ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರ ಮುಖಂಡರಿಂದ ಮತಯಾಚನೆ
ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಪರ ಶಾರದ ಅಪ್ಪಾಜಿ, ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರರು ಮತಯಾಚನೆ ನಡೆಸಿದರು.
ಭದ್ರಾವತಿ, ಸೆ. ೧: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಬಹಿರಂಗ ಪ್ರಚಾರ ಬುಧವಾರ ಅಂತ್ಯಗೊಳ್ಳಲಿದ್ದು, ಮಂಗಳವಾರ ರಾತ್ರಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಪರವಾಗಿ ಪಕ್ಷದ ಮುಖಂಡರು ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದರು.
ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚಿನ ಒಲವು ತೋರಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣೆ ಹೆಚ್ಚಿನ ಗಮನ ಸೆಳೆದಿದೆ. ಜೆಡಿಎಸ್ ಸಹ ವಾರ್ಡ್ ಬಿಟ್ಟುಕೊಡುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಹಲವು ರೀತಿಯ ಕಾರ್ಯತಂತ್ರಗಳ ನಡುವೆ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ವಾರ್ಡ್ ಚುನಾವಣೆಯನ್ನು ಸ್ಥಳೀಯ ಜೆಡಿಎಸ್ ವರಿಷ್ಠರಾದ ಶಾರದ ಅಪ್ಪಾಜಿ ಸಹ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಜಿಲ್ಲಾ ಹಾಗು ಸ್ಥಳೀಯ ಮುಖಂಡರನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಜೊತೆಗೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ಶಾರದ ಅಪ್ಪಾಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯರಾದ ಉದಯ್‌ಕುಮಾರ್, ಅಭ್ಯರ್ಥಿ ಆರ್. ನಾಗರತ್ನ, ಮುಖಂಡರಾದ ಅನಿಲ್‌ಕುಮಾರ್, ಕರಿಯಪ್ಪ, ಡಿ.ಟಿ ಶ್ರೀಧರ್, ಬದರಿನಾರಾಯಣ, ಗುಣಶೇಖರ್, ದಿಲೀಪ್, ರಾಮಕೃಷ್ಣ, ಮೈಲಾರಪ್ಪ, ಉಮೇಶ್ ಹಾಗು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ಲೇಗ್ ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.