ಮಾಜಿ ಶಾಸಕ ಎಂ.ಜೆ ಅಪ್ಪಾಜಿ
* ಅನಂತಕುಮಾರ್
ಭದ್ರಾವತಿ: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿ ಇದೀಗ ಒಂದು ವರ್ಷ ಕಳೆದಿದ್ದು, ಆದರೂ ಸಹ ಜನಮಾನಸದಲ್ಲಿ ಮಾಜಿ ಶಾಸಕ ಎಂ.ಜಿ ಅಪ್ಪಾಜಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಕಳೆದ ವರ್ಷ ಸೆ.೨ರಂದು ನಡುರಾತ್ರಿ ಅಪ್ಪಾಜಿ ಇಹಲೋಕ ತ್ಯಜಿಸುತ್ತಾರೆಂಬ ಕನಸು ಸಹ ಯಾರಿಗೂ ಇರಲಿಲ್ಲ. ಅವರ ನಿಧನದ ಸುದ್ದಿ ಕ್ಷೇತ್ರದ ಜನತೆಯನ್ನು ಒಮ್ಮೆ ತಲ್ಲಣಗೊಳಿಸಿತ್ತು.
ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡು ಕೊಂಡರು. ನಂತರ ಅವರು ೩ ಬಾರಿ ಶಾಸಕರಾದರು ಸಾಮಾನ್ಯರಂತೆ ಬದುಕಿ ಕ್ಷೇತ್ರದ ಜನರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ಇಲ್ಲದೆ ೧ ವರ್ಷ ಕಳೆದಿದ್ದು, ಈ ನಡುವೆ ಎದುರಾದ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳನ್ನು ಅಪ್ಪಾಜಿ ಹಿಂಬಾಲಕರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿ ಎದುರಿಸಿದ್ದಾರೆ. ಒಂದು ಹಂತದಲ್ಲಿ ಹಿನ್ನಡೆಯಾಗಿರಬಹುದು. ಆದರೆ ಭವಿಷ್ಯದಲ್ಲಿ ಪೂರ್ಣ ಗುರಿ ಸಾಧಿಸುವ ವಿಶ್ವಾಸ ಹೆಚ್ಚಿಸಿಕೊಂಡಿರುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ.
ಅಪ್ಪಾಜಿ ಕುಟುಂಬ ಸಹ ಅಗಲಿಕೆ ನೋವಿನಿಂದ ಹಂತ ಹಂತವಾಗಿ ಹೊರಬರುತ್ತಿದ್ದು, ಅಪ್ಪಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ. ಪ್ರಸ್ತುತ ಅಪ್ಪಾಜಿ ಹಿಂಬಾಲಕರು ಶಾರದ ಅಪ್ಪಾಜಿ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದ್ದು, ಹೊಸ ನಾಯಕನ ಆಯ್ಕೆಗಾಗಿ ಹುಡುಕಾಟ ನಡೆಯುತ್ತಿದೆ. ಈ ನಡುವೆ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ಸಹ ಸಮರ್ಥ ನಾಯಕನಿಗಾಗಿ ಎದುರು ನೋಡುತ್ತಿದೆ. ಅಪ್ಪಾಜಿ ಸ್ಥಾನ ತುಂಬುವಂತಹ ನಾಯಕ ಯಾರಾಗಲಿದ್ದಾರೆಂಬುದು ಇದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಸಿದ್ದತೆಗಳನ್ನು ರೂಪಿಸಿಕೊಂಡಿರುವ ಬೆಂಬಲಿಗರಿಗೆ ಅಪ್ಪಾಜಿಯವರ ಒಂದು ವರ್ಷದ ನೆನಪು ಮತ್ತಷ್ಟು ಚೈತನ್ಯವನ್ನುಂಟು ಮಾಡಲಿದೆ ಎನ್ನುವ ವಿಶ್ವಾಸ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.
ಸೂಪರ್ ಸರ್
ReplyDeleteಧನ್ಯವಾದಗಳು
Delete