ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರಿಂದ ಮತ ಚಲಾವಣೆ
ಭದ್ರಾವತಿ ನಗರಸಭೆ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಕಾಂಗ್ರೆಸ್ ನಗರಸಭಾ ಸದಸ್ಯರು ಮತ ಚಲಾಯಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.
ಭದ್ರಾವತಿ, ಡಿ. ೧೦: ವಿಧಾನಪರಿಷತ್ ಚುನಾವಣೆ ಮತದಾನ ಶುಕ್ರವಾರ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ನಗರಸಭಾ ಸದಸ್ಯರು ಮತ ಚಲಾಯಿಸಿದರು.
ಒಟ್ಟು ೩೫ ಸದಸ್ಯರನ್ನು ಒಳಗೊಂಡಿರುವ ನಗರಸಭೆಯಲ್ಲಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು ೩೮ ಮತಗಳಿದ್ದು, ಮಧ್ಯಾಹ್ನ ೧ ಗಂಟೆವರೆಗೆ ನಗರಸಭೆ ಕಛೇರಿಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಬಹುತೇಕ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪ್ರತ್ಯೇಕವಾಗಿ ಮತ ಚಲಾಯಿಸಿದರು.
ಕಾಂಗ್ರೆಸ್ ಸದಸ್ಯರಾದ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಜಾರ್ಜ್, ಬಷೀರ್ ಅಹಮದ್, ಬಿ.ಟಿ ನಾಗರಾಜ್, ಮಹಮದ್ ಯೂಸಫ್, ಸೈಯದ್ ರಿಯಾಜ್, ಲತಾ ಚಂದ್ರ ಶೇಖರ್, ಸರ್ವಮಂಗಳ ಭೈರಪ್ಪ ಮತ್ತು ಶೃತಿ ವಸಂತ್ ಸೇರಿದಂತೆ ಒಟ್ಟು ೧೧ ಮಂದಿ ಹಾಗು ಜೆಡಿಎಸ್ ಸದಸ್ಯರಾದ ರೇಖಾ ಪ್ರಕಾಶ್, ಬಸವರಾಜ್ ಬಿ. ಆನೇಕೊಪ್ಪ, ಮಂಜುಳ ಸುಬ್ಬಣ್ಣ, ಜಯಶೀಲ ಸುರೇಶ್, ವಿಜಯ, ಪ್ರೇಮಾ ಬದರಿನಾರಾಯಣ, ಕೋಟೇಶ್ವರರಾವ್, ಆರ್. ಉದಯಕುಮಾರ್, ರೂಪಾವತಿ ಗುಣಶೇಖರ್, ಪಲ್ಲವಿ ಮತ್ತು ಸವಿತಾ ಉಮೇಶ್ ಸೇರಿದಂತೆ ಒಟ್ಟು ೧೧ ಮಂದಿ ಮತ ಚಲಾಯಿಸಿದರು. ಮತಗಟ್ಟೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಯಿತು.
ಮಧ್ಯಾಹ್ನ ೨ ಗಂಟೆ ನಂತರ ಕಾಂಗ್ರೆಸ್ ಸದಸ್ಯರಾದ ಕಾಂತರಾಜ್, ಬಿ.ಕೆ ಮೋಹನ್ ಹಾಗು ಪಕ್ಷೇತರ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಬಿಜೆಪಿ ಸದಸ್ಯೆ ಅನುಪಮ ಚನ್ನೇಶ್ ಮತ ಚಲಾಯಿಸಿದರು. ೩ ಗಂಟೆ ನಂತರ ಕಾಂಗ್ರೆಸ್ ಸದಸ್ಯರಾದ ಮಣಿ ಎಎನ್‌ಎಸ್, ಕಾಂತರಾಜ್, ಕೆ. ಸುದೀಪ್‌ಕುಮಾರ್, ಅನುಸುಧಾ ಮೋಹನ್ ಮತ್ತು ಆರ್. ಶ್ರೇಯಸ್ ಮತ ಚಲಾಯಿಸಿದರು.
ಬೆಳಿಗ್ಗೆ ಬಿಜೆಪಿ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ ಮತ್ತು ಅನಿತಾ ಮಲ್ಲೇಶ್ ಮತ ಚಲಾಯಿಸಿದರು. ಒಟ್ಟು ೩೮ ಮತಗಳ ಪೈಕಿ ೩೬ ಮತಗಳು ಚಲಾವಣೆಗೊಂಡಿವೆ. ಶೇ.೯೫ರಷ್ಟು ಮತದಾನ ನಡೆದಿದೆ. ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಈ ಬಾರಿ ಮತ ಚಲಾಯಿಸಿಲ್ಲ. ಉಳಿದಂತೆ ಸಂಸದ ಬಿ.ವೈ ರಾಘವೇಂದ್ರರವರು ಶಿಕಾರಿಪುರ ನಗರಸಭೆಯಲ್ಲಿ ಮತ ಚಲಾಯಿಸಿದ್ದಾರೆ.
ಮತಗಟ್ಟೆ ಬಳಿ ಮಾತಿನ ಚಕಮಕಿ:
ನಗರಸಭೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸದಸ್ಯೆ ವಿಜಯ ಹಾಗು ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣರವರು ಶಾಸಕ ಬಿ.ಕೆ ಸಂಗಮೇಶ್ವರ್ ಜೊತೆ ಕೆಲ ಸಮಯ ಮಾತಿನ ಚಕಿಮಕಿ ನಡೆಸಿದ್ದು, ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಯಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರು.
ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಶೇ.೯೦ ರಷ್ಟು ಮತದಾನ :
ತಾಲೂಕಿನ ಒಟ್ಟು ೩೭ ಗ್ರಾಮ ಪಂಚಾಯಿತಿಗಳ ಪೈಕಿ ಕೂಡ್ಲಿಗೆರೆ, ಹಿರಿಯೂರು ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಮಧ್ಯಾಹ್ನ ೧ ಗಂಟೆವರೆಗೆ ಶೇ.೧೦೦ರಷ್ಟು ಮತದಾನ ನಡೆದಿದ್ದು, ಉಳಿದಂತೆ ಬಹುತೇಕ ಗ್ರಾಮ ಪಂಚಾಯಿತಿ ಶೇ.೯೦ರಷ್ಟು ಮತದಾನ ನಡೆಯಿತು. ಸಂಜೆ ೪ರ ವೇಳೆಗೆ ಶೇ.೧೦೦ರಷ್ಟು ಮತದಾನ ನಡೆದಿದೆ.
ಜೆಡಿಎಸ್ ಬಿಜೆಪಿ ಬೆಂಬಲ:
ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಪಕ್ಷವನ್ನು ಬೆಂಬಲಿಸಿರುವುದು ತಿಳಿದು ಬಂದಿದೆ. ಬಿಜೆಪಿ ಬೆಂಬಲಿಸುವ ನಿರ್ಧಾರ ಆಯಾ ಸ್ಥಳೀಯ ಸಂಸ್ಥೆಗಳ ಜೆಡಿಎಸ್ ಸದಸ್ಯರ ವಿವೇಚನೆಗೆ ಪಕ್ಷದ ಸದಸ್ಯರು ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ತಾಲೂಕಿನ ಬಹುತೇಕ ಪಂಚಾಯಿತಿಗಳಲ್ಲಿ ಈ ಬಾರಿ ಸಹ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಬಿಜೆಪಿ ಸಹ ಈ ಬಾರಿ ತೀವ್ರ ಪೈಪೋಟಿಗೆ ಮುಂದಾಗಿರುವುದು ಕಂಡು ಬಂದಿದೆ. ಈ ನಡುವೆ ಕೆಲವು ಗ್ರಾಮ ಪಂಚಾಯಿತಿಗಳು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿವೆ.
ಭದ್ರಾವತಿ ನಗರಸಭೆ ಮತಗಟ್ಟೆ ಸಂಖ್ಯೆ ೧೮೦ರಲ್ಲಿ ಜೆಡಿಎಸ್ ನಗರಸಭಾ ಸದಸ್ಯರು ಮತ ಚಲಾಯಿಸಿದರು.