ಆ.೩ರಂದು ಶಾಸಕರಿಂದ ಬಾಗಿನ ಸಮರ್ಪಣೆ, ಗಂಗಾಪೂಜೆ
ಭದ್ರಾ ನದಿ ಜಲಾಶಯ
* ಅನಂತಕುಮಾರ್
ಭದ್ರಾವತಿ: ತಾಲೂಕಿನ ಜೀವನದಿ ಭದ್ರಾನದಿ ಈ ಬಾರಿ ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಅದರಲ್ಲೂ ವಿಶೇಷತೆ ಎಂದರೆ ಬಹುಬೇಗನೆ ಭರ್ತಿಯಾಗಿರುವುದು. ಈ ಬಾರಿ ಮತ್ತೊಂದು ವಿಶೇಷತೆ ಎಂದರೆ ಇತಿಹಾಸದ ಗರ್ಭದಲ್ಲಿ ಅಡಗಿರುವ ಭದ್ರೆಯ ಭವ್ಯ ಪರಂಪರೆ ಅನಾವರಣಗೊಳ್ಳಲಿದೆ.
ರಂಗದಾಸೋಹಿ, ಶಿಲ್ಪ ಕಲಾವಿದ ದಿವಂಗತ ಎಸ್.ಜಿ ಶಂಕರಮೂರ್ತಿ ಅವರ ಪರಿಶ್ರಮ ಇದೀಗ ಸಾರ್ಥಕಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಭದ್ರಾ ನದಿಯ ಪೌರಾಣಿಕ ಇತಿಹಾಸ ಕುರಿತ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಎಸ್.ಜಿ ಶಂಕರಮೂರ್ತಿಯವರು ಅಂದಿನ ನಗರಸಭಾ ಪೌರಾಯುಕ್ತರಾಗಿದ್ದ ಮನೋಹರ್ ಅವರ ಗಮನಕ್ಕೆ ತರುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಭದ್ರೆಯ ಭವ್ಯ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಇದರ ಪರಿಣಾಮ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಆಚಾರ್ಯ ವಿನೋಬಾ ಭಾವೆ ಪಾರ್ಕ್ ಇದೀಗ ನಿರ್ಮಾಣಗೊಂಡಿದೆ. ಈ ಉದ್ಯಾನವನ ಕೆಲವು ವರ್ಷಗಳ ಹಿಂದೆ ನಗರಸಭೆ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಾಡಾಗಿತ್ತು.
ಭದ್ರಾವತಿ ನಗರಸಭೆ ಮುಂಭಾಗದಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡಿರುವ ಆಚಾರ್ಯ ವಿನೋಬ ಭಾವೆ ಪಾರ್ಕ್.
ಭದ್ರೆಯ ಪೌರಾಣಿಕ ಹಿನ್ನಲೆ:
ಕ್ರಿ.ಶ ೧೨೧೬ರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ್ದ ವೀರನರಸಿಂಹ ಭೂಪತೆ (ವಿಷ್ಣುವರ್ಧನ ಹಾಗು ಶಾಂತಲೆಯ ಮರಿ ಮೊಮ್ಮೊಗ) ವೆಂಕಿ ಮಹರ್ಷಿಯವರು ಭದ್ರಾ ನದಿ ದಡದಲ್ಲಿ ತಪ್ಪಸ್ಸು ನಡೆಸಿದ್ದ ಹಿನ್ನಲೆಯಲ್ಲಿ ಅಂದು ವಂಕಿ ತಾಣವಾಗಿದ್ದ ಸ್ಥಳದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ನಿರ್ಮಾಣ ಮಾಡಿ, ೧೨೨೬ನೇ ವ್ಯಯನಾಮ ಸಂವತ್ಸರದಂದು ಲೋಕಾರ್ಪಣೆ ಮಾಡಿ ವಂಕಿಪುರ ಎಂದು ನಾಮಕರಣ ಮಾಡುವ ಮೂಲಕ ಭದ್ರೆಯ ಆರಾಧನೆಗೂ ಮುನ್ನುಡಿ ಬರೆದಿದ್ದನು ಎನ್ನಲಾಗಿದೆ. ಈ ಕುರಿತ ಮಾಹಿತಿ ಪೌರಾಣಿಕ ಇತಿಹಾಸದಲ್ಲಿ ದಾಖಲಾಗಿದೆ ಎಂಬುದು ಊರಿನ ಹಿರಿಯರ ಉಲ್ಲೇಖವಾಗಿದೆ.
ಪಾರ್ಕಿನಲ್ಲಿ ಪ್ರತಿಷ್ಠಾಪಿಸಲಾಗಿರುವ ೮.೫ ಅಡಿ ಎತ್ತರದ ಭದ್ರೆ ವಿಗ್ರಹ
೮.೫ ಅಡಿ ಎತ್ತರದ ಭದ್ರೆ ವಿಗ್ರಹ:
ದೈವ ಸ್ವರೂಪಿಣಿ ಭದ್ರೆಯ ವಿಗ್ರಹದ ಅಡಿಭಾಗದಲ್ಲಿ ವೀರನರಸಿಂಹ ಭೂಪತೆ ಭದ್ರಾಪಾನ ಮಾಡುವ ಸುಂದರ ವಿಗ್ರಹ ಎಸ್.ಜಿ ಶಂಕರಮೂರ್ತಿರವರ ಕಲಾ ಕೌಶಲ್ಯತೆಯಲ್ಲಿ ಆಕರ್ಷಕವಾಗಿ ನಿರ್ಮಾಣಗೊಂಡಿದೆ. ಆದರೆ ಇದೀಗ ಶಂಕರಮೂರ್ತಿ ನಮ್ಮೊಂದಿಗಿಲ್ಲ. ಸುಮಾರು ೮.೫ ಅಡಿ ಎತ್ತರದ ವಿಗ್ರಹವನ್ನು ಶಂಕರಮೂರ್ತಿಯವರ ಶಿಷ್ಯರಾದ ಜಯರಾಂ ಅವರು ಬಣ್ಣದ ಲೇಪನದಿಂದ ಇದೀಗ ಕಂಗೊಳಿಸುವಂತೆ ಮಾಡಿದ್ದು, ಅನಾವರಣಕ್ಕೆ ಎದುರು ನೋಡುತ್ತಿದೆ.
ಅಭಿವೃದ್ದಿ ಕಾಣದ ಹಳೇಯ ಉದ್ಯಾನವನ :
ಈ ಉದ್ಯಾನ ವನ ನಗರಸಭೆಯ ಅತ್ಯಂತ ಹಳೇಯ ಉದ್ಯಾನ ವನವಾಗಿದೆ. ಕಳೆದ ೩-೪ ದಶಕಗಳಿಂದ ಅಭಿವೃದ್ಧಿಕಾಣದೆ ಪಾಳುಬಿದ್ದ ಸ್ಥಳವಾಗಿ ಮಾರ್ಪಾಡಾಗಿತ್ತು. ನಗರಸಭೆಯ ಹಳೇಯ ಗುಜರಿ ವಾಹನಗಳು, ಕಂಟೈನರ್‌ಗಳಿಂದ ತುಂಬಿಕೊಂಡಿದ್ದ ಸ್ಥಳದಲ್ಲಿಯೇ ವಾಹನಗಳನ್ನು ಸಹ ನಿಲುಗಡೆ ಮಾಡಲಾಗುತ್ತಿತ್ತು. ನಗರಸಭೆ ಪೌರಾಯುಕ್ತರಾಗಿ ಮನೋಹರ್ ಅವರು ಬಂದ ನಂತರ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಯಿತು. ಇದೀಗ ಲೋಕಾರ್ಪಣೆಗೆ ಎದುರು ನೋಡುತ್ತಿದೆ.
ಉದ್ಯಾನವನ ಮತ್ತು ವಿಗ್ರಹ ಪ್ರತಿಷ್ಠಾಪನೆಗೆ ಒಟ್ಟು ಸುಮಾರು ೧೫ ಲಕ್ಷ ರು. ವೆಚ್ಚವಾಗಿದೆ. ವಿಗ್ರಹ ಪೂರ್ಣಗೊಂಡ ನಂತರ ಪ್ರತಿಷ್ಠಾಪನೆಗೊಳ್ಳುವ ಮೊದಲೇ ವಿಗ್ರಹದ ಶಿಲ್ಪಿಗಳಾದ ಎಸ್.ಜಿ ಶಂಕರಮೂರ್ತಿಯವರು ವಿಧಿವಶರಾದರು. ಪ್ರತಿಷ್ಠಾಪಿಸುವ ಕಾರ್ಯವನ್ನು ಪೂರ್ಣಗೊಳಿಸಿಕೊಡುವಂತೆ ಅವರ ಶಿಷ್ಯರಾದ ಜಯರಾಂ ಅವರನ್ನು ಕೇಳಿಕೊಂಡಾಗ ಅವರು ಈ ಕಾರ್ಯವನ್ನು ನೇರವೇರಿಸಿದ್ದಾರೆ.
- ಮನೋಹರ್, ಜಿಲ್ಲಾ ಯೋಜನಾ ನಿರ್ದೇಶಕರು, ಚಿಕ್ಕಮಗಳೂರು(ಹಿಂದಿನ ಪೌರಾಯುಕ್ತರು)
ಶಾಸಕ ಬಿ.ಕೆ ಸಂಗಮೇಶ್ವರ್ ಆ.೩ರಂದು ಬಾಗಿನಾ ಸಮರ್ಪಣೆ:
ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆ.೩ರಂದು ಬೆಳಿಗ್ಗೆ ೧೧ ಗಂಟೆಗೆ ಸರ್ವ ಧರ್ಮ ಗುರುಗಳ ನೇತೃತ್ವದಲ್ಲಿ ಬಾಗಿನಾ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಲಿದ್ದಾರೆ.
೩ ಬಾರಿ ಶಾಸಕರಾಗಿರುವ ಸಂಗಮೇಶ್ವರ್ ಪ್ರತಿವರ್ಷ ಬಾಗಿನಾ ಸಮರ್ಪಣೆ ಹಾಗು ಗಂಗಾ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದಾರೆ. ವಿಶೇಷತೆ ಎಂದರೆ ಇವರು ಶಾಸಕರಾದ ಎಲ್ಲಾ ಅವಧಿಯಲ್ಲೂ ಜಲಾಶಯ ಭರ್ತಿಯಾಗಿರುವುದು. ಕಾರ್ಯಕ್ರಮದಲ್ಲಿ ಕ್ಷೇತ್ರದ ಸಾವಿರಾರು ಮಂದಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷತೆಯಾಗಿದೆ.
No comments:
Post a Comment