ಭದ್ರಾವತಿ ಹುಣಸೇಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ ಮೇರಿ
ಭದ್ರಾವತಿ, ಸೆ. ೪: ಶಿಕ್ಷಕ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನಿತಾ ಮೇರಿ ಸೇರಿದಂತೆ ತಾಲೂಕಿನ ೪ ಶಿಕ್ಷಕರಿಗೆ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೨ ವರ್ಷಗಳಿಂದ ಶಿಕ್ಷಕರ ದಿನಾಚರಣೆ ಸರಳವಾಗಿ ಆಚರಿಸಲಾಗುತ್ತಿದ್ದು, ಈ ನಡುವೆ ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲೆಮರೆ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಅನಿತಾಮೇರಿ, ಆರ್. ಬಸವರಾಜ್, ವಿರೂಪಾಕ್ಷಪ್ಪ ಹಿರೇಮಠ್ ಮತ್ತು ಸುಶೀಲಾ ಮಾರ್ಗರೇಟ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಶಿಕ್ಷಕರ ವರ್ಗಕ್ಕೆ ಸಂತಸವನ್ನುಂಟು ಮಾಡಿದೆ.
ಅನಿತಾ ಮೇರಿ:
ಅನಿತಾ ಮೇರಿ ಅವರು ೧೯೯೮ರಲ್ಲಿ ದೈಹಿಕ ಶಿಕ್ಷಕಿಯಾಗಿ ನೇಮಕಗೊಂಡು ತೀರ್ಥಹಳ್ಳಿ ತಾಲೂಕಿನಲ್ಲಿ ಕರ್ತವ್ಯ ಆರಂಭಿಸಿದ್ದು, ನಂತರ ತಾಲೂಕಿನ ತಡಸ ಸರ್ಕಾರಿ ಉರ್ದು ಶಾಲೆ, ಭದ್ರಾ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ೨ ವರ್ಷ ದೊಣಬಘಟ್ಟ ಸರ್ಕಾರಿ ಕನ್ನಡ ಶಾಲೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಹುಣಸೇಕಟ್ಟೆ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಕೆಲಸಕ್ಕೆ ಸೇರುವ ಮೊದಲು ೧೯೮೭ರಿಂದಲೇ ವಿವಿಧೆಡೆ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಇದೆ ಮೊದಲ ಬಾರಿಗೆ ಶಿಕ್ಷಣ ಇಲಾಖೆ ವತಿಯಿಂದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾಮಟ್ಟದ ಪ್ರಶಸ್ತಿಗೆ ಅನಿತಾ ಮೇರಿ ಭಾಜನರಾಗಿದ್ದಾರೆ.
ಅನಿತಾ ಮೇರಿಯವರು ಸರ್ಕಾರಿ ವೃತ್ತಿಯೊಂದಿಗೆ ಪ್ರಮುಖವಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದು, ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಸ್ವಂತ ಖರ್ಚಿನಲ್ಲಿ ಸುಮಾರು ೪೧೫ ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ವಿವಿಧ ಸಂಘ-ಸಂಸ್ಥೆಗಳು ಮಾತ್ರವಲ್ಲದೆ ವಿವಿಧ ಮಾಧ್ಯಮ ಸಂಸ್ಥೆಗಳು ಸಹ ಹಲವಾರು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ.
ಭದ್ರಾವತಿ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್. ಬಸವರಾಜ್
ಆರ್. ಬಸವರಾಜ್:
ನಗರಸಭೆ ವಾರ್ಡ್ ನಂ.೩೦ರ ವ್ಯಾಪ್ತಿಯಲ್ಲಿರುವ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಸುಮಾರು ೬ ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್. ಬಸವರಾಜ್ ಅವರಿಗೆ ಈ ಬಾರಿ ಪ್ರೌಢ ಶಾಲೆ ವಿಭಾಗದ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿ ಲಭಿಸಿದೆ.
೧೯೯೯ರಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ನೇಮಕಗೊಂಡ ಬಸವರಾಜ್ ಅವರು ರಾಯಚೂರಿನಲ್ಲಿ ಕರ್ತವ್ಯ ಆರಂಭಿಸಿದರು. ನಂತರ ಚಿತ್ರದುರ್ಗದಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ತಾಲೂಕಿನ ಎಡೇಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಹೊಸಸಿದ್ದಾಪುರ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಾಲೆಯ ಬೆಳವಣಿಗೆಯಲ್ಲಿ ಬಸವರಾಜ್ ಅವರು ಹೆಚ್ಚಿನ ಶ್ರಮ ವಹಿಸಿದ್ದು, ತಾಲೂಕಿನಲ್ಲಿ ಮಾದರಿ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದಾರೆ.
ವಿರೂಪಾಕ್ಷಪ್ಪ ಹಿರೇಮಠ :
ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ೪ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ವಿರೂಪಾಕ್ಷಪ್ಪ ಹಿರೇಮಠ ಅವರಿಗೆ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಹಿರೇಮಠ ಅವರು ೧೯೯೨ರಲ್ಲಿ ವೃತ್ತಿಗೆ ಸೇರ್ಪಡೆಗೊಂಡಿದ್ದು, ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಹಿರೇಮಠ್ ಅವರು ರಂಗಕಲಾವಿದರಾಗಿದ್ದು, ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಈ ನಡುವೆ ಕಳೆದ ೨ ವರ್ಷಗಳಿಂದ ಎದುರಾಗಿರುವ ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಕೆ ಕುರಿತು ಜಾಗೃತಿ ಮೂಡಿಸುವಲ್ಲಿ ಗಮನ ಸೆಳೆದಿದ್ದರು.
ಭದ್ರಾವತಿ ಕಲ್ಲಿಹಾಳ್ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಶೀಲಾ ಮಾರ್ಗರೇಟ್
ಸುಶೀಲಾ ಮಾರ್ಗರೇಟ್:
ತಾಲೂಕಿನ ಕಲ್ಲಿಹಾಳ್ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವರ್ಹಿಸುತ್ತಿರುವ ಸುಶೀಲಾ ಮಾರ್ಗರೇಟ್ ಅವರಿಗೆ ಈ ಬಾರಿ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರ ಪ್ರಶಸ್ತಿ ಲಭಿಸಿದೆ.
೧೯೯೪ರಲ್ಲಿ ಚಿಕ್ಕಮಗಳೂರು ಲಕ್ಕವಳ್ಳಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ತಾಲೂಕಿನ ದೊಣಬಘಟ್ಟ, ಭದ್ರಾ ಕಾಲೋನಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಮಕ್ಕಳ ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪರಿಣತಿ ಹೊಂದಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಅಲ್ಲದೆ ಮಕ್ಕಳಿಗೆ ಆಂಗ್ಲ ವಿಷಯ ಕಲಿಕೆಗೆ ಸಂಬಂಧಿಸಿದಂತೆ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆಗೆ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ಇದೀಗ ಪ್ರಶಸ್ತಿಯನ್ನು ನೀಡಿದೆ.