Saturday, September 18, 2021

ಹಿಂದೂ ಮಹಾಸಭಾ ಗಣಪತಿ ಶಾಂತಿಯುತ ವಿಸರ್ಜನೆ

ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಸ್ಥಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು.
    ಭದ್ರಾವತಿ, ಸೆ. ೧೮: ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಸ್ಥಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು.
    ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಿಷೇಧಿಸಿದ ಪರಿಣಾಮ ಸಂಜೆ ೬ ಗಂಟೆಗೆ ಮೂರ್ತಿಯನ್ನು ಪ್ರತಿಷ್ಠಾಪನಾ ಸ್ಥಳದಿಂದ ಮೆರವಣಿಗೆ ಮೂಲಕ ಹೊಸಮನೆ ರಸ್ತೆ, ರಂಗಪ್ಪ ವೃತ್ತ,  ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯಲ್ಲಿ ಸಾಗಿ ಸಂಜೆ ೭  ಗಂಟೆಗೆ ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
    ರಾಜಬೀದಿ ಉತ್ಸವ ಮೆರವಣಿಗೆ ರದ್ದು ಮಾಡಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಂಡಿರಲಿಲ್ಲ. ಆದರೂ ಸಹ ಮುನ್ನಚ್ಚರಿಕೆ ಕ್ರಮವಾಗಿ ಗೃಹ ರಕ್ಷಕ ದಳ, ಎಲ್ಲಾ ಠಾಣೆಗಳ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಈ ನಡುವೆ ರಾಜ ಬೀದಿ ಉತ್ಸವ ಮೆರವಣಿಗೆ ರದ್ದು ಮಾಡಿದ್ದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸುತ್ತಮುತ್ತಲ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಈ ಬಾರಿ ಜಿಲ್ಲಾಡಳಿತ ಕೇವಲ ೫ ದಿನಗಳ ಕಾಲ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಕೊನೆಗೆ ೯ ದಿನಗಳ ಪ್ರತಿಷ್ಠಾಪನೆಗೆ ಸಮ್ಮತಿಸಿತ್ತು.
    ಮೆರವಣಿಗೆ ನೇತೃತ್ವವನ್ನು ಸಮಿತಿ ಅಧ್ಯಕ್ಷ, ಹಿರಿಯ ಮುಖಂಡ ವಿ. ಕದಿರೇಶ್ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.  

ಆಜಾದಿ ಕ ಅಮೃತ್ ಮಹೋತ್ಸವ ಆಚರಣೆ : ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ

ವಿಐಎಸ್‌ಎಲ್ ವತಿಯಿಂದ ಆಯೋಜನೆ : ೧೫ ಶಾಲೆಗಳ ಒಟ್ಟು ೨೭ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿ

'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವತಿಯಿಂದ ಆಂಗ್ಲ ಭಾಷೆಯಲ್ಲಿ ``75 years of India’s Independence – What Does Fredom Mean to Me ?''  ವಿಷಯವಾಗಿ ಭಾಷಣ ಸ್ಪರ್ಧೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ  ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೧೮: 'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವತಿಯಿಂದ ಆಂಗ್ಲ ಭಾಷೆಯಲ್ಲಿ ``75 years of India’s Independence – What Does Fredom Mean to Me ?'' ವಿಷಯವಾಗಿ ಭಾಷಣ ಸ್ಪರ್ಧೆ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ  ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.
    ಸ್ಪರ್ಧೆಯಲ್ಲಿ ೧೫ ಶಾಲೆಗಳ ಒಟ್ಟು ೨೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕ (ಆಪರೇಷನ್) ಕೆ.ಎಸ್. ಸುರೇಶ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಮಹಾ ಪ್ರಬಂಧಕ ಪ್ರಬಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ, ಪ್ರಾಂಶುಪಾಲ ಬಿ.ಎನ್ ಗಿರೀಶ್ ಉಪಸ್ಥಿತರಿದ್ದರು.
    ಇಂಚರ ತಂಡದವರು ಪ್ರಾರ್ಥಿಸಿದರು. ಮಹಾಪ್ರಬಂಧಕ (ಸಿಬ್ಬಂದಿ, ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.
    ಸಮಾಜ ವಿಜ್ಞಾನ ಶಿಕ್ಷಕಿ ಮಮತ, 'ಇಂದಿನ ಜನಾಂಗಕ್ಕೆ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಕಲಿಯಬೇಕಾದ ಪಾಠಗಳು' ಎಂಬ ವಿಷಯದ ಬಗ್ಗೆ ಭಾಷಣ ಮಾಡಿದರು. ವಿಜೇತರಿಗೆ ಬಹುಮಾನದ ರೂಪದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಪುಸ್ತಕಗಳನ್ನು ನೀಡಲಾಗಿದೆ.
        ವಿಜೇತ ವಿದ್ಯಾರ್ಥಿಗಳು:
     ೧. ಯಶಸ್ವಿನಿ ಚಿಕ್ಕಮಠ್, ಎಸ್‌ಎವಿ ಶಾಲೆ(ಪ್ರಥಮ) ೨. ಪತೀಕ್ಷಾ ದಯಾನಂದ್, ಪೂರ್ಣಪ್ರಜ್ಞ ಶಾಲೆ, (ದ್ವಿತೀಯ), ೩. ಎಚ್.ವೈ ಚಂದನ, ಬಿಜಿಎಸ್ ಶಾಲೆ (ತೃತೀಯ), ೪. ಸ್ಪೂರ್ತಿ, ಪಿಟಿಇಎಸ್ ಶಾಲೆ (ತೃತೀಯ), ೫. ಆರ್. ಹೇಮಾಲತಾ, ಶ್ರೀ ಸತ್ಯಸಾಯಿ ಬಾಬಾ ಶಾಲೆ(ಸಮಾಧಾನಕರ), ೬. ನೈಯೋಲ್ ಕ್ವಾಡ್ರಸ್, ಸೇಂಟ್ ಚಾರ್ಲ್ಸ್ ಶಾಲೆ,(ಸಮಾಧಾನಕರ) ಮತ್ತು ೭. ಜಿ. ಯಶಸ್ವಿ, ಸೇಂಟ್ ಚಾರ್ಲ್ಸ್ ಶಾಲೆ(ಸಮಾಧಾನಕರ) ಬಹುಮಾನಗಳನ್ನು ಪಡೆದುಕೊಂಡರು.

Friday, September 17, 2021

ಉಚಿತ ಲಸಿಕಾ ಮಹಾಮೇಳ : ೧೯,೪೬೫ ಮಂದಿಗೆ ಲಸಿಕೆ, ಜಿಲ್ಲೆಯಲ್ಲಿ ೨ನೇ ಸ್ಥಾನ

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ಉಚಿತ ಲಸಿಕಾ ಮಹಾಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
    ಭದ್ರಾವತಿ, ಸೆ. ೧೭: ತಾಲೂಕಿನಾದ್ಯಂತ ಶುಕ್ರವಾರ ನಡೆದ ಉಚಿತ ಲಸಿಕಾ ಮಹಾಮೇಳ ನಿರೀಕ್ಷೆಗೂ ಮೀರಿ ಲಸಿಕೆ ಹಾಕಲಾಗಿದ್ದು, ಜಿಲ್ಲೆಯಲ್ಲಿ ೨ನೇ ಸ್ಥಾನ ಕಾಯ್ದುಕೊಂಡಿದೆ.
    ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಾಗು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ಹಾಕಲಾಯಿತು. ಲಸಿಕಾ ಮಹಾಮೇಳಕ್ಕೆ ಬೆಳಿಗ್ಗೆ ೭ ಗಂಟೆಯಿಂದಲೇ ಚಾಲನೆ ನೀಡಲಾಯಿತು. ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.
      ಲಸಿಕೆ ಪಡೆಯಲು ಜನರು ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡು ಬಂದಿತು. ಈ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಒಟ್ಟು ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಇನ್ನೂ ಹೆಚ್ಚಿನ ಲಸಿಕೆ ಲಭ್ಯವಾದ ಹಿನ್ನಲೆಯಲ್ಲಿ ೧೯,೪೬೫ ಮಂದಿಗೆ ಲಸಿಕೆ ಹಾಕಲಾಯಿತು. ಎಲ್ಲಾ ಲಸಿಕೆ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿಗಳನ್ನು ನಿಯೋಜನೆ ಮಾಡುವ ಮೂಲಕ ತ್ವರಿತಗತಿಯಲ್ಲಿ ನಿರೀಕ್ಷೆಗೂ ಮೀರಿ ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ೨ನೇ ಸ್ಥಾನ ಕಾಯ್ದುಕೊಂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ : ಯುವ ಕಾಂಗ್ರೆಸ್‌ನಿಂದ ನಿರುದ್ಯೋಗ ದಿನ

ಪ್ರಧಾನಿಯಿಂದ ೨ ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆ : ಆಕ್ರೋಶ


ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವಾಗಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ನಗರ ಘಟಕದ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಆಚರಿಸುವ ಮೂಲಕ ವಿಶಿಷ್ಟವಾಗಿ ಹೋರಾಟ ನಡೆಸಲಾಯಿತು.
    ಭದ್ರಾವತಿ, ಸೆ. ೧೭: ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ನೀಡದೆ ವಂಚಿಸಿದ್ದು, ಜೊತೆಗೆ ಯುವಕರಲ್ಲಿ ಕೋಮು ದ್ವೇಷ ಭಾವನೆ ಮೂಡಿಸುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದರು.  
    ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವಸೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
    ನರೇಂದ್ರ ಮೋದಿಯವರು ದೇಶದಲ್ಲಿ ಅಧಿಕಾರಕ್ಕೆ ಬರುವ ಮೊದಲು ಯುವಕರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಕಲ್ಪಿಸಿಕೊಡುವ ಜೊತೆಗೆ ನಿರುದ್ಯೋಗ ನಿರ್ಮೂಲನೆ ಮಾಡುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಈಗಾಗಲೇ ೭ ವರ್ಷಗಳು ಕಳೆದಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟಿಲ್ಲ. ಸುಳ್ಳು ಭರವಸೆಯಿಂದ ಉದ್ಯೋಗವಿಲ್ಲದೆ ಯುವಕರು ವಂಚಿತರಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ದೂರಿದರು.
    ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವುದನ್ನು ಬಿಟ್ಟು ಕೋಮುಭಾವನೆಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೇ.೧೦ರಷ್ಟು ಏರಿಕೆಯಾಗಿದ್ದು, ಜೊತೆಗೆ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿರುವ ಯಾವುದೇ ಯೋಜನೆಗಳನ್ನು ಸಹ ರೂಪಿಸಿಲ್ಲ. ದೇಶದಲ್ಲಿ ಇದರ ವಿರುದ್ಧ ಯಾರು ಸಹ ಪ್ರಶ್ನಿಸುವಂತಿಲ್ಲ. ಹೋರಾಟ ನಡೆಸುವ ಹಾಗು ಪ್ರಶ್ನಿಸುವವರ ಧ್ವನಿ ಅಡಗಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.
    ಯುವ ಕಾಂಗ್ರೆಸ್ ನಗರ ಘಟಕದ ವತಿಯಿಂದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಹೋರಾಟದ ನೇತೃತ್ವ ವಹಿಸಿದ್ದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ಸಂಚಾಲಕ ಬಿ.ಪಿ ರಾಘವೇಂದ್ರ ಸರಾಟೆ, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ತೇಜಸ್‌ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಭರತ್, ನವೀನ್, ಮಧು ಸೂದನ್, ನಂದನ್, ಚೇತನ್, ಕ್ರಿಸ್ಟಿ, ಸಂಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದವತಿಯಿಂದ ರಂಗಪ್ಪ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಆಫ್ತಾಬ್ ಅಹ್ಮದ್ ಹೋರಾಟದ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ಒಬಿಸಿ ವಿಭಾಗದ ನಗರ ಘಟಕದ ಅಧ್ಯಕ್ಷ ಗಂಗಾಧರ್,  ಯುವ ಕಾಂಗ್ರೆಸ್ ಗ್ರಾಮಾಂತರ ಉಪಾಧ್ಯಕ್ಷರಾದ ತಬ್ರೇಶ್ ಖಾನ್, ಅಭಿಷೇಕ್, ಪ್ರಧಾನ ಕಾರ್ಯದರ್ಶಿಗಳಾದ ಆನಂದ, ಅಮೋಸ್, ಲಿಯಾಂಡರ್, ಸಜ್ಜಾದ್, ವರುಣ್, ಶಂಕರ್, ವಸೀಮ, ಹರೀಶ ಮತ್ತು ಜೀಷನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವಾಗಿ ಭದ್ರಾವತಿಯಲ್ಲಿ ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಸಿ.ಎನ್ ರಸ್ತೆ ರಂಗಪ್ಪ ವೃತ್ತದಲ್ಲಿ ಆಚರಿಸುವ ಮೂಲಕ ವಿಶಿಷ್ಟವಾಗಿ ಹೋರಾಟ ನಡೆಸಲಾಯಿತು.

ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯರಾಗಿ ಡಾ. ಕೆ.ಎ ವಿಷ್ಣುಮೂರ್ತಿ ನೇಮಕ

ಡಾ. ಕೆ.ಎ ವಿಷ್ಣುಮೂರ್ತಿ
ಭದ್ರಾವತಿ, ಸೆ. ೧೭: ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎ ವಿಷ್ಣುಮೂರ್ತಿ ಅವರನ್ನು ಕುವೆಂಪು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿದೆ.
    ವಿಷ್ಣುಮೂರ್ತಿ ಅವರು ಪ್ರಸ್ತುತ ವಿಶ್ವವಿದ್ಯಾನಿಲಯದ ಆಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಇಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ವಿಷ್ಣುಮೂರ್ತಿ ಅವರನ್ನು ಅಭಿನಂದಿಸಿದ್ದಾರೆ.  

ಡಾ.ವಿಷ್ಣವರ್ಧನ್ ೭೧ನೇ ಜನ್ಮದಿನ : ನೃತ್ಯ ಸಂಭ್ರಮ, ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

    ಭದ್ರಾವತಿ, ಸೆ. ೧೭: ಡಾ. ವಿಷ್ಣುವರ್ಧನ್‌ರವರ ೭೧ನೇ ಜನ್ಮ ದಿನೋತ್ಸವ ಅಂಗವಾಗಿ ನಗರದ ಅಪೇಕ್ಷ ನೃತ್ಯ ಕಲಾವೃಂದ ಹಾಗು ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣು ಗಾನ ನೃತ್ಯ ಸಂಭ್ರಮ, ವಿಶೇಷ ಸಾಧಕರು ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.೧೮ರಂದು ಮಧ್ಯಾಹ್ನ ೩ ಗಂಟೆಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ ಭಾರತಿಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್ ವಿಷ್ಣುಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಡಾ. ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಕಿಯರ ಪ್ರೌಢಶಾಲೆ ಸಹ ಶಿಕ್ಷಕ ಎಂ. ದಿವಾಕರ್, ಅರಹತೊಳಲು ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಅರಳೆಹಳ್ಳಿ ಅಣ್ಣಪ್ಪ, ಬಿಆರ್‌ಪಿ ಲೇಖಕ ಹೊಸಹಳ್ಳಿ ದಾಳೇಗೌಡ, ಶಿವಮೊಗ್ಗ ರಾಗಿಗುಡ್ಡ ಡಾ. ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ಕ್ರಾಫ್ಟ್ ಶಿಕ್ಷಕಿ ಮೇರಿ ಎಂ. ಡಿಸೋಜ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ದೈಹಿಕ ಶಿಕ್ಷಕ ಬಿ.ಆರ್ ಶ್ರೀಧರ್ ಸಾವಂತ್, ಬಿಆರ್‌ಸಿ ಸಿ. ಚನ್ನಪ್ಪ ಮತ್ತು ಶಿವಮೊಗ್ಗ ಜ್ಯೂನಿಯರ್ ರಾಜ್‌ಕುಮಾರ್ ಎಚ್. ದೇವರಾಜ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ದೈಹಿಕ ಶಿಕ್ಷಕಿ ಅನಿತಾ ಮೇರಿಗೆ ಸನ್ಮಾನ, ಅಭಿನಂದನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ ಮೇರಿ ಅವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಸನ್ಮಾನಿಸಿ ಅಭಿನಂದಿಸಲಾಯಿತು.

    ಭದ್ರಾವತಿ, ಸೆ. ೧೭:  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ ಮೇರಿ ಅವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಸನ್ಮಾನಿಸಿ ಅಭಿನಂದಿಸಲಾಯಿತು.
    ಅನಿತಾ ಮೇರಿ ಅವರು ಈ ಬಾರಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶಾಖೆಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಪ್ರಶಂಸಾನ ಪತ್ರ ನೀಡಿ ಗೌರವಿಸಿದರು.
    ಅನಿತಾ ಮೇರಿ ಅವರಿಗೆ ಶಿಕ್ಷಕ ವೃಂದದವರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. ಅನಿತಾ ಮೇರಿ ಅವರು ಶಿಕ್ಷಕ ವೃತ್ತಿ ಜೊತೆಗೆ ಸಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು, ಇದುವರೆಗೂ ಸುಮಾರು ೪೧೭ ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ನಿವೃತ್ತಿ ಹಂಚಿನಲ್ಲಿರುವ ಇವರು ಇದೀಗ ತಾಯಿ ಮಡಿಲು ಎಂಬ ಸೇವಾ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲು ಮುಂದಾಗಿದ್ದಾರೆ.