Saturday, July 17, 2021

ನಿವೃತ್ತ ಮುಖ್ಯಪೇದೆ ಟಿ.ಟಿ ನಂಜಪ್ಪ ನಿಧನ

ಟಿ.ಟಿ ನಂಜಪ್ಪ
     ಭದ್ರಾವತಿ : ಹಳೇನಗರದ ದೊಡ್ಡಕುರುಬರ ಬೀದಿ ನಿವಾಸಿ, ನಿವೃತ್ತ ಮುಖ್ಯಪೇದೆ ಟಿ.ಟಿ. ನಂಜಪ್ಪ (ಟಿ.ಟಿ. ನಂಜೋಜಿರಾವ್ ನಲ್ವಡೆ) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
    ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗು ಮರಿಮೊಮ್ಮಕ್ಕಳನ್ನು ಹೊಂದಿದ್ದರು. ೮೮ ವರ್ಷದ ವಯೋಮಾನದ ಟಿ.ಟಿ ನಂಜಪ್ಪ ಅವರು ಅನಾರೋಗ್ಯಕ್ಕೆ ಒಳಗಾದ ಹಿನ್ನಲೆಯಲ್ಲಿ ಶುಕ್ರವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೃತರ ಪತ್ನಿ ನಿಧನರಾಗಿದ್ದರು.
    ನಂಜಪ್ಪ ಭದ್ರಾವತಿ-ಶಿವಮೊಗ್ಗ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೇಂದ್ರ-ರಾಜ್ಯ ಸರ್ಕಾರಗಳಿಂದ ಜನವಿರೋಧಿ ನೀತಿ : ಕಾಂಗ್ರೆಸ್ ಆಕ್ರೋಶ

ಡೀಸೆಲ್, ಪೆಟ್ರೋಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ


ಡೀಸೆಲ್, ಪೆಟ್ರೋಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಹಾಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
     ಭದ್ರಾವತಿ, ಜು. ೧೭: ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದೆ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಪ್ರಸ್ತುತ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಸಿದರು.
    ಡೀಸೆಲ್, ಪೆಟ್ರೋಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಹಾಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ಡೀಸೆಲ್, ಪೆಟ್ರೋಲ್ ಹಾಗು ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಪಕ್ಷವಾಗಿದ್ದು, ಕೇಂದ್ರ ಹಾಗು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಜನಪರ ಯೋಜನೆಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಜನಪರ ಯೋಜನೆಗಳನ್ನು ಮೊಟಕುಗೊಳಿಸಲಾಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ನೆಮ್ಮದಿಯಿಂದ ಬದುಕು ಸಾಗಿಸುವುದು ಅಸಾಧ್ಯವಾಗಿದೆ ಎಂದು ಆರೋಪಿಸಿದರು.
    ತಕ್ಷಣ ಬೆಲೆ ಏರಿಕೆ ನಿಯಂತ್ರಿಸಬೇಕು. ಜನವಿರೋಧಿ ನೀತಿಗಳನ್ನು ಕೈಬಿಡಬೇಕು. ಜನಸಾಮಾನ್ಯರು ನೆಮ್ಮದಿಯಿಂದ ಬದಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ನಗರಸಭಾ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಯುವ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಮಣಿ ಎಎನ್‌ಎಸ್, ಕೆ. ಸುದೀಪ್‌ಕುಮಾರ್, ಕಾಂತರಾಜ್, ಜಾರ್ಜ್, ಬಷೀರ್ ಅಹಮದ್, ಚನ್ನಪ್ಪ, ಶೃತಿ ವಸಂತಕುಮಾರ್, ರಿಯಾಜ್ ಅಹಮದ್, ಬಿ.ಎಂ ಮಂಜುನಾಥ್, ಮುಖಂಡರಾದ ಬಾಲಕೃಷ್ಣ, ಗೋವಿಂದಸ್ವಾಮಿ, ಬಿ.ಎಸ್ ಗಣೇಶ್, ಬಿ.ಎಂ ರವಿಕುಮಾರ್, ಪ್ರಕಾಶ್‌ರಾವ್ ದುರೆ, ಎಂ. ಶಿವಕುಮಾರ್, ಎಸ್.ಎಸ್ ಭೈರಪ್ಪ, ಎಸ್. ಮಹಾದೇವ ಕೂಡ್ಲಿಗೆರೆ, ರಮೇಶ್‌ನಾಯ್ಕ, ಆಂಜನಪ್ಪ, ರಾಜ್‌ಕುಮಾರ್, ಕೆ. ಐಸಾಕ್ ಲಿಂಕನ್, ಎಂ. ರವಿಕುಮಾರ್, ಸುಮಿತ್ರಾ ಅಂಬೋರೆ, ಗೀತಾ, ವರಲಕ್ಷ್ಮೀ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, July 16, 2021

ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ವರ್ಗಾವಣೆ

ಜಿ. ಸಂತೋಷ್‌ಕುಮಾರ್   
   ಭದ್ರಾವತಿ, ಜು. ೧೬: ಅಧಿಕಾರ ಸ್ವೀಕರಿಸಿ ೧೦ ತಿಂಗಳು ಪೂರೈಸುವ ಮೊದಲೇ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರನ್ನು ಶುಕ್ರವಾರ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ.
   ತಹಸೀಲ್ದಾರ್ ಗ್ರೇಡ್-೧ ಅಧಿಕಾರಿಯಾಗಿರುವ ಸಂತೋಷ್‌ಕುಮಾರ್ ಅವರು ಕಳೆದ ವರ್ಷ ನವಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಕೋವಿಡ್-೧೯ರ ನಡುವೆಯೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಏಕಾಏಕಿ ಅವರನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.
    ಜಿ. ಸಂತೋಷ್‌ಕುಮಾರ್ ಅವರಿಂದ ತೆರವಾದ ಹುದ್ದೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಪುರಸಭಾ ತಹಸೀಲ್ದಾರ್ ಆರ್. ಪ್ರದೀಪ್ ಅವರನ್ನು ನೇಮಕಗೊಳಿಸಲಾಗಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಸ್ ರಶ್ಮಿ ಆದೇಶ ಹೊರಡಿಸಿದ್ದಾರೆ.

ತಾಲೂಕಿನಲ್ಲಿ ಕೋವಿಶೀಲ್ಡ್ ೨ನೇ ಡೋಸ್ ನೀಡಲು ಸಿದ್ದತೆ

    ಭದ್ರಾವತಿ, ಜು. ೧೬: ಕೋವಿಶೀಲ್ಡ್ ಮೊದಲ ಡೋಸ್ ಪಡೆದು ೧೨ ವಾರ ಪೂರೈಸಿರುವವರಿಗೆ ಜು.೧೭ರಂದು ೨ನೇ ಡೋಸ್ ನೀಡಲು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ತಿಳಿಸಿದ್ದಾರೆ.
     ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ೫೦ ಡೋಸ್, ರಾಜೀವ್‌ಗಾಂಧಿ ಬಿ.ಎಡ್ ಕಾಲೇಜಿನಲ್ಲಿ ೫೦ ಡೋಸ್, ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಣದಲ್ಲಿ ೧೦೦ ಡೋಸ್, ಅಶ್ವಥ್‌ನಗರ, ಉಜ್ಜನಿಪುರ, ನೆಹರು ನಗರ ಮತ್ತು ಜನ್ನಾಪುರ ನಗರ ಆರೋಗ್ಯ ಕೇಂದ್ರ ದಲ್ಲಿ ೬೦ ಡೋಸ್ ಹಾಗು ಆಗರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೫೦ ಡೋಸ್, ಅರಬಿಳಚಿ, ತಳ್ಳಿಕಟ್ಟೆ, ಯಡೇಹಳ್ಳಿ ಮತ್ತು ಭದ್ರಾಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೬೦ ಡೋಸ್,  ಅಂತರಗಂಗೆ, ಬಿಆರ್‌ಪಿ, ಮೈದೊಳಲು ಮತ್ತು ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೭೦ ಡೋಸ್,  ಮಾರಶೆಟ್ಟಿಹಳ್ಳಿ ಮತ್ತು ದೊಣಬಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೫೦ ಡೋಸ್ ಹಾಗು ಸನ್ಯಾಸಿ ಕೋಡಮಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೪೦ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
    ಲಸಿಕೆಯನ್ನು ಬೆಳಿಗ್ಗೆ ೧೦.೩೦ ರಿಂದ ೧.೩೦ರ ವರೆಗೆ ನೀಡಲಾಗುವುದು. ಲಸಿಕೆ ಪಡೆಯುವವರು ಕಡ್ಡಾಯವಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗು ಆಧಾರ್ ಕಾರ್ಡ್ ತರುವಂತೆ ಡಾ.ಎಂ.ವಿ ಅಶೋಕ್ ಸೂಚಿಸಿದ್ದಾರೆ.

ಜನಸಂಖ್ಯೆ ನಿಯಂತ್ರಣ ಅಗತ್ಯ : ಡಾ. ಎಂ.ವಿ ಅಶೋಕ್

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೧೬: ಪ್ರಸ್ತುತ ದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿರಾಗಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಜನಸಂಖ್ಯೆ ಹೆಚ್ಚಳದಿಂದ ಲಿಂಗಾನುಪಾತ ಉಂಟಾಗುವ ಜೊತೆಗೆ ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ವಿವರಿಸಿದರು.
    ಕಾರ್ಯಕ್ರಮವನ್ನು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಉದ್ಘಾಟಿಸಿದರು. ಸರ್ಜನ್ ಡಾ. ಶಿವಪ್ರಕಾಶ್ ಮತ್ತು ಸ್ತ್ರೀ ರೋಗ ತಜ್ಞೆ ಡಾ. ವರ್ಷ ಮಾತನಾಡಿ, ಜನಸಂಖ್ಯಾ ನಿಯಂತ್ರಣದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
   ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ರೇವತಿ, ಆನಂದ ಮೂರ್ತಿ, ರಾಜೇಗೌಡ, ವಸಂತ ಹಾಗೂ ನೇತ್ರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೃತ್ತಿ ಬದುಕಿನ ಜೊತೆಗೆ ಸೇವಾ ಕಾರ್ಯ ಕೈಗೊಳ್ಳಲು ರೋಟರಿ ಕ್ಲಬ್ ಸಹಕಾರಿ : ಎಚ್.ಎಲ್ ರವಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು  ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
     ಭದ್ರಾವತಿ, ಜು. ೧೬: ವೃತ್ತಿ ಬದುಕಿನ ಜೊತೆಗೆ ಸಮಾಜದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಬಯಸುವವರಿಗೆ ರೋಟರಿ ಕ್ಲಬ್‌ನಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಕ್ಲಬ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಲ್ ರವಿ ಹೇಳಿದರು.  
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಕ್ಲಬ್ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
    ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಕಾರ್ಯ ಕೈಗೊಳ್ಳಲು ರೋಟರಿ ಕ್ಲಬ್ ಹೆಚ್ಚು ಸಹಕಾರಿಯಾಗಿದ್ದು, ಸದಸ್ಯರು ತಮ್ಮ ವೃತ್ತಿ, ಕುಟುಂಬ, ಸೇವೆಗಳ ಮಧ್ಯೆ ಸಮತೋಲನ ಸಾಧಿಸುವುದು ಬಹಳ ಮುಖ್ಯ. ಆ ಮೂಲಕ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಬೇಕು.  ಕ್ಲಬ್‌ನಲ್ಲಿ ಕೇವಲ ಪುರುಷರಿಗೆ ಮಾತ್ರ ಉನ್ನತ ಹುದ್ದೆಗಳು ಮೀಸಲಾಗಿಲ್ಲ. ಮಹಿಳೆರಿಗೂ ಸಹ ಮೀಸಲಿವೆ ಎಂದರು.
     ಕೊರೊನಾ ಸೋಂಕಿನಿಂದ ಮೃತಪಟ್ಟ ಸಮಾರು ೧೦೫ಕ್ಕೂ ಹೆಚ್ಚು ಮೃತದೇಹಗಳ ಅಂತ್ಯ ಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಬಜರಂಗದಳ ಕಾರ್ಯರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಾಯಕ ರಾಜ್ಯಪಾಲ ಎಂ.ಪಿ ಆನಂದಮೂರ್ತಿ, ವಲಯಾಧಿಕಾರಿ ಪಿ.ಎನ್ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಶಾಂತಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯುಲ್ಲಿ ಉಪಸ್ಥಿತರಿದ್ದರು.  
         ಎಚ್.ವಿ ಆದರ್ಶ ಅಧ್ಯಕ್ಷತೆ ವಹಿಸಿದ್ದರು. ಶೃತಿ, ಕುಸುಮಾ ಪ್ರಾರ್ಥಿಸಿದರು. ಕೆ.ಎಸ್ ಶೈಲೇಂದ್ರ ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್ ಗಿರೀಶ್  ವರದಿ ಮಂಡಿಸಿದರು. ಎಸ್. ಅಡವೀಶಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
           ನೂತನ ಪದಾಧಿಕಾರಿಗಳು:
     ಅಧ್ಯಕ್ಷರಾಗಿ ಎಚ್.ವಿ ಆದರ್ಶ, ಉಪಾಧ್ಯಕ್ಷರಾಗಿ ಪಿ. ಸುಧಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರಾಘವೇಂದ್ರ ಉಪಾಧ್ಯಾಯ,  ಜಂಟಿ ಕಾರ್ಯದರ್ಶಿಯಾಗಿ ಎಂ. ನಿರಂಜನ, ಖಜಾಂಚಿಯಾಗಿ ಅಮಿತ್‌ಕುಮಾರ್ ಜೈನ್, ವಿವಿಧ ಸೇವಾ ಚಟುವಟಿಕೆಗಳ ನಿರ್ದೇಶಕರುಗಳಾಗಿ ಕೂಡ್ಲಿಗೆರೆ ಹಾಲೇಶ್, ಕೆ.ಎಚ್ ತೀರ್ಥಯ್ಯ, ಪ್ರಭಾಕರ ಬೀರಯ್ಯ, ಕೆ.ಎಸ್ ಶೈಲೇಂದ್ರ, ಡಾ.ಕೆ ನಾಗರಾಜ್, ಧರ್ಮೇಂದ್ರ ಹಾಗು ಆಧ್ಯಕ್ಷರುಗಳಾಗಿ ಕೆ. ಸುಂದರ ಬಾಬು, ಸಿ. ಭರತ್, ಟಿ.ಎಸ್ ದುಷ್ಯಂತರಾಜ್, ವಾದಿರಾಜ ಅಡಿಗ  ನೇಮಕಗೊಂಡರು.
    ನೂತನ ಸದಸ್ಯರಾಗಿ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಆಸ್ಮಯ, ಶಕುಂತಲ ಕೂಡ್ಲಿಗೆರೆ ಹಾಲೇಶ್, ಕುಸುಮಾ ತೀರ್ಥಯ್ಯ ಸೇರ್ಪಡೆಗೊಂಡರು.
    ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಲತಾ ದುಷ್ಯಂತರಾಜ್, ಉಪಾಧ್ಯಕ್ಷರಾಗಿ ಗೀತಾ ಡಾ.ಆರ್.ಸಿ ಬೆಂಗಳೂರಿ, ಕಾರ್ಯದರ್ಶಿಯಾಗಿ ಡಾ.ಮಯೂರಿ ಮಲ್ಲಿಕಾರ್ಜುನ್, ಖಜಾಂಚಿಯಾಗಿ ಲತಾ ಬಾಲಚಂದ್ರ ನೇಮಕಗೊಂಡರು.

ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರ ಸೆರೆ

ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
     ಭದ್ರಾವತಿ, ಜು. ೧೬: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ೬ ಜನರನ್ನು ಸೆರೆ ಹಿಡಿಯುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
    ಹೊಸಮನೆ ಎನ್‌ಎಂಸಿ ನಿವಾಸಿ ದಕ್ಷಿಣಾಮೂರ್ತಿ(೩೭),  ಅಶ್ವಥ್‌ನಗರದ ನಿವಾಸಿ ಸುದೀಪ್ ಕುಮಾರ್ ಅಲಿಯಾಸ್ ಗ್ಯಾರೇಜ್ ಸುದೀಪ್ (೩೦), ತಮ್ಮಣ್ಣ ಕಾಲೋನಿ ನಿವಾಸಿ  ಡ್ಯಾನಿಯಲ್ ಅಲಿಯಾಸ್ ಸ್ನೇಕ್ ಡ್ಯಾನಿಯಲ್(೨೫), ಬೋವಿ ಕಾಲೋನಿ ನಿವಾಸಿ, ಕಿರಣ್ ಅಲಿಯಾಸ್ ಕಿರಣ್‌ಕುಮಾರ್ ಅಲಿಯಾಸ್ ಪಾಂಡು(೨೩), ಜನ್ನಾಪುರ ಹಾಲಪ್ಪ ಶೆಡ್ ನಿವಾಸಿ ಪವನ್ ಕುಮಾರ್(೨೫) ಮತ್ತು ಹೊಸ ಕೋಡಿಹಳ್ಳಿ ರಸ್ತೆ ನಿವಾಸಿ ನವೀನ್ ಕುಮಾರ್(೨೬) ಬಂಧಿತರಾಗಿದ್ದು, ೧ ಕೆ.ಜಿ ೩೭೫ ಗ್ರಾಂ. ತೂಕದ ಗಾಂಜಾ, ೮೦೦ ರು. ನಗದು ಹಾಗು ೨ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
   ನಗರಸಭೆ ವ್ಯಾಪ್ತಿಯ ಹಳೇಸೀಗೆಬಾಗಿ ಹಾಗು ಹೊಳೆಹೊನ್ನೂರು ರಸ್ತೆಗೆ ಸೇರುವ ಬಡಾವಣೆಯೊಂದರ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಸೆರೆ ಹಿಡಿಯಲಾದ ೬ ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.
     ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಠಾಣಾಧಿಕಾರಿ ಮಹೇಶ್ವರನಾಯ್ಕ, ಸಿಬ್ಬಂದಿಗಳಾದ ಹಾಲಪ್ಪ, ಹಾಲೇಶ್, ಪಿರೋಜ್, ಸುನಿಲ್ ಎಸ್. ಬಾಸೂರ, ವಿಜಯ್‌ಕುಮಾರ್ ಹಾಗು ಮಧುಸೂಧನ್ ಮತ್ತು ಇನ್ನಿತರರು ಪಾಲ್ಗೊಂಡಿದ್ದರು.
   ೬ ಜನರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.