ಕಠಿಣ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷದ್ ಆಗ್ರಹ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗುರುವಾರ ಭದ್ರಾವತಿಯಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೨೮: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಅತ್ಯಾಚಾರ ಪ್ರಕರಣಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಭಾರತ ದೇಶದಲ್ಲಿ ಹೆಚ್ಚಾಗುತ್ತಿರುವ ಹಿಂದೂ ವಿರೋಧಿ ಕೃತ್ಯಗಳನ್ನು ತಡೆಗಟ್ಟಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ ಆಗ್ರಹಿಸಿದರು.
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಗುರುವಾರ ನಗರದ ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಿಂದೂಗಳ ರಕ್ಷಣೆಗೆ ಕೇವಲ ಕಾನೂನು ರೂಪಿಸಿದರೆ ಸಾಲದು ಅವುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸಹ ಸರ್ಕಾರದ್ದಾಗಿದೆ. ಇದನ್ನು ಅರ್ಥ ಮಾಡಿಕೊಂಡು ಹಿಂದೂಗಳ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿದರು.
ಸರ್ಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಿದೆ. ಆದರೆ ನಗರದಲ್ಲಿ ಇಂದಿಗೂ ಕಸಾಯಿಖಾನೆಗಳು ಸಕ್ರಿಯವಾಗಿದ್ದು, ಈ ಸಂಬಂಧ ನಗರಸಭೆ ದಾಖಲೆ ಪರಿಶೀಲನೆ ನಡೆಸಿದರೆ ಶೂನ್ಯ ಎಂದು ದಾಖಲಾಗಿದೆ. ನೆಪ ಮಾತ್ರಕ್ಕೆ ಕಾನೂನು ಎಂಬಂತಾಗಿದೆ. ತಕ್ಷಣ . ಅಲ್ಲದೆ ದೇವಸ್ಥಾನ, ಮಠಮಂದಿರಗಳ ಬಳಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಯುವ ಸಮುದಾಯ ದಾರಿ ತಪ್ಪುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಪ್ರಪಂಚದ ಯಾವುದೇ ದೇಶದಲ್ಲಿ ಕಂಡು ಬರುತ್ತಿಲ್ಲ. ಬಹುತೇಕ ರಾಷ್ಟ್ರಗಳು ಸಮಾನತೆ ಪರಿಕಲ್ಪನೆಯಲ್ಲಿ ಸಾಗುತ್ತಿವೆ. ಇದನ್ನು ಅರ್ಥ ಮಾಡಿಕೊಂಡು ಅಲ್ಲಿನ ಸರ್ಕಾರ ತಕ್ಷಣ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು. ದೇಶಾದ್ಯಂತ ಏಕರೂಪದ ಕಾನೂನು ಜಾರಿಗೊಳಿಸುವುದು. ಬಲವಂತದ ಮತಾಂತರ ತಡೆಯಲು ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಟಿ. ವೆಂಕಟೇಶ್, ಸುಬ್ರಮಣಿ, ಕೆ.ಆರ್ ಸತೀಶ್, ರಾಮನಾಥ್ ಬರ್ಗೆ, ನಾಗರಾಜರಾವ್ ಅಂಬೋರೆ, ಮಹಿಳಾ ಪ್ರಮುಖರಾದ ತಾಲೂಕು ಅಧ್ಯಕ್ಷೆ ಶೋಭಾ ಪಾಟೀಲ್, ಆರ್.ಎಸ್ ಶೋಭಾ, ಮಂಜುಳಾ, ಶ್ಯಾಮಲ, ಕವಿತ, ವಿಶ್ವ ಹಿಂದೂ ಪರಿಷದ್ ಪ್ರಮುಖರಾದ ಪಿ. ವೆಂಕಟರಮಣಶೇಟ್, ಶ್ಯಾಮ ಅಯ್ಯಂಗಾರ್, ಮಹೇಶ್ವರಪ್ಪ, ಜಯರಾಮ್, ಚನ್ನಪ್ಪ, ಬಜರಂಗದಳದ ಪ್ರಮುಖರಾದ ರಾಘವನ್ ವಡಿವೇಲು, ಕೃಷ್ಣ, ಸಂಜಯ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ರಂಗಪ್ಪ ವೃತ್ತದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗು ಗೃಹ ಸಚಿವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.