Wednesday, June 30, 2021

ಜು.೨ರಂದು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ, ಜೂ. ೩೦: ತಾಲೂಕಿನ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ಶಾಲಾ ಮಕ್ಕಳಿಗೆ ಜು.೨ರಂದು ಮಧ್ಯಾಹ್ನ ೩.೩೦ಕ್ಕೆ ಉಚಿತ ನೋಟ್ ವಿತರಣೆ ನಡೆಯಲಿದೆ.
    ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶಾಲಾ ಮಕ್ಕಳ ಪೋಷಕರು, ಗ್ರಾಮದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧರ್ಮೇಂದ್ರ ಕೋರಿದ್ದಾರೆ.

ಜು.೧ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ : ಮಕ್ಕಳು ಶಾಲೆಗಳಿಗೆ ಹಾಜರಾಗದೆ ಮನೆಗಳಲ್ಲಿಯೇ ಇದ್ದು ಕಲಿಯಿರಿ

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾಹಿತಿ


ಭದ್ರಾವತಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಮಾತನಾಡಿದರು.
   ಭದ್ರಾವತಿ, ಜೂ. ೩೦: ತಾಲೂಕಿನಲ್ಲಿ ಜು.೧ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿದ್ದು, ಮಕ್ಕಳು ಶಾಲೆಗಳಿಗೆ ಹಾಜರಾಗದೆ ಮನೆಗಳಲ್ಲಿಯೇ ಕಲಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ತಿಳಿಸಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್-೧೯ರ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳನ್ನು ಆರಂಭಿಸುತ್ತಿಲ್ಲ. ಪೋಷಕರು ದಾಖಲಾತಿ ಪ್ರಕ್ರಿಯೆಗೆ ಮಾತ್ರ ಮಕ್ಕಳನ್ನು ಶಾಲೆಗಳಿಗೆ ಕರೆತರಬೇಕಾಗಿದೆ. ಉಳಿದಂತೆ ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ೨ ಹಂತದ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಕೆ ಆರಂಭಿಸಬೇಕಾಗಿದೆ. ಈಗಾಗಲೇ ಕಳೆದ ೧೫ ದಿನಗಳಿಂದ ತಾಲೂಕಿನಾದ್ಯಂತ ಟಿ.ವಿ, ಮೊಬೈಲ್ ಸೌಲಭ್ಯಗಳನ್ನು ಹೊಂದಿರುವ ಹಾಗು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲದ ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ ೨ ರೀತಿಯ ಯೋಜನೆ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
   ಯೋಜನೆ-೧ರಲ್ಲಿ ಯಾವುದೇ ಸೌಲಭ್ಯ ಹೊಂದಿಲ್ಲದ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಅಭ್ಯಾಸ ಚಟುವಟಿಕೆಗಳ ನಕಲು ಪ್ರತಿಗಳನ್ನು ಆಯಾ ಶಾಲೆಗಳ ಶಿಕ್ಷಕರು ಮಕ್ಕಳ ಮನೆಗಳಿಗೆ ತಲುಪಿಸಲಿದ್ದಾರೆ. ಯೋಜನೆ ೨ರಲ್ಲಿ ಟಿ.ವಿ, ಮೊಬೈಲ್ ಹೊಂದಿರುವ ಮಕ್ಕಳಿಗೆ ಆನ್‌ಲೈನ್ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ದೂರದರ್ಶನ ಚಂದನ ವಾಹಿನಿಲ್ಲಿ ೧ ರಿಂದ ೧೦ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿದಿನ ಸಂವೇದ ಕಾರ್ಯಕ್ರಮದಡಿ ಪಾಠಗಳು ಪ್ರಸಾರವಾಗಲಿದ್ದು, ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಯಬಹುದಾಗಿದೆ ಎಂದರು.
       ಮಕ್ಕಳ ದಾಖಲಾತಿಗೆ ಮನವಿ :
   ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗು ಪ್ರೌಡಶಾಲೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಈ ಬಾರಿ ಕೇವಲ ಶೇ.೪೦ರಷ್ಟು ದಾಖಲಾತಿ ನಡೆದಿದೆ. ನಿಗದಿತ ಅವಧಿಯಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆತಂದು ದಾಖಲಾತಿ ಮಾಡುವಂತೆ ಟಿ.ಎನ್ ಸೋಮಶೇಖರಯ್ಯ ಪೋಷಕರಲ್ಲಿ ಮನವಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಿವಪ್ರಸಾದ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವೈ. ಗಣೇಶ್, ಶಿಕ್ಷಣ ಸಂಯೋಜಕರಾದ ರವಿಕುಮಾರ್, ತಿಪ್ಪಮ್ಮ, ಸಿ.ಆರ್.ಪಿ ಚನ್ನಪ್ಪ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪಂಚಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ : ವಿಐಎಸ್‌ಎಲ್ ಕಾರ್ಮಿಕರಿಂದ ನಡೆದ ೩ ದಿನಗಳ ಹೋರಾಟ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಮುಷ್ಕರ ನಡೆಸಿದರು.
    ಭದ್ರಾವತಿ, ಜೂ. ೩೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಮುಷ್ಕರ ನಡೆಸಿದರು.
    ಕಾರ್ಖಾನೆ ಮುಂಭಾಗ ಬೆಳಿಗ್ಗೆ ಮುಷ್ಕರ ಆರಂಭಿಸಿದ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಉಕ್ಕು ಪ್ರಾಧಿಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೇತನ ಪರಿಷ್ಕರಣೆ ಅವಧಿ ಮುಕ್ತಾಯಗೊಂಡು ಸುಮಾರು ೫ ವರ್ಷಗಳು ಕಳೆದರೂ ಸಹ ಇದುವರೆಗೂ ವೇತನ ಪರಿಷ್ಕರಣೆ ಮಾಡಿರುವುದಿಲ್ಲ.  ತಕ್ಷಣ ಕಾಯಂ ಹಾಗು ಗುತ್ತಿಗೆ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.
   ಕಾರ್ಮಿಕರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಶೇ.೧೫ ಎಂಜಿಬಿ, ಶೇ.೩೫ ಪರ್ಕ್ಸ್ ಹಾಗು ಶೇ.೯ ಪೆನ್ಸನ್ ವಂತಿಗೆ ನೀಡುವ ಜೊತೆಗೆ ವೆಲೆಫೇರ್ ಅಲೋಯನ್ಸ್ ಹೆಚ್ಚಿಸುವಂತೆ ಹಾಗು ಕೋವಿಡ್-೧೯ ಸೋಂಕಿಗೆ ಒಳಗಾದ ಕಾರ್ಮಿಕರ ಅವಲಂಬಿತರಿಗೆ ಉದ್ಯೋಗ ಕಲ್ಪಿಸಿಕೊಡುವಂತೆ ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹೋರಾಟದ ನೇತೃತ್ವ ವಹಿಸಿದ್ದರು. ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.  
   ಸೋಮವಾರ ಕಪ್ಪುಪಟ್ಟಿ ಧರಿಸಿ ಹಾಗು ಮಂಗಳವಾರ ಸತ್ಯಾಗ್ರಹ ಮೂಲಕ ಹೋರಾಟ ನಡೆಸಲಾಯಿತು. ಒಟ್ಟು ೩ ದಿನಗಳ ಕಾಲ ನಡೆದ ಹೋರಾಟ ಯಶಸ್ವಿಯಾಗಿ ಮುಕ್ತಾಯಗೊಂಡಿತು.


Tuesday, June 29, 2021

ಕೊರೋನಾ ಲಸಿಕಾ ಕೇಂದ್ರದಲ್ಲಿನ ಗೊಂದಲ ಬಗೆಹರಿಸಿ : ಮನವಿ

    ಭದ್ರಾವತಿ, ಜೂ. ೨೯: ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಕೊರೋನಾ ಲಸಿಕೆ ಸಂಬಂಧ ಉಂಟಾಗಿರುವ ಗೊಂದಲ ಬಗೆಹರಿಸುವಂತೆ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಕೊರೋನಾ ಲಸಿಕೆ ನೀಡುವ ಸಂಬಂಧ ಉಂಟಾಗಿರುವ ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಲಸಿಕಾ ಕೇಂದ್ರದಲ್ಲಿ ಪ್ರತಿದಿನ ಲಭ್ಯವಿರುವ ಲಸಿಕೆ ಪ್ರಮಾಣ, ಲಸಿಕೆ ನೀಡುವ ದಿನ, ೨ನೇ ಡೋಸ್ ನೀಡುವ ದಿನ, ನಿಗದಿಪಡಿಸಲಾಗಿರುವ ವಯಸ್ಸಿನ ಮಾನದಂಡ ಇತ್ಯಾದಿ ಮಾಹಿತಿ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಚಾರಪಡಿಸುವ ಮೂಲಕ ಗೊಂದಲ ಬಗೆಹರಿಸುವಂತೆ ಕೋರಿದ್ದಾರೆ.
      ಕೊರೋನಾ ಸೋಂಕು ಇಳಿಮುಖ:
   ತಾಲೂಕಿನ ಸೋಂಕಿನ ಪ್ರಮಾಣ ಬಹುತೇಕ ಇಳಿಮುಖವಾಗಿದ್ದು, ಮಂಗಳವಾರ ಕೇವಲ ೧೮ ಸೋಂಕು ಪತ್ತೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೭ ಹಾಗು ನಗರ ಭಾಗದಲ್ಲಿ ೧೧ ಸೋಂಕು ಸೇರಿದಂತೆ ಒಟ್ಟು ೧೮ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಯಾರು ಸಹ ಮೃತಪಟ್ಟಿಲ್ಲ ಎಂಬುದು ಸಮಾಧಾನಕರವಾದ ಸಂಗತಿಯಾಗಿದೆ.

ಜು.೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜೂ. ೨೯: ಮೆಸ್ಕಾಂ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೧ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನಲ್ಲಿಸರ, ಮಲ್ಲಿಗೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಛಲವಾದಿ ಸಮಾಜದ ಅಭಿವೃದ್ಧಿಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ನಗರಸಭಾ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೯: ಛಲವಾದಿ ಸಮಾಜದ ಅಭಿವೃದ್ಧಿಗೆ  ಬದ್ಧವಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ನಗರಸಭಾ ಸದಸ್ಯರುಗಳಿಗೆ ಹಾಗು ವಿವಿಧ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದ ಹಿರಿಯ ಮುಖಂಡ ಡಿ. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಬೆಳೆದು ಬಂದ ದಾರಿ ಹಾಗು ಸಮಾಜದ ಬೇಡಿಕೆಗಳನ್ನು ವಿವರಿಸಿದರು.
    ನಗರಸಭೆ ನೂತನ ಸದಸ್ಯರಾದ ಚನ್ನಪ್ಪ, ಕೆ. ಉದಯ್‌ಕುಮಾರ್, ಸರ್ವಮಂಗಳ ಮತ್ತು ಪ್ರೇಮಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಗೌರವಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ಕಾರ್ಯದರ್ಶಿ ಲೋಕೇಶ್ ಮಾಳೇನಹಳ್ಳಿ, ಖಜಾಂಚಿ ಮಂಜುನಾಥ್, ನಗರಸಭಾ ಸದಸ್ಯ ಸುದೀಪ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಹಿರಿಯ ಮುಖಂಡ ಎಸ್.ಎಸ್ ಭೈರಪ್ಪ ಸ್ವಾಗತಿಸಿದರು. ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು. ನಾಗೇಶ್ ವಂದಿಸಿದರು.

ಜು.೧ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ : ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಮಸ್ಯೆ

ಭದ್ರಾವತಿ ಅರಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
    ಭದ್ರಾವತಿ, ಜೂ. ೨೯: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಜು.೧ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಆದರೆ ಶಾಲಾ ಆರಂಭದ ಬಗ್ಗೆ ಬಹುತೇಕ ಪೋಷಕರಿಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾದರೂ ಸಹ ಮಕ್ಕಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
   ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಮಕ್ಕಳು ಕಳೆದ ಸುಮಾರು ೨ ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆಲವು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆಗಳ ಮಕ್ಕಳ ಸ್ಥಿತಿ ಅಯೋಮಯವಾಗಿದೆ. ಈ ನಡುವೆ ಸರ್ಕಾರ ಇದೀಗ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸದೆ ಏಕಾಏಕಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಮುಂದಾಗಿದೆ. ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಕೈಗೊಂಡಿದೆಯಾದರೂ ಇದರ ಬಗ್ಗೆ ಪೋಷಕರಿಗೆ ಖಾತರಿಯಾಗುತ್ತಿಲ್ಲ.
    ತಾಲೂಕಿನಲ್ಲಿ ಸರ್ಕಾರಿ ಹಾಗು ಅನುದಾನಿತ ಒಟ್ಟು ೪೩೪ ಶಾಲೆಗಳಿದ್ದು, ಎಲ್ಲಾ ಶಾಲೆಗಳಲ್ಲೂ ಜು.೧ರಿಂದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಮಕ್ಕಳು ಶಾಲೆಗಳಿಗೆ ಹಾಜರಾಗದಿದ್ದರೂ ಮೊದಲು ದಾಖಲಾತಿಯಾಗುವುದು ಅನಿವಾರ್ಯವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಬಹುತೇಕ ಪೋಷಕರು ಆತಂಕದಲ್ಲಿದ್ದು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಮನಸ್ಥಿತಿಯಿಂದ ದೂರ ಉಳಿದಿದ್ದಾರೆ. ಇಂತಹ ಸಂದರ್ಭದಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು ಬಹುತೇಕ ಕಷ್ಟಕರ ಕೆಲಸವಾಗಿದೆ. ಇದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಾಮಿಸಿದೆ.  
   ಖಾಸಗಿ ಶಾಲೆಗಳು ಕಳೆದ ೨ ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಅಲ್ಲದೆ ಮಕ್ಕಳ ಕಲಿಕಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಹಲವು ವಿನೂತನ ಪ್ರಯೋಗಗಳಿಗೆ ಮುಂದಾಗಿವೆ. ಜೊತೆಗೆ ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿವೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಸ್ಯೆ ಕಂಡು ಬರುತ್ತಿಲ್ಲ.