Wednesday, September 1, 2021

ವರ್ಷ ಕಳೆದರೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ

ಮಾಜಿ ಶಾಸಕ ಎಂ.ಜೆ ಅಪ್ಪಾಜಿ
* ಅನಂತಕುಮಾರ್
    ಭದ್ರಾವತಿ: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿ ಇದೀಗ ಒಂದು ವರ್ಷ ಕಳೆದಿದ್ದು, ಆದರೂ ಸಹ ಜನಮಾನಸದಲ್ಲಿ ಮಾಜಿ ಶಾಸಕ ಎಂ.ಜಿ ಅಪ್ಪಾಜಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಕಳೆದ ವರ್ಷ ಸೆ.೨ರಂದು ನಡುರಾತ್ರಿ ಅಪ್ಪಾಜಿ ಇಹಲೋಕ ತ್ಯಜಿಸುತ್ತಾರೆಂಬ ಕನಸು ಸಹ ಯಾರಿಗೂ ಇರಲಿಲ್ಲ. ಅವರ ನಿಧನದ ಸುದ್ದಿ ಕ್ಷೇತ್ರದ ಜನತೆಯನ್ನು ಒಮ್ಮೆ ತಲ್ಲಣಗೊಳಿಸಿತ್ತು.
    ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು. ನಂತರ ಅವರು ೩ ಬಾರಿ ಶಾಸಕರಾದರು ಸಾಮಾನ್ಯರಂತೆ ಬದುಕಿ ಕ್ಷೇತ್ರದ ಜನರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
    ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ಇಲ್ಲದೆ ೧ ವರ್ಷ ಕಳೆದಿದ್ದು, ಈ ನಡುವೆ ಎದುರಾದ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳನ್ನು ಅಪ್ಪಾಜಿ ಹಿಂಬಾಲಕರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ಹಂತದಲ್ಲಿ ಹಿನ್ನಡೆಯಾಗಿರಬಹುದು. ಆದರೆ ಭವಿಷ್ಯದಲ್ಲಿ ಪೂರ್ಣ ಗುರಿ ಸಾಧಿಸುವ ವಿಶ್ವಾಸ ಹೆಚ್ಚಿಸಿಕೊಂಡಿರುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
    ಅಪ್ಪಾಜಿ ಕುಟುಂಬ ಸಹ ಅಗಲಿಕೆ ನೋವಿನಿಂದ ಹಂತ ಹಂತವಾಗಿ ಹೊರಬರುತ್ತಿದ್ದು, ಅಪ್ಪಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ. ಪ್ರಸ್ತುತ ಅಪ್ಪಾಜಿ ಹಿಂಬಾಲಕರು ಶಾರದ ಅಪ್ಪಾಜಿ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದ್ದು, ಹೊಸ ನಾಯಕನ ಆಯ್ಕೆಗಾಗಿ ಹುಡುಕಾಟ ನಡೆಯುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ಸಹ ಸಮರ್ಥ ನಾಯಕನಿಗಾಗಿ ಎದುರು ನೋಡುತ್ತಿದೆ. ಅಪ್ಪಾಜಿ ಸ್ಥಾನ ತುಂಬುವಂತಹ ನಾಯಕ ಯಾರಾಗಲಿದ್ದಾರೆಂಬುದು ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.  
    ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಸಿದ್ದತೆಗಳನ್ನು ರೂಪಿಸಿಕೊಂಡಿರುವ ಬೆಂಬಲಿಗರಿಗೆ ಅಪ್ಪಾಜಿಯವರ ಒಂದು ವರ್ಷದ ನೆನಪು ಮತ್ತಷ್ಟು ಚೈತನ್ಯವನ್ನುಂಟು ಮಾಡಲಿದೆ ಎನ್ನುವ ವಿಶ್ವಾಸ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಪಾದಯಾತ್ರೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಹ ಅಭ್ಯರ್ಥಿ ಪರವಾಗಿ ವ್ಯಾಪಕ ಪ್ರಚಾರ ನಡೆಸುವ ಜೊತೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿತು.
    ಭದ್ರಾವತಿ, ಸೆ. ೧: ನಗರಸಭೆ ವಾರ್ಡ್ ನಂ.೨೯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಹ ಅಭ್ಯರ್ಥಿ ಪರವಾಗಿ ವ್ಯಾಪಕ ಪ್ರಚಾರ ನಡೆಸುವ ಜೊತೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿತು.
    ಜನ್ನಾಪುರ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪಾದ ಯಾತ್ರೆ ನಂದಿನಿ ವೃತ್ತದ ಮೂಲಕ ವಾರ್ಡ್ ಪ್ರವೇಶಿಸಿ ಅಭ್ಯರ್ಥಿ ರಮಾ ವೆಂಕಟೇಶ್ ಅವರಿಗೆ ಮತ ನೀಡುವಂತೆ ವಿವಿಧೆಡೆ ಮತಯಾಚನೆ ನಡೆಸಲಾಯಿತು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹಾಗು ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಕುಮಾರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯೆ ಶಶಿಕಲಾ, ಅನ್ನಪೂರ್ಣ ಸಾವಂತ್, ಹೇಮಾವತಿ ವಿಶ್ವನಾಥ್, ಸುಲೋಚನಾ ಪ್ರಕಾಶ್, ಮಂಜುಳ, ಶೈಲಜಾ ರಾಮಕೃಷ್ಣ, ಕೆ. ಮಂಜಪ್ಪ, ಎಂ.ಎಸ್ ಸುರೇಶಪ್ಪ, ಧನುಷ್ ಬೋಸ್ಲೆ, ಬಿ.ಎಸ್ ನಾರಾಯಣಪ್ಪ, ಸುಬ್ರಮಣ್ಯ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಶೃತಿ ಮಂಜುನಾಥ್ ಸ್ಮರಣಾರ್ಥ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪಾದಯಾತ್ರೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಯಿತು.
    ಭದ್ರಾವತಿ, ಸೆ. ೧: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಯಿತು.
    ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಹೃದಯಾಘಾತದಿಂದ  ಮೃತಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಸ್ಮರಣಾರ್ಥ ಜನ್ನಾಪುರ ನಂದಿನಿ ವೃತ್ತದಿಂದ ಪಾದಯಾತ್ರೆ ಆರಂಭಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ, ಯುವ ಮುಖಂಡ ಬಿ.ಎಸ್ ಗಣೇಶ್ ನೇತೃತ್ವದಲ್ಲಿ ಆರಂಭವಾದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಲೋಯಿತಾ ನಂಜಪ್ಪ ಅವರಿಗೆ ಮತ ಚಲಾಯಿಸುವಂತೆ ಮತದಾರರಿಗೆ ಕೋರಲಾಯಿತು.
    ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಕಾಂತರಾಜ್, ಚನ್ನಪ್ಪ, ಸಯ್ಯದ್ ರಿಯಾಜ್, ಮುಖಂಡರಾದ ಕೆ. ಮಂಜುನಾಥ್, ಸುನಿಲ್ ಡೊನಾಲ್ಡ್, ಪ್ರವೀಣ್‌ನಾಯಕ್, ಎಸ್. ಮಂಜುನಾಥ್, ಲಕ್ಷ್ಮೀದೇವಿ ಹಾಗು ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಮುಖಂಡರು  ಸೇರಿದಂತೆ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಪರ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪಾದಯಾತ್ರೆ

ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರ ಮುಖಂಡರಿಂದ ಮತಯಾಚನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಪರ ಶಾರದ ಅಪ್ಪಾಜಿ, ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರರು ಮತಯಾಚನೆ ನಡೆಸಿದರು.
    ಭದ್ರಾವತಿ, ಸೆ. ೧: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಬಹಿರಂಗ ಪ್ರಚಾರ ಬುಧವಾರ ಅಂತ್ಯಗೊಳ್ಳಲಿದ್ದು, ಮಂಗಳವಾರ ರಾತ್ರಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಪರವಾಗಿ ಪಕ್ಷದ ಮುಖಂಡರು ವಾರ್ಡ್ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದರು.
    ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚಿನ ಒಲವು ತೋರಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣೆ ಹೆಚ್ಚಿನ ಗಮನ ಸೆಳೆದಿದೆ. ಜೆಡಿಎಸ್ ಸಹ ವಾರ್ಡ್ ಬಿಟ್ಟುಕೊಡುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಹಲವು ರೀತಿಯ ಕಾರ್ಯತಂತ್ರಗಳ ನಡುವೆ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
    ವಾರ್ಡ್ ಚುನಾವಣೆಯನ್ನು ಸ್ಥಳೀಯ ಜೆಡಿಎಸ್ ವರಿಷ್ಠರಾದ ಶಾರದ ಅಪ್ಪಾಜಿ ಸಹ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಜಿಲ್ಲಾ ಹಾಗು ಸ್ಥಳೀಯ ಮುಖಂಡರನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಜೊತೆಗೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
    ಶಾರದ ಅಪ್ಪಾಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯರಾದ ಉದಯ್‌ಕುಮಾರ್, ಅಭ್ಯರ್ಥಿ ಆರ್. ನಾಗರತ್ನ, ಮುಖಂಡರಾದ ಅನಿಲ್‌ಕುಮಾರ್, ಕರಿಯಪ್ಪ, ಡಿ.ಟಿ ಶ್ರೀಧರ್, ಬದರಿನಾರಾಯಣ, ಗುಣಶೇಖರ್, ದಿಲೀಪ್, ರಾಮಕೃಷ್ಣ, ಮೈಲಾರಪ್ಪ, ಉಮೇಶ್ ಹಾಗು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಪ್ಲೇಗ್ ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Tuesday, August 31, 2021

ಅಪ್ಪಾಜಿ ಪುಣ್ಯ ಸ್ಮರಣೆ ಅಂಗವಾಗಿ ಸೆ.೨ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಭದ್ರಾವತಿ, ಆ. ೩೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಸೆ.೨ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರಸಭೆ ವಾರ್ಡ್ ನಂ.೩೧ರ ಜಿಂಕ್‌ಲೈನ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ವಾರ್ಡ್ ನಗರಸಭಾ ಸದಸ್ಯ ಪಲ್ಲವಿ ಎಸ್ ದಿಲೀಪ್ ನೇತೃತ್ವದಲ್ಲಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ತಾಲೂಕು ಸರ್ಕಾರಿ ಆಸ್ಪತ್ರೆ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿದೆ.
    ಚರ್ಮ ವೈದ್ಯರು, ದಂತ ತಜ್ಞರು, ಸರ್ಜನ್, ಕಿವಿ, ಮೂಗು, ಗಂಟಲು, ಮಕ್ಕಳ ತಜ್ಞರು ಮತ್ತು ಕಣ್ಣಿನ ತಜ್ಞರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರೋಗ್ಯ ತಪಾಸಣೆ ಜೊತೆಗೆ ಉಚಿತವಾಗಿ ಇಸಿಜಿ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಸಹನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನಗರಸಭೆ ವಾರ್ಡ್ ನಂ.೨೯ ಚುನಾವಣೆ : ಬಿಜೆಪಿಯಿಂದ ವ್ಯಾಪಕ ಪ್ರಚಾರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿದರು.
       ಭದ್ರಾವತಿ, ಆ. ೩೧: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ಹೆಚ್ಚಾಗಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಪರವಾಗಿ ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿದರು.
    ಬಹಿರಂಗ ಪ್ರಚಾರಕ್ಕೆ ೧ ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನಲೆಯಲ್ಲಿ ವಿವಿಧ ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿಗಳ ಪರವಾರ ಪ್ರಚಾರಕ್ಕೆ ಮುಂದಾಗಿದ್ದಾರೆ.
    ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆರ್.ಎಸ್ ಶೋಭಾ, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಪ್ರಮುಖರಾದ ಸೂಡಾ ಸದಸ್ಯರಾದ ವಿ. ಕದಿರೇಶ್, ರಾಮಲಿಂಗಯ್ಯ, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್‌ಕುಮಾರ್, ಎಂ. ಮಂಜುನಾಥ್, ಶಿವಕುಮಾರ್, ಮಣಿ, ಮಂಜಪ್ಪ, ನಂಜಪ್ಪ, ಹೇಮಾವತಿ ವಿಶ್ವನಾಥ್, ಮಂಜುಳ, ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣದ ಗ್ರಾಮಾಂತರ ಅಧ್ಯಕ್ಷರಾಗಿ ಪ್ರವೀಣ್ ನಾಯಕ್

ಭದ್ರಾವತಿ ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಪ್ರವೀಣ್‌ನಾಯಕ್ ನೇಮಕಗೊಂಡಿದ್ದು, ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ವಿತರಿಸಿದರು.
    ಭದ್ರಾವತಿ, ಆ. ೩೧: ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಪ್ರವೀಣ್‌ನಾಯಕ್ ನೇಮಕಗೊಂಡಿದ್ದಾರೆ.
    ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಎಸ್.ಆರ್ ಸೌಗಂಧಿಕಾ ಅವರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷ ಎನ್.ಡಿ ಪ್ರವೀಣ್‌ಕುಮಾರ್ ನೇಮಕ ಆದೇಶ ಹೊರಡಿಸಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕೆಂದು ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.
    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಆದೇಶ ಪತ್ರವನ್ನು ಪ್ರವೀಣ್‌ನಾಯಕ್ ಅವರಿಗೆ ವಿತರಿಸಿದರು. ಕೆಪಿಸಿಸಿ ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಸದಾಶಿವಮೂರ್ತಿ, ಉಪಾಧ್ಯಕ್ಷ ವಿನೋದ್, ಗ್ರಾಮಾಂತರ ಕಾರ್ಯದರ್ಶಿ ಹೇಮಾ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.