Tuesday, July 27, 2021

ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ : ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ

ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕುಟುಂಬ ಸದಸ್ಯರು ಮಂಗಳವಾರ ಭದ್ರಾವತಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್‌ರವರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
     ಭದ್ರಾವತಿ, ಜು. ೨೭:  ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕುಟುಂಬ ಸದಸ್ಯರು ಮಂಗಳವಾರ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್‌ರವರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ತಾಲೂಕಿನ ಸನ್ಯಾಸಿ ಕೋಡಮಗ್ಗಿ ಹೊಸೂರು ಗ್ರಾಮದ ನಿವಾಸಿ, ಸರ್ವೆ ನಂ. ೭೩, ೭೪ರ ಮಾಲೀಕರಾದ ದಾಕ್ಷಾಯಮ್ಮನವರ ಪರವಾಗಿ ನ್ಯಾಯಾಲಯ ಆದೇಶ ನೀಡಿದ್ದು, ಒತ್ತುವರಿಯಾಗಿರುವ ಜಾಗವನ್ನು ನ್ಯಾಯಾಲಯದ ಆದೇಶದಂತೆ ಆಳತೆ ಮಾಡಿ ತೆರವುಗೊಳಿಸಿಕೊಡುವಲ್ಲಿ ತಹಸೀಲ್ದಾರ್‌ರವರು ಹಿಂದೇಟು ಹಾಕುತ್ತಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
   ಸ್ಥಳೀಯ ಮುಖಂಡ ಸುರೇಶಯ್ಯನವರ ನೇತೃತ್ವದಲ್ಲಿ ಕುಟುಂಬ ಸದಸ್ಯರು ಮಧ್ಯಾಹ್ನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ನಿವೃತ್ತ ಮುಖ್ಯ ಶಿಕ್ಷಕ ಮುನಿಸ್ವಾಮಿ ನಿಧನ

ಮುನಿಸ್ವಾಮಿ
    ಭದ್ರಾವತಿ, ಜು. ೨೭: ನಿವೃತ್ತ ಮುಖ್ಯ ಶಿಕ್ಷಕ, ನಗರದ ಹುಡ್ಕೋ ಕಾಲೋನಿ ನಿವಾಸಿ ಮುನಿಸ್ವಾಮಿ(೮೦) ನಿಧನ ಹೊಂದಿದರು.
    ಓರ್ವ ಪುತ್ರ, ಓರ್ವ ಪುತ್ರಿ ಹಾಗು ಮೊಮ್ಮಕ್ಕಳು ಹೊಂದಿದ್ದರು. ಬೈಪಾಸ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಬುಧವಾರ ಇವರ ಅಂತ್ಯಕ್ರಿಯೆ ನೆರವೇರಲಿದೆ. ಮುನಿಸ್ವಾಮಿಯವರು ನ್ಯೂಟೌನ್ ಲಯನ್ಸ್ ಕ್ಲಬ್ ಮುಂಭಾಗದಲ್ಲಿರುವ ತಮಿಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.

ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಗಳ ಬೌಂಡರಿ ನಿಗದಿಗೆ ಮನವಿ

ಭದ್ರಾವತಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಹಾಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಗಳನ್ನು ಗುರುತಿಸಿ ಬೌಂಡರಿ ನಿಗದಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೨೭: ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಹಾಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಗಳನ್ನು ಗುರುತಿಸಿ ಬೌಂಡರಿ ನಿಗದಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
   ಈಗಾಗಲೇ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳು ಹಾಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೨೦ ಕೆರೆಗಳ ಬೌಂಡರಿ ನಿಗದಿಪಡಿಸುವ ಸಂಬಂಧ ಆದೇಶವಾಗಿರುತ್ತದೆ. ಕೆರೆ ಸಮೀಪದ ರೈತರು  ಸ್ವಇಚ್ಛೆಯಿಂದ ಸರ್ಕಾರದ ಯಾವುದೇ ಅನುದಾನವಿಲ್ಲದೆ ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ನಗರಸಭೆ ಹಾಗು ಗ್ರಾಮ ಪಂಚಾಯಿತಿ ಆಡಳಿತಗಳಿಗೆ ಟ್ರಸ್ಟ್ ಹಾಗು ವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.
ತಾಂತ್ರಿಕ ಕಾರಣಗಳಿಂದಾಗಿ ತಾಲೂಕು ಆಡಳಿತದಿಂದ ನಗರಸಭೆ ಹಾಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಟ್ಟೆಗಳನ್ನು ಅಳತೆ ಮಾಡಿ ಬೌಂಡರಿ ನಿಗದಿಪಡಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಕೆರೆಗಳಂತೆ ಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದಾಗಿ ಅಂತರ್ಜಲ ಹೆಚ್ಚುವ ಜೊತೆಗೆ ಪ್ರಾಣಿ, ಪಕ್ಷಿಗಳಿಗೆ, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.  ಕಾರ್ಯಾಧ್ಯಕ್ಷೆ ರಮಾ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ದೇವಿಕಾ ನಾಗರಾಜ್, ಕಾರ್ಯದರ್ಶಿ ಶೈಲಜಾ ರಾಮಕೃಷ್ಣ ಉಪಸ್ಥಿತರಿದ್ದರು.

ಭಾನುಮತಿ ನಿಧನ

ಭಾನುಮತಿ
     ಭದ್ರಾವತಿ, ಜು. ೨೭: ನಗರದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಅವರ ತಾಯಿ ಭಾನುಮತಿ(೮೫) ನಿಧನ ಹೊಂದಿದರು.
     ಶಿವಮೊಗ್ಗ ವಿನೋಬನಗರದಲ್ಲಿರುವ ಸಹೋದರಿ ನಿವಾಸದಲ್ಲಿ ಸೋಮವಾರ ರಾತ್ರಿ ನಿಧನ ಹೊಂದಿದ್ದು, ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.  ಭಾನುಮತಿ ಅವರಿಗೆ ಪುತ್ರ ಚಂದ್ರಶೇಖರ್ ಹಾಗು ೩ ಪುತ್ರಿಯರು ಮತ್ತು ಅಳಿಯಂದಿರು, ಮೊಮ್ಮಕ್ಕಳು ಇದ್ದರು. ಇವರ ನಿಧನಕ್ಕೆ ಎಂಪಿಎಂ ಕಾರ್ಮಿಕರು, ಬಿಜೆಪಿ ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Monday, July 26, 2021

ಮಾಜಿ ಸೈನಿಕರಿಗೆ ಸೌಲಭ್ಯಗಳು ಸಮರ್ಪಕವಾಗಿ ದೊರೆಯಲಿ : ಟಿ.ವಿ ಪ್ರಕಾಶ್


ಭದ್ರಾವತಿಯಲ್ಲಿ ಸೋಮವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೨೬: ದೇಶ ಸೇವೆಯಲ್ಲಿ ತೊಡಗಿಸಿಕೊಂಡ ಸೈನಿಕರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಹೇಳಿದರು.
    ಅವರು ಸೋಮವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಲವಾರು ಕಾರಣಗಳಿಂದಾಗಿ ಮಾಜಿ ಸೈನಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪುವಲ್ಲಿ ವಿಳಂಬವಾಗುತ್ತಿವೆ. ಸರ್ಕಾರದ ಮಟ್ಟದಲ್ಲಿ ಹಲವಾರು ಬದಲಾವಣೆಗಳಾಗಬೇಕಾಗಿದೆ.  ಈ ನಿಟ್ಟಿನಲ್ಲಿ ಸಂಘಟನೆ ಮೂಲಕ ಹೋರಾಟ ನಡೆಸುವುದು ಅನಿವಾರ್ಯ ಎಂದರು.
    ಕಾರ್ಯಕ್ರಮದಲ್ಲಿ ಹಿರಿಯ ಮಾಜಿ ಸೈನಿಕರನ್ನು ಹಾಗು ಕೊರೋನಾ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಲ್.ಡಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್  ಸೋಮಶೇಖರಯ್ಯ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಕಾಂತರಾಜ್, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
   ಇದಕ್ಕೂ ಮೊದಲು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಮಕ್ಕಳಿಂದ ದೇಶ ಭಕ್ತಿ ಗೀತೆ ಗಾಯನ ನಡೆಯಿತು.

ಭದ್ರಾವತಿಯಲ್ಲಿ ಕೊರೋನಾ ಸೋಂಕಿಗೆ ೨೫೦ ಬಲಿ

ಭದ್ರಾವತಿ, ಜು. ೨೬: ತಾಲೂಕಿನಲ್ಲಿ ಸೋಮವಾರ ೧೨ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೨೫೦ಕ್ಕೆ ತಲುಪಿದೆ.
     ಒಟ್ಟು ೭೫೮ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ೬ ಹಾಗು ಗ್ರಾಮಾಂತರ ವ್ಯಾಪ್ತಿಯಲ್ಲಿ ೬ ಸೇರಿದಂತೆ ಒಟ್ಟು ೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೫ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ೭೫೮೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೭೬೩೩ ಮಂದಿ ಗುಣಮುಖರಾಗಿದ್ದಾರೆ.
    ತಾಲೂಕಿನಲ್ಲಿ ೪೭ ಸಕ್ರಿಯ ಪ್ರಕರಣಗಳು ಬಾಕಿ ಇದ್ದು, ಇದುವರೆಗೂ ಒಟ್ಟು ೨೫೦ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಎಂಪಿಎಂ ಪುನಃ ಆರಂಭಗೊಳ್ಳುವ ನಿರೀಕ್ಷೆ ಹುಸಿ : ಬಿಎಸ್‌ವೈ ರಾಜೀನಾಮೆಯಿಂದ ದಿಗ್ಭ್ರಮೆ


ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
    ಭದ್ರಾವತಿ, ಜು. ೨೬: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ೪ ಬಾರಿ ಮುಖ್ಯಮಂತ್ರಿಯಾದರೂ ಸಹ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಮಾತ್ರ ಅಭಿವೃದ್ಧಿ ಕಾಣಲಿಲ್ಲ. ಕೊನೆಗೂ ಕಾರ್ಮಿಕರ ಬೇಡಿಕೆ ಈಡೇರಲಿಲ್ಲ.
     ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗು ಸರ್ ಮಿರ್ಜಾ ಇಸ್ಮಾಯಿಲ್‌ರವರ ಪರಿಶ್ರಮದ ಫಲವಾಗಿ ೧೯೩೬ರಲ್ಲಿ ಆರಂಭಗೊಂಡ ಕಾರ್ಖಾನೆ ೮ ದಶಕಗಳನ್ನು ಪೂರೈಸಿದೆ. ಕಳೆದ ೬ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿದ್ದು, ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರ್ಖಾನೆಯನ್ನು ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಕಾರ್ಖಾನೆಯನ್ನು ಪುನಃ ಆರಂಭಿಸುವಂತೆ ಒತ್ತಾಯಿಸಿ ಹಲವು ರೀತಿಯ ಹೋರಾಟಗಳು ನಡೆದಿವೆ. ಆದರೆ ಹೋರಾಟಗಳಿಗೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸಿಲ್ಲ.
    ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ.  ಸಾವಿರಾರು ಕೋ. ರು. ವೆಚ್ಚದ ಹಲವಾರು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೆ ರೀತಿ ಸರ್ಕಾರಿ ಸ್ವಾಮ್ಯದಲ್ಲಿ ಅಥವಾ ಖಾಸಗಿ ಸಹಭಾಗಿತ್ವದ ಮೂಲಕ ಎಂಪಿಎಂ ಕಾರ್ಖಾನೆಯನ್ನೂ ಸಹ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದರು. ಆದರೆ ಅವರ ಪ್ರಯತ್ನಕ್ಕೆ ಇದೀಗ ಹಿನ್ನಡೆ ಎದುರಾಗಿದೆ.
    ಒಂದು ಕಾಲದಲ್ಲಿ ಸುಮಾರು ೫,೦೦೦ಕ್ಕೂ ಅಧಿಕ ಕಾಯಂ ಕಾರ್ಮಿಕರು, ೪,೦೦೦ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆಯಲ್ಲಿ ಇದೀಗ ಮಾನವ ಸಂಪನ್ಮೂಲ ಶೂನ್ಯಕ್ಕೆ ಬಂದು ತಲುಪಿದೆ. ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿದಿವೆ. ಸಾವಿರಾರು ವಸತಿ ಗೃಹಗಳು ಪಾಳು ಬಿದ್ದಿವೆ. ನೆಡುತೋಪುಗಳು ಲೂಟಿಯಾಗಿವೆ. ಕಾರ್ಮಿಕ ಕುಟುಂಬಗಳು ಅತಂತ್ರವಾಗಿವೆ. ಕಾರ್ಖಾನೆಯನ್ನು ನಂಬಿಕೊಂಡಿದ್ದ ಕೃಷಿಕರು ಕೃಷಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ. ನಗರದ ಆರ್ಥಿಕ ಬೆಳವಣಿಗೆ ಕುಸಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಪುನಃ ಕಾರ್ಖಾನೆ ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ಜನತೆಗೆ ಯಡಿಯೂರಪ್ಪನವರ ರಾಜೀನಾಮೆ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು.