Friday, October 8, 2021

ಐಟಿಐ ಕಿರಿಯ ತರಬೇತಿ ಅಧಿಕಾರಿ ತ್ರಿವೇಣಿ ನಿಧನ

ತ್ರಿವೇಣಿ
    ಭದ್ರಾವತಿ, ಅ. ೮: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದುರಸ್ತಿಗಾರ ವಿಭಾಗದ ಕಿರಿಯ ತರಬೇತಿ ಅಧಿಕಾರಿ ತ್ರಿವೇಣಿ ಗುರುವಾರ ನಿಧನ ಹೊಂದಿದರು.
    ೨೦೦೩ರಿಂದ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿವಮೊಗ್ಗದಲ್ಲಿ ವಾಸಿಸುತ್ತಿದ್ದ ಇವರು ಪತಿ, ಓರ್ವ ಪುತ್ರನನ್ನು ಹೊಂದಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.


ಮಂತ್ರಾಲಯ ಶ್ರೀಗಳಿಂದ ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆ

ಭದ್ರಾವತಿಯಲ್ಲಿ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ಸಿದ್ಧಾರೂಢ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ  ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆಯನ್ನು ಶುಕ್ರವಾರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.
    ಭದ್ರಾವತಿ, ಅ. ೮: ಶ್ರೀ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ಸಿದ್ಧಾರೂಢ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ  ಶ್ರೀ ಶ್ರೀನಿವಾಸ ದೇವರ ಪ್ರತಿಷ್ಠಾಪನೆಯನ್ನು ಶುಕ್ರವಾರ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನೆರವೇರಿಸಿದರು.
    ಪ್ರತಿಷ್ಠಾಪನೆಗೂ ಮೊದಲು ಹವನ ಹೋಮಗಳು, ೧೦೮ ಕಲಶ ಪ್ರತಿಷ್ಠಾಪನೆ ಜರುಗಿದವು. ನಂತರ ಕಲಶಾಭಿಷೇಕ, ಮಹಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ, ಅಲಂಕಾರ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನಡೆದವು. ಮಧ್ಯಾಹ್ನ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
    ಶ್ರೀ ಸಂಕರ್ಷಣ ಧರ್ಮ ಸಂಸ್ಥೆ ಅಧ್ಯಕ್ಷ ವಾಸುದೇವಮೂರ್ತಿ, ಉಪಾಧ್ಯಕ್ಷ ಸಿ. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್. ಮಧುಸೂದನ್ ಉಪಸ್ಥಿತರಿದ್ದರು. ಧಾರ್ಮಿಕ ಆಚರಣೆಗಳು ವೇದಬ್ರಹ್ಮ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸಚಾರ್ ಮತ್ತು ಕೆ. ರಾಮಚಂದ್ರಚಾರ್ ಅವರ ನೇತೃತ್ವದಲ್ಲಿ ಜರುಗಿದವು.
    ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಂ. ಮಂಜುನಾಥ್, ಈ ಭಾಗದ ನಗರಸಭಾ ಸದಸ್ಯ ಆರ್‌. ಶ್ರೇಯಸ್‌(ಚಿಟ್ಟೆ)  ಸೇರಿದಂತೆ ಸಾವಿರಾರು ಭಕ್ತಾಧಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು. ನಂತರ ಶ್ರೀಗಳಿಂದ ಅನುಗ್ರಹ ಭಾಷಣ ನಡೆಯಿತು. ಭಕ್ತರಿಂದ ಪಾದಂಗಳವರ ಪಾದ ಪೂಜೆ ನೆರವೇರಿತು. ಕೊನೆಯಲ್ಲಿ ಮಂತ್ರಾಕ್ಷತೆ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


ಭದ್ರಾವತಿ ನಗರಕ್ಕೆ ಗುರುವಾರ ರಾತ್ರಿ ಆಗಮಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರನ್ನು ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು.

Thursday, October 7, 2021

ನಾಡಹಬ್ಬ ದಸರಾ ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿ : ಡಾ. ಕೃಷ್ಣ ಎಸ್. ಭಟ್

ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಉದ್ಘಾಟನೆಗೂ ಮೊದಲು ತಾಯಿ ಚಾಮುಂಡೇಶ್ವರಿಗೆ ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್ ವಿಶೇಷ ಪೂಜೆ ಸಲ್ಲಿಸಿದರು.
    ಭದ್ರಾವತಿ, ಅ. ೭: ಸುಮಾರು ೪೧೧ ವರ್ಷಗಳ ಇತಿಹಾಸ ಹೊಂದಿರುವ ನಾಡಹಬ್ಬ ದಸರಾ ಹಲವು ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿಕ ಕಲೆಗಳು, ಲಲಿತಕಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಜನರಿಗೆ ಸಂಭ್ರಮವನ್ನುಂಟುಮಾಡುತ್ತಿದೆ. ಭವ್ಯ ಪರಂಪರೆ ಹೊಂದಿರುವ ಈ ಹಬ್ಬ ಸಕಾರಾತ್ಮಕ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು.
    ಅವರು ಗುರುವಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಉದ್ಘಾಟಿಸಿ ಮಾತನಾಡಿದರು. ಒಂದೆಡೆ ಶಕ್ತಿ ದೇವತೆಯನ್ನು ಆರಾಧಿಸುವ ಮೂಲಕ ಶಕ್ತಿ ಪಡೆಯುವ ಆಚರಣೆ ಇದಾಗಿದ್ದು, ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಶಕ್ತಿ ದೇವತೆಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಇದೊಂದು ವಿಶೇಷವೂ ಹೌದು. ಕಳೆದ ಸುಮಾರು ೨ ವರ್ಷಗಳಿಂದ ಕೊರೋನಾ ಕರಿನೆರಳು ಎಲ್ಲೆಡೆ ಆವರಿಸಿದ್ದು,  ಶರವನ್ನವರಾತ್ರಿ ಉತ್ಸವ ತನ್ನ ಸಂಭ್ರಮ ಕಳೆದುಕೊಳ್ಳುವಂತಾಗಿದೆ. ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ತಾಯಿ ಶ್ರೀ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುವ ಮೂಲಕ ನಮ್ಮ ಕಷ್ಟಗಳನ್ನು ನಿವಾರಿಣೆ ಮಾಡಿಕೊಳ್ಳೋಣ ಎಂದರು.
    ರಾಧಾ ಎಸ್. ಭಟ್, ನಗರಸಭಾ ಸದಸ್ಯರಾದ ಬಿ.ಕೆ.ಮೋಹನ್, ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ, ಆರ್. ಶ್ರೇಯಸ್, ಅನುಪಮಾ ಚನ್ನೇಶ್, ಬಿ.ಎಂ ಮಂಜುನಾಥ್, ಚನ್ನಪ್ಪ, ಕಾಂತರಾಜ್, ಆರ್. ನಾಗರತ್ನ ಅನಿಲ್‌ಕುಮಾರ್, ಮಂಜುಳ ಸುಬ್ಬಣ್ಣ, ಮಣಿ ಎಎನ್‌ಎಸ್, ಸುದೀಪ್‌ಕುಮಾರ್, ಆರ್. ಮೋಹನ್ ಕುಮಾರ್, ಸೈಯದ್ ರಿಯಾಜ್, ಅನುಸುಧಾ ಮೋಹನ್, ಲತಾ ಚಂದ್ರಶೇಖರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಸರ್ವಮಂಗಳ ಭೈರಪ್ಪ, ಹಾ. ರಾಮಪ್ಪ, ನರಸಿಂಹಾಚಾರ್, ರಮಾಕಾಂತ್, ಕೃಷ್ಣಮೂರ್ತಿ(ಕಾಯಿ ಗುಂಡಣ್ಣ), ಸಂತೋಷ್, ಪೌರಾಯುಕ್ತರು, ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.

ಸಿದ್ದಲಿಂಗಯ್ಯರಿಗೆ ‘ಸೌರಭ ರತ್ನ’ ರಾಜ್ಯ ಪ್ರಶಸ್ತಿ

ಸಿದ್ದಲಿಂಗಯ್ಯ
    ಭದ್ರಾವತಿ, ಅ. ೭: ಸಿದ್ದಾರೂಢನಗರದ ನಿವಾಸಿ, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಅವರಿಗೆ ಕಥಾಬಿಂದು ೨೦೨೧ರ 'ಸೌರಭ ರತ್ನ' ರಾಜ್ಯ ಪ್ರಶಸ್ತಿ ಲಭಿಸಿದೆ.
    ಸಿದ್ದಲಿಂಗಯ್ಯರವರು ಹಲವಾರು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಸೇವಾಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಜೊತೆಗೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ತಾಲೂಕು ಶಾಖೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಮಠಮಂದಿರಗಳು, ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳುವ ಮೂಲಕ ಚಿರಪರಿಚಿತರಾಗಿದ್ದಾರೆ.
    ಇವರ ಸೇವೆಯನ್ನು ಗುರುತಿಸಿ ಇದೀಗ ಕಥಾಬಿಂದು ೨೦೨೧ರ 'ಸೌರಭ ರತ್ನ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅ.೧೫ರಂದು ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಾಡಹಬ್ಬ ದಸರಾ : ವೈದ್ಯ ಸಾಹಿತಿ ಡಾ. ಕೃಷ್ಣ ಎಸ್ ಭಟ್ ಉದ್ಘಾಟನೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುತ್ತಿದ್ದು, ಸಾಹಿತಿಗಳು, ವೈದ್ಯರು ಆದ ಡಾ. ಕೃಷ್ಣ ಎಸ್ ಭಟ್ ಗುರುವಾರ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ದಸರಾ ಉದ್ಘಾಟಿಸಿದರು.
    ಭದ್ರಾವತಿ, ಅ. ೭: ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ೯ ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುತ್ತಿದ್ದು, ಸಾಹಿತಿಗಳು, ವೈದ್ಯರು ಆದ ಡಾ. ಕೃಷ್ಣ ಎಸ್ ಭಟ್ ಗುರುವಾರ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ದಸರಾ ಉದ್ಘಾಟಿಸಿದರು.
    ಮಧ್ಯಾಹ್ನ ಸುಮಾರು ೧೨ ಗಂಟೆಗೆ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಎಲ್ಲರಿಗೂ ಶುಭ ಕೋರಿದರು. ಇದಕ್ಕೂ ಮೊದಲು ನಗರಸಭೆ ಆಡಳಿತ ಪರವಾಗಿ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ಸಹಾಯಕ ಕಾರ್ಯಪಾಲ ಅಭಿಯಂತರ ಶ್ರೀರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಹಾಗು ಸಿಬ್ಬಂದಿ ವರ್ಗದವರು, ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಕೃಷ್ಣ ಎಸ್ ಭಟ್ ಅವರನ್ನು ಸ್ವಾಗತಿಸಿದರು.
    ದೇವಸ್ಥಾನದಲ್ಲಿ ನಗರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ಶ್ರೀ ಹಳದಮ್ಮ ದೇವಿ ಸೇರಿದಂತೆ ಎಲ್ಲಾ ಪ್ರತಿಷ್ಠಾಪನಾ ಮೂರ್ತಿಗಳಿಗೂ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ಆಡಳಿತ ಪರವಾಗಿ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್, ಸಹಾಯಕ ಕಾರ್ಯಪಾಲ ಅಭಿಯಂತರ ಶ್ರೀರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಹಾಗು ಸಿಬ್ಬಂದಿ ವರ್ಗದವರು, ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ನಾಡಹಬ್ಬ ದಸರಾ ಉದ್ಘಾಟನೆಗೆ ಆಗಮಿಸಿದ ಕೃಷ್ಣ ಎಸ್ ಭಟ್ ಅವರನ್ನು ಸ್ವಾಗತಿಸಿದರು.

Wednesday, October 6, 2021

ವೈದ್ಯ ಸಾಹಿತಿಗೆ ಒಲಿದು ಬಂದ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ

ಅ.೭ರಂದು ಬೆಳಿಗ್ಗೆ ೧೦.೩೦ಕ್ಕೆ ದಸರಾ ಕಾರ್ಯಕ್ರಮ ಉದ್ಘಾಟಿಸಲಿರುವ ಡಾ. ಕೃಷ್ಣ ಎಸ್ ಭಟ್

ಕೃಷ್ಣ ಎಸ್ ಭಟ್
    ಭದ್ರಾವತಿ, ಅ. ೬: ಈ ಬಾರಿ ನಗರಸಭೆ ವತಿಯಿಂದ ಆಯೋಜಿಸಲಾಗಿರುವ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ ಸಾಹಿತಿಗಳು, ವೈದ್ಯರು ಆದ ಡಾ. ಕೃಷ್ಣ ಎಸ್ ಭಟ್ ಅವರಿಗೆ ಒಲಿದು ಬಂದಿದೆ.
    ೭೩ರ ವಯೋಮಾನದ ಕೃಷ್ಣ ಎಸ್ ಭಟ್ ಅವರು ನಗರದ ಜನತೆಗೆ ಚಿರಪರಿಚಿತರಾಗಿದ್ದು, ೧೯೭೩ರಲ್ಲಿ ಗ್ರಾಮೀಣ ಸೇವೆಯೊಂದಿಗೆ ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದರು.  ೧೯೭೬ರಲ್ಲಿ ನಗರದಲ್ಲಿ ವಿವೇಕ್ ಕ್ಲಿನಿಕ್ ಆರಂಭಿಸಿ ಇಲ್ಲಿಯವರೆಗೂ ಕುಟುಂಬ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.
     ಭಟ್‌ರವರು ಸಾಮಾಜಿಕ ಮನೋಭಾವನೆಯೊಂದಿಗೆ ಸಮುದಾಯದ ಆರೋಗ್ಯದ ಬಗ್ಗೆ ಸಹ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಂಜೀವಿನಿ ಮತ್ತು ಚೇತನ ವೇದಿಕೆಗಳನ್ನು ಹುಟ್ಟು ಹಾಕುವ ಮೂಲಕ ಕಳೆದ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಆರೋಗ್ಯ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
    ವೈದ್ಯ ವೃತ್ತಿ ಜೊತೆಗೆ ವಿಜ್ಞಾನ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ವಿಶ್ವೇಶ್ವರ ವಿಜ್ಞಾನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗದ ಕ್ಷೇಮ ಟ್ರಸ್ಟ್, ಭೂಮಿಕಾ, ಸಂಸಾರ, ಸಂಸ್ಕೃತಿ ಸೌರಭ, ಹವ್ಯಕ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ, ಸಾಹಿತ್ಯ ವೇದಿಕೆಗಳಲ್ಲಿ, ಶಾಲಾ-ಕಾಲೇಜುಗಳ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ರಿಯಾಶೀಲರಾಗಿದ್ದಾರೆ.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ಕನ್ನಡ ವೈದ್ಯಕೀಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಭೂಮಿಕಾ ವೇದಿಕೆ ಅಧ್ಯಕ್ಷರಾಗಿದ್ದು, ಕನ್ನಡ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.
    ಇವರು ಇದುವರೆಗೂ ತಮ್ಮ ೨ ಕೃತಿಗಳನ್ನು ಬಿಡುಗಡೆಗೊಳಿಸಿದ್ದು, ಮೊದಲ ಕೃತಿ 'ಮಕ್ಕಳು-ನಿಮ್ಮ ಆರೋಗ್ಯ', ಎರಡನೇ ಕೃತಿ 'ಮಧುಮೇಹದೊಂದಿಗೆ ಮಧುರ ಬಾಳ್ವೆ' ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಹಲವಾರು ವೈದ್ಯಕೀಯ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವೈದ್ಯಕೀಯ ವೃತ್ತಿ ಸೇವೆಗಾಗಿ ಇವರಿಗೆ ೨೦೧೬ರಲ್ಲಿ ಡಾ.ಬಿ.ಸಿ ರಾಯ್ ಪ್ರಶಸ್ತಿ ಲಭಿಸಿದೆ. ಜೊತೆಗೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಸನ್ಮಾಸಿ ಗೌರವಿಸಿವೆ. ಇಂತಹ ಅಪರೂಪದ ಸಾಧಕರು ನಾಡಹಬ್ಬ ದಸರಾ ಉದ್ಘಾಟನೆ ನೆರವೇರಿಸುತ್ತಿರುವುದು. ಉಕ್ಕಿನ ನಗರದ ಜನರ ಸೌಭಾಗ್ಯವಾಗಿದೆ ಎಂದರೆ ತಪ್ಪಾಗಲಾರದು.

ಬೀದಿ ನಾಟಕದ ಮೂಲಕ ದುಶ್ಚಟ ನಿರ್ಮೂಲನೆ, ಕೊರೋನಾ ಜಾಗೃತಿ

ಭದ್ರಾವತಿ ಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಕಲಾ ತಂಡದ ಕಲಾವಿಧರು ಕರೋನಾ ಜಾಗೃತಿ ಹಾಗೂ ದುಶ್ಚಟಗಳ ನಿರ್ಮೂಲನೆ ಕುರಿತು ಬೀದಿ ನಾಟಕದ ಮೂಲಕ ಪ್ರದರ್ಶಿಸಿದರು.
    ಭದ್ರಾವತಿ, ಅ. ೬: ರಾಜ್ಯಾದ್ಯಂತ ಗ್ರಾಮಗಳ ಅಭಿವೃದ್ಧಿ ಹಾಗು ದುಶ್ಚಟಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಇದೀಗ ವಿನೂತನ ಪ್ರಯೋಗಗಳೊಂದಿಗೆ ಗ್ರಾಮೀಣಮಟ್ಟದಲ್ಲಿ ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿ ನಾಟಕದ ಮೂಲಕ ಕೊರೋನಾ ಜಾಗೃತಿ ಹಾಗೂ ದುಶ್ಚಟಗಳ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ.  
    ತಾಲೂಕಿನ ಹೊಳೆಹೊನ್ನೂರು ಭಾಗದ ಆನವೇರಿ ಹಾಗೂ ಹೊಸೂರು ಗ್ರಾಮಗಳಲ್ಲಿ ಅಂಬೇಡ್ಕರ್ ಕಲಾ ತಂಡದ ಕಲಾವಿದರು ತಮ್ಮ ಕಲೆಯ ಮೂಲಕ  ಗ್ರಾಮೀಣ ಜನರಿಗೆ ಮಹಾಮಾರಿ ಕೊರೋನಾ ಸೋಂಕು ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವ ಜೊತೆಗೆ ಸೋಂಕು ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುವುದು ಹಾಗು ಲಸಿಕೆಯ ಮಹತ್ವ ಮತ್ತು ಧೂಮಪಾನ, ಮದ್ಯಪಾನ, ತಂಬಾಕು ಪದಾರ್ಥಗಳು ಹಾಗು ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ  ಕುರಿತು ಜಾಗೃತಿ ಮೂಡಿಸಿದರು.
      ಹೊಸೂರು ಗ್ರಾಮದಲ್ಲಿ ನಡೆದ ಬೀದಿ ನಾಟಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ರಿಯಾಜ್‌ಮಹಮದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡುತ್ತಿರುವ ಜಾಗೃತಿ ಅರಿವು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
    ಯೋಜನಾಧಿಕಾರಿ ಪ್ರಕಾಶ್, ಮೇಲ್ವಿಚಾರಕ ಪ್ರದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪ್ರೀತಿ, ಪ್ರಭಾ,  ಸೇರಿದಂತೆ ಹಲವರಿದ್ದರು.