Monday, September 13, 2021

ಸೆ.೧೪ರಂದು ವಿವಿಧೆಡೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ

ಭದ್ರಾವತಿ, ಸೆ. ೧೩: ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶಿವನಿಂದ ಉದಯಿಸಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವ ತಾಲೂಕಿನ ವಿವಿಧೆಡೆ ಸೆ.೧೪ರಂದು ಹಮ್ಮಿಕೊಳ್ಳಲಾಗಿದೆ.
    ಬಿಳಿಕಿ ಹಿರೇಮಠದಲ್ಲಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ದಿನ ಸಾನಿಧ್ಯದಲ್ಲಿ  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಯುವ ಘಟಕ ಹಾಗು ಮಹಿಳಾ ಘಟಕ ಮತ್ತು ಬಿಳಿಕಿ ಗ್ರಾಮಸ್ಥರ ಸಹಯೋಗದೊಂದಿಗೆ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
       ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜಯಂತ್ಯೋತ್ಸವ:
    ಹಳೇನಗರದ ವೀರಶೈವ ಸೇವಾ ಸಮಿತಿ ವತಿಯಿಂದ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೭.೩೦ಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗು ಸ್ವಾಮಿಗೆ ಪ್ರಸಾದ ನೈವೆದ್ಯ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಸೆ.೧೪ರಿಂದ ೬ ದಿನ ವಿದ್ಯುತ್ ನಿಲುಗಡೆ

    ಭದ್ರಾವತಿ, ಸೆ. ೧೩: ಮೆಸ್ಕಾಂ ನಗರ ಉಪವಿಭಾಗ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.೧೪ ರಿಂದ ೧೯ರ ವರೆಗೆ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಮಹಾಲಕ್ಷ್ಮೀ ಲೇಔಟ್, ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರ, ಕನಕ ನಗರ, ಕಾಳಿದಾಸ ಬಡಾವಣೆ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಬಸವೇಶ್ವರ ಸಭಾಭವನ ಸುತ್ತಮುತ್ತ ಮತ್ತು ಬನಶಂಕರಿ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ಸೆ.೧೫ರಂದು ಸರ್‌ಎಂವಿ ಜನ್ಮದಿನ

ಭದ್ರಾವತಿ, ಸೆ. ೧೩: ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಸೆ.೧೫ರಂದು ಬೆಳಿಗ್ಗೆ ೭ ಗಂಟೆಗೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದೆ.
    ವಿಶ್ವದಾದ್ಯಂತ ತಮ್ಮದೇ ಆದ ಕೊಡುಗೆ ನೀಡಿರುವ ಹಾಗು ನಗರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಸ್ಥಾಪನೆಗೆ  ಕಾರಣಕರ್ತರಾಗುವ ಮೂಲಕ ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿರುವ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಈ ಬಾರಿ ಸಂಘದ ವತಿಯಿಂದ ವಿಶೇಷವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೩: : ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಪ್ರಮುಖರು, ದೆಹಲಿಯ ಜಿಲ್ಲಾ  ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ ೨೧ ವರ್ಷ ವಯಸ್ಸಿನ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿ ರಾಬೀಯಾ ಸೈಫಿ ಅವರನ್ನು ಆ.೨೬ರಂದು
    ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆಗೆ ಮ್ಯಾಜಿಸ್ಟ್ರೇಟ್ ಕಛೇರಿಯಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ಆಕೆಯ ಕುಟಂಬಸ್ಥರು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ ಕೇವಲ ಆಕೆಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಯ ಹೇಳಿಕೆ ಮಾತ್ರ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.
    ಈ ಪ್ರಕರಣದಲ್ಲಿ ಅಧಿಕಾರಿಗಳು ಹಾಗು ಪೊಲೀಸರ ನಿರ್ಲಕ್ಷ್ಯತನ ಸರಿಯಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಜೊತೆಗೆ ಈ ರೀತಿಯ ಕೃತ್ಯಗಳು ನಡೆಯಲು ಪ್ರಚೋದನೆ ನೀಡಿದಂತಾಗುತ್ತಿದೆ. ಈಗಾಗಲೇ ದೇಶದಲ್ಲಿ ವಿಶೇಷವಾಗಿ ದೆಹಲಿ ಹಾಗು ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಗೌರವಯುತವಾಗಿ, ಸುರಕ್ಷಿತವಾಗಿ ಬದುಕಲು ಸಾಧ್ಯವಿಲ್ಲ ಎಂಬ ಮನೋಭಾವನೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಿ, ಕೊಲೆಯ ಹಿಂದಿನ ರಹಸ್ಯ ಭೇದಿಸುವಂತೆ ಆಗ್ರಹಿಸಲಾಯಿತು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಎಸ್‌ಡಿಪಿಐ ಶಿವಮೊಗ್ಗ ನಗರ ಅಧ್ಯಕ್ಷ ಇಮ್ರಾನ್, ತಾಲೂಕು ಅಧ್ಯಕ್ಷ ಮಹಮದ್ ತಾಹೀರ್, ಕಾರ್ಯದರ್ಶಿ ಮಹಮದ್ ಗೌಸ್, ದೇವೇಂದ್ರ ಪಾಟೀಲ್, ಅಬ್ದುಲ್ ಮತೀನ್, ಅರ್ಷದ್ ಖುರೇಶ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಸಾದಿಕ್ ಉಲ್ಲಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂಚಾಲಕ ಸುರೇಶ್, ಜಿ. ರಾಜು, ದಲಿತ ಮುಖಂಡ ಚಿನ್ನಯ್ಯ, ಮುತುರ್ಜಾಖಾನ್, ಎಎಪಿ ಪ್ರಮುಖರಾದ ಎಚ್. ರವಿಕುಮಾರ್, ಎ. ಮಸ್ತಾನ್, ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜಾವೀದ್, ಬಾಬಾಜಾನ್, ಕಾಂಗ್ರೆಸ್ ಪಕ್ಷದ ಎಂ. ರವಿಕುಮಾರ್, ಮುರುಳಿ ಕೃಷ್ಣ, ಜಗದೀಶ್, ಜಹೀರ್‌ಜಾನ್,  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.


Sunday, September 12, 2021

ಶಿಕ್ಷಕ ಸಿ. ವೆಂಕಟೇಶ್ ನಿಧನ

ಸಿ. ವೆಂಕಟೇಶ್
ಭದ್ರಾವತಿ, ಸೆ. ೧೨: ತಾಲೂಕಿನ ನವಿಲೆ ಬಸಾಪುರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ಹುತ್ತಾಕಾಲೋನಿ ನಿವಾಸಿ ಸಿ. ವೆಂಕಟೇಶ್(೫೮) ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಕ್ರಾಫ್ಟ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಕಸ್ಟರ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.  

ಸೆ.೧೩ರಂದು ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಭದ್ರಾವತಿ, ಸೆ. ೧೨: ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೆ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿ ಹಮ್ಮಿಕೊಳ್ಳಲಾಗಿದೆ.
    ಕಳೆದ ವಾರ ದೆಹಲಿಯ ಪೊಲೀಸ್ ಅಧಿಕಾರಿ ರಾಬೀಯಾ ಸೈಫಿ ಅವರನ್ನು ಅತ್ಯಾಚಾರ ನಡೆಸಿ ಭೀಕರವಾಗಿ  ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪ್ರತಿಭಟನಾ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಹಮ್ಮಿಕೊಳ್ಳಲಾಗಿದೆ.
    ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ವಿವಿಧ ಸಂಘ-ಸಂಸ್ಥೆಗಳು, ಕಾರ್ಮಿಕರು, ರೈತರು, ವ್ಯಾಪರಸ್ಥರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ  ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನಾಯಿಗಳ ಮಾರಣ ಹೋಮ : ೧೨ ಮಂದಿ ಬಂಧನ

    ಭದ್ರಾವತಿ, ಸೆ. ೧೨: ತಾಲೂಕಿನ ಕಂಬದಾಳ್-ಹೊಸೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಒಟ್ಟು ೧೨ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
    ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಇಬ್ಬರು ಸದಸ್ಯರು ಹಾಗೂ ಓರ್ವ ಕರವಸೂಲಿಗಾರ ಸೇರಿದಂತೆ ೧೨ ಮಂದಿಯನ್ನು ಬಂಧಿಸಲಾಗಿದೆ. ಆರಂಭದಲ್ಲಿಯೇ ಈ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿ ಕೈವಾಡವಿದೆ ಎಂಬ ಅನುಮಾನ ಸ್ಥಳೀಯರಿಂದ ವ್ಯಕ್ತವಾಗಿತ್ತು.
    ಸೆ.೩ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಹಿಡಿದು ನಂತರ ಅವುಗಳನ್ನು ಟಾಟಾ ಏಸ್ ವಾಹನದ ಮೂಲಕ ತಮ್ಮಡಿಹಳ್ಳಿಯ ಎಂಪಿಎಂ ಅರಣ್ಯ ವ್ಯಾಪ್ತಿಯಲ್ಲಿ ಜೆಸಿಬಿ ಬಳಸಿ ಎರಡು ಗುಂಡಿಗಳನ್ನು ತೆಗೆದು ಜೀವಂತವಾಗಿ ಹೂತು ಹಾಕಲಾಗಿತ್ತು. ಈ ವಿಚಾರ ಸ್ಥಳೀಯ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ತಕ್ಷಣ ಗ್ರಾಮಸ್ಥರು ಶಿವಮೊಗ್ಗ ಪ್ರಾಣಿದಯಾ ಸಂಘದವರಿಗೆ ಈ ವಿಚಾರ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪ್ರಾಣಿದಯಾ ಸಂಘದವರು ಹೂತು ಹಾಕಲಾಗಿದ್ದ ನಾಯಿಗಳ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯುವ ಮೂಲಕ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತರಾಗಿದ್ದರು.
    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ೧೨ ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೧೫ ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಉಳಿದ ಮೂವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೈಸೂರಿನಿಂದ ನಾಯಿ ಹಿಡಿಯುವವರನ್ನು ಕರೆಸಿದ್ದಾರೆ ಎನ್ನಲಾಗಿದೆ. ಹಿಡಿದ ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಕೊಲ್ಲಲಾಗಿದೆ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿದ್ದು, ಈ ನಡುವೆ ಹೂತು ಹಾಕಲಾಗಿದ್ದ ಒಂದು ಗುಂಡಿಯಲ್ಲಿನ ಸುಮಾರು ೬೦ ನಾಯಿಗಳ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಪಶುಸಂಗೋಪನೆ ಇಲಾಖೆಯ ವೈದ್ಯರಿಂದ ನಾಯಿಗಳ ಮೃತದೇಹಗಳ ಮರುಣೋತ್ತರ ಪರೀಕ್ಷೆ ನಡೆಸಲಾಗಿದೆ.  ಅಲ್ಲದೆ ಮೃತದೇಹದ ಮಾದರಿಗಳನ್ನು ಸಂಗ್ರಹಿಸಿ (ಮೂಳೆ, ಚರ್ಮ, ಕೂದಲು ಹಾಗೂ ಕಿಡ್ನಿ) ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಪ್ರಕರಣ ಸಂಪೂರ್ಣವಾಗಿ ತೆರೆ ಕಾಣಲಿದೆ.