ಭದ್ರಾವತಿ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಭಾನುವಾರ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೧: ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಲಭಿಸುವಂತಾಗಬೇಕೆಂದು ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಹೇಳಿದರು.
ಅವರು ಭಾನುವಾರ ತಾಲೂಕಿನ ಮಾವಿನಕೆರೆ ಕಾಲೋನಿಯ ಸಮುದಾಯ ಭವನದಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಅಸಂಘಟಿತ ಕಾರ್ಮಿಕರು ಗುರುತಿಸುವ ವಿಧಾನಗಳು ಬದಲಾಗಿದೆ. ಯಾರು ಕಟ್ಟಡ ಕಾರ್ಮಿಕರು ಎಂಬುದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕಟ್ಟಡ ಕಾರ್ಮಿಕರ ವ್ಯಾಪ್ತಿಯಲ್ಲಿ ಇನ್ನಿತರ ಅಸಂಘಟಿತ ಕಾರ್ಮಿಕರನ್ನು ಸಹ ಸೇರ್ಪಡೆಗೊಳಿಸಿರುವ ಕಾರಣ ಅರ್ಹ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಶ್ರಮಜೀವಿಗಳಾದ ಕಟ್ಟಡ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಅವಶ್ಯಕವಾಗಿದೆ. ಸಂಘಟನೆ ಹೆಚ್ಚು ಬಲಗೊಂಡಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಘಟನೆಯೊಂದಿಗೆ ಕೈಜೋಡಿಸಬೇಕೆಂದರು.
ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಶ್ರೀಧರ ಶೆಟ್ಟಿ, ಸದಸ್ಯ ಎಂ.ಆರ್ ಅಭಿನಂದನ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾರ್ಯಾಧ್ಯಕ್ಷ ಅಭಿಲಾಷ್, ಉಪಾಧ್ಯಕ್ಷ ನಾಗೇಂದ್ರ ರೆಡ್ಡಿ, ಖಜಾಂಚಿ ಕೃಷ್ಣ, ನಿರ್ದೇಶಕ ಅಂತೋಣಿ ಕ್ರೂಸ್, ಗೌರವ ಸಲಹೆಗಾರ ಶಿವಣ್ಣಗೌಡ, ಮಹಿಳಾ ಘಟಕದ ಮುಖ್ಯಸ್ಥೆ ಭಾಗ್ಯಮ್ಮ, ಭಾರತೀಯ ಮಜ್ದೂರ್ ಸಂಘದ ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.