ಸಾರ್ವಜನಿಕರ ದೂರು, ಎಎಪಿ ಪಕ್ಷದ ಹೋರಾಟಕ್ಕೆ ಸ್ಪಂದನೆ
ಭದ್ರಾವತಿಯಲ್ಲಿ ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿರುವುದು.
ಭದ್ರಾವತಿ, ಆ. ೨೧: ಶಿಕ್ಷಣ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕು, ಸಮಾಜದ ಎಲ್ಲಾ ವರ್ಗದವರಿಗೂ ಸುಲಭವಾಗಿ ಲಭಿಸುವಂತಾಗಬೇಕೆಂಬ ಆಶಯದೊಂದಿಗೆ ಹೋರಾಟ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಈ ನಿಟ್ಟಿನಲ್ಲಿ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದೆ.
ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ನಡೆಸುತ್ತಿರುವ ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಎಎಪಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಕೋವಿಡ್-೧೯ರ ಪರಿಣಾಮ ಸಮಾಜದಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಪ್ರಪಂಚದಾದ್ಯಂತ ಜನರ ಬದುಕು ಅದರಲ್ಲೂ ಬಡ ಹಾಗು ಮಧ್ಯಮ ವರ್ಗದವರ ಬದುಕು ತೀರ ಸಂಕಷ್ಟಕ್ಕೆ ಒಳಗಾಗಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ಹೆಚ್ಚುವರಿ ಹಣ ವಸೂಲಾತಿ ಮಾಡುವ ಮೂಲಕ ಶೋಷಣೆ ನಡೆಸುತ್ತಿವೆ. ಈ ನಡುವೆ ಕೇವಲ ಬೋಧನಾ ಶುಲ್ಕ ಮಾತ್ರ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳಲು ಸರ್ಕಾರವೇ ಆದೇಶಿಸಿದ್ದರೂ ಸಹ ಖಾಸಗಿ ಶಾಲೆಗಳು ವಸೂಲಾತಿಯಲ್ಲಿ ತೊಡಗಿವೆ. ಆನ್‌ಲೈನ್ ತರಗತಿ ನೆಪದಲ್ಲಿ ಹೆಚ್ಚುವರಿ ಹಣ ಪಡೆಯುವುದು. ಬಾಕಿ ಹಣ ಪಾವತಿಸಿದ ನಂತರ ವರ್ಗಾವಣೆ ಪತ್ರ ಕೊಡುವುದಾಗಿ ಬೆದರಿಕೆ ಹಾಕುವುದು ಇತ್ಯಾದಿ ಶೋಷಣೆಗಳು ನಡೆಯುತ್ತಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು. ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗು ತಹಸೀಲ್ದಾರ್ ಅವರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿಗಳು ಸಹ ಸಲ್ಲಿಕೆಯಾಗಿದ್ದವು.
ಈ ನಡುವೆ ಎಎಪಿ ಸಹ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯದೆ ಕೇವಲ ಬೋಧನಾ ಶುಲ್ಕ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.