊದಲು ದಾಖಲಾತಿಯಾಗುವುದು ಅನಿವಾರ್ಯವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಪೋಷಕರು ಆತಂಕದಲ್ಲಿದ್ದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಮನಸ್ಥಿತಿಯಿಂದ ದೂರ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು ಬಹುತೇಕ ಕಷ್ಟಕರ ಕೆಲಸವಾಗಿದೆ. ಇದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಾಮಿಸಿದೆ.
ಖಾಸಗಿ ಶಾಲೆಗಳು ಕಳೆದ ೨ ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಅಲ್ಲದೆ ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಹಲವು ವಿನೂತನ ಪ್ರಯೋಗಗಳಿಗೆ ಮುಂದಾಗಿವೆ. ಜೊತೆಗೆ ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿವೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಸ್ಯೆ ಕಂಡು ಬರುತ್ತಿಲ್ಲ.