Wednesday, October 27, 2021

ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರು : ಡಾ. ಎಂ.ವಿ ಅಶೋಕ್

ಭದ್ರಾವತಿಯಲ್ಲಿ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಅ. ೨೭: ಕೊರೋನ ಮಹಾಮಾರಿ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಪ್ರಯೋಗಾಲಯ ತಂತ್ರಜ್ಞರು ಮುಂಚೂಣಿ ಯೋಧರಾಗಿದ್ದು, ಇವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
    ನಗರದ ಯುವ ಚೈತನ್ಯ ವೇದಿಕೆ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಯೋಗಾಯ ತಂತ್ರಜ್ಞರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
       ಕೊರೋನ ಮಹಾಮಾರಿ ರೂಪಾಂತರ ಹೊಂದಿ ಕಾಲಿಡುತ್ತಿರುವ ಕಾರಣ ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ಜನರು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಬೇಕು. ಲಸಿಕೆ ಹಾಕಿಸಿಕೊಳ್ಳದಿರುವವರು ನಿಗದಿತ ಕೇಂದ್ರಗಳಲ್ಲಿ ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.
      ಯುವ ಚೈತನ್ಯ ವೇದಿಕೆಯ ಪ್ರಮುಖರಾದ ಎಸ್.ಆರ್ ಜಗದೀಶ್ ಮಾತನಾಡಿ, ವೇದಿಕೆ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುತ್ತಿದೆ. ಯುವ ಸಮುದಾಯದವರು ವೇದಿಕೆಗೆ ಹೆಚ್ಚಿನ ಸಹಕಾರ ನೀಡುತ್ತಿದ್ದು,  ಬಸ್ ನಿಲ್ದಾಣ, ಸಾರ್ವಜನಿಕ ಗ್ರಂಥಾಲಯ, ಶಾಲಾ-ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ, ಸಸಿ ನೆಡುವ ಮೂಲಕ ವನಮಹೋತ್ಸವ ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
    ವೇದಿಕೆಯಲ್ಲಿ ಪ್ರಯೋಗಾಲಯ ತಂತ್ರಜ್ಞರ ಸಂಘದ ಜಿಲ್ಲಾ ಉಪಾಧ್ಯಕ್ಷ ಖಾನ್, ಸರ್ಕಾರಿ ಆಸ್ಪತ್ರೆಯ ಜಿ.ಐ ಗಣಪತಿ, ಹಿರಿಯ ಪ್ರಯೋಗಾಲಯ ತಂತ್ರಜ್ಞ ಮೋಹನ್, ಯುವ ಚೈತನ್ಯ ವೇದಿಕೆಯ ವೃಷಭ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟು ೩೫ ಪ್ರಯೋಗಾಲಯ ತಂತ್ರಜ್ಞರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ನಿರ್ಮಲ ಪ್ರಾರ್ಥಿಸಿ, ಎಸ್.ಆರ್ ಜಗದೀಶ್ ಸ್ವಾಗತಿಸಿದರು. ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯ ತಂತ್ರಜ್ಞೆ  ಶಮಾ ಬಾನು ವಂದಿಸಿದರು.

Tuesday, October 26, 2021

ಅ.೨೭ರಂದು ಪೂರ್ವಭಾವಿ ಸಭೆ

    ಭದ್ರಾವತಿ, ಅ. ೨೬: ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ತಕ್ಷಣ ಜಾರಿಗೊಳಿಸಲು ಒತ್ತಾಯಿಸಿ ಅ.೩೦ರಂದು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನಲೆಯಲ್ಲಿ ಚರ್ಚಿಸಲು ಅ.೨೭ರ ಸಂಜೆ ೫ ಗಂಟೆಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.
    ಹಳೇನಗರದ ಬಸವೇಶ್ವರ ವೃತ್ತದ ಸಮೀಪದ ಶ್ರೀ ಮಾಚಿದೇವ ಕಲ್ಯಾಣ ಮಂಟಪದಲ್ಲಿ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಪೂರ್ವಭಾವಿ ಸಭೆ ನಡೆಯಲಿದ್ದು,  ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು, ಜಿಲ್ಲಾ ಸಂಚಾಲಕರಾದ ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  
ತಾಲೂಕಿನ ಎಲ್ಲಾ ಹಿಂದುಳಿದ ಜಾತಿಗಳ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಮಾಜದ ಬಂಧುಗಳು ಭಾಗವಹಿಸಬೇಕೆಂದು ಕೋರಲಾಗಿದೆ.

ಕೋಟ್ಪಾ ಕಾಯ್ದೆಯಡಿ ಕಾರ್ಯಾಚರಣೆ : ೧,೮೦೦ ರು. ದಂಡ ವಸುಲಾತಿ

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ತಂಬಾಕು ನಿಯಂತ್ರಣ ಕಾನೂನು  ಕೋಟ್ಪಾ  ೨೦೦೩ ಅಡಿಯಲ್ಲಿ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.  
    ಭದ್ರಾವತಿ, ಅ. ೨೬: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ತಂಬಾಕು ನಿಯಂತ್ರಣ ಕಾನೂನು  ಕೋಟ್ಪಾ  ೨೦೦೩ ಅಡಿಯಲ್ಲಿ ತಾಲೂಕಿನ ಬಾರಂದೂರು ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.  
    ಒಟ್ಟು ೧,೮೦೦ ರು. ದಂಡ ವಿಧಿಸುವ ಜೊತೆಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಾಗು ಖರೀದಿ ಮಾಡುವವರಿಗೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಟಿ ರಾಜೇಗೌಡ, ಎಚ್‌ಐಓ ಆನಂದಮೂರ್ತಿ, ಕಾಗದನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಆರಕ್ಷಕ ಸಿಬ್ಬಂದಿ ಎಲ್ಲಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಹೇಮಂತ್‌ರಾಜ್, ರವಿರಾಜ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅಲ್ಲಾವುದ್ದೀನ್ ತಾಜ್ ಮತ್ತು ಶಶಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಾಧ್ಯಾಪಕ ವರದರಾಜ್‌ಗೆ ಎರಡು ಬೆಳ್ಳಿ ಪದಕ


ಎಸ್. ವರದರಾಜ್

    ಭದ್ರಾವತಿ, ಅ. ೨೬: ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್. ವರದರಾಜ್ ದಾವಣಗೆರೆಯಲ್ಲಿ ಜರುಗಿದ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ೨ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭಾರ ಎತ್ತುವ ಸ್ಪರ್ಧೆಯ ೭೫ ರಿಂದ ೮೨ ಕೆ.ಜಿ ಪುರುಷರ ವಿಭಾಗದಲ್ಲಿ ಸ್ನಾಚ್‌ನಲ್ಲಿ ೬೫ ಕೆ.ಜಿ ಹಾಗು ಕ್ಲೀನ್ ಅಂಡ್ ಜರ್ಕ್‌ನಲ್ಲಿ ೭೫ ಕೆ.ಜಿ ಒಟ್ಟು ೧೪೦ ಕೆ.ಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನ ಹಾಗು ದೇಹದಾರ್ಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಒಟ್ಟು ಎರಡು ಬೆಳ್ಳಿ ಪದಕ ಪಡೆದುಕೊಂಡು ರಾಷ್ಟ್ರ ಮಟಕ್ಕೆ ಆಯ್ಕೆಯಾಗಿದ್ದಾರೆ.
    ವರದರಾಜ್‌ರವರು ರಾಜ್ಯಮಟ್ಟದಲ್ಲಿ ಕಳೆದ ೫ ವರ್ಷಗಳಿಂದ ನಿರಂತರವಾಗಿ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Monday, October 25, 2021

ಎರಡೂವರೆ ವರ್ಷಗಳ ನಂತರ ಪುಟಾಣಿ ಮಕ್ಕಳಿಗೆ ಅದ್ದೂರಿ ಸ್ವಾಗತ

೩ನೇ ಅಲೆ ಭೀತಿ ನಡುವೆಯೂ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಲ್ಲಿ ಉತ್ಸಾಹ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ೧ ರಿಂದ ೫ನೇ ತರಗತಿ ಮಕ್ಕಳನ್ನು ಪೋಷಕರು ಕರೆ ತರುತ್ತಿರುವುದು.
    ಭದ್ರಾವತಿ, ಅ. ೨೫: ಸುಮಾರು ಎರಡೂವರೆ ವರ್ಷಗಳ ನಂತರ ಸರ್ಕಾರ ೧ ರಿಂದ ೫ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು  ಅನುಮತಿ ನೀಡಿದ ಹಿನ್ನಲೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ಸೋಮವಾರ ಹಬ್ಬದ ವಾತಾವರಣ ಕಂಡು ಬಂದಿತು.
    ಮಹಾಮಾರಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ೧ ಮತ್ತು ೨ನೇ ಅಲೆ ಭೀತಿಯಿಂದ ಸ್ವಲ್ಪಮಟ್ಟಿಗೆ ಹೊರ ಬಂದಿರುವ ಜನರು ಕಳೆದ ೩-೪ ತಿಂಗಳಿನಿಂದ ಮೊದಲಿನಂತೆ ಸಹಜ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಈ ನಡುವೆ ೩ನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ತಜ್ಞರ ಎಚ್ಚರಿಕೆ ನಡುವೆಯೂ ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಭೌತಿಕ ತರಗತಿಗಳಿಂದ ವಂಚಿತರಾಗಿದ್ದ ೧ ರಿಂದ ೫ನೇ ತರಗತಿವರೆಗಿನ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಲ್ಲಿ ಪೋಷಕರು ಉತ್ಸುಕರಾಗಿವುದು ಕಂಡು ಬಂದಿತು.
    ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳಲ್ಲಿ ೧ ರಿಂದ ೫ನೇ ತರಗತಿ ಮಕ್ಕಳನ್ನು ವಿಭಿನ್ನ ರೀತಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೆ ಪೂರಕವೆಂಬ ಪೋಷಕರಿಂದ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತಯಾಗಿದ್ದು, ತಮ್ಮ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆ ತರುವ ಮೂಲಕ ಆರಂಭದ ಶುಭ ದಿನಕ್ಕೆ ಮುನ್ನುಡಿ ಬರೆದರು.
    ಶಾಲಾ ಆಡಳಿತ ಮಂಡಳಿಗಳು ಸರ್ಕಾರ ಸೂಚಿಸಿರುವ ಕೋವಿಡ್-೧೯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಹೆಚ್ಚಿನ ಮುಂಜಾಗ್ರತೆ ವಹಿಸಿರುವುದು ಕಂಡು ಬಂದಿತು. ಶಿಕ್ಷಕರು ಮಕ್ಕಳಿಗೆ ಸಿಹಿ ನೀಡುವ ಮೂಲಕ ತರಗತಿಗಳಿಗೆ ಸಡಗರ ಸಂಭ್ರಮದಿಂದ ಬರಮಾಡಿಕೊಂಡು ಮೊದಲ ದಿನದ ಪಾಠ ಪ್ರವಚನ ಆರಂಭಿಸಿದರು.  ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದ ಬಹುತೇಕ ಶಾಲೆಗಳಿಗೆ ಮಕ್ಕಳ ಆಗಮನ ಸುಮಾರು ಎರಡೂವರೆ ವರ್ಷಗಳಿಂದ ಕಳೆದು ಹೋಗಿದ್ದ ಮೆರಗು ಮರುಕಳುಹಿಸಿದಂತೆ ಕಂಡು ಬಂದಿತು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ಸರ್ಕಾರಿ ಶಾಲೆಯಲ್ಲಿ ೧ ರಿಂದ ೫ನೇ ತರಗತಿ ಮಕ್ಕಳ ಕೈಗಳಿಗೆ ಸ್ಯಾನಿಟೈಜರ್ ಹಾಕುವ ಮೂಲಕ ಕೊಠಡಿಗಳಿಗೆ ಪ್ರವೇಶ ನೀಡಲಾಯಿತು.

ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ

ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ಭದ್ರಾವತಿ, ಅ. ೨೫: ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಸೋಮವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಏಕಾಂಗಿ ಹೋರಾಟ ನಡೆಸುವ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ.
    ಸರ್ವೋಚ್ಛ ನ್ಯಾಯಾಲಯ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗು ಪರಿಸರಕ್ಕೆ ಹಾನಿ ಉಂಟು ಮಾಡುವ ೨೦೧೭ಕ್ಕೂ ಮೊದಲು ತಯಾರಿಸುತ್ತಿದ್ದ ಪಟಾಕಿ ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶಿಸಿದೆ. ಆದರೆ ಪಟಾಕಿ ತಯಾರಿಸುವ ಕಂಪನಿಗಳು ಮತ್ತು ಮಾರಾಟಗಾರರು ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
    ಹಸಿರು ಪಟಾಕಿಯಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ. ಅಲ್ಲದೆ ಆರೋಗ್ಯದ ಮೇಲೆ ಸಹ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಪಿ.ಇ.ಎಸ್.ಓ ಹಸಿರು ಪಟಾಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಮಾರಾಟಗಾರರಿಗೆ ಕೇವಲ ಹಸಿರು ಪಟಾಕಿ ಮಾತ್ರ ಮಾರಾಟ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಸೂಚಿಸಬೇಕೆಂದು ಒತ್ತಾಯಿಸಿದರು.  

ತಾತಮ್ಮ ನಿಧನ

ತಾತಮ್ಮ
    ಭದ್ರಾವತಿ, ಅ. ೨೫: ನಗರದ ಕಡದಕಟ್ಟೆ ರೈಲ್ವೆ ಗೇಟ್ ಸಮೀಪದ ಬಲಭಾಗದ ನಿವಾಸಿ ದಿವಂಗತ ಪಿ. ಯಲ್ಲಯ್ಯನವರ ಪತ್ನಿ ತಾತಮ್ಮ(೮೬) ನಿಧನ ಹೊಂದಿದರು.
    ೫ ಪುತ್ರರು, ೨ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.