Saturday, July 24, 2021

ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ

ಗುರು ಪೂರ್ಣಿಮೆ ಅಂಗವಾಗಿ ಶನಿವಾರ ಭದ್ರಾವತಿ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
   ಭದ್ರಾವತಿ, ಜು. ೨೪: ಗುರು ಪೂರ್ಣಿಮೆ ಅಂಗವಾಗಿ ಶನಿವಾರ ನಗರದ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಪ್ರತಿದಿನ ಪೂಜಾ ಕಾರ್ಯಕ್ರಮಗಳು ಜರಗುತ್ತಿದ್ದು, ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ಪ್ರತಿವರ್ಷ ಸೇವಾ ಕ್ಷೇತ್ರದಲ್ಲಿ ಗುರು ಪೂರ್ಣೆಮೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳಿಂದ ಗುರುಗಳ ಪಾದ ಪೂಜೆ ನೇರವೇರಿಸುವುದು ವಿಶೇಷವಾಗಿದೆ. ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
   ಶಿವಲಿಂಗ ಹಾಗು ಶಿರಡಿ ಸಾಯಿಬಾಬಾರವರ ಪ್ರತಿಮೆಗಳಿಗೆ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು. ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.

ಮೆಸ್ಕಾಂ ವಿಭಾಗೀಯ ಕಛೇರಿಯಿಂದ ಹೆಚ್ಚಿನ ಅನುಕೂಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಸ್ಕಾಂ ವಿಭಾಗಿಯ ಕಛೇರಿಯ ನೂತನ ಕಟ್ಟಡವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೪: ನಗರದಲ್ಲಿ ಮೆಸ್ಕಾಂ ವಿಭಾಗೀಯ ಕಛೇರಿ ಆರಂಭದಿಂದಾಗಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಅವರು ಶನಿವಾರ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಸ್ಕಾಂ ವಿಭಾಗಿಯ ಕಛೇರಿಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಂದು ಕಾರ್ಯಕ್ಕೂ ಶಿವಮೊಗ್ಗಕ್ಕೆ ತೆರಳುವಂತಾಗಿದೆ. ಇಲ್ಲಿಯೇ ವಿಭಾಗೀಯ ಕಛೇರಿ ಆರಂಭಗೊಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಈ ಹಿಂದೆ ಹಲವು ಬಾರಿ ನನ್ನ ಗಮನಕ್ಕೆ ತರುವ ಮೂಲಕ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಅಂದಿನ ಇಂಧನ ಖಾತೆ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದರ ಪರಿಣಾಮ ವಿಭಾಗೀಯ ಕಛೇರಿ ಆರಂಭಕ್ಕೆ ಮಂಜೂರಾತಿ ಲಭಿಸಿತು. ನಂತರ ಬಂದ ಬಿಜೆಪಿ ಸರ್ಕಾರ ನೂತನ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಸಹಕರಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಭದ್ರಾವತಿ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ ಗಮನಿಸಿದಾಗ ಇದು ಅರ್ಥವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.  
   ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚ್ಯೂವಲ್ ಹೋಸ್ಟಿಂಗ್ ಮೂಲಕ ನೂತನ ಕಟ್ಟಡ ಉದ್ಘಾಟಿಸಿದರು. ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಪ್ರಸಾದ್, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ, ಮೆಸ್ಕಾಂ ಸ್ಥಳೀಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್ ಕಿಶೋರ್, ನಗರಸಭಾ ಸದಸ್ಯರಾದ ಜಯಶೀಲ, ವಿಜಯ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕ ಕೂಡ್ಲಿಗೆರೆ ಎಸ್. ಹಾಲೇಶ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಹಾಗು ಬಿಜೆಪಿ ಪಕ್ಷದ ಮುಖಂಡರು ಮತ್ತು ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Friday, July 23, 2021

ಜು.೨೪ರಂದು ವಿದ್ಯುತ್‌ಚ್ಛಕ್ತಿ ಸರಬರಾಗಿಗೆ ಮುನ್ನಡಿ ಬರೆದ ನೆಲೆಯಲ್ಲಿ ಬೃಹತ್ ಕಟ್ಟಡ ಲೋಕಾರ್ಪಣೆ

ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡ ಶನಿವಾರ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ.
     ಭದ್ರಾವತಿ, ಜು. ೨೩: ನಗರದಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಗುರುತಿಸಿಕೊಂಡಿರುವ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೫-೬ ದಶಕಗಳ ನಂತರ ಬೃಹತ್ ಕಟ್ಟಡವೊಂದು ತಲೆ ಎತ್ತಿದ್ದು, ಜು.೨೪ರ ಶನಿವಾರ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ.
     ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿಗೆ ಮುನ್ನುಡಿ ಬರೆದ ಸ್ಥಳ ಇದಾಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕೆಇಬಿ) ಅಂದು ಈ ಸ್ಥಳದಲ್ಲಿ ಜೋಗ್ ಪವರ್ ರೀಸಿವಿಂಗ್ ಸ್ಟೇಷನ್ ಆರಂಭಿಸುವ ಮೂಲಕ ವಿದ್ಯುತ್ ಸರಬರಾಜು ಕಾರ್ಯ ಚಟುವಟಿಕೆ ಕೈಗೊಂಡಿತು. ಈ ಹಿನ್ನಲೆಯಲ್ಲಿ ಇಲ್ಲಿಯೇ ಆಡಳಿತ ಕಛೇರಿ, ಗೋದಾಮು, ನೂರಾರು ಉದ್ಯೋಗಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿತು. ಈ ಭಾಗವನ್ನು ಅಂದಿನಿಂದ ಜೆಪಿಎಸ್ ಕಾಲೋನಿ ಎಂದು ಕರೆಯಲಾಗುತ್ತಿದೆ.
     ಕೆಇಬಿ ನಂತರದ ದಿನಗಳಲ್ಲಿ ಮೆಸ್ಕಾಂ ಘಟಕದಲ್ಲಿ ವಿಲೀನಗೊಂಡಿದ್ದು, ಇದೀಗ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡ ವಿಭಾಗೀಯ ಕಛೇರಿಯಾಗಿದ್ದು, ನೂತನ ಕಟ್ಟಡ ಹಲವು ಸೌಲಭ್ಯಗಳನ್ನು ಹೊಂದಿದೆ. ಈ ಕಟ್ಟಡ ನಿರ್ಮಾಣದಿಂದಾಗಿ ಈ ಭಾಗ ಮತ್ತಷ್ಟು ಮೆರಗು ಪಡೆದುಕೊಂಡಿದೆ.
     ಸಮೀಪದಲ್ಲಿಯೇ ಭದ್ರಾವತಿ ಆಕಾಶವಾಣಿ ಕೇಂದ್ರ, ಶ್ರೀ ವಿಶ್ವೇಶ್ವರಾಯ ಉದ್ಯಾನವನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಕಡೆ ಬಾಲಭಾರತಿ ಶಾಲೆ, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಮತ್ತೊಂದು ಕಡೆ ಎಂಪಿಎಂ ಕಲ್ಯಾಣ ಮಂಟಪ, ಕಾಗದ ನಗರ ಆಂಗ್ಲ ಶಾಲೆ, ಪೇಪರ್‌ಟೌನ್ ಪ್ರೌಢಶಾಲೆ ಹಾಗು ಸುರಗಿತೋಪು ಪ್ರದೇಶದಿಂದ ಸುತ್ತುವರೆದಿದೆ.
    ನೂತನ ಕಟ್ಟಡವನ್ನು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆ ಅಂಗವಾಗಿ ಕಛೇರಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.

ತಾಲೂಕಿನಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆ : ಕೆರೆಕಟ್ಟೆ, ಹಳ್ಳಕೊಳ್ಳ ಭರ್ತಿ


    ಭದ್ರಾವತಿ ನಗರದಲ್ಲಿ ಕಳೆದ ೫-೬ ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತಗೊಂಡಿದೆ.
    ಭದ್ರಾವತಿ, ಜು. ೨೩: ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ಬೆಳೆ ಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಮುಂದಿನ ೨-೩ ದಿನ ಇದೆ ರೀತಿ ಮಳೆಯಾದಲ್ಲಿ ಜಮೀನುಗಳಲ್ಲಿ ನೀರು ನಿಂತುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಇದರಿಂದ ಬೆಲೆ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
    ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಕಳೆದ ೩ ದಿನಗಳಿಂದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ ಚರಂಡಿಗಳಲ್ಲಿ ಕಸಕಡ್ಡಿಕಟ್ಟಿಕೊಂಡು ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಇದರಿಂದಾಗಿ ವಾಹನ ಸವಾರು ಹಾಗು ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಇದುವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೌರಾಯುಕ್ತ ಕೆ. ಪರಮೇಶ್ ತಿಳಿಸಿದ್ದಾರೆ.
      ಸಹಾಯವಾಣಿ ಕೇಂದ್ರ:
     ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮುನ್ನಚ್ಚರಿಕೆ ಕ್ರಮವಾಗಿ ಹೆಲ್ಪ್ ಡೆಸ್ಕ್ ಸಹಾಯವಾಣಿ ಕೇಂದ್ರ ಆರಂಭಿಸಿದ್ದು, ದೂರವಾಣಿ ಸಂಖ್ಯೆ ೦೮೨೮೨-೨೬೩೪೬೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
    ತುರ್ತು ಸಂದರ್ಭಗಳಲ್ಲಿ ಸಮೀಪದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ತಹಸೀಲ್ದಾರ್ ಮೊ: ೯೯೧೬೨೦೧೧೩೫, ತಹಸೀಲ್ದಾರ್ ಗ್ರೇಡ್-೨ ಮೊ: ೯೬೬೩೭೫೪೧೮೧, ಶಿರಸ್ತೇದಾರ್ ಮೊ: ೭೮೯೨೫೯೫೪೬೫, ಉಪ ತಹಸೀಲ್ದಾರ್ ಕೂಡ್ಲಿಗೆರೆ ಮೊ: ೯೯೦೦೮೦೦೬೪೮, ಉಪ ತಹಸೀಲ್ದಾರ್ ಆನವೇರಿ ಮೊ: ೯೧೧೦೬೪೨೧೪೬, ಉಪ ತಹಸೀಲ್ದಾರ್ ಕಲ್ಲಿಹಾಳ್ ಮತ್ತು ಹೊಳೆಹೊನ್ನೂರು ಮೊ: ೯೪೪೯೬೮೬೪೭೪, ರಾಜಸ್ವ ನಿರೀಕ್ಷಕರು ಕಸಬಾ ಹೋಬಳಿ ಮೊ: ೯೯೮೦೫೫೧೧೪೯, ರಾಜಸ್ವ ನಿರೀಕ್ಷಕರು ಕೂಡ್ಲಿಗೆರೆ ಹೋಬಳಿ ಮೊ: ೭೮೧೩೦೪೩೨೪೧, ರಾಜಸ್ವ ನಿರೀಕ್ಷಕರು ಹೊಳೆಹೊನ್ನೂರು ಹೋಬಳಿ ಮೊ: ೯೯೪೫೫೭೫೩೩೦ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಕಾವೇರಿಯಂತೆ ವಿಸ್ತಾರಗೊಳ್ಳುತ್ತಿದ್ದಾಳೆ ಭದ್ರೆ : ಶೀಘದಲ್ಲಿಯೇ ಭರ್ತಿಯಾಗುವ ಮುನ್ಸೂಚನೆ

ಭದ್ರಾ ಜಲಾಶಯ

* ಅನಂತಕುಮಾರ್
     ಭದ್ರಾವತಿ, ಜು. ೨೩: ನಾಡಿನ ಜೀವನದಿ ಕಾವೇರಿಯಂತೆ ಭದ್ರೆ ಸಹ ಬೃಹದಾಗಿ ವಿಸ್ತಾರಗೊಳ್ಳುತ್ತಿದ್ದು, ಇದೀಗ ಮಧ್ಯ ಕರ್ನಾಟಕ ಭಾಗದ  ಜೀವನಾಡಿಯಾಗಿ ಮೈತಳೆದು ನಿಂತಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿದ್ದು, ಇದರಿಂದಾಗಿ ಈ ವ್ಯಾಪ್ತಿಯ ರೈತರು ನೆಮ್ಮದಿ ಕಾಣುವಂತಾಗಿದೆ.  
      ಭದ್ರಾ ಜಲಾಶಯ:
  ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಬೆಟ್ಟಗುಡ್ಡಗಳ ನಡುವೆ ಹರಿಯುವ ಭದ್ರೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಕೂಡಲಿಯಲ್ಲಿ ತುಂಗಾನದಿಯೊಂದಿಗೆ ಸೇರಿ ಮುಂದೆ ಹರಿದು ತುಂಗಾಭದ್ರಾ ಜಲಾಶಯ ಸೇರುತ್ತದೆ. ಈ ನದಿಗೆ ೧೯೬೫ರಲ್ಲಿ ಸುಮಾರು ೪೩ ಕೋಟಿ ರು. ವೆಚ್ಚದಲ್ಲಿ ಪ್ರಸ್ತುತ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ನಿರ್ಮಾಣಗೊಂಡ ಜಲಾಶಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ವರದಾನವಾಗಿದೆ. ಒಟ್ಟು ೧,೬೨,೮೧೮ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
     ಭದ್ರಾ ಜಲಾಶಯ ೧೮೬ ಅಡಿ ಎತ್ತರವಿದ್ದು, ಸುಮಾರು ೭೧ ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ತಂತ್ರಜ್ಞಾನದ ಅತ್ಯಾಧುನಿಕ ಸ್ವಯಂ ಚಾಲಿತ ೪ ಕ್ರೆಸ್ಟ್‌ಗೇಟ್‌ಗಳನ್ನು ಒಳಗೊಂಡಿದೆ.  ಮೇಲ್ಭಾಗದಲ್ಲಿ ಎರಡು ಕಾರುಗಳು ಒಟ್ಟಿಗೆ ಚಲಿಸುವಷ್ಟು ವಿಶಾಲವಾದ ಸ್ಥಳಾವಕಾಶವಿದೆ. ಎಡ-ಬಲ ಎರಡು ಬೃಹತ್ ನಾಲೆಗಳನ್ನು ಒಳಗೊಂಡಿದೆ. ಎಡದಂಡೆ ನಾಲೆ ಮೂಲಕ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕಿನ ಸುಮಾರು ೮,೩೦೦ ಹೆಕ್ಟೇರು ಪ್ರದೇಶಕ್ಕೆ  ಹಾಗೂ ಬಲದಂಡೆ ನಾಲೆ ಮೂಲಕ ತರೀಕೆರೆ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಲಾಶಯದ ನೀರನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಕುಡಿಯುವ ನೀರು, ಕೈಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿದೆ. ಸುಮಾರು ೩೯ ಮೆಗವ್ಯಾಟ್ ವಿದ್ಯುತ್  ಉತ್ಪಾದಿಸಲಾಗುತ್ತಿದೆ. ಕಳೆದ ಹಲವಾರುಗಳಿಂದ ವರ್ಷಗಳಿಂದ ಬಯಲುಸೀಮೆ ಹಾಗೂ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ಭದ್ರಾ ಮೇಲ್ಡಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ.
     ೨೯ ಬಾರಿ ಪೂರ್ಣ ಪ್ರಮಾಣದಲ್ಲಿ ಭರ್ತಿ:  
  ಇದುವರೆಗೂ ಜಲಾಶಯ ಒಟ್ಟು ೨೯ ಬಾರಿ  ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ೧೯೬೯ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣ ತಲುಪಿತ್ತು. ನಂತರ ೧೯೯೦ ರಿಂದ ೯೪ರ ವರೆಗೆ ೫ ಬಾರಿ, ೨೦೦೫ ರಿಂದ ೨೦೧೧ರ ವರೆಗೆ ೬ ಬಾರಿ, ೨೦೧೩ ಮತ್ತು ೨೦೧೪ರಲ್ಲಿ ಹಾಗೂ ೨೦೧೮ ಮತ್ತು ೨೦೧೯ ಹಾಗು ೨೦೨೦ರಲ್ಲಿ ಜಲಾಶಯ ಭರ್ತಿಯಾಗಿದ್ದು, ಹಲವು ಬಾರಿ ೧೭೦ ಅಡಿಗೂ ಅಧಿಕ ನೀರು ಸಂಗ್ರಹವಾದರೂ ಸಹ ಭರ್ತಿಯಾಗಿಲ್ಲ.
     ಹಲವು ವಿಶೇಷತೆಗಳು:
   ದೇಶದಲ್ಲಿ ೨ನೇ ಅತಿ ಎತ್ತರದ ಜಲಾಶಯ ಇದಾಗಿದ್ದು, ೧೮೬ ಅಡಿ ಎತ್ತರ ಹೊಂದಿದೆ. ಜಲಾಶಯದ ನೀರು ಬಿದಿರು ಹಸಿರಿನಿಂದ ಕಂಗೊಳಿಸುವುದು ವಿಶೇಷವಾಗಿದ್ದು, ಜಲಾಶಯದ ವ್ಯಾಪ್ತಿಯನ್ನು ಕಳಲೆ ಔಷಧಿ ಸಸಿಗಳು ಆವರಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಕ್ರಿಮಿಕೀಟಗಳಿಂದ ಮುಕ್ತಿಹೊಂದಿದ ಪರಿಶುದ್ಧ ನೀರು ಇದಾಗಿದೆ. ಭದ್ರಾ ಆಭಯಾರಣ್ಯದಲ್ಲಿ ೧೪೭ ಕಿ.ಮೀ. ವರೆಗೆ, ೫೨ ಕಿ.ಮೀ ಎನ್.ಆರ್ ಪುರದ ವರೆಗೆ, ೭೦ ಕಿ.ಮೀ. ಚಿಕ್ಕಮಗಳೂರುವರೆಗೆ, ೩೨ ಕಿ.ಮೀ. ಮುದ್ದಿನಕೊಪ್ಪದವರೆಗೆ ಜಲಾಶಯದ ನೀರು ವಿಸ್ತರಿಸಿಕೊಂಡಿದೆ. ಭದ್ರಾ ನದಿಗೆ ಯಾವುದೇ ಉಪನದಿಗಳಿಲ್ಲ. ಜಲಾಶಯದಲ್ಲಿ ಅಲ್ಲಲ್ಲಿ ಹಸಿರು ಗುಡ್ಡಗಳಿದ್ದು, ಪ್ರತಿ ವರ್ಷ ಆನೇಕ ಜಾತಿಯ ಪಕ್ಷಿಗಳು ದೇಶ-ವಿದೇಶಗಳಿಂದ ಇಲ್ಲಿಗೆ ವಲಸೆ ಬಂದು ಸುಮಾರು ೫-೬ ತಿಂಗಳುಗಳು ಇದ್ದು, ಪುನಃ ಹಿಂದಿರುಗುತ್ತವೆ. ಈ ಪಕ್ಷಿಗಳ ವೀಕ್ಷಣೆಗಾಗಿಯೇ ಗುಡ್ಡಗಳಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಧಾಮಗಳನ್ನು ನಿರ್ಮಿಸಲಾಗಿದ್ದು, ಅಲ್ಲದೆ ಬೋಟಿಂಗ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಜಲಾಶಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಲಾಗಿದ್ದು, ರಾತ್ರಿ ವೇಳೆ ವೈಭವಯುತವಾಗಿ ಕಂಗೊಳಿಸುತ್ತದೆ. ಒಟ್ಟಾರೆ ಜಲಾಶಯ ಹಲವು ವಿಶೇಷತೆಗಳಿಂದ ಕೂಡಿದೆ.
     ಶೀಘ್ರದಲ್ಲಿಯೇ ಜಲಾಶಯ ಭರ್ತಿ:
   ಕಳೆದ ೫-೬ ದಿನಗಳಿಂದ ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಶುಕ್ರವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ ೧೭೧.೧ ಅಡಿ ತಲುಪಿದ್ದು, ಇದೆ ರೀತಿ ಮಳೆಯಾದಲ್ಲಿ ಜಲಾಶಯ ಶೀಘ್ರದಲ್ಲಿಯೇ ಭರ್ತಿಯಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
    ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದ್ದು, ಕಳೆದ ಬಾರಿ ಇದೆ ಅವಧಿಯಲ್ಲಿ ೧೫೩.೭ ಅಡಿ ತಲುಪಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ೧೮ ಅಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಕಳೆದ ಬಾರಿ ಆಗಸ್ಟ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಮಳೆ ಇದೆ ರೀತಿ ಮುಂದುವರೆದಲ್ಲಿ ಈ ತಿಂಗಳ ಅಂತ್ಯದೊಳಗೆ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

Thursday, July 22, 2021

ಜನರು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಿ : ಮನೋಹರ್

ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೨: ಜನರು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ಆ ಹುದ್ದೆಗೆ ಸಾರ್ಥಕತೆ ಬರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
    ನಗರಸಭೆ ಪೌರಾಯುಕ್ತರಾಗಿ ಸುಮಾರು ೪ ವರ್ಷ ಸೇವೆ ಸಲ್ಲಿಸಿ ಯೋಜನಾ ನಿರ್ದೇಶಕರಾಗಿ ಮುಂಬಡ್ತಿಹೊಂದಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
     ನಗರಸಭೆ ಪೌರಾಯುಕ್ತರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ತೃಪ್ತಿ ನನಗಿದೆ. ನಗರಸಭೆ ೩೫ ವಾರ್ಡ್‌ಗಳಲ್ಲೂ ಜನರು ನನ್ನನ್ನು ಗುರುತಿಸುತ್ತಾರೆ. ಒಬ್ಬ ಅಧಿಕಾರಿಗೆ ಈ ರೀತಿಯ ಜನರ ಮೆಚ್ಚುಗೆ ಇದ್ದರೆ ಅಷ್ಟೆ ಸಾಕು ಬೇರು ಏನು ಬೇಕಾಗಿಲ್ಲ. ಅಧಿಕಾರಿಗಳಿಗೆ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಹಾಗು ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರಬೇಕು. ಅಲ್ಲದೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಬೇಕೆಂದರು.
     ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ಅಧಿಕಾರಿಗಳು, ಪತ್ರಕರ್ತರು ಮಾತನಾಡಿ, ಮನೋಹರ್ ಅವರು ಕೇವಲ ಒಬ್ಬ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿಲ್ಲ. ಬದಲಾಗಿ ಮನೆ ಮಗನಂತೆ ಕರ್ತವ್ಯ ನಿರ್ವಹಿಸಿದರು. ಈ ಹಿನ್ನಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂತಹ ಅಧಿಕಾರಿಯನ್ನು ನಗರಸಭೆ ಇತಿಹಾಸದಲ್ಲಿ ಯಾರು ಕಂಡಿಲ್ಲ. ನಗರದ ಜನ ಎಂದಿಗೂ ಮರೆಯದಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಗಳು ಲಭಿಸುವ ಜೊತೆಗೆ ಜನರ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಹಾರೈಸಿದರು.
     ನಗರಸಭೆ ಲೆಕ್ಕಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸೈಯದ್ ಮೆಹಬೂಬ್ ಆಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕುಡಿಯುವ ನೀರಿನ ಸಮಸ್ಯೆ : ವಿಐಎಲ್‌ಎಲ್ ನಗರಾಡಳಿತದೊಂದಿಗೆ ವಾಗ್ವಾದ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ಭದ್ರಾವತಿ, ಜು. ೨೨: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸುಮಾರು ೨ ಗಂಟೆಗೂ ಹೆಚ್ಚು ಸಮಯ ವಿಐಎಸ್‌ಎಲ್ ನಗರಾಡಳಿತ ಅಧಿಕಾರಿಗಳೊಂದಿಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗು ಮುಖಂಡರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆಯಿತು.
   ವಿಐಎಸ್‌ಎಲ್ ಕಾರ್ಖಾನೆಯ ನಗರಾಡಳಿತ ವ್ಯಾಪ್ತಿಯ ನ್ಯೂಕಾಲೋನಿ, ನ್ಯೂಟೌನ್, ವಿದ್ಯಾಮಂದಿರ, ಜನ್ನಾಪುರ, ಹುತ್ತಾಕಾಲೋನಿ ಸೇರಿದಂತೆ ವಿವಿದೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನಗರಾಡಳಿತ ಇಲಾಖೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಲ್ಲಿ ವಿಫಲವಾಗಿದೆ. ಹಲವು ಬಾರಿ ಈ ಸಂಬಂಧ ನಗರಾಡಳಿತ ಇಲಾಖೆ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಕಾರ್ಖಾನೆಯ ನಗರಾಡಳಿತಾಧಿಕಾರಿ ಹಾಗು ಸಾರ್ವಜನಿಕ ಸಂಪರ್ಕಾಧಿಕಾರಿಗಳು ನೀರು ಪೂರೈಕೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ತಿಳಿಸುವ ಜೊತೆಗೆ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಧ್ಯ ಪ್ರವೇಶಿಸಿ ಸ್ಥಳೀಯವಾಗಿ ಎದುರಾಗಿರುವ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಮರ್ಪಕವಾಗಿ ನೀರು ಪೂರೈಕೆಗೆ ಮುಂದಾಗುವಂತೆ ಸೂಚಿಸಿದರು. ಇದಕ್ಕೆ ಅಧಿಕಾರಿಗಳಿಂದಲೂ ಪೂರಕ ಸ್ಪಂದನೆ ವ್ಯಕ್ತವಾಯಿತು.
     ಈ ಭಾಗದ ವ್ಯಾಪ್ತಿಯ ನಗರಸಭಾ ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್‌ಕುಮಾರ್, ಕಾಂತರಾಜ್, ಮುಖಂಡರಾದ ಎಸ್.ಎಸ್ ಭೈರಪ್ಪ, ಉಮೇಶ್, ದಿಲೀಪ್, ಎನ್. ರಾಮಕೃಷ್ಣ ಹಾಗು ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.