Saturday, October 2, 2021

ಕಡಜ ಹುಳುಗಳ ದಾಳಿಗೆ ಇಬ್ಬರು ಬಲಿ

ಕಡಜ ಹುಳುಗಳ ದಾಳಿಯಿಂದ ಮೃತಪಟ್ಟ ಸಿ.ಬಿ ನಂಜಪ್ಪ
    ಭದ್ರಾವತಿ, ಅ. ೨: ಜಮೀನಿಗೆ ಹೋಗಿ ಬರುವಾಗ ಕಡಜದ ಹುಳು ಕಚ್ಚಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಗರಸಭೆ ವ್ಯಾಪ್ತಿಯ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಬಳಿ ನಡೆದಿದೆ.
    ಹೊಸ ಬುಳ್ಳಾಪುರ ನಿವಾಸಿ ಸಿ.ಬಿ ನಂಜಪ್ಪ(೫೦) ಹಾಗು ತರೀಕೆರೆ ಸಿದ್ಲಿಪುರ ಗ್ರಾಮದ ನಿವಾಸಿ ಮಲ್ಲಿಕಾ(೫೫) ಮೃತಪಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಸಿ.ಬಿ ನಂಜಪ್ಪ ಮತ್ತು ಇವರ ಜಮೀನನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಲ್ಲಿಕಾ ಇಬ್ಬರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕಡಜದ ಹುಳುಗಳು ದಾಳಿ ನಡೆಸಿವೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ಸಿ.ಬಿ ನಂಜಪ್ಪ ಅವರು ಬಹಳ ವರ್ಷಗಳಿಂದ ಕಾಗದನಗರದಲ್ಲಿ ಹಿಟ್ಟಿನ ಗಿರಣಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಶನಿವಾರ ಸಂಜೆ ಇವರ ಅಂತ್ಯಸಂಸ್ಕಾರ ನೆರವೇರಿತು.
    ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರ ಕುಟುಂಬ ವರ್ಗದವರು, ಸ್ಥಳೀಯ ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಅಂಧರ ಕೇಂದ್ರದಲ್ಲಿ ಮಹಾತ್ಮ ಗಾಂಧಿ ಜಯಂತಿ, ಪುಣ್ಯಸ್ಮರಣೆ

ಭದ್ರಾವತಿ ನಗರಸಭೆ ಮಾಜಿ ಸದಸ್ಯ, ಕಡದಕಟ್ಟೆ ನಿವಾಸಿ ಜಿ. ಸುರೇಶಯ್ಯ ಅವರ ತಂದೆ ದೊಡ್ಡಘಟ್ಟ ಮಠದ ಕೆ. ಗುರುಮೂರ್ತಯ್ಯನವರ ೩ನೇ ವರ್ಷದ ಪುಣ್ಯಸ್ಮರಣೆ ಹಾಗು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ನಡೆಯಿತು.
    ಭದ್ರಾವತಿ, ಅ. ೨: ನಗರಸಭೆ ಮಾಜಿ ಸದಸ್ಯ, ಕಡದಕಟ್ಟೆ ನಿವಾಸಿ ಜಿ. ಸುರೇಶಯ್ಯ ಅವರ ತಂದೆ ದೊಡ್ಡಘಟ್ಟ ಮಠದ ಕೆ. ಗುರುಮೂರ್ತಯ್ಯನವರ ೩ನೇ ವರ್ಷದ ಪುಣ್ಯಸ್ಮರಣೆ ಹಾಗು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ನಡೆಯಿತು.
    ವಿಕಲಚೇತನರೊಂದಿಗೆ ವಿಶೇಷವಾಗಿ ಪುಣ್ಯಸ್ಮರಣೆ ಆಚರಿಸುವುದರೊಂದಿಗೆ ರಾತ್ರಿ ವೇಳೆ ಚಳಿಯಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಹೊದಿಕೆಗಳನ್ನು ವಿತರಿಸಲಾಯಿತು.
    ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ, ಸೂಡಾ ಸದಸ್ಯ ರಾಮಲಿಂಗಯ್ಯ, ನಿವೃತ್ತ ಮುಖ್ಯ ಶಿಕ್ಷಕ ಮರುಳಯ್ಯ, ನಗರಸಭೆ ಮಾಜಿ ಸದಸ್ಯ ಸುರೇಶಯ್ಯ ಹಾಗು ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಮಳೆಯಿಂದ ಗೋಡೆ ಕುಸಿದು ವೃದ್ದ ಮಹಿಳೆ ನಿಧನ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ವಯೋವೃದ್ದೆ ರತ್ನಮ್ಮ ಮೃತಪಟ್ಟಿರುವುದು.
    ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ವಯೋವೃದ್ದೆಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
    ರತ್ನಮ್ಮ(೬೫) ಮೃತಪಟ್ಟಿದ್ದು, ರಾತ್ರಿ ವೇಳೆ ಗೋಡೆ ಕುಸಿದಿದೆ ಎನ್ನಲಾಗಿದೆ. ಮನೆಯಲ್ಲಿ ರತ್ನಮ್ಮ ಒಬ್ಬರೇ ಇದ್ದಾಗ ಈ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಈ ಘಟನೆ ಯಾರಿಗೂ ತಿಳಿದಿಲ್ಲ. ಬೆಳಿಗ್ಗೆ ಇವರ ಮಗ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.  ಸ್ಥಳಕ್ಕೆ ತಹಸೀಲ್ದಾರ್ ಕಛೇರಿ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಮಾಜಿ ಜಿಪಂ ಸದಸ್ಯ ಎಚ್.ಎಂ. ಷಡಾಕ್ಷರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
    ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.


ಭದ್ರಾವತಿ: ತಾಲೂಕಿನ ಅರಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದಿರುವುದು.

ಶಾರದ ಅಪ್ಪಾಜಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಶನಿವಾರ ಶಾರದ ಅಪ್ಪಾಜಿ ಮಾಲಾರ್ಪಣೆ ಮಾಡುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
    ಭದ್ರಾವತಿ: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಶನಿವಾರ ಗಾಂಧಿ ಜಯಂತಿಯಂದು ನಗರದ ತರೀಕೆರೆ ರಸ್ತೆಯಲ್ಲಿರುವ ಮಾಹತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
    ಸೆ.೨೧ರಂದು ತಾಲೂಕಿನ ಗೋಣಿಬೀಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಇದೆ ವೇದಿಕೆಯಲ್ಲಿ ಮಾತನಾಡಿದ, ಶಾರದ ಅಪ್ಪಾಜಿ ಅ.೨ರ ಗಾಂಧಿ ಜಯಂತಿಯಂದು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಂದಿನ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಮಹಾತ್ಮಗಾಂಧಿ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮುಂದಿನ ರಾಜಕೀಯ ಜೀವನ ಪತಿ ಅಪ್ಪಾಜಿಯವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತೇನೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರು, ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.

Friday, October 1, 2021

ಅ.೨ರಿಂದ ಶಾರದ ಅಪ್ಪಾಜಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ

ಶಾರದ ಅಪ್ಪಾಜಿ
    ಭದ್ರಾವತಿ, ಅ. ೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಅವರು ಅ.೨ರಿಂದ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಕುರಿತು ಈಗಾಗಲೇ ಬಹಿರಂಗವಾಗಿ ಶಾರದ ಅಪ್ಪಾಜಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
    ಸೆ.೨೧ರಂದು ತಾಲೂಕಿನ ಗೋಣಿಬೀಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಇದೆ ವೇದಿಕೆಯಲ್ಲಿ ಮಾತನಾಡಿದ, ಶಾರದ ಅಪ್ಪಾಜಿ ಅ.೨ರ ಗಾಂಧಿ ಜಯಂತಿಯಂದು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಂದಿನ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವುದಾಗಿ ಘೋಷಿಸಿದ್ದರು.
    ಶಾರದ ಅಪ್ಪಾಜಿ ಅವರಿಗೆ ಸಕ್ರಿಯ ರಾಜಕಾರಣ ಹೊಸದಾಗಿದ್ದು, ಈ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು, ಮುಖಂಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಈಗಾಗಲೇ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಹಾಗು ನಗರಸಭೆ ಚುನಾವಣೆಗಳನ್ನು ಎದುರಿಸಲಾಗಿದ್ದು, ಎರಡು ಚುನಾವಣೆಯಲ್ಲೂ ಜೆಡಿಎಸ್ ಸಮಾಧಾನಕರವಾದ ಫಲಿತಾಂಶ ಕಾಯ್ದುಕೊಂಡಿದೆ.
     ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ :
    ಬೆಳಿಗ್ಗೆ ೧೦.೩೦ಕ್ಕೆ ನಗರದ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಶಾರದ ಅಪ್ಪಾಜಿ ಮಾಲಾರ್ಪಣೆ ಮಾಡಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ತಿಳಿಸಿದ್ದಾರೆ.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

   
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು. ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.                    
    ಭದ್ರಾವತಿ, ಅ. ೧: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು.
    ವಿದ್ಯಾ ಸಂಸ್ಥೆಯ ಸಂಸ್ಥಾಪಕ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ  ಬಿ. ಸಿದ್ದಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.  .
    ವಿದ್ಯಾ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ಆರ್. ಬಸವರಾಜಪ್ಪ, ನಿವೃತ್ತ ಶಿಕ್ಷಕರಾದ ಸಾರ ಸರೋಜಾ ಹಾಗೂ ರತ್ನವ್ವ ಚಕ್ರಸಾಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಕಾರ್ಯದರ್ಶಿ ಪುಟ್ಟ ಲಿಂಗಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ಸಹಾಯಕ ಆಡಳಿತಧಿಕಾರಿ, ಶಿವಲಿಂಗೇಗೌಡ ಸೇರಿದಂತೆ        ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಶಿಕ್ಷಕರಾದ ಸಮೀನಾ ಯಾಸ್ಮಿನ್ ನಿರೂಪಿಸಿ, ಕವಿತ ಪ್ರಾರ್ಥಿಸಿದರು. ಸುಹಾಸಿನಿ ಹೆಗಡೆ ಸ್ವಾಗತಿಸಿ, ರೇಣುಕಪ್ಪ ವಂದಿಸಿದರು

ವಿವಿಧ ಬೇಡಿಕೆ ಈಡೇರಿಗಾಗಿ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ


ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರದಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುತ್ತಿದೆ.  
    ಭದ್ರಾವತಿ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರದಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುತ್ತಿದೆ.  
    ದೇಶದಲ್ಲಿ ನೂರಾರು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೊದಲು ಹೋರಾಟಗಳಿಗೆ ಎಲ್ಲರೂ ಗೌರವಿಸಬೇಕು. ಈ ನಿಟ್ಟಿನಲ್ಲಿ ತಾಲೂಕು ಕಛೇರಿ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿರುವ ಸ್ಥಳವನ್ನು ಸಾರ್ವಜನಿಕರು ಸತ್ಯಗ್ರಹ ನಡೆಸಲು ಮೀಸಲಿಡುವಂತೆ ಒತ್ತಾಯಿಸಲಾಯಿತು.
    ತಾಲೂಕಿನಲ್ಲಿ ಸುಮಾರು ೧೨೦೦ಕ್ಕೂ ಹೆಚ್ಚಿನ ಶೇ.೮೦ರಷ್ಟು ಬಡತನ ಹೊಂದಿರುವ ಕುಟುಂಬಗಳಿಗೆ ಆದಾಯ ಮಿತಿ ಹೆಚ್ಚಾಗಿದೆ ಎಂದು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಹಲವಾರು ತಿಂಗಳುಗಳಿಂದ ಮಂಜೂರಾತಿಯಾಗದೆ ಸ್ಥಗಿತಗೊಂಡಿವೆ. ಲೋಪಗಳು ಕಂಡುಬಂದರೂ ಸಹ ಸರಿಪಡಿಸದೆ ನಿರ್ಲಕ್ಷ್ಯತನ ವಹಿಸಿರುವ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು.
    ಶ್ರಮ ಜೀವಿಗಳಾದ ಕಟ್ಟಡ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ. ಆದರೆ ಮಧ್ಯವರ್ತಿಗಳು, ಕಾರ್ಮಿಕ ಇಲಾಖೆ ಹಾಗು ನಗರಸಭೆ ಕೆಲ ಭ್ರಷ್ಟ ಅಧಿಕಾರಿಗಳಿಂದ ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪಿಸಬೇಕೆಂದು ಮನವಿ ಮಾಡಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿ ಪ್ರಮುಖರಾದ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂಖಾನ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಹಾಗು ಸಂಚಾಲಕರಾದ ಶೇಖರ್ ಮತ್ತು ಜಯರಾಂ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.