Sunday, November 21, 2021

ನೇತ್ರದಾನ ಶ್ರೇಷ್ಠದಾನ : ನಟ ಪುನೀತ್‌ರಾಜ್‌ಕುಮಾರ್ ಕೊಡುಗೆ ಅಪಾರ

ನೇತ್ರದಾನ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್


ಭದ್ರಾವತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಸ್ಮರಣಾರ್ಥ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ನ. ೨೧: ಚಲನಚಿತ್ರ ನಟ ಪುನೀತ್‌ರಾಜ್‌ಕುಮಾರ್‌ರವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
    ಅವರು ಭಾನುವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಸ್ಮರಣಾರ್ಥ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತ್ರದಾನ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪುನೀತ್‌ರಾಜ್‌ಕುಮಾರ್‌ರವರು ಕೇವಲ ನಟರಾಗಿ ಮಾತ್ರವಲ್ಲದೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವರನಟ ರಾಜ್‌ಕುಮಾರ್ ಅವರ ಕುಟುಂಬದವರು ನೇತ್ರದಾನ ಮಾಡುವ ಮೂಲಕ ಇತರರಿಗೆ ಬೆಳಕಾಗಿ ಇಂದಿಗೂ ನಮ್ಮೆಲ್ಲರ ನಡುವೆ ಉಳಿದುಕೊಂಡಿದ್ದಾರೆ. ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾಗಿದ್ದು, ನಮ್ಮ ಸಾವಿನ ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ನೇತ್ರಗಳನ್ನು ಇತರರಿಗೆ ದಾನ ಮಾಡಿ ಅವರ ಮೂಲಕ ಜೀವಂತವಾಗಿ ಉಳಿದುಕೊಳ್ಳುವಂತಹ ವ್ಯಕ್ತಿಗಳು ನಾವಾಗಬೇಕು. ನೇತ್ರದಾನ ಅಭಿಯಾನದಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಈ ಮೂಲಕ ಸಮಾಜದಲ್ಲಿ ಅಂಧತ್ವ ನಿವಾರಣೆಯಾಗಬೇಕೆಂದರು.
    ಇದಕ್ಕೂ ಮೊದಲು ಉದ್ಯಮಿ ಬಿ.ಕೆ ಜಗನ್ನಾಥ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್, ಈ.ಬಿ ಬಸವರಾಜ್, ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ,  ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು.
    ನೇತ್ರದಾನ ಅಭಿಯಾನದ ಜೊತೆಗೆ ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರಿಂದ ಪುನೀತ್‌ರಾಜ್‌ಕುಮಾರ್‌ರವರ ಅಭಿನಯದ ಚಲನಚಿತ್ರಗಳ ಸುಮಧುರ ಗೀತೆಗಳೊಂದಿಗೆ ಗೀತಾ ನಮನ, ಹಾಗು ಪುಷ್ಪ ನಮನ ಕಾರ್ಯಕ್ರಮಗಳು ಜರುಗಿದವು.  
    ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸೇರಿದಂತೆ ಸಾರ್ವಜನಿಕರು ನೇತ್ರದಾನ ನೋಂದಾಣಿ ಮಾಡಿಸಿಕೊಂಡರು. ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ ಸುಧೀಂದ್ರ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಚುನಾವಣೆ : ಶೇ.೫೫ರಷ್ಟು ಮತದಾನ

ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಪ್ರಮುಖರಿಂದ ಹಕ್ಕು ಚಲಾವಣೆ


ಭದ್ರಾವತಿ ತಾಲೂಕು ಕಚೇರಿಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಹಕ್ಕನ್ನು ಚಲಾಯಿಸಿದರು.
    ಭದ್ರಾವತಿ, ನ. ೨೧: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತದಾನ ಭಾನುವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದಲ್ಲಿ ನಡೆಯಿತು. ಶೇ.೫೫ರಷ್ಟು ಮತದಾನ ನಡೆದಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಪ್ರಮುಖರು ಮತದಾನ ಮಾಡಿದರು.


ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತದಾನ ಭಾನುವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದಲ್ಲಿ ನಡೆಯಿತು. ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
    ತಾಲೂಕಿನಲ್ಲಿ ಒಟ್ಟು ೧೨೦೨ ಮತದಾರರಿದ್ದು, ಈ ಪೈಕಿ ೬೫೭ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೆಳಿಗ್ಗೆ ೮ ಗಂಟೆಯಿಂದ ಆರಂಭವಾದ ಮತದಾನ ಮಧ್ಯಾಹ್ನ ೧ ಗಂಟೆವರೆಗೂ ಬಿರುಸಿನ ನಡೆಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಪ್ರಮುಖರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಗಮನ ಸೆಳೆದರು.
    ಸುಮಾರು ೮೫ ವರ್ಷ ವಯೋಮಾನದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ಶ್ಯಾಮಣ್ಣ ಸಹಾಯಕರೊಂದಿಗೆ ಆಗಮಿಸಿ ಮತಚಲಾಯಿಸಿದರು.


ರಾಜ್ಯಾಧ್ಯಕ್ಷ ಹಾಗು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಮಿನಿವಿಧಾನಸೌಧದ ಸಮೀಪ ಬೆಂಬಲಿಗರು ಮತಯಾಚನೆ ನಡೆಸಿದರು.
    ರಾಜ್ಯಾಧ್ಯಕ್ಷ ಹಾಗು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಮಿನಿವಿಧಾನಸೌಧದ ಸಮೀಪ ಬೆಂಬಲಿಗರು ಮತಯಾಚನೆ ನಡೆಸಿದರು. ಪರಿಷತ್ ಅಧ್ಯಕ್ಷರಾದ ಡಿ. ಮಂಜುನಾಥ್ ಮತ್ತು ಹಾಲಿ ಅಧ್ಯಕ್ಷ ಡಿ.ಬಿ ಶಂಕರಪ್ಪನವರ ನಡುವೆ ಹೆಚ್ಚಿನ ಪೈಪೋಟಿ ಇರುವುದು ಕಂಡು ಬಂದಿತು.
    ಯಾವುದೇ ಚುನಾವಣೆಗೆ ಕಡಿಮೆ ಇಲ್ಲದಂತೆ ಈ ಚುನಾವಣೆ ಸಹ ಕಂಡು ಬಂದಿದ್ದು, ಮತಗಟ್ಟೆ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

        ಡಿ. ಶಂಕರಪ್ಪಗೆ ಹೆಚ್ಚು ಮತ :
ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಬಯಸಿ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಡಿ. ಶಂಕರಪ್ಪ ಅವರಿಗೆ ೩೭೫ ಮತಗಳು ಲಭಿಸಿದ್ದು, ಮಾಜಿ ಅಧ್ಯಕ್ಷ ಡಿ. ಮಂಜುನಾಥ್‌ಗೆ ೨೫೨ ಮತಗಳು ಲಭಿಸಿವೆ. ಒಟ್ಟು ಚಲಾವಣೆಗೊಂಡಿರುವ ೬೫೭ ಮತಗಳಲ್ಲಿ ೬೨೭ ಮತಗಳು ಈ ಇಬ್ಬರ ಪಾಲಾಗಿದ್ದು, ಉಳಿದ ೩೦ ಮತಗಳು ಇನ್ನಿಬ್ಬರು ಅಭ್ಯರ್ಥಿಗಳ ಪಾಲಾಗಿವೆ.  

Saturday, November 20, 2021

ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಲು ಪ್ರಮುಖರಿಂದ ತೀವ್ರ ಪೈಪೋಟಿ : ಒಮ್ಮತದ ಅಭ್ಯರ್ಥಿಗೆ ಕಸರತ್ತು

ಆನಂದ್  ಎಸ್. ಕುಮಾರ್ ಯೋಗೇಶ್  ಮೋಹನ್‌ಕುಮಾರ್  ಬಾಲಕೃಷ್ಣ 

* ಅನಂತಕುಮಾರ್

    ಭದ್ರಾವತಿ, ನ. ೨೦: ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ಪ್ರತಿನಿಧಿಸುತ್ತಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಇದೀಗ ಹೆಚ್ಚು ಗಮನ ಸೆಳೆಯುತ್ತಿದ್ದು, ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವ್ಯಾಪ್ತಿಯ ನಿರ್ದೇಶಕರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ.
    ಪ್ರಮುಖವಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಪ್ರಭಾವಿ ವ್ಯಕ್ತಿಗಳು ಈ ಬಾರಿ ಚುನಾವಣೆಯಲ್ಲಿ ಪೈಪೋಟಿಗೆ ಮುಂದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಇಲ್ಲಿಯವರೆಗೂ ನಿರ್ದೇಶಕರ ಸ್ಥಾನಕ್ಕೆ ಯಾರೊಬ್ಬರೂ ಸಹ ಆಯ್ಕೆಯಾಗದಿರುವುದು ಇಲ್ಲಿನ ಒಕ್ಕಲಿಗ ಸಮುದಾಯದವರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಹೇಗಾದರೂ ಮಾಡಿ ನಿರ್ದೇಶಕರ ಸ್ಥಾನ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ.
    ಈ ಹಿಂದೆ ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಇದೀಗ ಇಲ್ಲದಿರುವುದು ಒಂದೆಡೆ ಸಮುದಾಯಕ್ಕೆ ಹಿನ್ನಡೆಯಾಗಿದೆ. ಆದರೂ ಸಹ ಅವರ ಸ್ಥಾನದಲ್ಲಿ ಇದೀಗ ತಾಲೂಕು ಒಕ್ಕಲಿಗ ಸಂಘ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆ ಮತ್ತಷ್ಟು ಗಮನ ಸೆಳೆಯಲು ಕಾರಣವಾಗಿದೆ.
    ಜಿಲ್ಲೆಯಲ್ಲಿ ತೀರ್ಥಹಳ್ಳಿ ನಂತರ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವುದು ಭದ್ರಾವತಿ ತಾಲೂಕಿನಲ್ಲಿ ಮಾತ್ರ. ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಈ ಎರಡು ತಾಲೂಕುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇದುವರೆಗೂ ತೀರ್ಥಹಳ್ಳಿ ತಾಲೂಕಿನವರೇ ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಆದರೆ ತಾಲೂಕಿನಲ್ಲಿ ಇದುವರೆಗೂ ಯಾರೊಬ್ಬರು ಆಯ್ಕೆಯಾಗಿಲ್ಲ ಎಂಬ ಕೊರಗು ಇದೀಗ ಸಮುದಾಯದವರಲ್ಲಿ ಕಾಡುತ್ತಿದೆ. ಈ ನಡುವೆ ಹಲವಾರು ವರ್ಷಗಳಿಂದ ಸಮುದಾಯದವರು ರಾಜಕೀಯವಾಗಿ ಎರಡು ಬಣಗಳಾಗಿ ಗುರುತಿಸಿಕೊಂಡು ಬರುತ್ತಿದ್ದಾರೆ. ಆದರೂ ಸಹ ಸಮುದಾಯದವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಒಮ್ಮತದ ತೀರ್ಮಾನಕ್ಕೆ ಬದ್ದರಾಗಲು ಮುಂದಾಗಿದ್ದಾರೆ.
    ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ಸದಸ್ಯ, ಸಹಕಾರಿ ಧುರೀಣ ಜೆ.ಪಿ ಯೋಗೇಶ್, ೩೪ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ಪ್ರಗತಿಪರ ಹೋರಾಟಗಾರ, ಮುಖಂಡ ಬಾಲಕೃಷ್ಣ ಸೇರಿದಂತೆ ಇನ್ನಿತರರು ತೀವ್ರ ಪೈಪೋಟಿಗೆ ಮುಂದಾಗಿದ್ದಾರೆ. ಈಗಾಗಲೇ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
    ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಇದೀಗ ತಾಲೂಕು ಒಕ್ಕಲಿಗರ ಸಂಘಕ್ಕೆ ಒಂದೆಡೆ ಸವಾಲಾಗಿದೆ. ಮತ್ತೊಂದೆಡೆ ವೈಯಕ್ತಿಕ ವರ್ಚಸ್ಸು, ಪ್ರತಿಷ್ಠೆ ಹಿನ್ನಲೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕೆಲವರಿಗೆ ಹಿನ್ನಡೆಯಾಗಿದೆ. ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಸಹ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ಅಭ್ಯರ್ಥಿ ಯಾರಾಗಲಿದ್ದಾರೆಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನ.೨೧ರಂದು ಪುನೀತ್ ಸ್ಮರಣಾರ್ಥ ನೇತ್ರದಾನ ಅಭಿಯಾನ

    ಭದ್ರಾವತಿ, ನ. ೨೦: ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಚಲನಚಿತ್ರ ನಟ, ಸಮಾಜ ಸೇವಕ, ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಸ್ಮರಣಾರ್ಥ ನ.೨೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನೇತ್ರದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ.
    ನೇತ್ರದಾನ ಅಭಿಯಾನದ ಜೊತೆಗೆ ಪುನೀತ್‌ರಾಜ್‌ಕುಮಾರ್‌ರವರ ಅಭಿನಯದ  ಚಲನಚಿತ್ರಗಳ ಸುಮಧುರ ಗೀತೆಗಳೊಂದಿಗೆ ಗೀತಾ ನಮನ, ಗಣ್ಯರಿಂದ ನುಡಿ ನಮನ ಹಾಗು ಪುಷ್ಪ ನಮನ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ೧.೩೦ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
    ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ ಸುಧೀಂದ್ರ ಮನವಿ ಮಾಡಿದ್ದಾರೆ.

ಅಭಿವೃದ್ಧಿ ಪಥದಲ್ಲಿ ಸಂಚಿಯ ಹೊನ್ಮಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ

ಸ್ಯಾನಿಟರಿ ಪ್ಯಾಡ್ ನಿರ್ವಹಣಾ ಯಂತ್ರ ಕೊಡುಗೆ ಕಾರ್ಯಕ್ರಮದಲ್ಲಿ ಸಿದ್ದಬಸಪ್ಪ


ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಹಳೇನಗರದ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗು ಪ್ರೌಢಶಾಲೆಗೆ  ಹೆಣ್ಣು ಮಕ್ಕಳು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲು ಸುಮಾರು ೧೮ ಸಾವಿರ ರು. ಮೌಲ್ಯದ ಸ್ಯಾನಿಟರಿ ಪ್ಯಾಡ್ ನಿರ್ವಹಣಾ ಯಂತ್ರ ಕೊಡುಗೆಯಾಗಿ ನೀಡಲಾಯಿತು.
    ಭದ್ರಾವತಿ, ನ. ೨೦: ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗು ಪ್ರೌಢಶಾಲೆ ಪ್ರಸ್ತುತ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು, ಈ ಶಾಲೆಯ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ನಿರಂತರವಾಗಿ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ಹೇಳಿದರು.
    ಅವರು ಶನಿವಾರ ಕಾಲೇಜಿನಲ್ಲಿ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೆಣ್ಣು ಮಕ್ಕಳು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲು ಸುಮಾರು ೧೮ ಸಾವಿರ ರು. ಮೌಲ್ಯದ ಸ್ಯಾನಿಟರಿ ಪ್ಯಾಡ್ ನಿರ್ವಹಣಾ ಯಂತ್ರ ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಲೇಜು ಹಾಗು ಪ್ರೌಢಶಾಲಾ ವಿಭಾಗದಲ್ಲಿ ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು, ಹಲವಾರು ಸೌಲಭ್ಯಗಳನ್ನು ಹೊಂದುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವಿದೆ ಎಂದರು.
    ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ವಿದ್ಯಾರ್ಥಿಗಳಿಗೆ ನಿರ್ವಹಣಾ ಯಂತ್ರ ಕುರಿತು ಮಾಹಿತಿ ನೀಡಿ ಬಳಸಲಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಲ್ಲಿಬೇಕೆಂದರಲ್ಲಿ ಎಸೆಯುವುದರಿಂದ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಈ ಯಂತ್ರದ ಬಳಕೆಯಿಂದ ಪರಿಸರಕ್ಕೆ ಹಾನಿಯಾಗದಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ದಹಿಸಬಹುದಾಗಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಮಾತನಾಡಿ, ಯೂನಿಯನ್ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದೆ ಎಂದರು.  
ಸ್ಯಾನಿಟರಿ ಪ್ಯಾಡ್ ನಿರ್ವಹಣಾ ಯಂತ್ರವನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಕಾಲೇಜು ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು.  
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ, ಶಾಂತಿ ಸಾಮಿಲ್ ಮಾಲೀಕರಾದ ಜಿ. ಸುರೇಶ್‌ಕುಮಾರ್ ತಮ್ಮ ಸ್ವಂತ ಹಣದಲ್ಲಿ ಸ್ಯಾನಿಟರಿ ಪ್ಯಾಡ್ ನಿರ್ವಹಣಾ ಯಂತ್ರ ಖರೀದಿಸಿ ಯೂನಿಯನ್ ಮೂಲಕ ಕೊಡುಗೆಯಾಗಿ ನೀಡಿದ ಹಿನ್ನಲೆಯಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಸಮಿತಿ ಕಾರ್ಯಾಧ್ಯಕ್ಷ ಪಿ. ವೆಂಕಟರಮಣ ಶೇಟ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, November 19, 2021

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ಕಾರ್ತಿಕ ದೀಪೋತ್ಸವ

ದೀಪ ಬೆಳಗಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್


ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಶುಕ್ರವಾರ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ದೀಪ ಬೆಳಗಿಸಿದರು.
    ಭದ್ರಾವತಿ, ನ. ೧೯: ಪ್ರತಿ ವರ್ಷದಂತೆ ಈ ಬಾರಿ ಸಹ ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವದಲ್ಲಿ ಶುಕ್ರವಾರ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ದೀಪ ಬೆಳಗಿಸಿದರು.
    ದೀಪೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದ ಶ್ರೀ ಮುರುಗೇಶ್‌ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನದ ಮೇಲ್ಭಾಗದಲ್ಲಿ ಸುಮಾರು ೧೦೦ ಲೀಟರ್‌ ಎಣ್ಣೆ ತುಂಬುವ ಸಾಮರ್ಥ್ಯದ ದೀಪವನ್ನು ವಿಶೇಷವಾಗಿ ಬೆಳಗಿಸುವುದು ಇಲ್ಲಿ ವಾಡಿಕೆಯಾಗಿದೆ. ಅಲ್ಲದೆ ಪಟಾಕಿ ಸಿಡ್ಡಿಮದ್ದುಗಳ ಪ್ರದರ್ಶನ ನಡೆಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಗುತ್ತದೆ.
     ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ದೇವಸ್ಥಾನ ಟ್ರಸ್ಟ್‌ ಸದಸ್ಯರಾದ ಭೂಪಾಲ್, ಶಿವಕುಮಾರ್, ದೊರಸ್ವಾಮಿ, ಸತ್ಯನಾರಾಯಣ, ಷಣ್ಮುಖ, ಸುಂದರ ಬಾಬು, ಮಂಜುನಾಥ್, ಬದ್ರಿ, ಆಡಳಿತ ಮಂಡಳಿಯ ಚಂದ್ರಘೋಷನ್, ಡಾ. ವಿಕ್ರಂ, ಕಾರ್ತಿಕ್ ಹಾಗೂ ತಮಿಳುನಾಡು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಸಹ ಶಿಕ್ಷಕ ಎಂ. ದಿವಾಕರ್‌ಗೆ ಕರುನಾಡ ಚೇತನ ಪ್ರಶಸ್ತಿ

ಹುಬ್ಬಳ್ಳಿ ಕರ್ನಾಟಕ ಸೋಷಿಯಲ್ ಕ್ಲಬ್, ಚೇತನ ಫೌಂಡೇಷನ್ ವತಿಯಿಂದ ಧಾರವಾಡದ ರಂಗಾಯಣ ಸುವರ್ಣ ಸಮುಚ್ಛಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಸಂಭ್ರಮ ಸಮಾರಂಭದಲ್ಲಿ ಭದ್ರಾವತಿ ಹಳೇನಗರದ ಸಂಚಿಯ ಹೊನ್ಮಮ್ಮ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯ ಸಹ ಶಿಕ್ಷಕ ಎಂ. ದಿವಾಕರ್‌ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ ಕರುನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  
    ಭದ್ರಾವತಿ, ನ. ೧೯ :  ಹುಬ್ಬಳ್ಳಿ ಕರ್ನಾಟಕ ಸೋಷಿಯಲ್ ಕ್ಲಬ್, ಚೇತನ ಫೌಂಡೇಷನ್ ವತಿಯಿಂದ ಧಾರವಾಡದ ರಂಗಾಯಣ ಸುವರ್ಣ ಸಮುಚ್ಛಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಸಂಭ್ರಮ ಸಮಾರಂಭದಲ್ಲಿ ಹಳೇನಗರದ ಸಂಚಿಯ ಹೊನ್ಮಮ್ಮ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯ ಸಹ ಶಿಕ್ಷಕ ಎಂ. ದಿವಾಕರ್‌ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಗುರುತಿಸಿ ಕರುನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  
    ಎಂ. ದಿವಾಕರ್‌ರವರು ೧೯೯೮ ರಿಂದ ಇಲ್ಲಿಯವರೆಗೂ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿವಿಧ ಸುಮಾರು ೮೭ ತರಬೇತಿಗಳಿಗೆ ರಾಜ್ಯ, ಜಿಲ್ಲಾ ಹಾಗು ತಾಲೂಕು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಬಿ.ಎಸ್‌ ಮತ್ತು ಡಿ.ಎಡ್‌ ಕಾಲೇಜುಗ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ೨೦೧೦ರಲ್ಲಿ ಕರ್ನಾಕ ಸರ್ಕಾರದ ಶಿಕ್ಷಕರ ಸಂಪನ್ಮೂಲ ಪುಸ್ತಕಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗು ಶಿಕ್ಷಕನಾಗಿ ಕಾರ್ಯನಿರ್ವಹಿಸಿರುತ್ತಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುತ್ತಿರುವ ಸಹಾಯವಾಣಿ ಕಾರ್ಯಕ್ರಮದಲ್ಲಿ ೨೦೧೨ ರಿಂದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೧೯೯೮ರಿಂದ ರಿಂದ ೨೦೧೦ರ ವರೆಗೆ ಚಿಕ್ಕಬಳ್ಳಾಪುರ ಹಾಗು ಶಿವಮೊಗ್ಗ ಜಿಲ್ಲೆಗಳಲ್ಲಿ ಆಸಕ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕ್ಯಾಲಿಗ್ರಫಿ ತರಬೇತಿಯನ್ನು ಉಚಿತವಾಗಿ ನೀಡಿದ್ದಾರೆ. ೨೦೦೨ರಲ್ಲಿ ಚಿಂತಾಮಣಿ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗು ೨೦೦೯ರಲ್ಲಿ ಭದ್ರಾವತಿಯಲ್ಲಿ ಗಣರಾಜ್ಯೋತ್ಸವ ಪ್ರಶಸ್ತಿ, ಇತ್ತೀಚೆಗೆ ಬೆಳಗಾವಿಯಲ್ಲಿ ವಿದ್ಯಾಭೂಷಣ ಹಾಗು ಗುರುಕುಲ ತಿಲಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಇದೀಗ ಕರುನಾಡ ಚೇತನ ಪ್ರಶಸ್ತಿಯನ್ನು ನೀಡಲಾಗಿದೆ.
     ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್‌ ಸೋಮಶೇಖರಯ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ಸೇರಿದಂತೆ ಇನ್ನಿತರ ಗಣ್ಯರು ಎಂ. ದಿವಾಕರ್‌ರನ್ನು ಅಭಿನಂದಿಸಿದ್ದಾರೆ.