Tuesday, November 9, 2021

ನಗರದ ವಿವಿಧೆಡೆ ಪುನೀತ್ ರಾಜ್‌ಕುಮಾರ್ ೧೨ನೇ ದಿನದ ಪುಣ್ಯಸ್ಮರಣೆ

ಅಭಿಮಾನಿಗಳು, ಸಂಘಟನೆಗಳಿಂದ ಸುಮಾರು ೧೦೦೦ ಮಂದಿಗೆ ಮಾಂಸಾಹಾರ ವಿತರಣೆ


ಭದ್ರಾವತಿ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಕನಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಸ್ಥಳೀಯರು ಮಂಗಳವಾರ ಪುನೀತ್‌ರಾಜ್‌ಕುಮಾರ್ ಅವರ ೧೨ನೇ ದಿನದ ಪುಣ್ಯ ಸ್ಮರಣೆಯನ್ನು ಹಲವು ಕಾರ್ಯಕ್ರಮಗಳೊಂದಿಗೆ ನೆರವೇರಿಸಿದರು.
    ಭದ್ರಾವತಿ, ನ. ೯: ಚಲನ ಚಿತ್ರ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರ ೧೨ನೇ ದಿನದ ಪುಣ್ಯ ಸ್ಮರಣೆ ಅಂಗವಾಗಿ ಮಂಗಳವಾರ ನಗರದ ವಿವಿಧೆಡೆ ಅಭಿಮಾನಿಗಳು ಹಾಗು ವಿವಿಧ ಸಂಘಟನೆಗಳಿಂದ ಅನ್ನಸಂತರ್ಪಣೆ ಯಶಸ್ವಿಯಾಗಿ ನೆರವೇರಿತು.
    ಕನಕ ಆಟೋ ನಿಲ್ದಾಣ :
    ನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ಕನಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಸ್ಥಳೀಯರು ಪುಣ್ಯ ಸ್ಮರಣೆಯನ್ನು ಹಲವು ಕಾರ್ಯಕ್ರಮಗಳೊಂದಿಗೆ ನೆರವೇರಿಸಿದರು.
    ಸುಮಾರು ೧೦೦೦ ಮಂದಿಗೆ ಮಾಂಸಹಾರ ವಿತರಣೆ, ಸ್ವರ ಸಂಗೀತ ಹಾಗು ಪುಷ್ಪನಮನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ಅಭಿಮಾನಿಗಳು, ಹಿತೈಷಿಗಳು ಹಾಗು ಸ್ಥಳೀಯರ ಸಹಕಾರದಿಂದ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಇದುವರೆಗೂ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎರಡು ಕಾರ್ಯಕ್ರಮಗಳು ಸಹ ಯಶಸ್ವಿಗೊಂಡಿವೆ. ಪುನೀತ್ ರಾಜ್‌ಕುಮಾರ್ ಅವರ ಆಶಯದಂತೆ ನೇತ್ರದಾನ ನೋಂದಾಣಿ ಕಾರ್ಯಕ್ರಮ ಸಹ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಕನಕ ಆಟೋ ಚಾಲಕರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು.
    ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತ :
    ನಗರಸಭೆ ವ್ಯಾಪ್ತಿಯ ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಯುವಕರ ಸಂಘ, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಹಾಗು ಸ್ಥಳೀಯರು ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ ವಿನಯ್ ಹಾಗು ಶಿವಕುಮಾರ್ ನೇತೃತ್ವದಲ್ಲಿ ೧೨ನೇ ದಿನದ  ಪುಣ್ಯಸ್ಮರಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
    ಇಲ್ಲೂ ಸಹ ಸಾವಿರ ಮಂದಿಗೆ ಮಾಂಸಹಾರ ವಿತರಣೆ ನಡೆಯಿತು. ಅಭಿಮಾನಿಗಳು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಿದರು.
    ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ, ಪುನೀತ್‌ರಾಜ್‌ಕುಮಾರ್ ಅಭಿಮಾನಿ ವಿನಯ್ ಮಾತನಾಡಿ, ಪುನೀತ್‌ರಾಜ್ ಕುಮಾರ್ ಅವರ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿವೆ. ಮುಂದಿನ ದಿನಗಳಗಳಲ್ಲಿ ಅವರ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯುತ್ತೇವೆ ಎಂದರು.



ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸ ಸೀಗೆಬಾಗಿ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಯುವಕರ ಸಂಘ, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಹಾಗು ಸ್ಥಳೀಯರು ಶ್ರೀನಿಧಿ ಎಂಟರ್ ಪ್ರೈಸಸ್ ಮಾಲೀಕ ವಿನಯ್ ಹಾಗು ಶಿವಕುಮಾರ್ ನೇತೃತ್ವದಲ್ಲಿ ೧೨ನೇ ದಿನದ ಪುಣ್ಯಸ್ಮರಣೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

Monday, November 8, 2021

ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ, ಸರ್ಕಾರಿ ಸೌಲಭ್ಯಗಳ ವಂಚನೆ ವಿರುದ್ಧ ಪ್ರತಿಭಟನೆ

ಭದ್ರಾವತಿ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ನ. ೮: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಹಾಗು ಸರ್ಕಾರಿ ಸೌಲಭ್ಯಗಳ ವಂಚನೆ ಹೆಚ್ಚಾಗಿದ್ದು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿವೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆರೋಪಿಸಿದರು.
    ಅವರು ಸೋಮವಾರ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ದೊಣಬಘಟ್ಟ ಗ್ರಾಮದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಅಲ್ಪಸಂಖ್ಯಾತರು ವಾಸಿಸುತ್ತಿದ್ದು, ಇವರಿಗೆ ಕನ್ನಡ ಭಾಷೆ ಸರಿಯಾಗಿ ಬಾರದ ಹಿನ್ನಲೆಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ವಂಚನೆ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳಿಂದ ಮತ್ತಷ್ಟು ವಂಚನೆ ನಡೆಯುತ್ತಿದೆ. ತಮಗೆ ಆಗುತ್ತಿರುವ ವಂಚನೆ, ಅನ್ಯಾಯಗಳನ್ನು ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಕನ್ನಡ ಭಾಷೆಯನ್ನು ಕಲಿಸಿಕೊಡುವಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಗಳು ಸೂಕ್ತ ಕ್ರಮ ಕೈಗೊಂಡಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ಕನ್ನಡ ಭಾಷೆ ಕಲಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಅದರಲ್ಲೂ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕೆಲವು ಭ್ರಷ್ಟ ರಾಜಕಾರಣಿಗಳು, ಮಧ್ಯವರ್ತಿಗಳಿಂದಾಗಿ ವಂಚನೆ ಹೆಚ್ಚಾಗುತ್ತಿದೆ. ನಿಜವಾದ ಬಡವರಿಗೆ, ಶೋಷಿತರಿಗೆ ನ್ಯಾಯ ಸಿಗದಂತಾಗಿರುವುದು ಮತ್ತು ಸಂವಿಧಾನದ ಕಾನೂನುಗಳನ್ನು ಜಾರಿಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮೋಸ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಪ್ರಗತಿಪರ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್, ದಕ್ಷ ಲೋಕಾಯುಕ್ತ ವೆಂಕಟಾಚಲ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು.
ಪ್ರಮುಖರಾದ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಹಿಂದುಳಿದ ವರ್ಗ ಮುಖಂಡ ಬಿ. ಗಂಗಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾತನಾಡಿದರು.
ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸೈದನ್ ಸಾಬ್, ಪೀರ್ ಸಾಬ್, ಮಹಾಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ : ಎಂಜೆಎ ತಂಡಕ್ಕೆ ಮೊದಲ ಬಹುಮಾನ

ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿಯ ಕೊನೆಯ ರೋಚಕ ಪಂದ್ಯ ಎಂಜೆಎ ಮತ್ತು ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವೆ ನಡೆಯಿತು.
    ಭದ್ರಾವತಿ, ನ. ೮: ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು.
    ಭಾನುವಾರ ರಾತ್ರಿ ಅಂತಿಮ ಪಂದ್ಯದಲ್ಲಿ ಎಂಜೆಎ ಮತ್ತು ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡಗಳು ಟ್ರೋಫಿಗಾಗಿ ರೋಚಕ ಸೆಣೆಸಾಟ ನಡೆಸಿದವು. ಅಂತಿಮವಾಗಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು. ಎರಡನೇ ಬಹುಮಾನ ಸೆವೆನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡದ ಪಾಲಾಯಿತು. ಶಿವಮೊಗ್ಗ ಜಿಲ್ಲೆಯಿಂದ ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು.
    ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಪಂದ್ಯಾವಳಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಕೃಷ್ಣೇಗೌಡ, ನಗರಸಭೆ ಮಾಜಿ ಸದಸ್ಯರಾದ ಕರಿಯಪ್ಪ, ಎಂ.ಎ ಅಜಿತ್, ಬದರಿನಾರಾಯಣ, ಗುಣಶೇಖರ್, ಅನಿಲ್‌ಕುಮಾರ್, ಎಚ್.ಬಿ ರವಿಕುಮಾರ್, ಎಂ. ರಾಜು, ಮುಖಂಡರಾದ ಉಮೇಶ್, ದಿಲೀಪ್, ಕ್ಲಬ್ ಸುರೇಶ್, ಡಾರ್ವಿನ್, ಗಿರೀಶ್‌ಕುಮಾರ್, ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈ ಹಿಂದೆ ೨೦೧೫ರಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಮ್ಯಾಟ್ ಪ್ರೋ ಮಾದರಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅವರ ನಿಧನದ ನಂತರ ಇದೀಗ ಅವರ ಸವಿನೆನಪಿನಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿರುವ ಯುವ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಳ್ಳಲಾಗಿದೆ.


ಸರ್‌ಎಂವಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ಎಂ.ಜೆ.ಎ ಟ್ರೋಫಿ ಕಬಡ್ಡಿ ಪಂದ್ಯಾವಳಿ ಎಂಜೆಎ ತಂಡ ಮೊದಲ ಬಹುಮಾನ ಪಡೆದುಕೊಂಡಿತು.

Sunday, November 7, 2021

ನ.೮ರಂದು ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ

    ಭದ್ರಾವತಿ, ನ. ೭: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ಹಾಗು ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ತಾಲೂಕು ಪಂಚಾಯಿತಿ ಮುಂಭಾಗ ನ.೮ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ಪ್ರಗತಿಪರ ಚಿಂತಕ ಪ್ರೊ. ಜಿ.ಕೆ ಗೋವಿಂದರಾವ್, ದಕ್ಷ ಲೋಕಾಯುಕ್ತ ವೆಂಕಟಾಚಲ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮಧ್ಯವರ್ತಿಗಳ ಹಾವಳಿ ಹಾಗು ಭ್ರಷ್ಟಾಚಾರ ಮಿತಿಮೀರಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಲು ತೊಂದರೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಗ್ರಾಮದ ರೈತರೊಬ್ಬರಿಗೆ ನ್ಯಾಯಾಲಯದ ಆದೇಶವಿದ್ದರೂ ಸಹ ಪೋಡಿ ಮಾಡಿಕೊಡದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.

ಶಿರಸ್ತೆದಾರ್ ಕಾರು ಅಪಘಾತ

    ಭದ್ರಾವತಿ, ನ. ೭; ಚಿಕ್ಕಮಗಳೂರು ಪ್ರಧಾನ ಸಿವಿಲ್ ನ್ಯಾಯಾಲಯದ ಶಿರಸ್ತೆದಾರ್ ಅವರ ಕಾರು ಅಪಘಾತಗೊಂಡಿರುವ ಘಟನೆ ತಾಲೂಕಿನ ಕೆಂಪೇಗೌಡ ನಗರದಲ್ಲಿ ನಡೆದಿದೆ.
    ಕೆಂಪೇಗೌಡ ನಗರದ ಬಳಿ ಬಿ.ಎಚ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಹಂಪ್ಸ್ ಎದುರಾದ ಹಿನ್ನೆಲೆಯಲ್ಲಿ ಶಿರಸ್ತೆದಾರ್ ಹಾಲನಾಯ್ಕ ಅವರ ಕಾರು ನಿಧನವಾಗಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಈ ಹಿನ್ನಲೆಯಲ್ಲಿ ಕಾರು ಖಜಂಗೊಂಡಿದ್ದು, ಆದರೆ ಕಾರಿನಲ್ಲಿದ್ದ ಹಾಲನಾಯ್ಕ ಅವರ ಕುಟುಂಬಸ್ಥರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
    ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹಾಲನಾಯ್ಕ ಕುಟುಂಬದವರು ಭದ್ರಾವತಿಗೆ ಆಗಮಿಸಿದ್ದರು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಅಪಘಾತ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಜಾರ ಜನಾಂಗದಲ್ಲಿ ದೀಪ ಬೆಳಗುವ ವಿಶೇಷ ಆಚರಣೆ ‘ಮೇರಾ’

ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ಭದ್ರಾವತಿ ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಭದ್ರಾವತಿ, ನ. ೭: ದೀಪಾವಳಿ ಹಬ್ಬದಂದು ವಿಶೇಷವಾಗಿ ಬಂಜಾರ ಜನಾಂಗದಲ್ಲಿ ದೀಪ ಬೆಳಗುವುದು(ಮೇರಾ ಮಾಡುವುದು) ವಾಡಿಕೆಯಾಗಿದ್ದು, ತಾಲೂಕಿನ ಸಿರಿಯೂರು ತಾಂಡ ಸೇರಿದಂತೆ ಇತರೆಡೆ ಬಂಜಾರ ಜನಾಂಗದ ಕುಟುಂಬದ ಹೆಣ್ಣು ಮಕ್ಕಳು ಗ್ರಾಮದ ಮನೆ ಮನೆಗಳಿಗೆ ತೆರಳಿ ದೀಪ ಬೆಳಗಿದರು.
    ಬಂಜಾರ ಜನಾಂಗದಲ್ಲಿ ದೀಪವನ್ನು ಹೆಣ್ಣಿಗೆ ಹೋಲಿಕೆ ಮಾಡಿದ್ದು, ಹೆಣ್ಣು ಮನೆ ಬೆಳಗುವ ದೀಪ ಎಂಬ ಗೌರವಭಾವದಿಂದ ಕಾಣಲಾಗುತ್ತದೆ. ಈ ಕಾರಣದಿಂದ ಈ ಜನಾಂಗದ ಹೆಣ್ಣು ಮಕ್ಕಳು ಅಮಾವಾಸ್ಯೆ ರಾತ್ರಿಯಂದು ದೀಪ ಹಿಡಿದು ತಂದೆಗೆ 'ಬಾಪೂ ತೋನ ಮೇರಾ', ತಾಯಿಗೆ 'ಯಾಡಿ ತೋನ ಮೇರಾ', ಅಣ್ಣನಿಗೆ 'ಭೀಯಾ ತೋನ ಮೇರಾ', ಅತ್ತೆಗೆ 'ಫೂಫಿ ತೋನ ಮೇರಾ' ಹೀಗೆ ಕುಟುಂಬ ಪ್ರತಿಯೊಬ್ಬ ಸದಸ್ಯರಿಗೂ, ಹಿತೈಷಿಗಳಿಗೂ ದೀಪ ಬೆಳಗುವ ಮೂಲಕ ಶುಭ ಹಾರೈಸುತ್ತಾರೆ.
    ಹೆಣ್ಣು ದೀಪ ಬೆಳಗುವ ಮೂಲಕ ಆ ಮನೆಯ ಅಂಧಕಾರ, ದೃಷ್ಟಶಕ್ತಿ ದೂರವಾಗುತ್ತದೆ ಎಂಬ ನಂಬಿಕೆ ಈ ಜನಾಂಗದ್ದಾಗಿದೆ. ಸಿರಿಯೂರು ತಾಂಡದಲ್ಲಿ ಬಂಜಾರ ಯುವ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ ಕುಟುಂಬ ಸದಸ್ಯರು ದೀಪ ಬೆಳಗುವ ಮೂಲಕ ಗಮನ ಸೆಳೆದರು.

ಎಲ್ಲರೂ ಎಚ್ಚರಿಕೆ ಗಂಟೆಯಾಗಿದ್ದಾಗ ಮಾತ್ರ ಜವಾಬ್ದಾರಿಯಿಂದ ಮುನ್ನಡೆಯಲು ಸಾಧ್ಯ : ಕೆ.ಎನ್ ಶ್ರೀಹರ್ಷ

ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ನ. ೭: ಸಾರ್ವಜನಿಕ ಕ್ಷೇತ್ರದಲ್ಲಿನ ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಮಾಜದ ಎಲ್ಲರೂ ಎಚ್ಚರಿಕೆ ಗಂಟೆಯಾಗಿರಬೇಕು. ಆಗ ಮಾತ್ರ ಸಂಘಟನೆಯ ಜವಾಬ್ದಾರಿ ಹೊತ್ತವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆಂದು ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಹೇಳಿದರು.
    ಅವರು ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ಸಂಘದ ವತಿಯಿಂದ ಅಭಿನಂದಿಸುತ್ತಿರುವುದು ಹೃದಯಸ್ಪರ್ಶಿ ವಿಚಾರವಾಗಿದ್ದು, ಈ ನಡುವೆ ವಕೀಲರ ಸಂಘದ ಅಧ್ಯಕ್ಷರಾಗಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಎಲ್ಲರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಕೆ.ಎನ್ ಶ್ರೀಹರ್ಷರವರು ಪತ್ರಕರ್ತರ ಸಂಘದ ಜೊತೆಗೆ ವಕೀಲರ ಸಂಘದ ಅಧ್ಯಕ್ಷರಾಗುವ ಮೂಲಕ ಇದೀಗ ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ಪತ್ರಕರ್ತರ ಸಂಘದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದು, ವಕೀಲರ ಸಂಘದಲ್ಲೂ ಇದೆ ರೀತಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದರು.
    ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಮಾತನಾಡಿದರು. ಪತ್ರಕರ್ತ ಎನ್. ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಪತ್ರಕರ್ತ ಸುಭಾಷ್‌ರಾವ್ ಸಿಂಧ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ನಿರೂಪಿಸಿದರು. ರವೀಂದ್ರನಾಥ್ ಪ್ರಾರ್ಥಿಸಿದರು.  
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.



ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅವರನ್ನು ಸನ್ಮಾನಿಸಲಾಯಿತು.