Thursday, July 8, 2021

ನೂತನ ಸಚಿವರಿಗೆ ಎಂಎಸ್‌ಎಂಇಪಿಸಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ನೂತನ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನು ಮೈಕ್ರೋ ಸ್ಮಾಲ್ & ಮೀಡಿಯಾ ಎಂಟರ್‌ಪ್ರೈಸಸ್ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಜು. ೮: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ನೂತನ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ೪ ಸಂಸದರನ್ನು ಮೈಕ್ರೋ ಸ್ಮಾಲ್ & ಮೀಡಿಯಾ ಎಂಟರ್‌ಪ್ರೈಸಸ್ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಸನ್ಮಾನಿಸಿ ಅಭಿನಂದಿಸಿದರು.
    ಯುವ ಉದ್ಯಮಿ ಹಾಗು ಪ್ರೊಮೋಷನಲ್ ಕೌನ್ಸಿಲ್ ಕೇಂದ್ರ ಘಟಕದ ನಿರ್ದೇಶಕರೂ ಸಹ ಆಗಿರುವ ಎಚ್.ಸಿ ರಮೇಶ್, ರಾಜ್ಯದಲ್ಲಿ ಮೈಕ್ರೋ ಸ್ಮಾಲ್ & ಮೀಡಿಯಾ ಎಂಟರ್‌ಪ್ರೈಸಸ್ ಬೆಳವಣಿಗೆಗೆ ಕಳೆದ ಸುಮಾರು ಒಂದೂವರೆ ವರ್ಷದಿಂದ ಶ್ರಮಿಸುತ್ತಿದ್ದು,   ನೂತನ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಹಾಗು ಎ. ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸುವ ಜೊತೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವ ಜೊತೆಗೆ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

೨೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಸದರ ನಿಧಿಯಿಂದ ಸುಮಾರು ೨೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
     ಭದ್ರಾವತಿ, ಜು. ೮: ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಸಂಸದರ ನಿಧಿಯಿಂದ ಸುಮಾರು ೨೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
     ಶ್ರೀ ಚೌಡೇಶ್ವರಿ ದೇವಸ್ಥಾನ ಸುರಗಿತೋಪಿನ ಗ್ರಾಮ ದೇವತೆಯಾಗಿದ್ದು, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ನಂತರ  ದೇವಸ್ಥಾನ ಜೀರ್ಣೋದ್ದಾರ ಕಾರ್ಯ ಹಂತ ಹಂತವಾಗಿ ನಡೆಯುತ್ತಿದೆ. ಇದೀಗ ಸಂಸದರ ನಿಧಿಯಿಂದ ಸುಮಾರು ೨೫ ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ.
    ನಗರಸಭಾ ಸದಸ್ಯೆ ಜಯಶೀಲ, ಟ್ರಸ್ಟ್ ಗೌರವಾಧ್ಯಕ್ಷ ಜನಾರ್ಧನ್, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಪರಮೇಶ್, ಖಜಾಂಚಿ ರವಿ ಹಾಗು ಪದಾಧಿಕಾರಿಗಳು, ದೇವಸ್ಥಾನ ಪ್ರಧಾನ ಅರ್ಚಕ ಮುರಳಿಧರ, ನಿವಾಸಿಗಳಾದ ಸುರೇಶ್, ಚಿಕ್ಕರಾಜು, ಕರಿಯಪ್ಪ, ನಿತ್ಯಾನಂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತುಳು ಸಂಘ, ಬಂಟರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಯು. ಕರುಣಾಕರಶೆಟ್ಟಿ ನಿಧನ

ವೈದ್ಯರಾಗಿ ಉಕ್ಕಿನ ನಗರದಲ್ಲಿ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೇವೆ

ಡಾ. ಯು. ಕರುಣಾಕರಶೆಟ್ಟಿ
    ಭದ್ರಾವತಿ, ಜು. ೮: ನಗರದ ಹಿರಿಯ ವೈದ್ಯ, ತಾಲೂಕು ತುಳು ಸಂಘ ಹಾಗು ಬಂಟರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಯು. ಕರುಣಾಕರಶೆಟ್ಟಿ(೮೩) ಬುಧವಾರ ರಾತ್ರಿ ನಿಧನ ಹೊಂದಿದರು.
   ಪತ್ನಿ ವಾಸಂತಿ ಹಾಗು ೩ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
    ಮೂಲತಃ ತುಳು ನಾಡಿನವರಾದರು ಸಹ ಭದ್ರಾವತಿಯಲ್ಲಿಯೇ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ನ್ಯೂಟೌನ್ ಪೊಲೀಸ್ ಠಾಣೆ ಸಮೀಪದ ಶ್ರೀರಾಮ ಕ್ಲಿನಿಕ್‌ನಲ್ಲಿ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದರು.
   ವೈದ್ಯ ವೃತ್ತಿ ಜೊತೆಗೆ ತಾಲೂಕು ಬಂಟರ ಸಂಘ ಹಾಗು ತುಳು ಸಂಘಗಳ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಲಯನ್ಸ್, ರೋಟರಿ ಹಾಗು ಜನ್ನಾಪುರ ಮನೆ ಮಾಲೀಕರ ಸಂಘ ಸೇರಿದಂತೆ ವಿವಿದ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿವೆ.
    ಇವರ ನಿಧನಕ್ಕೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಹಾಗು ಪದಾಧಿಕಾರಿಗಳು, ತುಳು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಹರೀಶ ದೇಲಂತಬೆಟ್ಟು ಹಾಗು ಪದಾಧಿಕಾರಿಗಳು, ಜನ್ನಾಪುರ ಮನೆ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ ಸತೀಶ್ ಹಾಗು ಪದಾಧಿಕಾರಿಗಳು, ಲಯನ್ಸ್ ಹಾಗು ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.


Wednesday, July 7, 2021

ಎಟಿಎಂ ಕಳ್ಳತನಕ್ಕೆ ಯತ್ನ : ಓರ್ವನ ಸೆರೆ

ಭದ್ರಾವತಿ, ಜು. ೭: ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
    ತಾಲೂಕಿನ ಅರಳಿಹಳ್ಳಿ ಬಸಲಿಕಟ್ಟೆ ನಿವಾಸಿ, ಟ್ರ್ಯಾಕ್ಟರ್ ಚಾಲಕ ಅಸಾದುಲ್ಲಾ ಅಲಿಯಾಸ್ ಹರ್ಷದ್(೩೨) ಎಂಬಾತನನ್ನು ಬಂಧಿಸಲಾಗಿದ್ದು, ಈತ ಜು.೫ರ ರಾತ್ರಿ ೮ ಗಂಟೆ ಸಮಯದಲ್ಲಿ ಎಟಿಎಂ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿ ವಿಫಲನಾಗಿದ್ದಾನೆ. ಈ ಕುರಿತು ಬ್ಯಾಂಕ್ ಶಾಖಾ ವ್ಯವಸ್ಥಾಪಕ ತಮ್ಮಯ್ಯದಾಸ ಪೊಲೀಸರಿಗೆ ದೂರು ಸಲ್ಲಿಸಿದ್ದರು.
     ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಅಭಿನಂದಿಸಿದ್ದಾರೆ.

ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಸದಾಶಿವಮೂರ್ತಿ, ರವಿಕುಮಾರ್ ನೇಮಕ

ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿಗಳಾಗಿ ಸದಾಶಿವಮೂರ್ತಿ, ರವಿಕುಮಾರ್ ಅವರನ್ನು ನೇಮಕಗೊಳಿಸಿ ಅಭಿನಂದಿಸಿದರು.
    ಭದ್ರಾವತಿ, ಜು. ೭: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾಗಿ ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ನೇಮಕ ಗೊಂಡಿದ್ದಾರೆ.
    ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೂಚನೆ ಮೇರೆಗೆ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ನೇಮಕಗೊಳಿಸಿ ಆದೇಶಿಸಿದ್ದಾರೆ. ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಿದ್ದಾರೆ.
    ಬಿಪಿಎಲ್ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎಸ್.ಕೆ ಸುಧೀಂದ್ರ, ಅಧ್ಯಕ್ಷ ಎಂ. ಮುಕುಂದನ್, ಕಾರ್ಯಾಧ್ಯಕ್ಷ ಎಂ. ರವಿಕುಮಾರ್, ಉಪಾಧ್ಯಕ್ಷರಾದ ವಿಲಿಯಂ ಸಂಪತ್ ಕುಮಾರ್ ಮತ್ತು ಸ್ಯಾಮ್ಯೂಯೇಲ್, ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್, ಕಾರ್ಯದರ್ಶಿ ಎಂ.ಸಿ ಸುನಿಲ್‌ಕುಮಾರ್, ಸಹ ಕಾರ್ಯದರ್ಶಿ ಜಿ. ಗೋವಿಂದ, ಖಜಾಂಚಿ ಎ.ವಿ ಮುರುಳಿಕೃಷ್ಣ, ನಿರ್ದೇಶಕರದ ಶ್ರೀಕಾಂತ್, ನವೀನ್‌ಕುಮಾರ್, ಎನ್.ಆರ್ ರವೀಂದ್ರಪ್ಪ, ಸಿ. ಉಮಾಶಂಕರ್, ಕರುಣಾನಿಧಿ ಸೇರಿದಂತೆ ಇನ್ನಿತರರು ನೂತನ ಕಾರ್ಯದರ್ಶಿಗಳಾದ ಜಿ. ಸದಾಶಿವಮೂರ್ತಿ ಮತ್ತು ಎಂ. ರವಿಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ಸರೋಜಮ್ಮ ನಿಧನ

ಸರೋಜಮ್ಮ
   ಭದ್ರಾವತಿ, ಜು. ೭: ಲಿಮ್ಕಾ ದಾಖಲೆ ಕುಂಚ ಕಲಾವಿದ, ಉಜ್ಜನಿಪುರ ನಿವಾಸಿ ಭದ್ರಾವತಿ ಗುರು ಅವರ ತಾಯಿ ಸರೋಜಮ್ಮ(೫೮) ಬುಧವಾರ ಸಂಜೆ ನಿಧನ ಹೊಂದಿದರು.
   ಪತಿ ನಿವೃತ್ತ ಎಂಪಿಎಂ ಉದ್ಯೋಗಿ ಜಿ. ಬೊಮ್ಮಯ್ಯ ಹಾಗು ೩ ಗಂಡು ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬುಳ್ಳಾಪುರ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ನಡೆಯಲಿದೆ.
ಮೃತರ ನಿಧನಕ್ಕೆ ಕಲಾವಿದರು, ವಿವಿಧ ಸಂಘಟನೆಗಳು ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ದೇಹದಾರ್ಢ್ಯ ಪಟು ನಂಜುಂಡಿ ನಿಧನ

ನಂಜುಂಡಿ
     ಭದ್ರಾವತಿ, ಜು. ೭: ಕಾಗದನಗರದ ನಿವಾಸಿ, ದೇಹದಾರ್ಢ್ಯ ಪಟು ನಂಜುಂಡಿ(೪೫) ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಬುಧವಾರ ಸಂಜೆ ಬೈಪಾಸ್ ಹೊಸಬುಳ್ಳಾಪುರ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
     ಪತ್ನಿ, ಓರ್ವ ಪುತ್ರ ಇದ್ದರು. ಅಪಘಾತದಲ್ಲಿ ಗಾಯಗೊಂಡು ಕಳೆದ ಸುಮಾರು ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಸಹೋದರ ಹುಡ್ಕೋಕಾಲೋನಿಯ ಲಕ್ಷ್ಮಣ ಅವರ ನಿವಾಸದಲ್ಲಿ ಬೆಳಿಗ್ಗೆ ನಿಧನ ಹೊಂದಿದರು.
    ಸುಮಾರು ೨ ದಶಕಗಳ ಹಿಂದೆಯೇ ನಂಜುಂಡಿ ದೇಹದಾರ್ಢ್ಯ ಪಟುವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದರು. ಹಲವಾರು ಪ್ರಶಸ್ತಿ, ಬಿರುದುಗಳನ್ನು ಪಡೆದುಕೊಂಡಿದ್ದರು. ಎಂಪಿಎಂ ವ್ಯಾಯಾಮ ಶಾಲೆಯಲ್ಲಿ ತರಬೇತಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
    ಇವರ ನಿಧನಕ್ಕೆ ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್ ಮತ್ತು ಪದಾಧಿಕಾರಿಗಳು, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಹಾಗು ದೇಹದಾರ್ಢ್ಯ ಪಟುಗಳು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.