Friday, July 23, 2021

ಜು.೨೪ರಂದು ವಿದ್ಯುತ್‌ಚ್ಛಕ್ತಿ ಸರಬರಾಗಿಗೆ ಮುನ್ನಡಿ ಬರೆದ ನೆಲೆಯಲ್ಲಿ ಬೃಹತ್ ಕಟ್ಟಡ ಲೋಕಾರ್ಪಣೆ

ಭದ್ರಾವತಿ ಜೆಪಿಎಸ್ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡ ಶನಿವಾರ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ.
     ಭದ್ರಾವತಿ, ಜು. ೨೩: ನಗರದಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಗುರುತಿಸಿಕೊಂಡಿರುವ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೫-೬ ದಶಕಗಳ ನಂತರ ಬೃಹತ್ ಕಟ್ಟಡವೊಂದು ತಲೆ ಎತ್ತಿದ್ದು, ಜು.೨೪ರ ಶನಿವಾರ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ.
     ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿಗೆ ಮುನ್ನುಡಿ ಬರೆದ ಸ್ಥಳ ಇದಾಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ(ಕೆಇಬಿ) ಅಂದು ಈ ಸ್ಥಳದಲ್ಲಿ ಜೋಗ್ ಪವರ್ ರೀಸಿವಿಂಗ್ ಸ್ಟೇಷನ್ ಆರಂಭಿಸುವ ಮೂಲಕ ವಿದ್ಯುತ್ ಸರಬರಾಜು ಕಾರ್ಯ ಚಟುವಟಿಕೆ ಕೈಗೊಂಡಿತು. ಈ ಹಿನ್ನಲೆಯಲ್ಲಿ ಇಲ್ಲಿಯೇ ಆಡಳಿತ ಕಛೇರಿ, ಗೋದಾಮು, ನೂರಾರು ಉದ್ಯೋಗಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿತು. ಈ ಭಾಗವನ್ನು ಅಂದಿನಿಂದ ಜೆಪಿಎಸ್ ಕಾಲೋನಿ ಎಂದು ಕರೆಯಲಾಗುತ್ತಿದೆ.
     ಕೆಇಬಿ ನಂತರದ ದಿನಗಳಲ್ಲಿ ಮೆಸ್ಕಾಂ ಘಟಕದಲ್ಲಿ ವಿಲೀನಗೊಂಡಿದ್ದು, ಇದೀಗ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡ ವಿಭಾಗೀಯ ಕಛೇರಿಯಾಗಿದ್ದು, ನೂತನ ಕಟ್ಟಡ ಹಲವು ಸೌಲಭ್ಯಗಳನ್ನು ಹೊಂದಿದೆ. ಈ ಕಟ್ಟಡ ನಿರ್ಮಾಣದಿಂದಾಗಿ ಈ ಭಾಗ ಮತ್ತಷ್ಟು ಮೆರಗು ಪಡೆದುಕೊಂಡಿದೆ.
     ಸಮೀಪದಲ್ಲಿಯೇ ಭದ್ರಾವತಿ ಆಕಾಶವಾಣಿ ಕೇಂದ್ರ, ಶ್ರೀ ವಿಶ್ವೇಶ್ವರಾಯ ಉದ್ಯಾನವನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಕಡೆ ಬಾಲಭಾರತಿ ಶಾಲೆ, ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಮತ್ತೊಂದು ಕಡೆ ಎಂಪಿಎಂ ಕಲ್ಯಾಣ ಮಂಟಪ, ಕಾಗದ ನಗರ ಆಂಗ್ಲ ಶಾಲೆ, ಪೇಪರ್‌ಟೌನ್ ಪ್ರೌಢಶಾಲೆ ಹಾಗು ಸುರಗಿತೋಪು ಪ್ರದೇಶದಿಂದ ಸುತ್ತುವರೆದಿದೆ.
    ನೂತನ ಕಟ್ಟಡವನ್ನು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆ ಅಂಗವಾಗಿ ಕಛೇರಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.

No comments:

Post a Comment