Thursday, July 29, 2021

ಬದಲಾಗದ ಹಳೇ ವ್ಯವಸ್ಥೆ : ನಾಡಕಛೇರಿಗಾಗಿ ಅಲೆದಾಟ

ಒಂದೆಡೆ ಮೂಲ ಸೌಲಭ್ಯಗಳ ಕೊರತೆ, ಮತ್ತೊಂದೆಡೆ ಸುಮಾರು ೨೦ ಕಿ.ಮೀ ಪ್ರಯಾಣಿಸಬೇಕಾದ ಅನಿವಾರ್ಯ

ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಭದ್ರಾವತಿ ಕೂಡ್ಲಿಗೆರೆ ಹೋಬಳಿ ನಾಡಕಛೇರಿ.

    ಭದ್ರಾವತಿ, ಜು. ೨೯: ಒಂದೆಡೆ ತಾಲೂಕಿನ ಕೂಡ್ಲಿಗೆರೆ ಹೋಬಳಿ ನಾಡಕಛೇರಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಮತ್ತೊಂದೆಡೆ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ನಾಡಕಛೇರಿಗೆ ಸುಮಾರು ೨೦ ಕಿ.ಮೀ ದೂರ ಪ್ರಯಾಣಿಸಬೇಕಾಗಿದೆ.
    ಸುಮಾರು ೪ ರಿಂದ ೫ ದಶಕಗಳ ಹಿಂದಿನ ವ್ಯವಸ್ಥೆಯಂತೆ ಈಗಲೂ ನಾಡಕಛೇರಿ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ತಾಲೂಕಿನ ಕೂಡ್ಲಿಗೆರೆ ಮತ್ತು ಅಂತರಗಂಗೆ ಗ್ರಾಮಗಳು ನಗರದ ಮಧ್ಯ ಭಾಗದಿಂದ ಪರಸ್ಪರ ಸುಮಾರು ೧೦ ಕಿ.ಮೀ ದೂರದಲ್ಲಿವೆ. ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಕೂಡ್ಲಿಗೆರಯಲ್ಲಿರುವ ನಾಡಕಛೇರಿಗಾಗಿ ಸುಮಾರು ೨೦ ಕಿ.ಮೀ ದೂರ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಹಲವಾರು ವರ್ಷಗಳಿಂದ ನಾಡಕಛೇರಿಯನ್ನು ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತೆರೆಯುವಂತೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
     ಈ ಹಿಂದೆ ತಾಲೂಕಿನಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಮತ್ತು ಕೂಡ್ಲಿಗೆರೆ ವಿಧಾನಸಭಾ ಕ್ಷೇತ್ರ ಎರಡು ಕ್ಷೇತ್ರಗಳನ್ನು ರಚಿಸಲಾಗಿತ್ತು. ಈ ಕ್ಷೇತ್ರಗಳಿಗೆ ಅನುಗುಣವಾಗುವಂತೆ ನಾಡಕಛೇರಿಯನ್ನು ಸಹ ತೆರೆಯಲಾಗಿತ್ತು. ಅಂದಿನಿಂದಲೂ ಅಂದಿನಿಂದಲೂ ಅಂತರಗಂಗೆ ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳು ಪ್ರತಿಯೊಂದಕ್ಕೂ ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಯನ್ನು ಅವಲಂಬಿಸುವಂತಾಗಿದೆ. ಕಾಲ ಬದಲಾದರೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ.
    ಕೂಡ್ಲಿಗೆರೆ ನಾಡಕಛೇರಿ ೧೧ ಗ್ರಾಮ ಪಂಚಾಯಿತಿ ಮತ್ತು ೧೨೦ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರಸ್ತುತ ಅಂತರಗಂಗೆ ಗ್ರಾಮ ಪಂಚಾಯಿತಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಜನಸಂಖ್ಯೆ ಸಹ ಏರಿಕೆಯಾಗಿದೆ. ಮೂಲ ಸೌಲಭ್ಯಗಳನ್ನು ಸಹ ಹೊಂದಿದೆ. ಇಲ್ಲಿಯೇ ನಾಡಕಛೇರಿ ತೆರೆಯುವುದು ಸೂಕ್ತವಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.
      ಮೂಲಸೌಲಭ್ಯಗಳ ಕೊರತೆ:
     ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಯಲ್ಲಿ ಹಲವು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು, ವಿಕಲಚೇತನರು ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲವಾಗಿದೆ. ಗಾಳಿ, ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲೂ ಸಹ ಯಾವುದೇ ವ್ಯವಸ್ಥೆ ಇಲ್ಲವಾಗಿದೆ. ಉಳಿದಂತೆ ಪದೇ ಪದೇ ವಿದ್ಯುತ್ ವ್ಯತ್ಯಯ, ಸರ್ವರ್ ಸಮಸ್ಯೆಗಳು ಸಹ ಇದ್ದು, ದಿನವಿಡೀ ಕಾದರೂ ಸಹ ಕೆಲಸವಾಗದೆ ಹಿಂದಿರುಗುವಂತಾಗಿದೆ. ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಸಹ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಸಾಮಾಜಿಕ ಹೋರಾಟಗಾರ ಶಿವಕುಮಾರ್

       ನೂತನ ಮುಖ್ಯಮಂತ್ರಿಗೆ ಮನವಿ :
      ಹಲವಾರು ವರ್ಷಗಳಿಂದ ಪ್ರತಿಯೊಂದು ಕಾರ್ಯಕ್ಕೂ ಕೂಡ್ಲಿಗೆರೆಯಲ್ಲಿರುವ ನಾಡಕಛೇರಿಗೆ ತೆರಳಲು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಈಗಲಾದರೂ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಡಕಛೇರಿ ಅಥವಾ ಉಪ ನಾಡಕಛೇರಿಯನ್ನು ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆಯಬೇಕೆಂದು ಅಂತರಗಂಗೆಯ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಒತ್ತಾಯಿಸಿದ್ದಾರೆ.
     ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮೂಲಕ ಗುರುವಾರ ಮನವಿ ಸಲ್ಲಿಸಿದ್ದಾರೆ.

No comments:

Post a Comment