Tuesday, September 14, 2021

ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ : ಪ್ರತಿ ವರ್ಷ ವೀರಗಾಸೆ ಸ್ಪರ್ಧೆ ಆಯೋಜನೆ

ಅದ್ದೂರಿ ಆಚರಣೆ : ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ವೀರಶ್ಯೆವ ಸೇವಾ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಜರುಗಿತು.
    ಭದ್ರಾವತಿ, ಸೆ. ೧೪: ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ
    ವೀರಗಾಸೆ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹಳೇನಗರ ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ತಿಳಿಸಿದರು.
    ಅವರು ಮಂಗಳವಾರ ಸಮಿತಿ ವತಿಯಿಂದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಅನೇಕ ಮಠಾಧೀಶರು ಹಾಗೂ ವೀರಶ್ಯೆವ ಸಂಘಟನೆಗಳು ಕೈಗೊಂಡಿರುವ ತಿರ್ಮಾನದಂತೆ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಲ್ಲದೆ ತಾಲೂಕು ಮಟ್ಟದಲ್ಲಿ ವೀರಗಾಸೆ ಸ್ಪರ್ಧೆಯನ್ನು ಏರ್ಪಡಿಸಿ ಕಲಾವಿದರನ್ನು  ಪ್ರೋತ್ಸಾಹಿಸಲಾಗುವುದು ಎಂದರು.
    ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
     ಚಿನ್ನಯ್ಯ ಹಿರೇಮಠ, ಶಂಕರಯ್ಯ ಶಾಸ್ತ್ರಿ ಮತ್ತು ಸಿ.ಎಂ ಮಹೇಶ್ವರ ಮೂರ್ತಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು.  ಜಂಗಮ ಸಮಾಜದ ಅಧ್ಯಕ್ಷ ಅಡವೀಶಯ್ಯ, ಜೆ. ಶಿವಕುಮಾರ, ಎಂ. ವಾಗೀಶ್ ಕೋಠಿ, ಚಂದ್ರಶೇಖರ್, ಪಿ.ಹೆಚ್ ಜಗದೀಶ, ಜಿ.ಆರ್ ಸತೀಶ್,  ಅನುಪಮ ಚನ್ನೇಶ್, ವಿ.ಟಿ ನಾಗರತ್ನ, ಆರ್.ಎಸ್ ಶೋಭಾ, ಆರ್.ಎಂ.ಸಿ ಪ್ರಕಾಶ್ ಮತ್ತು ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿ ದಿವಸ್ ವಿರೋಧಿಸಿ ಕರಾವೇ ಪ್ರತಿಭಟನೆ : ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ

ಕರ್ನಾಟಕ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೪:  ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡಬಾರದು. ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಈ ಸಂಬಂಧ ಹಲವಾರು ಬಾರಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಗ್ರಾಹಕರ ಮೇಲೆ ಬಲವಂತಾಗಿ ಹಿಂದಿ ಭಾಷೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಪ್ರಮುಖವಾಗಿ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ವ್ಯವಹಾರ ನಡೆಸಲು ಕನ್ನಡಿಗರನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಕನ್ನಡ ಬಾರದ ಇತರೆ ರಾಜ್ಯಗಳ ಉದ್ಯೋಗಿಗಳನ್ನು ವಾಪಾಸು ಕಳುಹಿಸಬೇಕು. ಬ್ಯಾಂಕಿನ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವಂತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಹಾಗು ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ.೬೦ರಷ್ಟು ಭಾಗ ಕನ್ನಡ ಭಾಷೆಗೆ ಮೀಸಲಿಡಬೇಕೆಂದು ಹಕ್ಕೊತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಅಧ್ಯಕ್ಷ ಎಂ. ಪರಮೇಶ್, ಪ್ರಮುಖರಾದ ವಿಶ್ವನಾಥ್, ರೆಡ್‌ಸನ್ ರಾಜು, ಆರ್. ಪ್ರಾಣೇಶ್, ದಿಲೀಪ್, ರಾಮಕೃಷ್ಣ, ಎಚ್.ಎಂ ಉಮೇಶ್, ಚಂದ್ರಪ್ಪ, ಮುನ್ನ, ಬಾಲು, ಆರ್. ರಂಗನಾಥ್ ಮತ್ತು ಅನಿಲ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Monday, September 13, 2021

ಈ ಬಾರಿ ಅಧಿವೇಶನದಲ್ಲೂ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್

ಸೋಮವಾರದಿಂದ ಆರಂಭಗೊಂಡಿರುವ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನಸೌಧ ಮುತ್ತಿಗೆ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸೌಧದ ಗೇಟ್ ತಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
    ಭದ್ರಾವತಿ, ಸೆ. ೧೩: ಶಾಸಕ ಬಿ.ಕೆ ಸಂಗಮೇಶ್ವರ್ ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಕಂಡು ಬರುತ್ತಿದ್ದು, ಕಳೆದ ವಿಧಾನಸಭೆ ಅಧಿವೇಶನದಲ್ಲಿ ಅಮಾನತುಗೊಂಡು ಸುದ್ದಿಯಾಗಿದ್ದರು.
    ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯ ಖಂಡಿಸಿ ವಿಧಾನಸಭೆ ಅಧಿವೇಶನದಲ್ಲಿಯೇ ಸಭಾಧ್ಯಕ್ಷರ ಎದುರು ಅಂಗಿ ಕಳಚಿ ವಿವಾದಕ್ಕೆ ಒಳಗಾಗುವ ಮೂಲಕ ಕೆಲವು ದಿನಗಳವರೆಗೆ ಅಧಿವೇಶನದಿಂದ ಅಮಾನತುಗೊಂಡಿದ್ದರು. ಈ ಘಟನೆ ರಾಜ್ಯಮಟ್ಟದಲ್ಲಿಯೇ ಸುದ್ದಿಯಾಗುವ ಮೂಲಕ ಗಮನ ಸೆಳೆದಿದ್ದರು.
    ಇದೀಗ ಸೋಮವಾರದಿಂದ ಆರಂಭಗೊಂಡಿರುವ ಅಧಿವೇಶನದಲ್ಲೂ ಗಮನ ಸೆಳೆಯುತ್ತಿದ್ದು, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನಸೌಧ ಮುತ್ತಿಗೆ ಪ್ರತಿಭಟನೆಯಲ್ಲಿ ವಿಧಾನಸೌಧದ ಗೇಟ್ ತಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಸೆ.೧೪ರಂದು ವಿವಿಧೆಡೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ

ಭದ್ರಾವತಿ, ಸೆ. ೧೩: ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶಿವನಿಂದ ಉದಯಿಸಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವ ತಾಲೂಕಿನ ವಿವಿಧೆಡೆ ಸೆ.೧೪ರಂದು ಹಮ್ಮಿಕೊಳ್ಳಲಾಗಿದೆ.
    ಬಿಳಿಕಿ ಹಿರೇಮಠದಲ್ಲಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ದಿನ ಸಾನಿಧ್ಯದಲ್ಲಿ  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಯುವ ಘಟಕ ಹಾಗು ಮಹಿಳಾ ಘಟಕ ಮತ್ತು ಬಿಳಿಕಿ ಗ್ರಾಮಸ್ಥರ ಸಹಯೋಗದೊಂದಿಗೆ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
       ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜಯಂತ್ಯೋತ್ಸವ:
    ಹಳೇನಗರದ ವೀರಶೈವ ಸೇವಾ ಸಮಿತಿ ವತಿಯಿಂದ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೭.೩೦ಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗು ಸ್ವಾಮಿಗೆ ಪ್ರಸಾದ ನೈವೆದ್ಯ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಸೆ.೧೪ರಿಂದ ೬ ದಿನ ವಿದ್ಯುತ್ ನಿಲುಗಡೆ

    ಭದ್ರಾವತಿ, ಸೆ. ೧೩: ಮೆಸ್ಕಾಂ ನಗರ ಉಪವಿಭಾಗ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.೧೪ ರಿಂದ ೧೯ರ ವರೆಗೆ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಮಹಾಲಕ್ಷ್ಮೀ ಲೇಔಟ್, ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರ, ಕನಕ ನಗರ, ಕಾಳಿದಾಸ ಬಡಾವಣೆ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಬಸವೇಶ್ವರ ಸಭಾಭವನ ಸುತ್ತಮುತ್ತ ಮತ್ತು ಬನಶಂಕರಿ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ಸೆ.೧೫ರಂದು ಸರ್‌ಎಂವಿ ಜನ್ಮದಿನ

ಭದ್ರಾವತಿ, ಸೆ. ೧೩: ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಸೆ.೧೫ರಂದು ಬೆಳಿಗ್ಗೆ ೭ ಗಂಟೆಗೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದೆ.
    ವಿಶ್ವದಾದ್ಯಂತ ತಮ್ಮದೇ ಆದ ಕೊಡುಗೆ ನೀಡಿರುವ ಹಾಗು ನಗರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಸ್ಥಾಪನೆಗೆ  ಕಾರಣಕರ್ತರಾಗುವ ಮೂಲಕ ಸಾವಿರಾರು ಕುಟುಂಬಗಳಿಗೆ ಅನ್ನದಾತರಾಗಿರುವ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಈ ಬಾರಿ ಸಂಘದ ವತಿಯಿಂದ ವಿಶೇಷವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೩: : ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಮಾಧವಚಾರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಪ್ರಮುಖರು, ದೆಹಲಿಯ ಜಿಲ್ಲಾ  ಮ್ಯಾಜಿಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ ೨೧ ವರ್ಷ ವಯಸ್ಸಿನ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿ ರಾಬೀಯಾ ಸೈಫಿ ಅವರನ್ನು ಆ.೨೬ರಂದು
    ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆಗೆ ಮ್ಯಾಜಿಸ್ಟ್ರೇಟ್ ಕಛೇರಿಯಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ಆಕೆಯ ಕುಟಂಬಸ್ಥರು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳದೆ ಕೇವಲ ಆಕೆಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಯ ಹೇಳಿಕೆ ಮಾತ್ರ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.
    ಈ ಪ್ರಕರಣದಲ್ಲಿ ಅಧಿಕಾರಿಗಳು ಹಾಗು ಪೊಲೀಸರ ನಿರ್ಲಕ್ಷ್ಯತನ ಸರಿಯಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಜೊತೆಗೆ ಈ ರೀತಿಯ ಕೃತ್ಯಗಳು ನಡೆಯಲು ಪ್ರಚೋದನೆ ನೀಡಿದಂತಾಗುತ್ತಿದೆ. ಈಗಾಗಲೇ ದೇಶದಲ್ಲಿ ವಿಶೇಷವಾಗಿ ದೆಹಲಿ ಹಾಗು ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಗೌರವಯುತವಾಗಿ, ಸುರಕ್ಷಿತವಾಗಿ ಬದುಕಲು ಸಾಧ್ಯವಿಲ್ಲ ಎಂಬ ಮನೋಭಾವನೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಿ, ಕೊಲೆಯ ಹಿಂದಿನ ರಹಸ್ಯ ಭೇದಿಸುವಂತೆ ಆಗ್ರಹಿಸಲಾಯಿತು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಎಸ್‌ಡಿಪಿಐ ಶಿವಮೊಗ್ಗ ನಗರ ಅಧ್ಯಕ್ಷ ಇಮ್ರಾನ್, ತಾಲೂಕು ಅಧ್ಯಕ್ಷ ಮಹಮದ್ ತಾಹೀರ್, ಕಾರ್ಯದರ್ಶಿ ಮಹಮದ್ ಗೌಸ್, ದೇವೇಂದ್ರ ಪಾಟೀಲ್, ಅಬ್ದುಲ್ ಮತೀನ್, ಅರ್ಷದ್ ಖುರೇಶ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಸಾದಿಕ್ ಉಲ್ಲಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂಚಾಲಕ ಸುರೇಶ್, ಜಿ. ರಾಜು, ದಲಿತ ಮುಖಂಡ ಚಿನ್ನಯ್ಯ, ಮುತುರ್ಜಾಖಾನ್, ಎಎಪಿ ಪ್ರಮುಖರಾದ ಎಚ್. ರವಿಕುಮಾರ್, ಎ. ಮಸ್ತಾನ್, ಪರಮೇಶ್ವರಚಾರ್, ಇಬ್ರಾಹಿಂ ಖಾನ್, ಜಾವೀದ್, ಬಾಬಾಜಾನ್, ಕಾಂಗ್ರೆಸ್ ಪಕ್ಷದ ಎಂ. ರವಿಕುಮಾರ್, ಮುರುಳಿ ಕೃಷ್ಣ, ಜಗದೀಶ್, ಜಹೀರ್‌ಜಾನ್,  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ ಸೋಮವಾರ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.