Thursday, July 29, 2021

ಬದಲಾಗದ ಹಳೇ ವ್ಯವಸ್ಥೆ : ನಾಡಕಛೇರಿಗಾಗಿ ಅಲೆದಾಟ

ಒಂದೆಡೆ ಮೂಲ ಸೌಲಭ್ಯಗಳ ಕೊರತೆ, ಮತ್ತೊಂದೆಡೆ ಸುಮಾರು ೨೦ ಕಿ.ಮೀ ಪ್ರಯಾಣಿಸಬೇಕಾದ ಅನಿವಾರ್ಯ

ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಭದ್ರಾವತಿ ಕೂಡ್ಲಿಗೆರೆ ಹೋಬಳಿ ನಾಡಕಛೇರಿ.

    ಭದ್ರಾವತಿ, ಜು. ೨೯: ಒಂದೆಡೆ ತಾಲೂಕಿನ ಕೂಡ್ಲಿಗೆರೆ ಹೋಬಳಿ ನಾಡಕಛೇರಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಮತ್ತೊಂದೆಡೆ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ನಾಡಕಛೇರಿಗೆ ಸುಮಾರು ೨೦ ಕಿ.ಮೀ ದೂರ ಪ್ರಯಾಣಿಸಬೇಕಾಗಿದೆ.
    ಸುಮಾರು ೪ ರಿಂದ ೫ ದಶಕಗಳ ಹಿಂದಿನ ವ್ಯವಸ್ಥೆಯಂತೆ ಈಗಲೂ ನಾಡಕಛೇರಿ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ತಾಲೂಕಿನ ಕೂಡ್ಲಿಗೆರೆ ಮತ್ತು ಅಂತರಗಂಗೆ ಗ್ರಾಮಗಳು ನಗರದ ಮಧ್ಯ ಭಾಗದಿಂದ ಪರಸ್ಪರ ಸುಮಾರು ೧೦ ಕಿ.ಮೀ ದೂರದಲ್ಲಿವೆ. ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಕೂಡ್ಲಿಗೆರಯಲ್ಲಿರುವ ನಾಡಕಛೇರಿಗಾಗಿ ಸುಮಾರು ೨೦ ಕಿ.ಮೀ ದೂರ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಹಲವಾರು ವರ್ಷಗಳಿಂದ ನಾಡಕಛೇರಿಯನ್ನು ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತೆರೆಯುವಂತೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
     ಈ ಹಿಂದೆ ತಾಲೂಕಿನಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಮತ್ತು ಕೂಡ್ಲಿಗೆರೆ ವಿಧಾನಸಭಾ ಕ್ಷೇತ್ರ ಎರಡು ಕ್ಷೇತ್ರಗಳನ್ನು ರಚಿಸಲಾಗಿತ್ತು. ಈ ಕ್ಷೇತ್ರಗಳಿಗೆ ಅನುಗುಣವಾಗುವಂತೆ ನಾಡಕಛೇರಿಯನ್ನು ಸಹ ತೆರೆಯಲಾಗಿತ್ತು. ಅಂದಿನಿಂದಲೂ ಅಂದಿನಿಂದಲೂ ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳು ಪ್ರತಿಯೊಂದಕ್ಕೂ ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಯನ್ನು ಅವಲಂಬಿಸುವಂತಾಗಿದೆ. ಕಾಲ ಬದಲಾದರೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ.
    ಕೂಡ್ಲಿಗೆರೆ ನಾಡಕಛೇರಿ ೧೧ ಗ್ರಾಮ ಪಂಚಾಯಿತಿ ಮತ್ತು ೧೨೦ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರಸ್ತುತ ಅಂತರಗಂಗೆ ಗ್ರಾಮ ಪಂಚಾಯಿತಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಜನಸಂಖ್ಯೆ ಸಹ ಏರಿಕೆಯಾಗಿದೆ. ಮೂಲ ಸೌಲಭ್ಯಗಳನ್ನು ಸಹ ಹೊಂದಿದೆ. ಇಲ್ಲಿಯೇ ನಾಡಕಛೇರಿ ತೆರೆಯುವುದು ಸೂಕ್ತವಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.
      ಮೂಲಸೌಲಭ್ಯಗಳ ಕೊರತೆ:
     ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಯಲ್ಲಿ ಹಲವು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು, ವಿಕಲಚೇತನರು ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲವಾಗಿದೆ. ಗಾಳಿ, ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲೂ ಸಹ ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಉಳಿದಂತೆ ಪದೇ ಪದೇ ವಿದ್ಯುತ್ ವ್ಯತ್ಯಯ, ಸರ್ವರ್ ಸಮಸ್ಯೆಗಳು ಸಹ ಇದ್ದು, ದಿನವಿಡೀ ಕಾದರೂ ಸಹ ಕೆಲಸವಾಗದೆ ಹಿಂದಿರುಗುವಂತಾಗಿದೆ. ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಸಹ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಸಾಮಾಜಿಕ ಹೋರಾಟಗಾರ ಶಿವಕುಮಾರ್

       ನೂತನ ಮುಖ್ಯಮಂತ್ರಿಗೆ ಮನವಿ :
      ಹಲವಾರು ವರ್ಷಗಳಿಂದ ಪ್ರತಿಯೊಂದು ಕಾರ್ಯಕ್ಕೂ ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಗೆ ತೆರಳಲು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಈಗಲಾದರೂ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಡಕಛೇರಿ ಅಥವಾ ಉಪ ನಾಡಕಛೇರಿಯನ್ನು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಬೇಕೆಂದು ಅಂತರಗಂಗೆಯ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಒತ್ತಾಯಿಸಿದ್ದಾರೆ.
     ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮೂಲಕ ಗುರುವಾರ ಮನವಿ ಸಲ್ಲಿಸಿದ್ದಾರೆ.

ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸಂಘಟನೆ ಅಗತ್ಯ : ಬಿ.ಕೆ ಶ್ರೀನಾಥ್

ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ದೇವಸ್ಥಾನದ ಸಮುದಾಯಭವನದಲ್ಲಿ ಗುರುವಾರ ಬಿಜೆಪಿ ಮಂಡಲ ಸಭೆ ನಡೆಯಿತು.
     ಭದ್ರಾವತಿ, ಜು. ೨೯: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಬಲವಾಗಿದ್ದು, ಮತ್ತಷ್ಟು ಸಂಘಟಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಹೇಳಿದರು.
    ಅವರು ಗುರುವಾರ ಹಳೇನಗರದ ಶ್ರೀ ಕೋಟೆ ಬಸವಣ್ಣ ದೇವಸ್ಥಾನದ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಡಲ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
    ಇತ್ತೀಚೆಗೆ ನಡೆದ ನಗರಸಭೆ ಹಾಗು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ ಪ್ರಬಲ ಪೈಪೋಟಿ ನೀಡಿದ್ದು, ಉತ್ತಮ ಸಾಧನೆ ತೋರಿಸಿದೆ. ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯದಿದ್ದರೂ ಸಹ ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಬಹಳಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಯಾಗಬೇಕೆಂದರು.
    ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಪ್ರಮುಖರಾದ ಆರ್.ಎಸ್ ಶೋಭಾ, ಎಂ.ಎಸ್ ಸುರೇಶಪ್ಪ, ರಮೇಶ್, ಜಿ. ಆನಂದಕುಮಾರ್,  ಯುವ  ಘಟಕದ ಅಧ್ಯಕ್ಷ ವಿಜಯ್, ಕೆ. ಮಂಜಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಅನ್ನಪೂರ್ಣ ಸಾವಂತ್, ಗೌರಮ್ಮ, ಉಮಾವತಿ, ಗಿರೀಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಸ್ವಾಗತಿಸಿದರು. ಹನುಮಂತನಾಯ್ಕ ನಿರೂಪಿಸಿದರು. ಗಾಯಿತ್ರಿ ಪ್ರಾರ್ಥಿಸಿದರು.

Wednesday, July 28, 2021

ವಾಸುಕಿ ನಿಧನ

ವಾಸುಕಿ
ಭದ್ರಾವತಿ, ಜು. ೨೮: ನಗರದ ಜನ್ನಾಪುರ ನಿವಾಸಿ ವಾಸುಕಿ (೭೬) ಬುಧವಾರ ಸಂಜೆ  ನಿಧನ ಹೊಂದಿದರು.
ಪತಿ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಬೆಳಿಗ್ಗೆ ನಡೆಯಲಿದೆ.


ಹೆಚ್ಚಿನ ಶುಲ್ಕ ವಸೂಲಾತಿ ವಿರೋಧಿಸಿ ಎಎಪಿ ಪ್ರತಿಭಟನೆ : ತಹಸೀಲ್ದಾರ್‌ಗೆ ಮನವಿ

ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿ ಹೆಚ್ಚಿನ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬುಧವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಜು. ೨೮: ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಆದೇಶ ಉಲ್ಲಂಘಿಸಿ ಹೆಚ್ಚಿನ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬುಧವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ  ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸರ್ಕಾರಿ ಶಾಲೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸದ ಕಾರಣ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದಾಗಿ ಮಧ್ಯಮ ಹಾಗು ಬಡ ಕುಟುಂಬಗಳು ಸಹ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲೂ ಖಾಸಗಿ ಶಾಲೆಗಳನ್ನು ಅವಲಂಬಿಸುವಂತಾಗಿದೆ. ಪ್ರಸ್ತುತ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಹಾಗು ಶಾಲೆಗಳನ್ನು ಸುಗಮವಾಗಿ ಮುನ್ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಸರ್ಕಾರ ಶೇ.೩೦ರಷ್ಟು ಶುಲ್ಕ ಕಡಿಮೆಗೊಳಿಸಿ ವಸೂಲಾತಿ ಮಾಡುವಂತೆ ಆದೇಶಿಸಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ವಸೂಲಾತಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ತಕ್ಷಣ ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಕರೆದು ಸರ್ಕಾರದ ಆದೇಶದಂತೆ ನಡೆದುಕೊಳ್ಳುವಂತೆ ಸೂಚಿಸಬೇಕೆಂದು ಮನವಿ ಮಾಡಲಾಯಿತು.
    ಪಕ್ಷದ ಪ್ರಮುಖರಾದ ಅಬ್ದುಲ್ ಖದೀರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ಬಿ.ಕೆ ರಮೇಶ್, ಎಚ್. ರವಿಕುಮಾರ್, ಜಾವೇದ್, ನಾಸಿಬಬೇಗಂ, ಬಸವಕುಮಾರ್, ಪರಮೆಶ್ ನಾಯ್ಕ ಮತ್ತು ರೇಷ್ಮೆ ಬಾನು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸರ್ಕಾರಿ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ತಾಲೂಕು ಶಾಖೆಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು.
    ಭದ್ರಾವತಿ, ಜು. ೨೮: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಎ.ಜೆ ರಂಗನಾಥ ಪ್ರಸಾದ್ ಹಾಗು ಕಾರ್ಯದರ್ಶಿಯಾಗಿ ಡಿ.ಎಸ್ ರಾಜಪ್ಪ ಆಯ್ಕೆಯಾಗಿದ್ದಾರೆ.
    ಹಿರಿಯ ಉಪಾಧ್ಯಕ್ಷರಾಗಿ ಎಂ.ಎಸ್ ಬಸವರಾಜ, ಉಪಾಧ್ಯಕ್ಷರಾಗಿ ಆರ್. ಅಶೋಕ್‌ರಾವ್, ಸಿ. ಮಂಜಾನಾಯ್ಕ ಮತ್ತು ರಾಜ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಎಂ. ಪುಟ್ಟಲಿಂಗಮೂರ್ತಿ, ಜೆ. ಕಾಂತರಾಜ್ ಮತ್ತು ಬಿ.ಆರ್ ದಿನೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಆರ್. ಜನಾರ್ಧನ, ಡಿ. ನಾಗರತ್ನ ಮತ್ತು ಎ. ರಂಗನಾಥ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆರ್. ಶಿವಾಜಿರಾವ್ ಮತ್ತು ಕೃಷ್ಣ, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀಕಾಂತ್ ಮತ್ತು ಜಾನ್ ನಿರ್ಮಲ್  ಹಾಗು ಆಂತರಿಕ ಲೆಕ್ಕ ಪರಿಶೋಧಕರಾಗಿ ಎಚ್.ಎಂ ನಾಗರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಖೆಯ ಅಧ್ಯಕ್ಷ ಸಿದ್ದಬಸಪ್ಪ ತಿಳಿಸಿದ್ದಾರೆ.

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬಿ.ಎಸ್ ಮಹೇಶ್‌ಕುಮಾರ್

ಬಿ.ಎಸ್ ಮಹೇಶ್‌ಕುಮಾರ್
    ಭದ್ರಾವತಿ, ಜು. ೨೮: ೨೦೨೧-೨೨ನೇ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ನ್ಯಾಯವಾದಿ ಬಿ.ಎಸ್ ಮಹೇಶ್‌ಕುಮಾರ್ ನೇಮಕಗೊಂಡಿದ್ದಾರೆ.
     ಬಿ.ಎಸ್ ಮಹೇಶ್‌ಕುಮಾರ್ ತಾಲೂಕು ವಕೀಲರ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಡಿ. ಶಂಕರ ಮೂರ್ತಿ ಹಾಗು ಖಜಾಂಚಿಯಾಗಿ ವಿನೋದ್ ಗಿರಿ ನೇಮಕಗೊಂಡಿದ್ದಾರೆ.
    ಲಿಯೋ ಕ್ಲಬ್ ಅಧ್ಯಕ್ಷರಾಗಿ ರಚನಾ ಎಸ್. ಪಟೇಲ್, ಕಾರ್ಯದರ್ಶಿಯಾಗಿ ಆರ್. ಶ್ರೇಷ್ಠ ಮತ್ತು ಖಜಾಂಚಿಯಾಗಿ ವಿ.ಸಿ ಸಮಿತ್ ಆಯ್ಕೆಯಾಗಿದ್ದಾರೆ.

ವಿವಿಧ ವೃತ್ತಿ ತರಗತಿಗಳಿಗೆ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು

     ಭದ್ರಾವತಿ, ಜು. ೨೮: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ವಿವಿಧ ವೃತ್ತಿ ತರಗತಿಗಳ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ಜನಾಂಗದ ವಿದ್ಯಾರ್ಥಿಗಳಿಗೆ  ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ.
      ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳಾದ ಎಂ.ಟೆಕ್, ಬಿ.ಇ, ಎಂ.ಸಿ.ಎ, ಡಿಪ್ಲೋಮಾ, ಐಟಿಐ, ಬಿ.ಎಸ್ಸಿ, ಎ.ಜಿ ಮತ್ತು ಎಂ.ಎಸ್ಸಿ, ಎ.ಜಿ ಮತ್ತು ಮಿಡ್ವೈಡ್ ಟ್ರೈನಿಂಗ್(ಎ.ಎನ್.ಎಂ), ಸರ್ಕಾರಿ ಟೀಚರ್ ಟ್ರೈನಿಂಗ್(ಎನ್.ಟಿ.ಟಿ ಮತ್ತು ಡಿ.ಇಡಿ) ಇತ್ಯಾದಿ ವೃತ್ತಿ ತರಗತಿಗಳ ವ್ಯಾಸಂಗಕ್ಕೆ ಪ್ರವೇಶ ಪಡೆದವರು ಭದ್ರಾವತಿ ತಾಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಸಮುದಾಯ ಭವನ, ಅಪ್ಪರ್ ಹುತ್ತಾ, ಭದ್ರಾವತಿ. ವಿಳಾಸದ ಸಂಘದ ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
     ಇದೆ ರೀತಿ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ವೃತ್ತಿಪರ ಶಿಕ್ಷಣಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗು ಕ್ರೀಡೆ ಹಾಗು ಇನ್ನಿತರ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಮಹಿತಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್ ಕೋರಿದ್ದಾರೆ.