Saturday, December 11, 2021

ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ : ಡಿ.೧೨ರಂದು ಮತದಾನ

    ಭದ್ರಾವತಿ, ಡಿ. ೧೧: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಶಿವಮೊಗ್ಗ-ಉತ್ತರ ಕನ್ನಡ ನಿರ್ದೇಶಕ ಸ್ಥಾನಕ್ಕೆ ಈ ಬಾರಿ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಡಿ.೧೨ರಂದು ಮತದಾನ ನಡೆಯಲಿದೆ.
    ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ಈ ಚುನಾವಣೆ ಸಹ ನಡೆಯುತ್ತಿದ್ದು, ಸಮಾಜದ ಮುಖ್ಯ ವಾಹಿನಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಮುಖರು ತೀವ್ರ ಪೈಪೋಟಿಗೆ ಮುಂದಾಗಿರುವುದು ಹೆಚ್ಚಿನ ಗಮನ ಸೆಳೆಯುತ್ತಿದೆ. ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಯಂತೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಹಲವು ರೀತಿಯ ಕಸರತ್ತುಗಳನ್ನು ನಡೆಸಲಾಗಿದ್ದು, ಅಭ್ಯರ್ಥಿಗಳ ಪರವಾಗಿ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ.
    ಈ ಬಾರಿ ನಿರ್ದೇಶಕ ಸ್ಥಾನ ತನ್ನದಾಗಿಸಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ಇಲ್ಲಿನ ತಾಲೂಕು ಒಕ್ಕಲಿಗರ ಸಂಘ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್‌ರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ನಡುವೆ ಕೆಲವರು ಸಂಘಕ್ಕೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದು, ಈ ನಡುವೆಯೂ ಬೇರೆ ತಾಲೂಕಿನ ಅಭ್ಯರ್ಥಿಯನ್ನು ಬೆಂಬಲಿಸಲು ಕೆಲವರು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಪ್ರತಿಷ್ಠೆ ಎತ್ತಿ ಹಿಡಿಯುವ ಅನಿವಾರ್ಯತೆ ಎದುರಾಗಿದೆ.
    ಮತದಾನ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆವರೆಗೆ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

No comments:

Post a Comment